ಅಮೆರಿಕದಲ್ಲಿ ಬೈಡನ್-ಕಮಲಾ ಯುಗಾರಂಭ, ಭಾರತದಲ್ಲೂ ಸಂಭ್ರಮ
ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
127 ವರ್ಷ ಹಳೆಯದಾದ ಬೈಬಲ್ ಪ್ರತಿಯ ಮೇಲೆ ಕೈಯಿರಿಸಿ, 46ನೇ ಅಧ್ಯಕ್ಷರಾಗಿ ಬೈಡನ್ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಲು ಬಳಸಿದ ಬೈಬಲ್ ಪ್ರತಿಯನ್ನು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಆಸ್ಥೆಯಿಂದ ಹಿಡಿದುಕೊಂಡಿದ್ದರು.
ಅಮೆರಿಕದ ಖ್ಯಾತ ಪಾಪ್ ಗಾಯಕಿ ಲೇಡಿ ಗಾಗಾ ರಾಷ್ಟ್ರಗೀತೆ ಹಾಡಿದರು. ಮತ್ತೋರ್ವ ಖ್ಯಾತ ಗಾಯಕಿ ಜೆನಿಫರ್ ಲೊಪೆಜ್ ಅಮೆರಿಕದ ಜನಪ್ರಿಯ ಐಕ್ಯಗೀತೆ ‘ದಿಸ್ ಲ್ಯಾಂಡ್ ಈಸ್ ಮೇಡ್ ಫಾರ್ ಯು ಅಂಡ್ ಮಿ’ ಹಾಡಿದರು.
ಬೈಡನ್ ಅವರಿಗೆ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಕಮಲಾ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಅಮೆರಿಕ ಉಪಾಧ್ಯಕ್ಷರಾದ ಮೊದಲ ಭಾರತ ಸಂಜಾತ ಮಹಿಳೆ ಎಂಬ ಶ್ರೇಯಕ್ಕೂ ಕಮಲಾ ಹ್ಯಾರಿಸ್ ಪಾತ್ರರಾದರು. ಕಮಲಾ ಪದಗ್ರಹಣವನ್ನು ತಮಿಳುನಾಡಿನ ವಿವಿಧೆಡೆ ಸಂಭ್ರಮದಿಂದ ಸ್ವಾಗತಿಸಲಾಯಿತು.
ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಹೆಚ್ಚು ಜನರು ಸೇರಲು ಅವಕಾಶ ಇರಲಿಲ್ಲ. ಒಂದು ಸಾವಿರ ಅತಿಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರ ಉಳಿದು ಈವರೆಗಿನ ಶಿಷ್ಟಾಚಾರ ಉಲ್ಲಂಘಿಸಿದರು. ಟ್ರಂಪ್ ಬೆಂಬಲಿಗರು ದಾಳಿ ನಡೆಸಬಹುದು ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ 25 ಸಾವಿರ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಭದ್ರತೆಗೆ ನಿಯೋಜನೆಗೊಂಡಿರುವ ಎಲ್ಲಾ ಸಿಬ್ಬಂದಿಯ ಹಿನ್ನೆಲೆಯನ್ನೂ ಎಫ್ಬಿಐ ಹಲವು ಬಾರಿ ಪರಿಶೀಲಿಸಿದ್ದು ಈ ಸಮಾರಂಭದ ಮತ್ತೊಂದು ಗಮನಾರ್ಹ ಸಂಗತಿ.
Published On - 10:21 pm, Wed, 20 January 21