ಗ್ರಾಮೀಣ ಭಾಗಕ್ಕೆ ನೇರವಾಗಿ ಸರಕು ತಲುಪಿಸಲಿವೆ ನೆಸ್ಲೆ, ಡಾಬರ್, ಬ್ರಿಟಾನಿಯಾ ಕಂಪನಿಗಳು
ಕೊವಿಡ್ ಕಾರಣದಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಕಳೆದುಕೊಂಡು ನಲುಗುತ್ತಿರುವ ಭಾರತದ ಹಲವಾರು ಗ್ರಾಹಕ ಉತ್ಪನ್ನಗಳ ಕಂಪೆನಿಗಳು ಈಗ ಗ್ರಾಮೀಣ ಭಾಗದತ್ತ ಮುಖ ಮಾಡಿ ನಿಂತಿವೆ. ಇಷ್ಟು ದಿನ ಗ್ರಾಮೀಣ ಜನರಿಗೆ ಕೊಳ್ಳುವ ಶಕ್ತಿ ಇಲ್ಲ ಎಂದು ಈ ಕಂಪೆನಿಗಳು ಗ್ರಾಮೀಣ ಭಾಗಕ್ಕೆ ಅಷ್ಟೇನೂ ಲಕ್ಷ್ಯ ನೀಡುತ್ತಿರಲಿಲ್ಲ. ನಗರ ಪ್ರದೇಶದಲ್ಲಿ ಕೊರೋನಾದಿಂದಾಗಿ ಹಿನ್ನೆಡೆ ಅನುಭವಿಸುತ್ತಿರುವ ಇಂಥ ಕಂಪೆನಿಗಳು ಈಗ ಗ್ರಾಮೀಣ ಭಾಗದ ಗ್ರಾಹಕರನ್ನು ತಮ್ಮತ್ತ ಸೆಳೆಯಲು ದೀರ್ಘಕಾಲಿಕ ಕಾರ್ಯಕ್ರಮದೊಂದಿಗೆ ಮಾರುಕಟ್ಟೆಗೆ ಇಳಿದಿವೆ. ಈ ನಿಟ್ಟಿನಲ್ಲಿ ನೆಸ್ಲೆ, ಡಾಬರ್ […]
ಕೊವಿಡ್ ಕಾರಣದಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಕಳೆದುಕೊಂಡು ನಲುಗುತ್ತಿರುವ ಭಾರತದ ಹಲವಾರು ಗ್ರಾಹಕ ಉತ್ಪನ್ನಗಳ ಕಂಪೆನಿಗಳು ಈಗ ಗ್ರಾಮೀಣ ಭಾಗದತ್ತ ಮುಖ ಮಾಡಿ ನಿಂತಿವೆ. ಇಷ್ಟು ದಿನ ಗ್ರಾಮೀಣ ಜನರಿಗೆ ಕೊಳ್ಳುವ ಶಕ್ತಿ ಇಲ್ಲ ಎಂದು ಈ ಕಂಪೆನಿಗಳು ಗ್ರಾಮೀಣ ಭಾಗಕ್ಕೆ ಅಷ್ಟೇನೂ ಲಕ್ಷ್ಯ ನೀಡುತ್ತಿರಲಿಲ್ಲ. ನಗರ ಪ್ರದೇಶದಲ್ಲಿ ಕೊರೋನಾದಿಂದಾಗಿ ಹಿನ್ನೆಡೆ ಅನುಭವಿಸುತ್ತಿರುವ ಇಂಥ ಕಂಪೆನಿಗಳು ಈಗ ಗ್ರಾಮೀಣ ಭಾಗದ ಗ್ರಾಹಕರನ್ನು ತಮ್ಮತ್ತ ಸೆಳೆಯಲು ದೀರ್ಘಕಾಲಿಕ ಕಾರ್ಯಕ್ರಮದೊಂದಿಗೆ ಮಾರುಕಟ್ಟೆಗೆ ಇಳಿದಿವೆ.
ಈ ನಿಟ್ಟಿನಲ್ಲಿ ನೆಸ್ಲೆ, ಡಾಬರ್ ಮತ್ತು ಬ್ರಿಟಾನಿಯಾ ಕಂಪೆನಿಗಳು ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಮ್ಸಿಜಿ) ಎಂಬ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶದ ಗ್ರಾಹಕರೊಂದಿಗೆ ನೇರವಾದ ವ್ಯಾಪ್ತಿಯನ್ನು ಹೊಂದುವ ಸಲುವಾಗಿ, ವೇಗದ ಸರಕುಗಳ ವಿಸ್ತರಣೆಯ ಉದ್ದೇಶದೊಂದಿಗೆ ಹೊಸ ಪ್ರಯತ್ನಕ್ಕೆ ಹೆಜ್ಜೆ ಇರಿಸಿವೆ.
ಈ ಕುರಿತು ಮಾತನಾಡಿರುವ ನೆಸ್ಲೆ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣ್, ಹಿಂದಿನ ವರ್ಷ 45,000 ಹಳ್ಳಿಗಳಿಗೆ ಸರಕುಗಳನ್ನು ಸಾಗಾಟ ಮಾಡಲಾಗಿದ್ದು ಕಳೆದ 12-18 ತಿಂಗಳಲ್ಲಿ 90,000 ಹಳ್ಳಿಗಳಿಗೆ ತಲುಪುವ ಹಂತಕ್ಕೆ ಬೆಳೆದಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಾರ ಸಗಟು ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಹಾಗೂ 7,000 ದಿಂದ 8,000 ಕೇಂದ್ರಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ತೆರೆಯಲಾಗಿದೆ ಎಂದಿದ್ದಾರೆ.
ಬ್ರಿಟಾನಿಯಾ ಕಂಪೆನಿಯು ಗ್ರಾಮೀಣ ಪ್ರದೇಶದ ವ್ಯಾಪಾರವನ್ನು ಹೊಂದಿದೆ. ನಮ್ಮ ಅವಕಾಶಗಳು ಎಲ್ಲಿ ಎಂಬುದನ್ನು ಹುಡುಕಿದಾಗ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಸಗಟಿನ ಪೂರೈಕೆಯ ಅವಶ್ಯಕತೆ ಇದೆ ಎಂದು ತಿಳಿಯಿತು. ಆದ್ದರಿಂದ ಹಳ್ಳಿಗಳಿಗೆ ಸರಕುಗಳ ವ್ಯಾಪಾರವನ್ನು ವಿಸ್ತರಿಸಿದ್ದೇವೆ ಎಂದು ಬ್ರಿಟಾನಿಯಾ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವರುಣ್ ಬೆಳ್ಳಿ ಹೇಳಿದ್ದಾರೆ. ಇದರೊಂದಿಗೆ ಡಾಬರ್ ಸಹ ಗ್ರಾಮೀಣ ವಲಯಕ್ಕೆ ವ್ಯಾಪಾರ ಜಾಲವನ್ನು ವಿಸ್ತರಿಸುತ್ತಿದೆ.
ಆ ಮೂಲಕ ಸುಮಾರು 60,000 ಗ್ರಾಮಗಳನ್ನು ತಲುಪುವ ಯೋಜನೆಯನ್ನು ಹೊಂದಿದೆ. ಈ ಕುರಿತು ಮಾತನಾಡಿರುವ ಮಾರುತಿ ಸುಜುಕಿ ಸಂಸ್ಥೆಯ ಮಾರುಕಟ್ಟೆ ಕಾರ್ಯ ನಿರ್ವಾಹಕ ಶಶಾಂಕ್ ಶ್ರೀವತ್ಸ, ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಸುಧಾರಿಸುತ್ತಿರುವಾಗಲೂ ಗ್ರಾಮಸ್ಥರು ಮುಖಾಮುಖಿ ಮಾತುಕತೆಗೆ ಪ್ರಾಮುಖ್ಯತೆ ನೀಡುತ್ತಾರೆ. ಆದ್ದರಿಂದ, ಗ್ರಾಮೀಣ ಭಾಗದಲ್ಲಿ ಸಂವಹನದ ಮೂಲಕ ಜನರಿಗೆ ಉತ್ಪನ್ನದ ಕುರಿತು ತಿಳಿಸುವುದು ಮುಖ್ಯ ಎಂದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಪ್ರಮಾಣವು ಈ ವರ್ಷ ಶೇ. 40-50 ರಷ್ಟು ಏರಿಕೆ ಹೊಂದಿದೆ.ಇದರಿಂದ ಹಳ್ಳಿಗಳಲ್ಲಿ ವ್ಯಾಪಾರ ಕೇಂದ್ರಗಳು ಹೆಚ್ಚಾಗಿವೆ.ಈ ಬೆಳವಣಿಗೆಯು ಪ್ರಮುಖ ಸಂಸ್ಥೆಗಳು ಗ್ರಾಮೀಣ ಭಾಗದತ್ತ ಹೆಚ್ಚು ಗಮನ ಹರಿಸಲು ಕಾರಣವಾಗಿದೆ. ಒಟ್ಟಿನಲ್ಲಿ ಇನ್ನು ಮುಂದೆ ಹಳ್ಳಿಯ ರಸ್ತೆಗಳ ಕಡೆ ಹೆಚ್ಚು ಹೆಚ್ಚು ಕಂಪೆನಿಗಳು ಹೆಜ್ಜೆ ಹಾಕಿದರೆ ಅಚ್ಚರಿಪಡಬೇಕಿಲ್ಲ.