Ivana Trump: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ನಿಧನ
Ivana Trump Death: ಇವಾನಾ ಟ್ರಂಪ್ ಅವರ ಸಾವಿಗೆ ನಿಖರ ಕಾರಣ ಏನು ಎನ್ನುವುದು ಈವರೆಗೆ ಪತ್ತೆಯಾಗಿಲ್ಲ.
ವಾಷಿಂಗ್ಟನ್: ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ, ಉದ್ಯಮಿ ಇವಾನಾ ಟ್ರಂಪ್ (73) (Ivana Trump) ಗುರುವಾರ (ಜುಲೈ 14) ನಿಧನರಾದರು. ಉದ್ಯಮಕ್ಷೇತ್ರದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಮೊದಲು ಇವಾನಾ ‘ಸ್ಕೇಯರ್’ (Skier) ಆಗಿದ್ದರು. ಇವಾನಾ ಅವರು ಮ್ಯಾನ್ಹಟನ್ನಲ್ಲಿರುವ ತಮ್ಮ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಆಕೆ ಅತ್ಯುದ್ಭುತ, ಸುಂದರ ಮತ್ತು ಉತ್ಸಾಹಿ ಮಹಿಳೆಯಾಗಿದ್ದರು. ಪ್ರೇರಣಾದಾಯಕ ಜೀವನ ನಡೆಸಿದರು ಎಂದು ಟ್ರಂಪ್ ಬರೆದಿದ್ದಾರೆ. ಜ್ಯೂನಿಯರ್ ಡೊನಾಲ್ಡ್, ಇವಾಂಕ ಮತ್ತು ಎರಿಕ್ ಹೆಸರಿನ ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ. ತನ್ನ ಮಕ್ಕಳ ಬಗ್ಗೆ ಆಕೆಗೆ ಅತ್ಯಂತ ಹೆಮ್ಮೆಯಿತ್ತು. ನಾವೂ ಸಹ ಅವಳ ವಿಚಾರದಲ್ಲಿ ಅಷ್ಟೇ ಹೆಮ್ಮೆ ಇರಿಸಿಕೊಂಡಿದ್ದವು. ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ರಂಪ್ ಹೇಳಿದ್ದಾರೆ.
ಇವಾನಾ ಟ್ರಂಪ್ ಅವರ ಸಾವಿಗೆ ನಿಖರ ಕಾರಣ ಏನು ಎನ್ನುವುದು ಈವರೆಗೆ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರು ಮೆಟ್ಟಿನಿಂದ ಉರುಳಿ ಮೃತಪಟ್ಟಿರಬಹುದು. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಮನೆಯ ಮೆಟ್ಟಿಲಿನ ಬಳಿ ಪ್ರಜ್ಞೆ ಕಳೆದುಕೊಂಡಿದ್ದ ಸ್ಥಿತಿಯಲ್ಲಿ ಅವರು ಕಾಣಿಸಿಕೊಂಡ ತಕ್ಷಣ ವೈದ್ಯರಿಗೆ ವಿಷಯ ತಿಳಿಸಲಾಯಿತು. ಆದರೆ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬರುವ ಒಳಗೆ ಅವರು ಮೃತಪಟ್ಟಿದ್ದರು. ಸಾವಿನ ನಿಖರ ಕಾರಣಗಳನ್ನು ಆರೋಗ್ಯ ಇಲಾಖೆ ಇನ್ನಷ್ಟೇ ತಿಳಿಸಬೇಕಿದೆ ಎಂದ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Published On - 7:29 am, Fri, 15 July 22