
ವಾಷಿಂಗ್ಟನ್, ಏಪ್ರಿಲ್ 30: ಇರಾನ್(Iran) ಮತ್ತು ಅಮೆರಿಕ-ಇಸ್ರೇಲ್ ಪಡೆಗಳ ನಡುವಿನ ಯುದ್ಧವು ಈಗ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ತಲುಪಿದೆ. ಅಮೆರಿಕದ ದಿಗ್ಬಂಧನಗಳನ್ನು ತೆಗೆದುಹಾಕುವ ಬದಲಾಗಿ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಮತ್ತು ಪರಮಾಣು ಮಾತುಕತೆಗಳನ್ನು ಮುಂದೂಡುವ ಇರಾನ್‌ನ ಪ್ರಸ್ತಾವನೆಯನ್ನು ಡೊನಾಲ್ಡ್ ಟ್ರಂಪ್ ಕಡಾಖಂಡಿತವಾಗಿ ತಿರಸ್ಕರಿಸಿದ್ದಾರೆ. ಇರಾನ್ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಶಹರಾಮ್ ಇರಾನಿ ಅವರು ಶತ್ರು ಪಡೆಗಳಿಗೆ ತೀವ್ರ ಭೀತಿ ಹುಟ್ಟಿಸುವ ಹೊಸ ಆಯುಧವನ್ನು ಬಳಸುವುದಾಗಿ ಘೋಷಿಸಿದ್ದಾರೆ.
ಅದು ಅವರ ಪಕ್ಕದಲ್ಲೇ ಇದೆ, ಅವರಿಗೆ ಹೃದಯಾಘಾತವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅಣಕಿಸುವ ಮೂಲಕ ಅಮೆರಿಕನ್ ಪಡೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ವಿಮಾನವಾಹಕ ನೌಕೆ ‘ಅಬ್ರಹಾಂ ಲಿಂಕನ್’ ವಿರುದ್ಧ ಇರಾನ್ ಕನಿಷ್ಠ ಏಳು ಕ್ಷಿಪಣಿ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಇರಾನಿ ಹೇಳಿಕೊಂಡಿದ್ದಾರೆ.
ಇದರಿಂದಾಗಿ ಅಮೆರಿಕದ ವಿಮಾನಗಳು ಆ ವಾಹಕ ನೌಕೆಯಿಂದ ಕಾರ್ಯಾಚರಣೆ ನಡೆಸದಂತೆ ತಡೆಯಲಾಗಿದೆ ಎಂಬುದು ಅವರ ವಾದ. ಅಮೆರಿಕ ಮತ್ತು ಇಸ್ರೇಲಿ ಗುರಿಗಳ ಮೇಲೆ ಈಗಾಗಲೇ 100ಕ್ಕೂ ಹೆಚ್ಚು ಯಶಸ್ವಿ ಪ್ರತೀಕಾರದ ಅಲೆಗಳನ್ನು ನಡೆಸಿರುವುದಾಗಿ ಇರಾನ್ ತಿಳಿಸಿದೆ.
ಮತ್ತಷ್ಟು ಓದಿ: ಇರಾನ್‌ನಿಂದ ಶಾಂತಿ ಪ್ರಸ್ತಾವನೆ: ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದ, ಅಮೆರಿಕದ ಅಂಗಳದಲ್ಲಿ ಈಗ ಚೆಂಡು
ವಿಶ್ವದ ಒಟ್ಟು ಕಚ್ಚಾ ತೈಲದ ಶೇಕಡಾ 20 ರಷ್ಟು ಸಾಗುವ ಕಾರ್ಯತಂತ್ರದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಮುಚ್ಚಿದೆ. ಅಮೆರಿಕನ್ನರು ಸೊಮಾಲಿ ಕಡಲ್ಗಳ್ಳರಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಮತ್ತು ಇರಾನಿನ ಹಡಗುಗಳನ್ನು ವಶಪಡಿಸಿಕೊಂಡು ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಇರಾನಿ ಟೀಕಿಸಿದ್ದಾರೆ.
ಇತ್ತ ಟ್ರಂಪ್ ಅವರು ಇರಾನ್‌ನ ಶಾಂತಿ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಾ, ದಿಗ್ಬಂಧನವು ಬಾಂಬ್ ದಾಳಿಗಿಂತ ಹೆಚ್ಚು ಪರಿಣಾಮಕಾರಿ, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯುದ್ಧದಲ್ಲಿ ಮಡಿದವರ ರಕ್ತದ ಕೊನೆಯ ಹನಿಯವರೆಗೆ ಸೇಡು ತೀರಿಸಿಕೊಳ್ಳುವುದಾಗಿ ಮತ್ತು ಶತ್ರುಗಳಿಗೆ ವಿಷಾದಕರ ಹೊಡೆತ ನೀಡುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಫೆಬ್ರವರಿ 28 ರಂದು ಆರಂಭವಾದ ಈ ಯುದ್ಧವು ಈಗ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಮತ್ತು ಪ್ರಾದೇಶಿಕ ಅಸ್ಥಿರತೆಗೆ ಕಾರಣವಾಗುವ ಲಕ್ಷಣಗಳನ್ನು ತೋರುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ