‘ಜಿಹಾದಿ ಭಯೋತ್ಪಾದನಾ ದಾಳಿ’; ಫ್ಲೈದುಬೈ ವಿಮಾನ ಪತನಗೊಳಿಸಲು ಕೋ-ಪೈಲಟ್ ಯತ್ನಿಸಿದ್ದ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು

ದುಬೈನಿಂದ ಇಸ್ರೇಲ್‌ಗೆ ಹಾರಾಟ ನಡೆಸುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಮೇಲೆ ಚಾಕುವಿನಿಂದ ದಾಳಿ ನಡೆಸಿ, ವಿಮಾನವನ್ನು ಭೀಕರವಾಗಿ ಪತನಗೊಳಿಸಲು ಯತ್ನಿಸಿದ್ದ ಕೋ-ಪೈಲಟ್‌ನನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ. ಈ ಘಟನೆಯನ್ನು ಇಸ್ರೇಲ್ ‘ಜಿಹಾದಿ ಭಯೋತ್ಪಾದನಾ ದಾಳಿ’ ಎಂದು ಖಚಿತಪಡಿಸಿದೆ. ಓಮನ್ ಮೂಲದ ಕೋ-ಪೈಲಟ್ 180 ಪ್ರಯಾಣಿಕರಿದ್ದ 'ಬೋಯಿಂಗ್ 737 ಮ್ಯಾಕ್ಸ್' ಜೆಟ್ ವಿಮಾನವನ್ನು ಪತನಗೊಳಿಸಲು ಸಂಚು ರೂಪಿಸಿದ್ದ ಎಂದು ಇಸ್ರೇಲ್ ಹೇಳಿದೆ.

‘ಜಿಹಾದಿ ಭಯೋತ್ಪಾದನಾ ದಾಳಿ’; ಫ್ಲೈದುಬೈ ವಿಮಾನ ಪತನಗೊಳಿಸಲು ಕೋ-ಪೈಲಟ್ ಯತ್ನಿಸಿದ್ದ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು
ನೆತನ್ಯಾಹು
Image Credit source: AP

Updated on: Sep 30, 2026 | 10:16 PM

ಟೆಲ್ ಅವೀವ್, ಸೆಪ್ಟೆಂಬರ್ 30: ದುಬೈನಿಂದ ಟೆಲ್ ಅವೀವ್‌ಗೆ ಇಸ್ರೇಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಮುಖ್ಯ ಪೈಲಟ್​​ಗೆ ಚಾಕುವಿನಿಂದ ಇರಿದು, ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದ ಆರೋಪಿ ಪೈಲಟ್‌ನನ್ನು ಸೌದಿ ಅರೇಬಿಯಾ ಅಧಿಕಾರಿಗಳು ಬಂಧಿಸಿದ್ದು, ಪ್ರಸ್ತುತ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಹಾಗೇ, ಇದು ಜಿಹಾದಿ ಭಯೋತ್ಪಾದನಾ ದಾಳಿ ಎಂದು ಅವರು ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಪೈಲಟ್ ತಕ್ಷಣವೇ ಮಧ್ಯಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸುವ ಮೂಲಕ ಸಂಭವಿಸಬಹುದಾಗಿದ್ದ ‘ದೊಡ್ಡ ದುರಂತ’ವನ್ನು ತಪ್ಪಿಸಿದ್ದಾರೆ ಎಂದು ನೆತನ್ಯಾಹು ಹೇಳಿದ್ದಾರೆ.

ಇದನ್ನೂ ಓದಿ: ಕಾಕ್​ಪಿಟ್ ಜಗಳ, ಪೈಲಟ್‌ಗೆ ಚಾಕು ಇರಿತ; ಫ್ಲೈದುಬೈ ವಿಮಾನದ ಹೈಜಾಕ್ ಕುರಿತು ಹೊಸ ಸಂಗತಿ ಬಯಲು

ನೆತನ್ಯಾಹು ನೀಡಿದ ವಿವರಣೆಯಂತೆ, ವಿಮಾನವು ಇಸ್ರೇಲ್ ವಾಯುಪ್ರದೇಶವನ್ನು ತಲುಪುತ್ತಿದ್ದಂತೆ ಓರ್ವ ಪೈಲಟ್ ಮತ್ತೊಬ್ಬ ಪೈಲಟ್‌ಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ವಿಮಾನದಲ್ಲಿದ್ದ ಎಲ್ಲರನ್ನೂ ಕೊಲ್ಲುವ ಉದ್ದೇಶದಿಂದ ವಿಮಾನವನ್ನು ನೆಲಕ್ಕೆ ಅಪ್ಪಳಿಸಿ ಪತನಗೊಳಿಸಲು ಯತ್ನಿಸಿದ್ದಾನೆ. ಆದರೆ ವಿಮಾನದಲ್ಲಿದ್ದ ಪ್ರಯಾಣಿಕರು ಧೈರ್ಯದಿಂದ ಕಾಕ್‌ಪಿಟ್‌ಗೆ ನುಗ್ಗಿ ಅಪಾರ ಸಾಹಸ ಮೆರೆದು ದಾಳಿಕೋರನನ್ನು ಹತೋಟಿಗೆ ತಂದಿದ್ದಾರೆ. ಆ ಪ್ರಯಾಣಿಕರನ್ನು ನೆತನ್ಯಾಹು ‘ಹೀರೋಗಳು’ ಎಂದು ಶ್ಲಾಘಿಸಿದ್ದಾರೆ.


ಈ ಭೀಕರ ಘಟನೆಯು ದುಬೈನಿಂದ ತೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ನಡೆದಿದ್ದು, ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ನಗರಕ್ಕೆ ಬದಲಾಯಿಸಿ ಲ್ಯಾಂಡ್ ಮಾಡಲಾಗಿತ್ತು.

ಇದನ್ನೂ ಓದಿ: ಫ್ಲೈದುಬೈ ಹೈಡ್ರಾಮಾ; ಇರಿತಕ್ಕೊಳಗಾದರೂ 180 ಪ್ರಯಾಣಿಕರ ಪ್ರಾಣ ಉಳಿಸಿದ ಹೀರೋ ಭಾರತೀಯ ಪೈಲಟ್

ಅಂದಹಾಗೆ, ಓಮನ್ ಮೂಲದ ಕೋ-ಪೈಲಟ್ ಜಗಳ ತೆಗೆದು ದಾಳಿ ನಡೆಸಿದಾಗ ಆತನ ವಿರುದ್ಧ ಹೋರಾಡಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸಾಹಸಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಭಾರತೀಯ ಮೂಲದವರು. ಕಾಕ್‌ಪಿಟ್‌ನಿಂದ ಭೀಕರ ರಕ್ತದ ಮಡುವಿನ ದೃಶ್ಯ ಕಂಡುಬಂದಾಗ ಪ್ರಯಾಣಿಕರು ಕೂಡಲೇ ನೆರವಿಗೆ ಧಾವಿಸಿದ್ದರು. ಪ್ರಸ್ತುತ ಬಂಧಿತ ದಾಳಿಕೋರ ಪೈಲಟ್ ಸೌದಿ ಅರೇಬಿಯಾ ಪೊಲೀಸರ ವಶದಲ್ಲಿದ್ದು, ಘಟನೆಯ ಹಿಂದಿನ ಉಗ್ರ ಸಂಚು ಹಾಗೂ ಉದ್ದೇಶಗಳ ಕುರಿತು ವಿಚಾರಣೆ ನಡೆಯುತ್ತಿದೆ. ಇಸ್ರೇಲ್ ಸರ್ಕಾರದ ಪ್ರಧಾನಿ ಕಚೇರಿಯು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸೌದಿ ಅರೇಬಿಯಾದಲ್ಲಿರುವ ತಮ್ಮ ದೇಶದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ದಾಳಿಕೋರನನ್ನು ಕಟ್ಟಿಹಾಕಿದ ಪ್ರಯಾಣಿಕರು:

ವಿಮಾನದಲ್ಲಿದ್ದ ಪ್ರಯಾಣಿಕರು ಸಮಯಪ್ರಜ್ಞೆ ತೋರಿ, ವಿಮಾನ ಸಿಬ್ಬಂದಿ ಧೈರ್ಯದಿಂದ ತಕ್ಷಣವೇ ಮಧ್ಯಪ್ರವೇಶಿಸಿ ದಾಳಿಕೋರನನ್ನು ಹತೋಟಿಗೆ ತಂದರು. ಇದರಿಂದಾಗಿ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯ ಪ್ರಾಣ ಉಳಿಯಿತು ಎಂದು ಇಸ್ರೇಲ್ ರಕ್ಷಣಾ ಸಚಿವ ಕಟ್ಜ್ ಶ್ಲಾಘಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:10 pm, Wed, 30 September 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us