AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ

ಇರಾನ್ ಮತ್ತು ಅಮೆರಿಕದ ನಡುವೆ ನಡೆದಿದ್ದ ಕದನವಿರಾಮ ಒಪ್ಪಂದ ಆರಂಭದಿಂದಲೇ ಬಹಳ ದುರ್ಬಲವಾಗಿತ್ತು. ಇದೀಗ ಈ ಕದನವಿರಾಮ ಅಂತ್ಯಗೊಂಡಿದೆ ಎಂದು ಘೋಷಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಭೀಕರವಾದ ವೈಮಾನಿಕ ದಾಳಿಯನ್ನು ನಡೆಸಲು ಆದೇಶ ನೀಡಿದ್ದಾರೆ. ಇದರಿಂದಾಗಿ ಮಧ್ಯ ಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಎದುರಾಗಿದೆ. ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಮಧ್ಯಂತರ ಕದನ ವಿರಾಮವನ್ನು ಅಧಿಕೃತವಾಗಿ ಕೊನೆಗೊಳಿಸುವುದಾಗಿ ಘೋಷಿಸಿದ್ದು, ಇರಾನ್ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ
Donald Trump Image Credit source: AP
ಸುಷ್ಮಾ ಚಕ್ರೆ
|

Updated on: Jul 08, 2026 | 3:14 PM

Share

ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಆರಂಭ
  • ಇರಾನ್ ಜೊತೆಗಿನ ಕದನವಿರಾಮ ಅಂತ್ಯವೆಂದು ಟ್ರಂಪ್ ಘೋಷಣೆ
  • ಅಮೆರಿಕದಿಂದ ಟೆಹ್ರಾನ್ ಮೇಲೆ ಮತ್ತೊಮ್ಮೆ ವೈಮಾನಿಕ ದಾಳಿ

ಅಂಕಾರಾ, ಜುಲೈ 8: ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದು ಜಗತ್ತಿನಾದ್ಯಂತ ಮತ್ತೊಮ್ಮೆ ಆತಂಕವನ್ನು ಸೃಷ್ಟಿಸಿದೆ. ಪರಸ್ಪರ ಭೀಕರ ರಾಕೆಟ್ ಮತ್ತು ಕ್ಷಿಪಣಿ ದಾಳಿಗಳ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು (ಜುಲೈ 8) ಇರಾನ್ ಜೊತೆಗಿನ ಮಧ್ಯಂತರ ಕದನ ವಿರಾಮ (Ceasefire) ಅಧಿಕೃತವಾಗಿ ‘ಅಂತ್ಯಗೊಂಡಿದೆ’ ಎಂದು ಘೋಷಿಸಿದ್ದಾರೆ. ಇರಾನ್ ನಾಯಕರನ್ನು ವಿಕೃತರು ಎಂದು ಕರೆದಿರುವ ಟ್ರಂಪ್, ‘ಅವರೊಂದಿಗೆ ವ್ಯವಹರಿಸುವುದು ಬರೀ ಸಮಯ ವ್ಯರ್ಥ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೂ ತಮ್ಮ ಅಧಿಕಾರಿಗಳ ತಂಡಕ್ಕೆ ಮಾತುಕತೆ ಮುಂದುವರಿಸಲು ಅನುಮತಿ ನೀಡುವುದಾಗಿ ಅವರು ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು 3 ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, “ನನ್ನ ಮಟ್ಟಿಗೆ ಇರಾನ್ ಜೊತೆಗಿನ ಒಪ್ಪಂದ ಮುಗಿದ ಕಥೆ. ಇನ್ನು ಮುಂದೆ ನಾನು ಅವರೊಂದಿಗೆ ಯಾವುದೇ ವ್ಯವಹಾರ ಮಾಡುವುದಿಲ್ಲ. ಅವರೊಂದಿಗೆ ಮಾತುಕತೆ ನಡೆಸುವುದು ಕೇವಲ ಸಮಯ ವ್ಯರ್ಥ” ಎಂದು ಗುಡುಗಿದ್ದಾರೆ.

ಇರಾನ್ ನಾಯಕರ ವಿರುದ್ಧ ವಾಗ್ದಾಳಿ:

ಇರಾನ್ ದೇಶವನ್ನು ವಿಕೃತ ಮನಸ್ಥಿತಿಯ ನಾಯಕರು ಮುನ್ನಡೆಸುತ್ತಿದ್ದಾರೆ ಎಂದು ಟ್ರಂಪ್ ಕಿಡಿ ಕಾರಿದ್ದಾರೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಇರಾನ್ ಸರ್ಕಾರ ತನ್ನದೇ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 54,000 ಜನರನ್ನು ಕೊಂದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಅಮೆರಿಕ ಮತ್ತು ಇರಾನ್ ನಡುವೆ ಉತ್ತಮ ಬಾಂಧವ್ಯವಿದೆ; ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ

‘ಎಲ್ಲವೂ ಮುಗಿದಿದೆ’ ಎಂದ ಟ್ರಂಪ್:

ಇರಾನ್ ಜೊತೆಗಿನ ಕದನ ವಿರಾಮದ ಸ್ಥಿತಿಗತಿಯ ಕುರಿತು ಮಾತನಾಡಿದ ಟ್ರಂಪ್, “ನನ್ನ ಪ್ರಕಾರ, ಎಲ್ಲವೂ ಮುಗಿದಿದೆ. ನಾನು ಇನ್ನು ಮುಂದೆ ಅವರೊಂದಿಗೆ ವ್ಯವಹರಿಸಲು ಇಷ್ಟಪಡುವುದಿಲ್ಲ. ಅವರು ಸಮಾಜದ ಕಸವಿದ್ದಂತೆ. ವಿಕೃತ ಮನಸ್ಥಿತಿಯ ಜನರು ಅವರನ್ನು ಮುನ್ನಡೆಸುತ್ತಿದ್ದಾರೆ. ನಾನು ನಮ್ಮ ಸಂಧಾನಕಾರರೊಂದಿಗೆ ಮಾತನಾಡುತ್ತೇನೆ. ಅವರಿಗೆ ಮಾತುಕತೆ ನಡೆಸಲು ಇಷ್ಟವಿದೆ, ಅವರೇನೋ ಒಳ್ಳೆಯ ಜನರೇ. ಆದರೆ ಅಂತಿಮವಾಗಿ ಅವರು ನನ್ನ ಬಳಿಯೇ ಬರಬೇಕು. ನನ್ನ ಮಟ್ಟಿಗೆ ಹೇಳುವುದಾದರೆ, ಇರಾನ್ ಜೊತೆ ಮಾತುಕತೆ ನಡೆಸುವುದು ಬರೀ ಸಮಯ ವ್ಯರ್ಥ” ಎಂದು ಗುಡುಗಿದ್ದಾರೆ.

ಅಮೆರಿಕದಿಂದ ಭೀಕರ ಪ್ರತಿ ದಾಳಿ:

ಇರಾನ್ ನಡೆಸಿದ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕದ ಮಿಲಿಟರಿ ಕಮಾಂಡ್ ಇಂದು ಮುಂಜಾನೆ ಇರಾನ್ ಒಳಗೆ ಭೀಕರ ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್‌ಗಳು ಮತ್ತು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಬಳಸುತ್ತಿದ್ದ 60ಕ್ಕೂ ಹೆಚ್ಚು ಸಣ್ಣ ಯುದ್ಧ ಹಡಗುಗಳನ್ನು ಅಮೆರಿಕದ ಪಡೆಗಳು ಧ್ವಂಸಗೊಳಿಸಿವೆ. ಇರಾನ್‌ನ ಪರಮಾಣು ವಿದ್ಯುತ್ ಸ್ಥಾವರ ಇರುವ ‘ಬುಶೆಹರ್’ ಮೇಲೂ ದಾಳಿಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇರಾನ್​ನಲ್ಲಿ ಖಮೇನಿ ಅಂತ್ಯಕ್ರಿಯೆ; ಭಾರತದ ಪರವಾಗಿ ಬಿಹಾರದ ರಾಜ್ಯಪಾಲ, ಸಚಿವ ಪವಿತ್ರ ಮಾರ್ಗರಿಟಾ ಭಾಗಿ

ಈ ಭೀಕರ ಸಂಘರ್ಷವು ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ದಿನಗಳಂದೇ ಸಂಭವಿಸಿದೆ. ಖಮೇನಿ ಅವರು ಫೆಬ್ರವರಿ 28ರಂದು ಯುದ್ಧದ ಆರಂಭಿಕ ಹಂತದಲ್ಲಿಯೇ ಭೀಕರ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾದರು. ಗುರುವಾರ ಮುಕ್ತಾಯಗೊಳ್ಳಲಿರುವ ಈ ಅಂತ್ಯಕ್ರಿಯೆಯ ಅವಧಿಯಲ್ಲಿ ಉದ್ವಿಗ್ನತೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಇರಾನ್ ನಾಗರಿಕರು ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹತ್ಯೆಗೆ ನಿರಂತರವಾಗಿ ಕರೆ ನೀಡುತ್ತಿದ್ದು, ಗಲ್ಫ್ ವಲಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ತೀವ್ರಗೊಂಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us