ಹಮಾಸ್ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರ; ಇಸ್ರೇಲ್ ಮೇಲೆ ಯುದ್ಧಕ್ಕೆ ಇರಾನ್​ನ ಖಮೇನಿ ಆದೇಶ

|

Updated on: Aug 01, 2024 | 10:50 PM

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಯ ನಂತರ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಮೇಲೆ 'ನೇರ' ದಾಳಿಗೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಹಮಾಸ್ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರ; ಇಸ್ರೇಲ್ ಮೇಲೆ ಯುದ್ಧಕ್ಕೆ ಇರಾನ್​ನ ಖಮೇನಿ ಆದೇಶ
ಅಯತೊಲ್ಲಾ ಅಲಿ ಖಮೇನಿ
Follow us on

ನವದೆಹಲಿ: ಹಮಾಸ್​ ಮುಖ್ಯಸ್ಥರಾಗಿದ್ದ ಇಸ್ಮಾಯಿಲ್ ಹನಿಯೆಹ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿರುವ ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಮೇಲೆ ಯುದ್ಧ ಸಾರಿದ್ದಾರೆ. ಇಸ್ಮಾಯಿಲ್ ಹನಿಯೆಹ್ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಟೆಹ್ರಾನ್‌ನ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಟೆಹ್ರಾನ್‌ನಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಗೆ ಪ್ರತೀಕಾರವಾಗಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ಮೇಲೆ “ನೇರ ದಾಳಿ” ಗೆ ಆದೇಶಿಸಿದ್ದಾರೆ ಎಂದು ಮೂವರು ಇರಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ನನ್ನ ಅವಧಿಯಲ್ಲೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ: ನರೇಂದ್ರ ಮೋದಿ

ಹನಿಯೆಹ್ ಅವರ ಸಾವನ್ನು ಘೋಷಿಸಿದ ಬೆನ್ನಲ್ಲೇ ಇರಾನ್ ಬುಧವಾರ ಬೆಳಿಗ್ಗೆ ದೇಶದ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ. ಅಧಿಕಾರಿಗಳ ಪ್ರಕಾರ, ಈ ಸಭೆಯಲ್ಲಿ ಖಮೇನಿ ಇಸ್ರೇಲ್ ಮೇಲೆ ದಾಳಿಯ ಆದೇಶವನ್ನು ನೀಡಿದ್ದಾರೆ. ಇಂತಹ ಸಭೆಯು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಹಿಂದಿನ ಏಪ್ರಿಲ್‌ನಲ್ಲಿ ಸಿರಿಯಾದಲ್ಲಿ ಇಸ್ರೇಲಿ ವಾಯುದಾಳಿಯು ಇಬ್ಬರು ಉನ್ನತ ಇರಾನ್ ಮಿಲಿಟರಿ ಕಮಾಂಡರ್‌ಗಳನ್ನು ಕೊಲ್ಲುವ ಸಮಯದಲ್ಲಿ ಇದೇ ರೀತಿಯ ಸಭೆಯನ್ನು ಕರೆಯಲಾಗಿತ್ತು.


ಇದನ್ನೂ ಓದಿ: ವಿಯೆಟ್ನಾಂ ಪ್ರಧಾನಿ ಜತೆ ಮೋದಿ ಮಾತುಕತೆ; ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಕುರಿತು ಚರ್ಚೆ

ಒಂದುವೇಳೆ ಇರಾನ್ ಮತ್ತು ಅದರ ಪ್ರಾಕ್ಸಿಗಳು ನಮ್ಮ ದೇಶದ ವಿರುದ್ಧ ಯಾವುದೇ ದಾಳಿ ನಡೆಸಿದರೆ ಇಸ್ರೇಲ್ ಪೂರ್ಣ ಪ್ರಮಾಣದ ಯುದ್ಧಕ್ಕೆ ಹೋಗಲು ಸಿದ್ಧವಾಗಿದೆ ಎಂದು ರಾಜತಾಂತ್ರಿಕ ಬ್ಯಾಕ್‌ಚಾನಲ್‌ಗಳ ಮೂಲಕ ಇರಾನ್‌ಗೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಇಸ್ರೇಲ್‌ನ ಚಾನೆಲ್ ವರದಿ ಮಾಡಿದೆ.

ಇರಾನ್‌ನ ಸರ್ಕಾರಿ ಪ್ರೆಸ್ ಟಿವಿ ಪ್ರಕಾರ, ಅಯತೊಲ್ಲಾ ಅಲಿ ಖಮೇನಿ ಇಂದು ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ನಡೆಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 pm, Thu, 1 August 24