ಅನಾರೋಗ್ಯಕರ ಉತ್ಪನ್ನ ವಿವಾದಕ್ಕೆ ಮತ್ತೆ ಸಿಲುಕಿದ ನೆಸ್ಲೆ: ‘ಮ್ಯಾಗಿ’ ತಯಾರಿಕಾ ಕಂಪೆನಿಯ ಮೇಲೆ ಈ ವಿವಾದದ ಪರಿಣಾಮವೇನು?

ಅನಾರೋಗ್ಯಕರ ಉತ್ಪನ್ನ ವಿವಾದಕ್ಕೆ ಮತ್ತೆ ಸಿಲುಕಿದ ನೆಸ್ಲೆ: ‘ಮ್ಯಾಗಿ’ ತಯಾರಿಕಾ ಕಂಪೆನಿಯ ಮೇಲೆ ಈ ವಿವಾದದ ಪರಿಣಾಮವೇನು?

World Food Safety Day 2021: ವಿಶ್ವದ ದೈತ್ಯ ಕಂಪನಿ ಎನಿಸಿದ ನೆಸ್ಲೆ ತನ್ನ ಅರ್ಧಕ್ಕೂ ಹೆಚ್ಚಿನ ಉತ್ಪನ್ನಗಳು ‘ಆರೋಗ್ಯ ಮತ್ತು ಪೌಷ್ಟಿಕಾಂಶದ ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಇಲ್ಲ’ ಎಂದು ತನ್ನ ಆಂತರಿಕ ದಾಖಲೆಯಲ್ಲಿ ಒಪ್ಪಿಕೊಳ್ಳುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

Ghanashyam D M | ಡಿ.ಎಂ.ಘನಶ್ಯಾಮ

|

Jun 06, 2021 | 6:39 PM

‘ಮ್ಯಾಗಿ’ ಗೊತ್ತಲ್ವಾ? ಕೇವಲ ಎರಡೇ ನಿಮಿಷಗಳಲ್ಲಿ ತಯಾರಿಸಬಹುದಾದ ಜನಪ್ರಿಯ ತಿನಿಸು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ಈ ಇನ್​​ಸ್ಟಂಟ್ ಉತ್ಪನ್ನ ತಯಾರಿಸುವ ಕಂಪನಿಯ ಹೆಸರು ನೆಸ್ಲೆ. ಈಗ್ಗೆ 6 ವರ್ಷಗಳ ಹಿಂದೆ ಇದೇ ಮ್ಯಾಗಿಯಲ್ಲಿ ಅಪಾಯಕಾರಿ ರಾಸಾಯನಿಕವೊಂದು ಪತ್ತೆಯಾದ ಕಾರಣ ಭಾರತ ಸರ್ಕಾರ ಅದರ ಮಾರಾಟಕ್ಕೆ ನಿಷೇಧ ಹೇರಿತ್ತು. ಆಮೇಲೆ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯಲ್ಲಿ ಜಯಗಳಿಸಿ ನೆಸ್ಲೆ ಮತ್ತೆ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ನಿಮಗೆ ನೆನಪಿರಬಹುದು. ಈಗ ಮತ್ತೆ ಈ ಪ್ರಕರಣ ನೆನಪಾಗಲು ಕಾರಣವಿದೆ.

‘ಶೀಘ್ರ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ (Fast Moving Consumer Goods – FMCG) ವಿಭಾಗದಲ್ಲಿ ನೆಸ್ಲೆ ವಿಶ್ವಮಟ್ಟದಲ್ಲಿ ದೈತ್ಯ ಸಂಸ್ಥೆ ಎನಿಸಿಕೊಂಡಿದೆ. ಇದೀಗ ಈ ಸಂಸ್ಥೆಯ ಅರ್ಧಕ್ಕೂ ಹೆಚ್ಚಿನ ಉತ್ಪನ್ನಗಳು ‘ಆರೋಗ್ಯ ಮತ್ತು ಪೌಷ್ಟಿಕಾಂಶದ ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಇಲ್ಲ’ ಎಂದು ತನ್ನ ಆಂತರಿಕ ದಾಖಲೆಯಲ್ಲಿ ಒಪ್ಪಿಕೊಳ್ಳುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಈ ಕುರಿತು ವರದಿ ಪ್ರಕಟಿಸಿರುವ ‘ದಿ ಫೈನಾನ್ಷಿಯಲ್ ಟೈಮ್ಸ್​’ ನೆಸ್ಲೆಯ ಶೇ 37ರಷ್ಟು ಆಹಾರ ಮತ್ತು ಪಾನೀಯ ಉತ್ಪನ್ನಗಳು ಆಸ್ಟ್ರೇಲಿಯಾದ ಹೆಲ್ತ್​ ಸ್ಟಾರ್ ರೇಟಿಂಗ್​ನ ಶೇ 3.5 ಮತ್ತು ಅದಕ್ಕೂ ಹೆಚ್ಚಿನ ರೇಟಿಂಗ್​ ಪಡೆದಿದೆ. ಪ್ರಾಣಿ ಆಹಾರ ಮತ್ತು ವಿಶೇಷ ವೈದ್ಯಕೀಯ ಆಹಾರಗಳು ಇದರಲ್ಲಿ ಒಳಗೊಂಡಿಲ್ಲ ಎಂದು ಹೇಳಿದೆ.

ನೆಸ್ಲೆ ಆಂತರಿಕ ವರದಿ ಏನು ಹೇಳುತ್ತದೆ? ‘ಫೈನಾನ್ಷಿಯಲ್ ಟೈಮ್ಸ್’​ ವರದಿ ಮಾಡಿರುವ ಪ್ರಕಾರ, ನೆಸ್ಲೆಯ ಆಂತರಿಕ ದಾಖಲೆಗಳಲ್ಲಿ ಇರುವ ಮಾಹಿತಿಯಂತೆ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ತನ್ನ ಶೇ 70ರಷ್ಟು ಉತ್ಪನ್ನಗಳು 3.5 ಸ್ಟಾರ್ ಪಡೆಯಲು ವಿಫಲವಾಗಿದೆ. 3.5 ಸ್ಟಾರ್​ಗಳನ್ನು ಆರೋಗ್ಯಕರ ಎಂದು ಹೇಳಲಾಗುತ್ತದೆ. ಪಾನೀಯ ವಿಭಾಗದಲ್ಲಿ ಶೇ 96ರಷ್ಟು ಉತ್ಪನ್ನಗಳು 3.5 ಸ್ಟಾರ್​ಗಳಿಗಿಂತಲೂ ಕಡಿಮೆ ರೇಟಿಂಗ್ ಪಡೆದೆವೆ. ಶುದ್ಧ ಕಾಫಿ ಹೊರತುಪಡಿಸಿದರೆ, ಐಸ್​ಕ್ರೀಂ ಮತ್ತು ಸಿಹಿತಿನಿಸುಗಳ ವಿಭಾಗದಲ್ಲಿ ಶೇ 99ರಷ್ಟು ಉತ್ಪನ್ನಗಳು 3.5 ಸ್ಟಾರ್​ ಪಡೆದಿವೆ. ಶೇ 82ರಷ್ಟು ನೀರಿನ ಉತ್ಪನ್ನಗಳು ಮತ್ತು ಶೇ 60ರಷ್ಟು ಡೇರಿ ಉತ್ಪನ್ನಗಳು ಅತ್ಯಗತ್ಯವಾಗಿ ಬೇಕಿರುವ 3.5 ಸ್ಟಾರ್​ಗಳ ಮಿತಿಯನ್ನು ಮುಟ್ಟಿವೆ.

‘ನೆಸ್ಲೆ ಉತ್ಪನ್ನವಾದ ಡಿಗಿಯಾರ್ನೊ (ನಾನ್​ವೆಜ್ ಪಿಜ್ಜಾ) ಒಬ್ಬ ಮನುಷ್ಯ ಒಂದು ದಿನಕ್ಕೆ ಸೇವಿಸಬಹುದಾದ ಒಟ್ಟು ಸೋಡಿಯಂನ ಶೇ 40ರಷ್ಟನ್ನು ಹೊಂದಿದೆ. ಹಾಟ್​ ಪಾಕೆಟ್ಸ್​ ಪೆಪ್ಪೆರೊನಿ ಪಿಜ್ಜಾದಲ್ಲಿ ಸೋಡಿಯಂ ಪ್ರಮಾಣ ಶೇ 48ರಷ್ಟಿದೆ. ಕಿತ್ತಳೆ ವಾಸನೆಯ ಸ್ಯಾನ್ ಪಿಲ್ಲೆಗ್ರಿನೊ ಪಾನೀಯವನ್ನು ಆಸ್ಟ್ರೇಲಿಯಾ ಅತ್ಯಂತ ಕಳಪೆ ಎಂದು ವರ್ಗೀಕರಿಸಿ, E ಸ್ಕೋರ್ ಕೊಟ್ಟಿದೆ’ ಎಂದು ವರದಿಯು ಹೇಳಿದೆ. ‘ತನ್ನ ಉತ್ಪನ್ನಗಳನ್ನು ನಿರಂತರವಾಗಿ ಸುಧಾರಿಸಲು ಕಂಪನಿ ಪ್ರಯತ್ನಿಸುತ್ತಿದೆ. ಗುಣಮಟ್ಟ ನಿಯಂತ್ರಕರು ಮತ್ತು ಗ್ರಾಹಕರ ನಿರೀಕ್ಷೆಗಳು ಆಗಸದೆತ್ತರಕ್ಕೆ ಏರುತ್ತಿವೆ’ ಎಂದು ನೆಸ್ಲೆ ತನ್ನ ಆಂತರಿಕ ವರದಿಯಲ್ಲಿ ಹೇಳಿರುವುದನ್ನು ಫೈನಾನ್ಷಿಯಲ್ ಟೈಮ್ಸ್ ವರದಿ ಉಲ್ಲೇಖಿಸಿದೆ.

ನೆಸ್ಲೆ ಹೇಗೆ ಪ್ರತಿಕ್ರಿಯಿಸಿತು? ಈ ಬೆಳವಣಿಗೆಯ ಬಗ್ಗೆ ಜಾಗತಿಕ ಹೇಳಿಕೆ ಬಿಡುಗಡೆ ಮಾಡಿರುವ ನೆಸ್ಲೆ, ಕಂಪನಿಯಲ್ಲಿ ಇನ್ನಷ್ಟು ಪೌಷ್ಟಿಕಾಂಶ ಭರಿತ ಮತ್ತು ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಲು ಯೋಜನೆ ರೂಪಿಸುತ್ತಿದ್ದೇವೆ. ಆಸ್ಟ್ರೇಲಿಯಾದ ಹೆಲ್ತ್​ ಸ್ಟಾರ್ ರೇಟಿಂಗ್ ಮತ್ತು ಫ್ರಾನ್ಸ್​ನ ನ್ಯೂಟ್ರಿ ಸ್ಕೋರ್ ನೆಸ್ಲೆಯ ಎಲ್ಲ ಉತ್ಪನ್ನಗಳನ್ನು ಪರಿಶೀಲಿಸಿಲ್ಲ ಎಂದು ಹೇಳಿದೆ. ‘ನಮ್ಮ ಒಟ್ಟು ಮಾರಾಟದ ಅರ್ಧದಷ್ಟು ಪ್ರಮಾಣ ಈ ವ್ಯವಸ್ಥೆಗಳ ಅಡಿಗೆ ಬರುವುದಿಲ್ಲ. ಶಿಶು ಆಹಾರ, ಆರೋಗ್ಯಕ್ಕೆ ಸಂಬಂಧಿಸಿದ ವಿಶೇಷ ಆಹಾರ ಉತ್ಪನ್ನಗಳು ಮತ್ತು ಸಾಕುಪ್ರಾಣಿಗಳ ಆಹಾರ ಪೌಷ್ಟಿಕಾಂಶ ನಿಯಂತ್ರಣ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ’ ಎಂದು ನೆಸ್ಲೆ ವಕ್ತಾರರು ಹೇಳಿದ್ದಾರೆ.

ಭಾರತದಲ್ಲಿ ನೆಸ್ಲೆ ಕಂಪನಿಯ ಮೇಲೇನು ಪರಿಣಾಮ? ಭಾರತವು ನೆಸ್ಲೆ ಕಂಪನಿ ಅತಿದೊಡ್ಡ ಮಾರುಕಟ್ಟೆಯಾಗಿದೆ. 2020ರಲ್ಲಿ ಭಾರತದಲ್ಲಿ ನೆಸ್ಲೆ ಉತ್ಪನ್ನಗಳ ಮಾರಾಟದ ಮೊತ್ತ ₹ 13,000 ಕೋಟಿ. ನೆಸ್ಲೆ ಕಂಪನಿಯ ಜಾಗತಿಕ ವಹಿವಾಟಿನ ಆದಾಯದ ಲೆಕ್ಕದಲ್ಲಿ ಭಾರತವು 11ನೇ ಸ್ಥಾನದಲ್ಲಿದೆ. ಮ್ಯಾಗಿ, ಮಂಚ್, ಕಿಟ್​ಕ್ಯಾಟ್​, ನೆಸ್​ಕೆಫೆ, ಮಿಲ್ಕಿಬಾರ್ ಮತ್ತು ನೆಸ್ಲೆ ಎ+ ಮತ್ತು ಕೆಲ ಡೇರಿ ಉತ್ಪನ್ನಗಳು ಭಾರತದಲ್ಲಿ ಜನಪ್ರಿಯವಾಗಿವೆ.

ಆಕ್ಸೆಸ್​ ಟು ನ್ಯೂಟ್ರಿಷನ್ ಇಂಡಿಯಾ ಸ್ಪಾಟ್​ಲೈನ್ ಇಂಡೆಕ್ಸ್​ 2020 (ಎಟಿಎನ್​) ವರದಿಯ ಪ್ರಕಾರ ಯುನಿಲಿವರ್ ಜೊತೆಗೆ ನೆಸ್ಲೆ ಇಂಡಿಯಾ ಸಹ ಭಾರತದ ಪ್ರಮುಖ ಆಹಾರ ಮತ್ತು ಪಾನೀಯ ಉತ್ಪಾದಕ ಕಂಪನಿ ಎನಿಸಿದೆ. ಈ ವರದಿಯು ಆಸ್ಟ್ರೇಲಿಯಾದ ಹೆಲ್ತ್​ ಸ್ಟಾರ್​ ರೇಟಿಂಗ್​ ಅನ್ನೂ ತಳಹದಿಯಾಗಿ ಬಳಸಿದೆ. ನೆಸ್ಲೆಯ 68 ಉತ್ಪನ್ನಗಳ ಪೈಕಿ ಕೇವಲ ಶೇ 19ರಷ್ಟನ್ನು ಮಾತ್ರ ಅಧ್ಯಯನಕ್ಕೆ ಒಳಪಡಿಸಿ 3.5 ಸ್ಟಾರ್ ನೀಡಲಾಗಿದೆ. ಇನ್ನಷ್ಟು ಉತ್ಪನ್ನಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಬೇಕು, ಕಂಪನಿಗಳೂ ತಮ್ಮ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಲು ಹೆಚ್ಚು ಪರಿಶ್ರಮ ಹಾಕಬೇಕು ಎಂದು ಎಂದು ಎಟಿಎನ್​ಐ ವಿನಂತಿಸಿದೆ.

ನೆಸ್ಲೆಯ ಜನಪ್ರಿಯ ಆಹಾರ ಉತ್ಪನ್ನ ಮ್ಯಾಗಿ ನೂಡಲ್ಸ್​ ಅನ್ನು 2015ರಲ್ಲಿ ಭಾರತದ ಆಹಾರ ಸುರಕ್ಷಾ ಮಾನಕಗಳ ಸಂಸ್ಥೆ (Food Safety and Standards Authority of India – FSSAI) ನಿರ್ಬಂಧಿಸಿತ್ತು. ಮೊನೊಸೋಡಿಯಂ ಗ್ಲುಟಮೇಟ್​ (ಎಂಎಸ್​ಜಿ) ಇದ್ದುದು ಈ ನಿರ್ಧಾರಕ್ಕೆ ಕಾರಣ. ಕಾನೂನು ಸಮರದ ನಂತರ ನೆಸ್ಲೆ ತನ್ನ ಉತ್ಪನ್ನವನ್ನು ಭಾರತದಲ್ಲಿ ಮತ್ತೆ ಪರಿಚಯಿಸಿತ್ತು. ಆದರೆ ಗಮನಾರ್ಹ ಪ್ರಮಾಣದ ಮಾರುಕಟ್ಟೆ ಪಾಲು ಕಳೆದುಕೊಂಡಿತ್ತು.

ವಿಶ್ವದ ಕೆಲವೇ ದೇಶಗಳಲ್ಲಿ ನೆಸ್ಲೆ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳಿವೆ. ಭಾರತವೂ ಇದರಲ್ಲಿ ಒಂದು. ಹೀಗಾಗಿ ಸ್ಥಳೀಯ ಅಗತ್ಯ ಮತ್ತು ಬೇಡಿಕೆಗೆ ತಕ್ಕಂತೆ ಕಂಪನಿಯ ಉತ್ಪನ್ನಗಳನ್ನು ನೆಸ್ಲೆ ಮಾರ್ಪಡಿಸುತ್ತದೆ. ಭಾರತದಲ್ಲಿ ಎಷ್ಟೋ ಜನರಿಗೆ ಮ್ಯಾಗಿ ಅಥವಾ ಮಂಚ್ ನೆಸ್ಲೆ ಕಂಪನಿಯ ಉತ್ಪನ್ನ ಎಂಬುದೂ ಗೊತ್ತಿಲ್ಲ. ಗ್ರಾಹಕ ಜಾಗೃತಿ ಕಡಿಮೆಯಿರುವುದರಿಂದ ಈ ವಿವಾದವು ಭಾರತದಲ್ಲಿ ನೆಸ್ಲೆ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚು ಹಾನಿಯಾಗುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

(World Food Safety Day 2021 Australian Body Says Some of Nestle Products are Unhealthy What It Means For The Makers Of Maggi in India)

ಇದನ್ನೂ ಓದಿ: ಗ್ರಾಮೀಣ ಭಾಗಕ್ಕೆ ನೇರವಾಗಿ ಸರಕು ತಲುಪಿಸಲಿವೆ ನೆಸ್ಲೆ, ಡಾಬರ್, ಬ್ರಿಟಾನಿಯಾ ಕಂಪನಿಗಳು

ಇದನ್ನೂ ಓದಿ: ವರ್ಕ್​ ಫ್ರಂ ಹೋಮ್​ ನಡುವೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕೆಲವು ಸಲಹೆಗಳು

Follow us on

Most Read Stories

Click on your DTH Provider to Add TV9 Kannada