ಸಿಖ್​ ಯುನಾನಿ ವೈದ್ಯನ ಹತ್ಯೆಯ ಹೊಣೆ ಹೊತ್ತ ಐಸಿಸ್​-ಕೆ; ವರದಿ ಕೇಳಿದ ಪಾಕ್​ ಆಂತರಿಕ ವ್ಯವಹಾರಗಳ ಸಚಿವಾಲಯ

| Updated By: Lakshmi Hegde

Updated on: Oct 03, 2021 | 1:34 PM

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾದಾಗಿನಿಂದಲೂ ಐಸಿಸ್​-ಕೆ ದಾಳಿಯೂ ಹೆಚ್ಚಾಗಿದೆ. ಅಫ್ಘಾನ್​ನ ಹಲವು ಭಾಗಗಳಲ್ಲೂ ದಾಳಿ ನಡೆಸಿದೆ. ಆಗಸ್ಟ್​ 26ರಂದು ಕಾಬೂಲ್​​ ಏರ್ಪೋರ್ಟ್​​ನಲ್ಲಿ ಮಾರಣಾಂತಿಕವಾದ ಆತ್ಮಾಹುತಿ ದಾಳಿ ನಡೆಸಿತ್ತು.

ಸಿಖ್​ ಯುನಾನಿ ವೈದ್ಯನ ಹತ್ಯೆಯ ಹೊಣೆ ಹೊತ್ತ ಐಸಿಸ್​-ಕೆ; ವರದಿ ಕೇಳಿದ ಪಾಕ್​ ಆಂತರಿಕ ವ್ಯವಹಾರಗಳ ಸಚಿವಾಲಯ
ಹತ್ಯೆಗೀಡಾದ ಸಿಖ್​ ನಾಯಕ
Follow us on

ಪೇಶಾವರ (Peshawar)ದಲ್ಲಿ ಇತ್ತೀಚೆಗಷ್ಟೇ ಸಿಖ್​ ಸಮುದಾಯ (Sikh Community)ದ ಖ್ಯಾತ ಯುನಾನಿ ವೈದ್ಯ (ಹಕೀಮ್​) ಸರ್ದಾರ್ ಸತ್ನಾಮ್​ ಸಿಂಗ್​​ (45)ರನ್ನು ಅವರ ಕ್ಲಿನಿಕ್​ಗೇ ನುಗ್ಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅಪರಿಚಿತ ಬಂದೂಕುಧಾರಿಗಳು ಕ್ಲಿನಿಕ್​ಗೆ ಬಂದು, ಕ್ಯಾಬಿನ್​ ಬಾಗಿಲು ನೂಕಿ ಸತ್ನಾಮ್​ ಸಿಂಗ್​ರಿಗೆ ಗುಂಡು ಹಾರಿಸಿದ್ದರು. ಇದೀಗ ಈ ಹತ್ಯೆಯನ್ನು ತಾವೇ ನಡೆಸಿದ್ದಾಗಿ ಐಸಿಸ್​-ಕೆ (ISIS-K-ಇಸ್ಲಾಮಿಕ್ ಸ್ಟೇಟ್​ ಖೊರಾಸನ್​) ಒಪ್ಪಿಕೊಂಡಿದೆ. ಇದು ಇಸ್ಲಾಮಿಕ್​ ಸ್ಟೇಟ್ಸ್​ ಅಫ್ಘಾನಿಸ್ತಾನದ ಅಂಗಸಂಸ್ಥೆ. ಸಿಖ್​ ಯುನಾನಿ ವೈದ್ಯನ ಹತ್ಯೆಯ ಹೊಣೆ ಐಸಿಸ್​ -ಕೆ ಹೊರುತ್ತಿದ್ದಂತೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಇದರಲ್ಲಿ ಹಸ್ತಕ್ಷೇಪ ಮಾಡಿದೆ. ಸಿಖ್​ ವೈದ್ಯನ ಹತ್ಯೆಯ ಕುರಿತಾದ ಸಮಗ್ರ ಮಾಹಿತಿಯನ್ನು ನೀಡುವಂತೆ ಖೈಬರ್​ ಪಖ್ತುಂಖ್ವಾ ಪ್ರಾಂತೀಯ ಸರ್ಕಾರದ ಬಳಿ ಕೇಳಿದೆ. 

ಪಾಕಿಸ್ತಾನದ ವಾಯುವ್ಯ ನಗರವಾದ ಪೇಶಾವರ ಖೈಬರ್​ ಪಂಖ್ತುಂಖ್ವಾ ಪ್ರಾಂತ್ಯಕ್ಕೆ ಸೇರಿದೆ. ಹತ್ಯೆಗೀಡಾದ ಸಿಖ್​ ಹಕೀಮ್​ ಸರ್ದಾರ್ ಸತ್ನಾಮ್ ಸಿಂಗ್, ಸಿಖ್​ ಸಮುದಾಯದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು.​ ಕಳೆದ 20 ವರ್ಷಗಳಿಂದಲೂ  ಪೇಶಾವರ್​​ನ ಚರ್ಸದ್ದ ರಸ್ತೆಯಲ್ಲಿ ಧರ್ಮಂದರ್​ ಫಾರ್ಮಸಿ ಎಂಬ ಹೆಸರಿನ ಕ್ಲಿನಿಕ್​ ನಡೆಸುತ್ತಿದ್ದರು. ಹತ್ಯೆ ನಡೆದದ್ದು ಸೆಪ್ಟೆಂಬರ್​ 30ರಂದು. ಅಂದು ನಾಲ್ವರು ಅಪರಿಚಿತರು ಬಂದೂಕು ಹಿಡಿದು ಬಂದು ಗುಂಡಿನ ದಾಳಿ ನಡೆಸಿದ್ದಾರೆ. ವೈದ್ಯನ ಹತ್ಯೆ ಮಾಡಿ ಅಲ್ಲಿಂದ ಪಾರಾಗಿದ್ದರು. ಶುಕ್ರವಾರ ಇವರ ಅಂತ್ಯಕ್ರಿಯೆ ನಡೆದಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಶುರುವಾದಾಗಿನಿಂದಲೂ ಐಸಿಸ್​-ಕೆ ದಾಳಿಯೂ ಹೆಚ್ಚಾಗಿದೆ. ಅಫ್ಘಾನ್​ನ ಹಲವು ಭಾಗಗಳಲ್ಲೂ ದಾಳಿ ನಡೆಸಿದೆ. ಆಗಸ್ಟ್​ 26ರಂದು ಕಾಬೂಲ್​​ ಏರ್ಪೋರ್ಟ್​​ನಲ್ಲಿ ಮಾರಣಾಂತಿಕವಾದ ಆತ್ಮಾಹುತಿ ದಾಳಿ ನಡೆಸಿತ್ತು. ಅದರಲ್ಲಿ ಸುಮಾರು 170 ಅಫ್ಘಾನ್​ ಸೈನಿಕರನ್ನು ಮತ್ತು 13 ಯುಎಸ್​ ಸೇನಾ ಸಿಬ್ಬಂದಿಯನ್ನು ಹತ್ಯೆಗೈದಿದ್ದೇವೆ ಎಂದೂ ಐಸಿಸ್​-ಕೆ ಹೇಳಿಕೊಂಡಿದೆ.  ಇದೀಗ ಸಿಖ್​ ವೈದ್ಯನ ಹತ್ಯೆಯ ಹೊಣೆಯನ್ನೂ ಹೊತ್ತಿದೆ. ಪೇಶಾವರದಲ್ಲಿ ಸಿಖ್​ರನ್ನು ಪದೇಪದೆ ಟಾರ್ಗೆಟ್​ ಮಾಡಲಾಗುತ್ತಿದೆ. 2018ರಲ್ಲಿ ಸಿಖ್​ ಪ್ರಮುಖ ನಾಯಕ ಚರಣಜಿತ್​ ಸಿಂಗ್​ ಎಂಬುವರನ್ನು ಅಪರಿಚಿತನೊಬ್ಬ ಹತ್ಯೆ ಮಾಡಿದ್ದ. ಹಾಗೇ, 2016ರಲ್ಲಿ ಪಾಕಿಸ್ತಾನ ತೆಹ್ರೀಕ್​-ಇ-ಇನ್ಸಾಫ್​ ಪಕ್ಷದ ಸದಸ್ಯ ಸೋರೆನ್​ ಸಿಂಗ್​​ರನ್ನು ಪೇಶಾವರದಲ್ಲಿಯೇ ಹತ್ಯೆ ಮಾಡಲಾಗಿತ್ತು. 2020ರಲ್ಲಿ ಸುದ್ದಿವಾಹಿನಿಯೊಂದರ ನಿರೂಪಕ ರವೀಂದರ್​ ಸಿಂಗ್​ರನ್ನು ಭೀಕರವಾಗಿ ಕೊಲ್ಲಲಾಗಿತ್ತು.

ಇದನ್ನೂ ಓದಿ: ‘ಕರ್ನಾಟಕ ಬಿಟ್ಟು ಹೋಗುತ್ತೇನೆ, ಯಾರ ಕಣ್ಣಿಗೂ ಕಾಣಿಸಲ್ಲ’; ನಟಿ ವಿಜಯಲಕ್ಷ್ಮೀ ಬಹಿರಂಗ ಹೇಳಿಕೆ

ಬಹಿರಂಗ ಹೇಳಿಕೆ ನೀಡದಂತೆ ಜೆಡಿಎಸ್ ಶಾಸಕರಿಗೆ ಹೆಚ್ ಡಿ ಕುಮಾರಸ್ವಾಮಿ ಸೂಚನೆ

Published On - 1:32 pm, Sun, 3 October 21