ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ಅಬ್ಬರ: ಯುಎಇ ತೈಲ ನೌಕೆಗಳ ಮೇಲೆ ದಾಳಿ, ಓರ್ವ ಭಾರತೀಯ ಸಾವು

ಹಾರ್ಮುಜ್ ಕಡಲಿನಲ್ಲಿ ಇರಾನ್ ಯುಎಇ ತೈಲ ನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಯುಎಇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆ ಎಂದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಇರಾನಿ ಬಂದರುಗಳ ಮೇಲೆ ಜಲ ದಿಗ್ಬಂಧನ ಹೇರಿದೆ. ಈ ಘಟನೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದು, ಭಾರತದ ಇಂಧನ ಭದ್ರತೆಗೂ ಆತಂಕ ತಂದಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕ್ಷಿಪಣಿ ಅಬ್ಬರ: ಯುಎಇ ತೈಲ ನೌಕೆಗಳ ಮೇಲೆ ದಾಳಿ, ಓರ್ವ ಭಾರತೀಯ ಸಾವು
ಹಾರ್ಮುಜ್

Updated on: Jul 14, 2026 | 10:11 AM

ಟೆಹ್ರಾನ್, ಜುಲೈ 14: ಮಧ್ಯಪ್ರಾಚ್ಯದಲ್ಲಿ ಜಾಗತಿಕ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಇರಾನ್ ತನ್ನ ಉಗ್ರ ಸ್ವರೂಪವನ್ನು ಪ್ರದರ್ಶಿಸುತ್ತಿದೆ. ಸೋಮವಾರ ರಾತ್ರಿ ಓಮನ್ ದೇಶದ ಕಡಲ ಗಡಿಯೊಳಗೆ ಚಲಿಸುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್​​ಗೆ ಸೇರಿದ ಎರಡು ಬೃಹತ್ ತೈಲ ಟ್ಯಾಂಕರ್ ಹಡಗುಗಳ ಮೇಲೆ ಇರಾನ್ ಸೇನೆ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರೆ ಎಂಟು ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಯುಎಇ ದೇಶದ ಹೆಮ್ಮೆಯ ತೈಲ ಹಡಗುಗಳಾದ ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ಹಾರ್ಮುಜ್ ಜಲಸಂಧಿಯ ದಕ್ಷಿಣದ ಪ್ರಮುಖ ಹಡಗು ಮಾರ್ಗದ ಮೂಲಕ ಹಾದುಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ದಾಳಿಗೊಳಗಾದ ‘ಮೊಂಬಾಸಾ’ ಟ್ಯಾಂಕರ್‌ನಲ್ಲಿದ್ದ ಒಬ್ಬ ಭಾರತೀಯ ನಾವಿಕ ಸಾವನ್ನಪ್ಪಿದ್ದು, ಗಾಯಗೊಂಡ ಎಂಟು ಸಿಬ್ಬಂದಿಗಳ ಪೈಕಿ ಆರು ಮಂದಿ ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳಾಗಿದ್ದಾರೆ.

ಹಡಗುಗಳಿಗೆ ಭಾರಿ ಹಾನಿ: ಕ್ಷಿಪಣಿ ಬಿದ್ದ ತಕ್ಷಣ ಎರಡೂ ಬೃಹತ್ ಹಡಗುಗಳಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿತು. ಆದರೆ, ಹಡಗಿನಲ್ಲಿದ್ದ ಸಿಬ್ಬಂದಿ ಪ್ರಾಣದ ಹಂಗು ತೊರೆದು ಸಮಯಪ್ರಜ್ಞೆಯಿಂದ ಬೆಂಕಿಯನ್ನು ಹತೋಟಿಗೆ ತಂದಿದ್ದರಿಂದ ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಮಾರ್ಗದಲ್ಲಿ ಸಂಭವಿಸಬಹುದಾಗಿದ್ದ ಮಹಾ ವಿನಾಶವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಎಕ್ಸ್​ ಪೋಸ್ಟ್​

 

ಇದು ವಿಶ್ವಸಂಸ್ಥೆಯ ನಿಯಮದ ಉಲ್ಲಂಘನೆ: ಯುಎಇ ಆಕ್ರೋಶ

ಈ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಯುಎಇ ವಿದೇಶಾಂಗ ಸಚಿವಾಲಯ (MoFA), ಮೃತಪಟ್ಟ ಭಾರತೀಯ ನಾವಿಕನ ಕುಟುಂಬಕ್ಕೆ ಹಾಗೂ ಭಾರತ ಸರ್ಕಾರಕ್ಕೆ ತನ್ನ ಸಂತಾಪವನ್ನು ಸೂಚಿಸಿದೆ. “ಇರಾನ್‌ನ ಈ ಉದ್ಧಟತನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ನಿರ್ಣಯ 2817 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇರಾನ್ ತಕ್ಷಣ ತನ್ನ ಎಲ್ಲಾ ಯುದ್ಧ ಚಟುವಟಿಕೆಗಳನ್ನು ನಿಲ್ಲಿಸಿ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು. ನಮ್ಮ ಸಾರ್ವಭೌಮತ್ವದ ಮೇಲಿನ ಈ ದಾಳಿಗೆ ಪ್ರತಿಯಾಗಿ ಪ್ರತೀಕಾರ ತೀರಿಸಿಕೊಳ್ಳುವ ಸಂಪೂರ್ಣ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ” ಎಂದು ಯುಎಇ ಇರಾನ್‌ಗೆ ಖಡಕ್ ಎಚ್ಚರಿಕೆ ನೀಡಿದೆ.

ಮತ್ತಷ್ಟು ಓದಿ: ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹಾರ್ಮುಜ್ ಜಲಸಂಧಿಯಲ್ಲಿ 3 ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ

ಇಂದಿನಿಂದ ಇರಾನ್‌ಗೆ ಅಮೆರಿಕದ ಜಲ ದಿಗ್ಬಂಧನ

ಈ ರಕ್ತಪಾತದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕ್ಷಣದ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಇರಾನಿನ ಬಂದರುಗಳಿಗೆ ಬರುವ ಮತ್ತು ಅಲ್ಲಿಂದ ಹೋಗುವ ಎಲ್ಲಾ ಹಡಗುಗಳ ಮೇಲೆ ಅಮೆರಿಕದ ನೌಕಾಪಡೆ (CENTCOM) ಕಠಿಣ ಕಡಲ ದಿಗ್ಬಂಧನವನ್ನು ಮರುಸ್ಥಾಪಿಸುತ್ತಿದೆ ಎಂದು ಪ್ರಕಟಿಸಿದ್ದಾರೆ.

ಈ ಹಿಂದೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಏರ್ಪಟ್ಟಿದ್ದ ಮಧ್ಯಂತರ ಒಪ್ಪಂದವು ಇರಾನ್‌ನ ಈ ದಾಳಿಯಿಂದ ಸಂಪೂರ್ಣವಾಗಿ ಮುರಿದುಬಿದ್ದಿದೆ. ತಾನು ಇರಾನ್ ಬಂದರುಗಳನ್ನು ಮಾತ್ರ ಬ್ಲಾಕ್ ಮಾಡುವುದಾಗಿ ಮತ್ತು ಈ ಮಾರ್ಗದಲ್ಲಿ ಹಾದುಹೋಗುವ ಇತರ ದೇಶಗಳ ವಾಣಿಜ್ಯ ಹಡಗುಗಳ ಸುರಕ್ಷತೆಗಾಗಿ ಅಮೆರಿಕ ಇನ್ಮುಂದೆ ‘ವಿಶೇಷ ಟೋಲ್ ಶುಲ್ಕ’ ವಿಧಿಸಲಿದೆ ಎಂದು ಟ್ರಂಪ್ ಹೊಸ ನೀತಿಯನ್ನು ಪ್ರಕಟಿಸಿದ್ದಾರೆ.

ಇರಾನ್ ಯುದ್ಧ: ಹಾರ್ಮುಜ್ ಜಲಸಂಧಿ ತೆರೆಯಲು ಯುಎಇ ಆಗ್ರಹ

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಯುಎಇ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು ಮತ್ತು ಜಲಸಂಧಿಯನ್ನು “ಆರ್ಥಿಕ ದಬ್ಬಾಳಿಕೆ”ಗೆ ಬಳಸುವುದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಯುಎಇ ಹೇಳಿದೆ. ಈ ದಾಳಿಯಲ್ಲಿ ಮೃತಪಟ್ಟ ಭಾರತೀಯ ನಾವಿಕನ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಯುಎಇ, ತನ್ನ ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸಲು ಮಿಲಿಟರಿ ಸನ್ನದ್ಧತೆಯನ್ನು ಹೆಚ್ಚಿಸಿದ್ದು, ಪ್ರತೀಕಾರದ ಹಕ್ಕನ್ನು ಕಾಯ್ದಿರಿಸಿದೆ.

ಇರಾನ್ ತಕ್ಷಣ ಯುದ್ಧ ನಿಲ್ಲಿಸಿ, ಜಾಗತಿಕ ಇಂಧನ ಭದ್ರತೆ ಹಾಗೂ ಮುಕ್ತ ವ್ಯಾಪಾರಕ್ಕಾಗಿ ಹಾರ್ಮುಜ್ ಜಲಸಂಧಿಯನ್ನು ಮರುಸಂಘಟಿಸಬೇಕೆಂದು ಒತ್ತಾಯಿಸಿದೆ. ಇರಾನ್‌ನ ಇಂತಹ ಕೃತ್ಯಗಳಿಗೆ ಕೌಂಟರ್ ನೀಡಲು ಅಮೆರಿಕ ಈಗಾಗಲೇ ಇರಾನ್ ಬಂದರುಗಳ ಮೇಲೆ ಕಠಿಣ ನೌಕಾ ದಿಗ್ಬಂಧನವನ್ನು ಪುನರಾರಂಭಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ

ಯುದ್ಧದ ತೀವ್ರತೆ: ಜಾಗತಿಕ ತೈಲದ ಐದನೇ ಒಂದು ಭಾಗವನ್ನು ಸಾಗಿಸುವ ಹಾರ್ಮುಜ್ ಜಲಸಂಧಿಯನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಲವಂತವಾಗಿ ಮುಚ್ಚಿದ್ದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ 140 ಮಿಲಿಟರಿ ನೆಲೆಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಿತ್ತು. ಸದ್ಯ ಈ ಕ್ಷಿಪಣಿ ದಾಳಿಯು ಇಡೀ ಕೊಲ್ಲಿ ಪ್ರದೇಶವನ್ನು ಜಾಗತಿಕ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ.

ಭಾರತಕ್ಕೆ ಭಾರಿ ತಲೆನೋವು: ಭಾರತೀಯ ನಾವಿಕ ಸಾವನ್ನಪ್ಪಿರುವುದು ಮತ್ತು ಹಲವರು ಗಾಯಗೊಂಡಿರುವುದು ಭಾರತಕ್ಕೆ ಕಳವಳ ಮೂಡಿಸಿದೆ. ಭಾರತವು ತನ್ನ ಇಂಧನ ಭದ್ರತೆಗಾಗಿ ಈ ಮಾರ್ಗವನ್ನೇ ಅವಲಂಬಿಸಿರುವುದರಿಂದ, ಅಮೆರಿಕ ಮತ್ತು ಇರಾನ್ ನಡೆಸುತ್ತಿರುವ ಈ ಜಿದ್ದಾಜಿದ್ದಿನ ‘ಸುಂಕದ ಸಮರ’ ಹಾಗೂ ಕಡಲ ಯುದ್ಧವು ಜಾಗತಿಕ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿ, ಭಾರತದಲ್ಲೂ ಆರ್ಥಿಕ ಒತ್ತಡವನ್ನು ಹೆಚ್ಚಿಸುವ ಭೀತಿ ಮೂಡಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:14 am, Tue, 14 July 26

Loading...
Unable to load recommendations.
Follow Us