ಹಿಜಾಬ್ ಧರಿಸದ ಯುವತಿಯ ಮೇಲೆ ಪೊಲೀಸರಿಂದ ತೀವ್ರ ಹಲ್ಲೆ, ಸಾವು: ಕಿತ್ತೊಗೆದು ಬೀದಿಗಿಳಿದ ಮಹಿಳೆಯರು

ನೈತಿಕ ಪೊಲೀಸ್​ಗಿರಿ ವಿರುದ್ಧ ರೊಚ್ಚಿಗೆದ್ದಿರುವ ಇರಾನ್ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು ಹಿಜಾಬ್​ಗಳನ್ನು ಕಿತ್ತೊಗೆದು ಬಿಸಾಡುತ್ತಿದ್ದಾರೆ.

ಹಿಜಾಬ್ ಧರಿಸದ ಯುವತಿಯ ಮೇಲೆ ಪೊಲೀಸರಿಂದ ತೀವ್ರ ಹಲ್ಲೆ, ಸಾವು: ಕಿತ್ತೊಗೆದು ಬೀದಿಗಿಳಿದ ಮಹಿಳೆಯರು
ಇರಾನ್​ನ ಹಿಜಾಬ್ ವಿರೋಧಿ ಪ್ರತಿಭಟನೆ (ಎಡಚಿತ್ರ). ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟ ಅಮಿನಿ
Edited By:

Updated on: Sep 19, 2022 | 10:12 AM

ತೆಹರಾನ್: ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ (Hijab) ಧರಿಸದ ‘ಅಪರಾಧ’ಕ್ಕಾಗಿ ಪೊಲೀಸರು ಬಂಧಿಸಿ, ವ್ಯಾನ್​ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಯುವತಿಯೊಬ್ಬರು ಮೃತಪಟ್ಟ ನಂತರ ಇರಾನ್​ನಲ್ಲಿ (Iran) ಮಹಿಳೆಯರು ಬೀದಿಗಳಿದು ಪ್ರತಿಭಟಿಸುತ್ತಿದ್ದಾರೆ. ಪೊಲೀಸ್ ದೌರ್ಜನ್ಯದಿಂದ ಕುರ್ದಿಸ್ತಾನ್ ಪ್ರಾಂತ್ಯದ 22 ವರ್ಷದ ಮಹ್ಸಾ ಅಮಿನಿ ಎಂಬ ಮಹಿಳೆ ಮೃತಪಟ್ಟಿದ್ದರು. ನೈತಿಕ ಪೊಲೀಸ್​ಗಿರಿ ವಿರುದ್ಧ ರೊಚ್ಚಿಗೆದ್ದಿರುವ ಇರಾನ್ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು ಹಿಜಾಬ್​ಗಳನ್ನು ಕಿತ್ತೊಗೆದು ಬಿಸಾಡುತ್ತಿದ್ದಾರೆ. ಇಂಥ ಹಲವು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇರಾನ್ ಆಡಳಿತವು ಪ್ರತಿಭಟನೆ ನಿಯಂತ್ರಿಸುವ ಉದ್ದೇಶದಿಂದ ಇಂಟರ್ನೆಟ್​ ಬಳಕೆಗೆ ನಿರ್ಬಂಧ ಹೇರಿದೆ.

9 ವರ್ಷ ದಾಟಿದ ಹೆಣ್ಣುಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುವುದು ಇರಾನ್​ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟ ಅಮಿನಿಯ ಸ್ವಗ್ರಾಮ ಸಘೇಜ್​ ಎಂಬಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ‘ಡೆತ್ ಟು ಡಿಕ್ಟೇಟರ್’ ಎಂಬ ಘೋಷಣೆಗಳೂ ಮೊಳಗಿದವು. ತನ್ನ ಸಂಬಂಧಿಕರನ್ನು ಭೇಟಿಯಾಗಲು ಅಮಿನಿ ಪಶ್ಚಿಮ ಪ್ರಾಂತ್ಯವಾದ ಕುರ್ದಿಸ್ತಾನದಿಂದ ಇರಾನ್​ನ ರಾಜಧಾನಿ ತೆಹರಾನ್​ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆಯರ ವಸ್ತ್ರಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು.

ಪೊಲೀಸ್ ವ್ಯಾನ್ ಒಳಗೆ ಅಮಿನಿಯನ್ನು ಹಿಗ್ಗಾಮುಗ್ಗಾ ಥಳಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಬಂಧಿಸಿದ ನಂತರ ಆಕೆಗೆ ಹೃದಯಾಘಾತವಾಯಿತು. ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಕುಟುಂಬಕ್ಕೆ ಮಾಹಿತಿ ನೀಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರು ಬಂಧಿಸುವವರೆಗೆ ಅಮಿನಿ ಆರೋಗ್ಯ ಚೆನ್ನಾಗಿಯೇ ಇತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ‘ಅಮಿನಿ ಕುಟುಂಬಕ್ಕೆ ಕರೆ ಮಾಡಿದ್ದ ಪೊಲೀಸರು ಮರು-ಶಿಕ್ಷಣದ ನಂತರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು’ ಎಂದು ಇರಾನ್​ನ ಮಾನವ ಹಕ್ಕುಗಳ ಸಂಘಟನೆ ಹರಾನಾ ಹೇಳಿತ್ತು.

ಎಲ್ಲಾ ಸಮಯದಲ್ಲೂ ಹಿಜಾಬ್ ಧರಿಸುವುದು ಸೇರಿದಂತೆ ಮಹಿಳೆಯರ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಇರಾನ್​ನ ಮೂಲಭೂತವಾದಿ ಅಧ್ಯಕ್ಷ ಇಬ್ರಾಹಿಂ ರೈಸಿ ಆದೇಶಿಸಿದ ಕೆಲವೇ ವಾರಗಳಲ್ಲಿ ಪೊಲೀಸರ ಹಲ್ಲೆಯಿಂದ ಯುವತಿ ಮೃತಪಟ್ಟಿದ್ದಾರೆ. ಹಿಜಾಬ್ ಧರಿಸದೆ ರಸ್ತೆಗೆ ಬರುವ ಮಹಿಳೆಯರಿಗೆ ಕಠಿಣ ಶಿಕ್ಷೆಗಳನ್ನು ಅಲ್ಲಿನ ಸರ್ಕಾರ ಘೋಷಿಸಿದೆ. ಪ್ರಸ್ತುತ ಇರಾನ್​ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಗಲಭೆಕೋರರ ಮೇಲೆ ಅಶ್ರುವಾಯು ಪ್ರಯೋಗಿಸುವ ಹಲವು ವಿಡಿಯೊಗಳು ಬಹಿರಂಗಗೊಂಡಿವೆ. ಕೆಲವೆಡೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

Published On - 10:10 am, Mon, 19 September 22