Afghanistan Update: ಕಾಬೂಲ್ ಹೊರವಲಯದಲ್ಲಿ ತಾಲಿಬಾನ್ ಬೆಂಬಲಿಗರ ಸಮಾವೇಶ: ಸಾವಿರಾರು ಮಂದಿ ಭಾಗಿ
ತಾಲಿಬಾನ್ ಉಗ್ರಗಾಮಿಗಳು ಏಳು ವಾರಗಳ ಹಿಂದೆ ಕಾಬೂಲ್ ಗೆದ್ದ ನಂತರ ನಡೆದ ಮೊದಲ ಸಮಾವೇಶ ಇದು.
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರದ ಉತ್ತರದಲ್ಲಿ ಭಾನುವಾರ ನಡೆದ ತಾಲಿಬಾನ್ ಬೆಂಬಲಿಗರ ಸಮಾವೇಶದಲ್ಲಿ 1000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಈ ಸಮಾವೇಶದ ಮೂಲಕ ಅಫ್ಘಾನಿಸ್ತಾನದಲ್ಲಿ ನಮ್ಮ ಆಳ್ವಿಕೆಗೆ ಜನರ ಸಹಮತವಿದೆ ಎಂದು ಬಿಂಬಿಸಿಕೊಳ್ಳಲು ತಾಲಿಬಾನ್ ಯತ್ನಿಸಿತು. ಪುರುಷರು ಮತ್ತು ಬಾಲಕರು ಮಾತ್ರವೇ ಱಲಿಯಲ್ಲಿದ್ದರು. ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಕೊಹ್ಡಮನ್ ಪ್ರದೇಶದಿಂದ ಬಂದಿದ್ದ ತಾಲಿಬಾನ್ ಆಡಳಿತಗಾರರು ಸಮಾವೇಶದಲ್ಲಿ ಭಾಷಣ ಮಾಡಿದರು. ತಾಲಿಬಾನ್ ಹೋರಾಟಗಾರರು ಏಳು ವಾರಗಳ ಹಿಂದೆ ಕಾಬೂಲ್ ಗೆದ್ದ ನಂತರ ನಡೆದ ಮೊದಲ ಸಮಾವೇಶ ಇದು.
ತಾಲಿಬಾನ್ ಹೇರಿರುವ ನಿಯಮಗಳಿಗೆ ಅನುಗುಣವಾಗಿಯೇ ನಡೆದ ಱಲಿಯಲ್ಲಿ ರೈಫಲ್ಗಳೊಂದಿಗೆ ಸಜ್ಜಾಗಿದ್ದ ತಾಲಿಬಾನ್ ಯೋಧರು ಕಾವಲು ನಿಂತಿದ್ದರು. ಸಾಲುಸಾಲಾಗಿ ಹಾಕಿದ್ದ ಕುರ್ಚಿಗಳಲ್ಲಿ ಕುಳಿತಿದ್ದ ಜನರು ಸಮಾವೇಶದಲ್ಲಿ ಭಾಷಣಗಳು ಮುಗಿಯುವವರೆಗೂ ಮೇಲೇಳಲಿಲ್ಲ. ಕೈಲಿ ಬಾವುಟ, ಶಸ್ತ್ರಗಳನ್ನು ಹಿಡಿದಿದ್ದ ತಾಲಿಬಾನ್ ಯೋಧರು ಕಾರ್ಯಕ್ರಮದಲ್ಲಿ ಭಾಷಣಗಳು ಆರಂಭಗೊಳ್ಳುವ ಮೊದಲು ಮೈದಾನದ ಸುತ್ತ ಸಂಚರಿಸಿದರು. ಶಸ್ತ್ರವಿಲ್ಲದ ಬೆಂಬಲಿಗರು ಮನೆಯಿಂದ ತಂದಿದ್ದ ತಾಲಿಬಾನ್ ಬೆಂಬಲಿಸುವ ಪೋಸ್ಟರ್ಗಳನ್ನು ಪ್ರದರ್ಶಿಸಿದರು. ಕೆಲವರು ಕೆಂಪು ಮತ್ತು ಬಿಳಿ ಬಣ್ಣದ ತಾಲಿಬಾನ್ ಹೆಡ್ಬ್ಯಾಂಡ್ಗಳನ್ನು ಎದ್ದು ಕಾಣುವಂತೆ ಪ್ರದರ್ಶಿಸಿದರು. ವೇದಿಕೆಯ ಬದಿಯಲ್ಲಿ ಕುಳಿತಿದ್ದ ಬುಡಕಟ್ಟು ಗುಂಪುಗಳ ನಾಯಕರು ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದರು.
‘ಅಮೆರಿಕ ಸೋಲಿಸೋದು ಅಸಾಧ್ಯ, ಅಸಾಧ್ಯ.. ಆದರೆ ಸಾಧ್ಯ’ ಎಂಬ ಘೋಷಣೆಗಳು ಮೊಳಗಿದವು. ಕೆಲವರು ತಾಲಿಬಾನ್ ಪರ ಘೋಷವಾಕ್ಯಗಳನ್ನು ಕೂಗಿದರು. ತಾಲಿಬಾನ್ ನಾಯಕರು ವೇದಿಕೆಯ ಸಮೀಪಕ್ಕೆ ಬರುವ ಹೊತ್ತಿಗೆ ಅಲ್ಲಾಹು ಅಕ್ಬರ್ ಎಂದು ಸಭೆ ಪ್ರತಿಧ್ವನಿಸಿತು. ‘ದೇಶವನ್ನು ವಿದೇಶಿಗರ ಹಿಡಿತದಿಂದ ಮುಕ್ತಗೊಳಿಸಿದ ಇಸ್ಲಾಮಿಕ್ ಎಮಿಟೇಟ್ ಆಫ್ ಅಫ್ಘಾನಿಸ್ತಾನಕ್ಕೆ ಕೊಹಡ್ಮನ್ ಜನರ ಬೆಂಬಲವಿದೆ’ ಎಂಬ ದೊಡ್ಡ ಬ್ಯಾನರ್ನಡಿ ತಾಲಿಬಾನ್ನ ಶಸ್ತ್ರಸಜ್ಜಿತ ಹೋರಾಟಗಾರರು ನಿಂತಿದ್ದರು.
ಮಹಿಳಾ ಹಕ್ಕುಗಳ ಪರ ಕಾಬೂಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಸಣ್ಣ ಗುಂಪನ್ನು ತಾಲಿಬಾನ್ ಕಳೆದ ಗುರುವಾರವಷ್ಟೇ ಹಿಂಸಾತ್ಮಕವಾಗಿ ಹತ್ತಿಕ್ಕಿತ್ತು. ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೆದರಿಸಿ ಪ್ರತಿಭಟನಾಕಾರರನ್ನು ಚೆದುರಿಸಿದ್ದರು. ಗುಂಡಿನ ಸದ್ದಿಗೆ ಬೆದರದೆ ಕುಳಿತಿದ್ದವರನ್ನು ಹಿಡಿದು ತಳ್ಳಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವಿದೇಶಿ ಪತ್ರಕರ್ತರೊಬ್ಬರಿಗೆ ಗುಂಡೇಟು ತಗುಲಿತ್ತು. ತಮ್ಮ ಕೃತ್ಯವನ್ನು ಕ್ಯಾಮೆರಾದಲ್ಲಿ ದಾಖಲಿಸಲು ತಾಲಿಬಾನಿಗಳು ಬಿಡಲಿಲ್ಲ. ಹೆರಾತ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ತಾಲಿಬಾನಿಗಳು ಹಾರಿಸಿದ್ದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು.
ಇದನ್ನೂ ಓದಿ: Taliban ಪೂರ್ವ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲೆ ದಾಳಿ, 5 ಸಾವು
ಇದನ್ನೂ ಓದಿ: Imran Khan: ಇಂದಲ್ಲ ನಾಳೆ ತಾಲಿಬಾನ್ ಸರ್ಕಾರವನ್ನು ಅಮೆರಿಕ ಒಪ್ಪಿಕೊಳ್ಳಲೇಬೇಕು ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್
(Afghanistan Rally Outside Kabul Thousand People Attend Express Their Support for Taliban)
Published On - 4:41 pm, Sun, 3 October 21