ಸೇನಾ ನೆಲೆಯ ಸಮೀಪದಲ್ಲೇ 132 ಜನರ ಹತ್ಯಾಕಾಂಡ, ಬ್ಯಾರಕ್ ಬಿಟ್ಟು ಹೊರಬರದ ಸೈನಿಕರು: ಇದು ಬರ್ಕಿನಾ ಫಾಸೊ ದೇಶದ ಕಣ್ಣೀರ ಕಥೆ

|

Updated on: Jun 06, 2021 | 3:53 PM

ಬರ್ಕಿನಾ ಫಾಸೊ ಜೊತೆಗೆ ಗಡಿ ಹಂಚಿಕೊಂಡಿರುವ ನೈಜೀರಿಯಾ ಮತ್ತು ಮಾಲಿ ದೇಶಗಳಲ್ಲೂ ಮುಂದಿನ ದಿನಗಳಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗಬಹುದು ಎಂಬ ಭೀತಿ ಕಾಣಿಸಿಕೊಂಡಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಸಹಾರ ಸಂಘಟನೆ ಈ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ.

ಸೇನಾ ನೆಲೆಯ ಸಮೀಪದಲ್ಲೇ 132 ಜನರ ಹತ್ಯಾಕಾಂಡ, ಬ್ಯಾರಕ್ ಬಿಟ್ಟು ಹೊರಬರದ ಸೈನಿಕರು: ಇದು ಬರ್ಕಿನಾ ಫಾಸೊ ದೇಶದ ಕಣ್ಣೀರ ಕಥೆ
ಶಸ್ತ್ರಗಳಿಲ್ಲದೆ ಹೆಣಗಾಡುತ್ತಿರುವ ಬರ್ಕಿನಾ ಫಾಸೊ ಸೇನೆಗೆ ಭಯೋತ್ಪಾದಕರ ದಾಳಿ ತಡೆಯಲು ಸಾಧ್ಯವಾಗಿಲ್ಲ.
Follow us on

ಬರ್ಕಿನಾ ಫಾಸೊ ಎಂಬ ಆಫ್ರಿಕಾ ಖಂಡದ ನತದೃಷ್ಟ ದೇಶದ ಸಂಕಷ್ಟ ಸದ್ಯಕ್ಕೆ ತೀರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬರ್ಕಿನಾ ಫಾಸೊ-ನೈಜೀರಿಯಾ ಗಡಿಯಲ್ಲಿರುವ ಸೊಲ್ಹಾನ್ ಎಂಬ ಹಳ್ಳಿಗೆ ಶುಕ್ರವಾರ ನಸುಕಿನ 2 ಗಂಟೆಗೆ ಬೈಕ್​ಗಳಲ್ಲಿ ಬಂದ ಬಂದೂಕುಧಾರಿಗಳು ಕೆಲವೇ ನಿಮಿಷಗಳಲ್ಲಿ 132 ಜನರನ್ನು ಕೊಂದುಹಾಕಿದ್ದಾರೆ. ಹಳ್ಳಿಯ ಸಂತೆಮಾಳದ ಜೊತೆಗೆ ಹಲವು ಮನೆಗಳನ್ನೂ ಭಯೋತ್ಪಾದಕರು ಸುಟ್ಟು ಹಾಕಿದ್ದಾರೆ. ಸತ್ತ 132 ಮಂದಿಯಲ್ಲಿ 7 ಮಂದಿ ಮಕ್ಕಳಿದ್ದಾರೆ. ಇತರ 40 ನಿವಾಸಿಗಳು ಗಾಯಗೊಂಡಿದ್ದಾರೆ. ಬರ್ಕಿನಾ ಫಾಸೊ ಜೊತೆಗೆ ಗಡಿ ಹಂಚಿಕೊಂಡಿರುವ ನೈಜೀರಿಯಾ ಮತ್ತು ಮಾಲಿ ದೇಶಗಳಲ್ಲೂ ಮುಂದಿನ ದಿನಗಳಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗಬಹುದು ಎಂಬ ಭೀತಿ ಕಾಣಿಸಿಕೊಂಡಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಸಹಾರ ಸಂಘಟನೆ ಈ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ.

ಈ ಹತ್ಯೆಗಳನ್ನು ಅನಾಗರಿಕ ಎಂದು ಹೇಳಿರುವ ಬರ್ಕಿನಾ ಫಾಸೊ ಅಧ್ಯಕ್ಷ ಮಾರ್ಕ್​ ಕ್ರಿಶ್ಚಿಯನ್ ಕಬೋರೆ, ಜನರು ಈ ಹಿಂಸಾಚಾರಗಳ ವಿರುದ್ಧ ಒಗ್ಗೂಡಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ. ಯಾವುದೇ ಉಗ್ರಗಾಮಿಗಳ ಗುಂಪು ಈವರೆಗೆ ಹತ್ಯಾಕಾಂಡದ ಹೊಣೆ ಹೊತ್ತುಕೊಂಡಿಲ್ಲ. ಬರ್ಕಿನಾ ಫಾಸೊದಲ್ಲಿ ಈವರೆಗೆ ನಡೆದಿರುವ ಭಯೋತ್ಪಾದಕರ ದಾಳಿಗಳಲ್ಲೇ ಇದು ಅತ್ಯಂತ ಭೀಕರ ದಾಳಿಯಾಗಿದೆ.

ಕಳೆದ 2015ರಿಂದ ಪಶ್ಚಿಮ ಆಫ್ರಿಕಾದ ಈ ದೇಶವು ಅಲ್​ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಹೋರಾಡುತ್ತಲೇ ಇದೆ. ದೇಶದ ಉತ್ತರ ಭಾಗದ ಮಾಲಿ ಗಡಿಯಲ್ಲಿ ಮೊದಲು ಹಿಂಸಾಚಾರದ ಪ್ರಕರಣಗಳು ವರದಿಯಾದವು. ನಂತರದ ದಿನಗಳಲ್ಲಿ ಇತರ ಪ್ರಾಂತ್ಯಗಳಿಗೂ ವಿಸ್ತರಿಸಿತು. ಪೂರ್ವ ಪ್ರಾಂತ್ಯದಲ್ಲಿ ಭಯೋತ್ಪಾದಕರ ಹಾವಳಿ ವಿಪರೀತ ಎನ್ನಿಸುವಷ್ಟು ಹೆಚ್ಚಾಗಿದೆ. ವಿಶ್ವದ ಅತಿದೊಡ್ಡ ಮಾನವಬಿಕ್ಕಟ್ಟಿಗೆ ಬರ್ಕಿನಾ ಫಾಸೊ ಸಾಕ್ಷಿಯಾಗಿದೆ.

ಸುದೀರ್ಘ ಅವಧಿಯ ಈ ಸಂಘರ್ಷದಿಂದಾಗಿ ಸುಮಾರು 12 ಲಕ್ಷ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಶಾಂತಿಪಾಲನೆಗಾಗಿ ಫ್ರಾನ್ಸ್​ ಮತ್ತು ಇತರ ಅಂತರರಾಷ್ಟ್ರೀಯ ಭದ್ರತಾ ಪಡೆಗಳಿದ್ದರೂ ಬರ್ಕಿನಾ ಫಾಸೊ ಸೇನಾ ನೆಲೆಗಳು ಮತ್ತು ನಾಗರಿಕರ ಮೇಲೆ ಉಗ್ರರ ದಾಳಿ ಯಾವುದೇ ಕಡಿವಾಣವಿಲ್ಲದೆ ಮುಂದುವರಿದಿದೆ.

ವಿಶ್ವಸಂಸ್ಥೆ ಖಂಡನೆ, ಶೋಕಾಚರಣೆ
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ಬರ್ಕಿನಾ ಫಾಸೊ ಹತ್ಯಾಕಾಂಡವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಿಶ್ವ ಸಮುದಾಯದ ಎಲ್ಲ ಬೆಂಬಲ ಬರ್ಕಿನಾ ಆಡಳಿತಕ್ಕೆ ದೊರಕಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಬಾರ್ಕಿನಾ ಫಾಸೊ ಇದೀಗ 72 ಗಂಟೆಗಳ ಶೋಕಾಚರಣೆಯನ್ನು ದೇಶದಲ್ಲಿ ಘೋಷಿಸಿದೆ.

ಶನಿವಾರ ನಸುಕಿನ 2 ಗಂಟೆಯಲ್ಲಿ ಸೊಲ್ಹಾನ್​ ಗ್ರಾಮದ ಮಾತೃಭೂಮಿ ರಕ್ಷಣೆಗಾಗಿ ಶ್ರಮಿಸುವ, ಸೇನೆಯನ್ನು ಬೆಂಬಲಿಸುತ್ತಿದ್ದ ಸ್ವಯಂಸೇವಕರ (Volunteers for the Defence of the Motherland – VDP) ತಂಡದ ಮೇಲೆ ಭಯೋತ್ಪಾದಕರು ಮೊದಲು ದಾಳಿ ನಡೆಸಿದರು. ನಂತರ ಊರಿನ ಮನೆಗಳ ಮೇಲೆ ದಾಳಿ ನಡೆಸಿ ಸಿಕ್ಕಸಿಕ್ಕವರನ್ನು ಹೊರಗೆಳೆದು ಕೊಂದು ಹಾಕಿದರು.

ಶಸ್ತ್ರಸಜ್ಜಿತ ಭಯೋತ್ಪಾದಕರ ವಿರುದ್ಧದ ಹೋರಾಟಕ್ಕಾಗಿ ಸ್ವಯಂಸೇವಕರ ದಳವನ್ನು ಡಿಸೆಂಬರ್ 2019ರಲ್ಲಿ ಸಂಘಟಿಸಲಾಗಿತ್ತು. ಈವರೆಗೆ ಈ ದಳದ 200ಕ್ಕೂ ಹೆಚ್ಚು ಜನರು ಜೀವ ತೆತ್ತಿದ್ದಾರೆ. ಭದ್ರತಾ ಸಿಬ್ಬಂದಿ ಜೊತೆಗೆ ಕರ್ತವ್ಯಕ್ಕೆ ನಿಯೋಜಿಸುವ ಮೊದಲು ಈ ತಂಢಕ್ಕೆ ಕೇವಲ 2 ವಾರಗಳ ತರಬೇತಿ ಕೊಟ್ಟಿರುತ್ತಾರೆ. ಗಸ್ತು ತಿರುಗುವುದು, ಕಾವಲು, ಮಾಹಿತಿ ಸಂಗ್ರಹ ಮತ್ತು ಪ್ರಮುಖರಿಗೆ ಭದ್ರತೆ ನೀಡುವ ಕೆಲಸವನ್ನು ಈ ಪಡೆಗಳು ಮಾಡುತ್ತಿವೆ.

ಪಶ್ಚಿಮ ಆಫ್ರಿಕಾದ ಮಾನವ ಹಕ್ಕುಗಳ ಹೋರಾಟಗಾರ ಕಾರಿನ್ ಡಫ್ಕಾ ಈ ಸಮಸ್ಯೆ ಕೇವಲ ಬರ್ಕಿನಾ ಫಾಸೊ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎನ್ನುತ್ತಾರೆ. ಭಯೋತ್ಪಾದಕರು ಮಿಂಚಿನ ವೇಗದಲ್ಲಿ ಹಳ್ಳಿಗಳಿಗೆ ನುಗ್ಗಿ ಸ್ವಯಂಸೇವಕರನ್ನು ಹುಡುಕಿ ಕೊಲ್ಲುತ್ತಾರೆ. ಸ್ವಯಂಸೇವಕರನ್ನು, ಆ ಮೂಲಕ ಸರ್ಕಾರವನ್ನು ಬೆಂಬಲಿಸಿದರು ಎಂಬ ಕಾರಣಕ್ಕೆ ಗ್ರಾಮಸ್ಥರನ್ನು ಕೊಲ್ಲುತ್ತಾರೆ. ಈ ವರ್ಷ ಆಫ್ರಿಕಾದ ಹಲವು ದೇಶಗಳಲ್ಲಿ ಇಂಥ ಘಟನೆಗಳು ನಡೆದಿವೆ ಎಂದು ಹೇಳಿದರು.

ಭಯೋತ್ಪಾದಕರು ಮತ್ತು ಭಯೋತ್ಪಾದಕರ ಬೆಂಬಲಿಗರ ಮೇಲಿನ ದಾಳಿ ಮತ್ತು ಬಂಧನಗಳಿಗೆ ಪ್ರತೀಕಾರವಾಗಿ ಕಳೆದ ಮಾರ್ಚ್​ನಲ್ಲಿ ಪಕ್ಕದ ನಿಗರ್​ನಲ್ಲಿ ಭಯೋತ್ಪಾದಕರು 137 ಜನರನ್ನು ಕೊಂದು ಹಾಕಿದ್ದರು. ಬಹುತೇಕ ದಾಳಿಗಳನ್ನು ಇಸ್ಲಾಮಿಕ್ ಸ್ಟೇಟ್ ಆಫ್ ದಿ ಗ್ರೇಟರ್ ಸಹಾರ ಸಂಘಟನೆ ಸಂಘಟಿಸಿದೆ ಎಂದು ಅವರು ಮಾಹಿತಿ ನೀಡುತ್ತಾರೆ.

ಇಂಥ ಇನ್ನಷ್ಟು ದಾಳಿಗಳು ನಿರೀಕ್ಷಿತ
ಸೊಲ್ಹಾನ್​ನ ಪಕ್ಕದಲ್ಲಿರುವ ಸೆಬ್ಬಾ ಪಟ್ಟಣಕ್ಕೆ ರಕ್ಷಣಾ ಸಚಿವ ಚೆರಿಫ್ ಮತ್ತು ಹಿರಿಯ ಮಿಲಿಟರಿ ಅಧಿಕಾರಿಗಳು ಈಚೆಗಷ್ಟೇ ಭೇಟಿ ನೀಡಿ ಜನರಿಗೆ ಭದ್ರತೆಯ ಭರವಸೆ ನೀಡಿದ್ದರು. ನಂತರದ ದಿನಗಳಲ್ಲಿ ಹಲವು ಮಿಲಿಟರಿ ಕಾರ್ಯಾಚರಣೆಗಳು ನಡೆದಿದ್ದವು. ಈ ಬೆಳವಣಿಗೆಯ ಕೆಲವೇ ವಾರಗಳ ನಂತರ ಈ ಮಾರಣಾಂತಿಕ ದಾಳಿ ನಡೆದಿದೆ.

ಶುಕ್ರವಾರ ಮಧ್ಯರಾತ್ರಿ ದಾಳಿ ನಡೆದ ಹಳ್ಳಿಯ ಸಮೀಪವೇ ಮಿಲಿಟರಿ ಬ್ಯಾರಕ್​ಗಳೂ ಇವೆ. ಆದರೆ ಸೈನಿಕರು ತಮ್ಮ ನೆಲೆಯಿಂದ ಹೊರಗೆ ಬಂದು ಜನರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಿಲ್ಲ. ತಮ್ಮ ರಕ್ಷಣೆಗಾಗಿ ಭದ್ರತಾ ಪಡೆಗಳನ್ನು ನೆಚ್ಚಿಕೊಳ್ಳುವಂತಿಲ್ಲ ಎಂಬ ಭಾವನೆ ಸ್ಥಳೀಯರಲ್ಲಿ ಹಲವು ತಿಂಗಳುಗಳಿಂದಲೂ ಇತ್ತು. ಈ ಭಾವನೆ ಇದೀಗ ಪ್ರಬಲಗೊಂಡಿದೆ. ಬಾರ್ಕಿನಾ ಫಾಸೊ ಮತ್ತು ಸುತ್ತಮುತ್ತಲ ದೇಶಗಳಲ್ಲಿ ಭದ್ರತಾ ಪಡೆಗಳು ದುರ್ಬಲವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭಯೋತ್ಪಾದಕರ ದಾಳಿ ನಡೆಯಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

(Islamic State Terrorists Kill 132 People in Burkina Faso Near No Response from Military)

Published On - 3:51 pm, Sun, 6 June 21