ಮಾಲಿ ದೇಶದ ಅಧ್ಯಕ್ಷರ ಮೇಲೆ ಚಾಕುವಿನಿಂದ ಹಲ್ಲೆ; ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಕೊಲೆ ಪ್ರಯತ್ನ

Assimi Goita | ಇಂದು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಇಬ್ಬರು ಶಸ್ತ್ರಧಾರಿಗಳು ಮಾಲಿ ಅಧ್ಯಕ್ಷ ಅಸ್ಸಿಮಿ ಗೊಯ್ತಾ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

ಮಾಲಿ ದೇಶದ ಅಧ್ಯಕ್ಷರ ಮೇಲೆ ಚಾಕುವಿನಿಂದ ಹಲ್ಲೆ; ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಕೊಲೆ ಪ್ರಯತ್ನ
ಅಸ್ಸಿಮಿ ಗೊಯ್ತ

ಮಾಲಿ: ಇಂದು ಮಾಲಿ ಗಣರಾಜ್ಯದ ರಾಜಧಾನಿ ಬಮಾಕೋದಲ್ಲಿರುವ ಮಸೀದಿಯಲ್ಲಿ ಮಾಲಿ ದೇಶದ ಮಧ್ಯಂತರ ಅಧ್ಯಕ್ಷ ಅಸ್ಸಿಮಿ ಗೊಯ್ತಾ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಲಾಗಿದೆ. ಮಸೀದಿಯೊಳಗೆ ಇದ್ದಕ್ಕಿದ್ದಂತೆ ನುಗ್ಗಿದ ಇಬ್ಬರು ಶಸ್ತ್ರಧಾರಿಗಳು ಮಾಲಿ ಅಧ್ಯಕ್ಷ ಅಸ್ಸಿಮಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಮಸೀದಿಯಲ್ಲಿ ಇಂದು ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಲಾಗಿದೆ.

ಇಸ್ಮಾಂ ಧರ್ಮದ ಪ್ರಮುಖ ಹಬ್ಬವಾದ ಈದ್-ಅಲ್-ಅದಾ ಹಿನ್ನೆಲೆಯಲ್ಲಿ ಅಸ್ಸಿಮಿ ಗೊಯ್ತಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆಗ ಮುಸುಕು ಧರಿಸಿಕೊಂಡು ಬಂದ ಇಬ್ಬರು ಶಸ್ತ್ರಧಾರಿಗಳಲ್ಲೊಬ್ಬಾತ ಚಾಕುವಿನಿಂದ ಅಸ್ಸಿಮಿ ಅವರಿಗೆ ಇರಿಯಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಯಾವ ಕಾರಣಕ್ಕಾಗಿ ಮಾಲಿ ಅಧ್ಯಕ್ಷರ ಮೇಲೆ ಈ ಕೊಲೆ ಯತ್ನ ನಡೆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಶಕ್ಕೆ ಪಡೆದಿರುವ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಲಿಯ ಅಧ್ಯಕ್ಷರ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಈ ಹಲ್ಲೆಯಿಂದ ಅಸ್ಸಿಮಿ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಸುರಕ್ಷಿತರಾಗಿದ್ದಾರೆ.

ಕಳೆದ ತಿಂಗಳಷ್ಟೇ 37 ವರ್ಷದ ಅಸ್ಸಿಮಿ ಗೊಯ್ತಾ ಮಾಲಿ ಮಧ್ಯಂತರ ಅವಧಿಯ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದಕ್ಕೂ ಮೊದಲು ಅವರು ಮಾಲಿಯ ಉಪಾಧ್ಯಕ್ಷರಾಗಿ ಅಧಿಕಾರ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಕೋವಿಡ್ ಕುರಿತ ಆತಂಕಕಾರಿ ವಿಚಾರ ಬಯಲು; ಭಾರತದ 40 ಕೋಟಿ ಜನರಿಗೆ ಇನ್ನೂ ಕೊರೋನಾ ಅಪಾಯ ತಪ್ಪಿಲ್ಲ!

(Knife attack against Mali interim President Assimi Goita in Bamako)

Click on your DTH Provider to Add TV9 Kannada