Queen Elizabeth’s Funeral: ಬ್ರಿಟನ್ ಮಹಾರಾಣಿ ಎಲಿಜಬೆತ್ ಅಂತ್ಯಕ್ರಿಯೆ ಇಂದು; ವಿಶ್ವದ ಹಲವು ಗಣ್ಯರು ಭಾಗಿ
ಸುಮಾರು 4 ತಾಸುಗಳಷ್ಟು ಸುದೀರ್ಘ ಅವಧಿಗೆ ವಿವಿಧ ಧಾರ್ಮಿಕ ಹಾಗೂ ರಾಜಮನೆತನ ಶಿಷ್ಟಾಚಾರದ ವಿಧಿವಿಧಾನಗಳು ನೆರವೇರಲಿವೆ.
ಜಗತ್ತಿನ ಮಹತ್ವದ ವಿದ್ಯಮಾನಗಳಲ್ಲಿ ಒಂದು ಎನಿಸಿ ಗಮನ ಸೆಳೆದ ಬ್ರಿಟನ್ನ ದಿವಂಗತ ರಾಣಿ ಎಲಿಜಬೆತ್ (Queen Elizabeth’s Funeral) ಅಂತ್ಯಕ್ರಿಯೆ ಇಂದು (ಸೆ 19) ನಡೆಯಲಿದೆ. ಸುಮಾರು 4 ತಾಸುಗಳಷ್ಟು ಸುದೀರ್ಘ ಅವಧಿಗೆ ವಿವಿಧ ಧಾರ್ಮಿಕ ಹಾಗೂ ರಾಜಮನೆತನ ಶಿಷ್ಟಾಚಾರದ ವಿಧಿವಿಧಾನಗಳು ನೆರವೇರಲಿವೆ. ಬ್ರಿಟನ್ನಲ್ಲಿ 1965ರ ನಂತರ ಇದೇ ಮೊದಲ ಬಾರಿಗೆ ಸರ್ಕಾರಿ ಗೌರವಗಳೊಂದಿಗೆ ಗಣ್ಯರೊಬ್ಬರ ಅಂತ್ಯಸಂಸ್ಕಾರ ನಡೆಯುತ್ತಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಸಾಮ್ರಾಜ್ಯವನ್ನು ಮುನ್ನಡೆಸಿದ್ದ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಅವರ ಅಂತ್ಯ ಸಂಸ್ಕಾರ 1965ರಲ್ಲಿ ನಡೆದಿತ್ತು. ಅಂದು ಸಹ ಬ್ರಿಟನ್ನಲ್ಲಿ ಇದೇ ರೀತಿಯ ವಾತಾವರಣ ನಿರ್ಮಾಣವಾಗಿತ್ತು.
ಈ ಮಹತ್ವದ ಬೆಳವಣಿಗೆಗೆ ಸಂಬಂಧಿಸಿದ 10 ಮುಖ್ಯ ಅಂಶಗಳಿವು…
- ರಾಣಿ ಎಲಿಜಬೆತ್ ನಿಧನದ ನಂತರ ಬ್ರಿಟನ್ ಶೋಕಾಚರಣೆಯಲ್ಲಿತ್ತು. ಇಂದು ಮಹಾರಾಣಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆಯೊಂದಿಗೆ ಬ್ರಿಟನ್ನ 11 ದಿನಗಳ ರಾಷ್ಟ್ರೀಯ ಶೋಕಾಚರಣೆ ಅಂತ್ಯಗೊಳ್ಳಲಿದೆ. ರಾಜಮನೆತನಕ್ಕೆ ಸಂಬಂಧಿಸಿದ ಖಾಸಗಿ ವಿದ್ಯಮಾನವಾಗಿದ್ದರೂ, ಇದು ವಿಶ್ವಮಟ್ಟದಲ್ಲಿ ದೊಡ್ಡಸುದ್ದಿಯಾಗಿದೆ.
- ವಿಶ್ವದ ಬಹುತೇಕ ಎಲ್ಲ ಪ್ರಮುಖ ದೇಶಗಳ ನಾಯಕರು ಅಂತ್ಯಸಂಸ್ಕಾರದ ವೇಳೆ ದಿವಂಗತ ರಾಣಿ ಎಲಿಜಬೆತ್ಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಬ್ರಿಟನ್ನ ರಾಜಮನೆತನ, ರಾಜಕಾರಿಣಿಗಳು, ಮಿಲಿಟರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ದತ್ತಿ ಸಂಸ್ಥೆಗಳ ಪದಾಧಿಕಾರಿಗಳು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
- ಬ್ರಿಟನ್ನ ವಿವಿಧೆಡೆ ಇರುವ 125 ಚಿತ್ರಮಂದಿರಗಳಲ್ಲಿ ಅಂತ್ಯಕ್ರಿಯೆ ನೇರ ಪ್ರಸಾರವಾಗಲಿದೆ. ಪ್ರಮುಖ ಉದ್ಯಾನವನಗಳು, ಸರ್ಕಲ್ಗಳು ಮತ್ತು ಕ್ಯಾಥೆಡ್ರೆಲ್ಗಳಲ್ಲಿ ಅಂತ್ಯಸಂಸ್ಕಾರವನ್ನು ಸಾರ್ವಜನಿಕರು ನೋಡಬಹುದಾಗಿದೆ. ಇದಕ್ಕಾಗಿ ಬೃಹತ್ ಎಲೆಕ್ಟ್ರಿಕ್ ಪರದೆಗಳನ್ನು ಸ್ಥಾಪಿಸಲಾಗಿದೆ.
- ರಾಣಿ ವಿಕ್ಟೋರಿಯಾ ಅಂತ್ಯಸಂಸ್ಕಾರಕ್ಕೆ ಬಳಸಲಾದ ಬಂದೂಕಿನ ಗಾಡಿಯಲ್ಲಿಯೇ ಎಲಿಜಬೆತ್ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಗುತ್ತದೆ. ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ನಡೆಯುವ ಈ ಸಮಾರಂಭವನ್ನು ವಿಶ್ವದಾದ್ಯಂತ ನೂರಾರು ಕೋಟಿ ಜನರು ವೀಕ್ಷಿಸಲಿದ್ದಾರೆ. 142 ನಾವಿಕರು ಶವಪೆಟ್ಟಿಗೆಯನ್ನು ಹೊತ್ತ ಬಂದೂಕನ್ನು ಗಾಡಿಯನ್ನು ಎಳೆಯುತ್ತಾರೆ.
- ಪಾರ್ಥಿವ ಶರೀರ ಹೊತ್ತ ಗಾಡಿಯು ಹಾದು ಬರುವ ಮಾರ್ಗದಲ್ಲಿ ರಾಯಲ್ ನೇವಿ ಮತ್ತು ರಾಯಲ್ ಮೆರೈನ್ ಘಟಕಗಳಿಗೆ ಸೇರಿದ ಯೋಧರು ಸಾಲುಗಟ್ಟಿ ನಿಲ್ಲುತ್ತಾರೆ. ಮೆರವಣಿಗೆಯು ಪಾರ್ಲಿಮೆಂಟ್ ಸ್ಕ್ವೇರ್ ಮೂಲಕ ಹಾದುಹೋಗಲಿದ್ದು, ಅಲ್ಲಿ ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಯ ಸದಸ್ಯರು ಗೌರವ ರಕ್ಷೆ (ಗಾರ್ಡ್ ಆಫ್ ಹಾನರ್) ನೀಡುತ್ತಾರೆ. ಈ ವೇಳೆ ರಾಯಲ್ ಮೆರೈನ್ಗಳ ಬ್ಯಾಂಡ್ ಗೀತೆಗಳನ್ನು ನುಡಿಸುತ್ತದೆ.
- ಅಂತ್ಯಸಂಸ್ಕಾರದ ಮೆರವಣಿಗೆಯನ್ನು ಸ್ಕಾಟಿಷ್ ಮತ್ತು ಐರಿಷ್ ರೆಜಿಮೆಂಟ್ಗಳು ಮುನ್ನಡೆಸಲಿವೆ. 200 ಮಂದಿ ಇರುವ ಗೂರ್ಖಾ ಬ್ರಿಗೇಡ್ ಮತ್ತು ರಾಯಲ್ ಏರ್ಫೋರ್ಸ್ ಬ್ಯಾಂಡ್ನ ಸಿಬ್ಬಂದಿ ಸಹ ಶವಪೆಟ್ಟಿಗೆಯೊಂದಿಗೆ ಹೆಜ್ಜೆ ಹಾಕುತ್ತಾರೆ. ಬ್ರಿಟನ್ನ ಮಹಾರಾಜ ಚಾರ್ಲ್ಸ್ ಮತ್ತು ರಾಜಮನೆತನದ ಇತರ ಸದಸ್ಯರು ಶವಪೆಟ್ಟಿಗೆಯೊಂದಿಗೆ ಹೆಜ್ಜೆ ಹಾಕಲಿದ್ದಾರೆ.
- ಬ್ರಿಟನ್ ಮತ್ತು ವಿಶ್ವದ ವಿವಿಧೆಡೆಯ ಸಾವಿರಾರು ಗಣ್ಯರು ಅಂತ್ಯಸಂಸ್ಕಾರಕ್ಕೆಂದು ಬಂದಿರುವುದು ಬ್ರಿಟನ್ನ ಪೊಲೀಸರಿಗೆ ಸವಾಲು ಒಡ್ಡಿದೆ. ಸ್ಕಾಟ್ಲೆಂಡ್ ಯಾರ್ಡ್ ಗೆ (ಲಂಡನ್ ಪೊಲೀಸ್) ಸಹಾಯ ಮಾಡಲೆಂದು ಇಂಗ್ಲೆಂಡ್ನ ವಿವಿಧೆಡೆಯಿಂದ 2,000ಕ್ಕೂ ಹೆಚ್ಚು ಅಧಿಕಾರಿಗಳನ್ನು ಕರೆಸಲಾಗಿದೆ.
- ಐರೋಪ್ಯ ಒಕ್ಕೂಟ, ಫ್ರಾನ್ಸ್, ಜಪಾನ್, ಭಾರತ ಮತ್ತು ಇತರ ಅನೇಕ ದೇಶಗಳ ನಾಯಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ರಷ್ಯಾ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಸಿರಿಯಾ ಮತ್ತು ಉತ್ತರ ಕೊರಿಯಾದ ನಾಯಕರನ್ನು ಆಹ್ವಾನಿಸಿಲ್ಲ.
- ಅಂತ್ಯಸಂಸ್ಕಾರದ ಆರಂಭಿಕ ವಿಧಿಗಳ (ಸರ್ವೀಸ್) ನಂತರ ರಾಣಿಯ ಶವಪೆಟ್ಟಿಗೆಯನ್ನು ರಾಯಲ್ ಹಿಯರ್ಸ್ ಮೂಲಕ ಲಂಡನ್ನ ಪಶ್ಚಿಮದಲ್ಲಿರುವ ವಿಂಡ್ಸರ್ ಕ್ಯಾಸಲ್ಗೆ ಕಮಿಟ್ಟಲ್ ಸರ್ವೋಸ್ಗಾಗಿ ಕೊಂಡೊಯ್ಯಲಾಗುತ್ತದೆ. ನಂತರ ರಾಜಮನೆತನಕ್ಕೆ ಮೀಸಲಾಗಿರುವ ಸ್ಮಶಾನದಲ್ಲಿ ರಾಣಿಯ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಗುವುದು. ಎಲಿಜಬೆತ್ರ ದಿವಂಗತ ಪತಿ ಪ್ರಿನ್ಸ್ ಫಿಲಿಪ್, ಪೋಷಕರು ಮತ್ತು ಸಹೋದರಿಯರ ಸಮಾಧಿಗಳ ಹತ್ತಿರದಲ್ಲಿಯೇ ಎಲಿಜಬೆತ್ರ ಅಂತ್ಯಸಂಸ್ಕಾರವೂ ನಡೆಯಲಿದೆ.
- 70 ವರ್ಷ 214 ದಿನ ಪಟ್ಟದಲ್ಲಿದ್ದವರು ರಾಣಿ ಎಲಿಜಬೆತ್. ಪ್ಲಾಟಿನಂ ಜ್ಯುಬಿಲಿ ಆಚರಿಸಿದ ಮೊದಲ ಬ್ರಿಟಿಷ್ ರಾಣಿ ಎಂಬ ಶ್ರೇಯಕ್ಕೂ ಅವರು ಪಾತ್ರರಾದರು. ಅವರು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದರು.
Published On - 8:31 am, Mon, 19 September 22