ಕೋವಿಡ್ ಕುರಿತ ಆತಂಕಕಾರಿ ವಿಚಾರ ಬಯಲು; ಭಾರತದ 40 ಕೋಟಿ ಜನರಿಗೆ ಇನ್ನೂ ಕೊರೋನಾ ಅಪಾಯ ತಪ್ಪಿಲ್ಲ!

ದೇಶದ ಒಟ್ಟು 40 ಕೋಟಿ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೋವಿಡ್ ತಗುಲುವ ಅಪಾಯ ಹೆಚ್ಚಾಗಿದೆ ಎಂದು ಐಸಿಎಂಆರ್ ಪ್ರಧಾನಿ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.

ಕೋವಿಡ್ ಕುರಿತ ಆತಂಕಕಾರಿ ವಿಚಾರ ಬಯಲು; ಭಾರತದ 40 ಕೋಟಿ ಜನರಿಗೆ ಇನ್ನೂ ಕೊರೋನಾ ಅಪಾಯ ತಪ್ಪಿಲ್ಲ!
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Sushma Chakre

Jul 20, 2021 | 6:46 PM

ನವದೆಹಲಿ: ಭಾರತದಲ್ಲಿ ಎಲ್ಲರೂ ಕೊರೋನಾದಿಂದ ಮುಕ್ತರಾಗಬೇಕೆಂದು ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಲಸಿಕೆ (Free  Covid Vaccine) ಅಭಿಯಾನವನ್ನು ನಡೆಸುತ್ತಿದೆ. ಆದರೂ ದೇಶದ 40 ಕೋಟಿ ಜನರು ಇನ್ನೂ ಕೊರೋನಾ ಸೋಂಕು ತಗುಲುವ ಅಪಾಯದಿಂದ ಪಾರಾಗಿಲ್ಲ ಎಂಬ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ (ICMR) ನಡೆಸಿದ 4ನೇ ಸೆರೋ ಸಮೀಕ್ಷೆಯಲ್ಲಿ ಈ ಅಂಕಿ-ಅಂಶಗಳು ಬಯಲಾಗಿದೆ.

ಈ ಅಧ್ಯಯನದ ಪ್ರಕಾರ, 6 ವರ್ಷ ಮೇಲ್ಪಟ್ಟ ಮಕ್ಕಳನ್ನೂ ಒಳಗೊಂಡಂತೆ ಭಾರತದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಇನ್ನೂ ಕೋವಿಡ್ ಸೋಂಕು ತಗುಲುವ ಅಪಾಯದಲ್ಲಿದ್ದಾರೆ. ಭಾರತದ ಜನಸಂಖ್ಯೆಯ ಶೇ. 67.6ರಷ್ಟು ಜನರಲ್ಲಿ ಪ್ರತಿಕಾಯ ಪ್ರಮಾಣ ಹೆಚ್ಚಾಗಿದೆ. ದೇಶದ ಒಟ್ಟು 40 ಕೋಟಿ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೋವಿಡ್ ತಗುಲುವ ಅಪಾಯ ಹೆಚ್ಚಾಗಿದೆ ಎಂದು ಐಸಿಎಂಆರ್ ಪ್ರಧಾನಿ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.

ಇನ್ನೂ ಕೋವಿಡ್ ಲಸಿಕೆ ಪಡೆಯದವರಲ್ಲಿ ಸೆರೋಪ್ರಿವಿಲೆನ್ಸ್​ ಪ್ರಮಾಣ ಶೇ. 62.3ರಷ್ಟಿದೆ. ಈಗಾಗಲೇ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಪ್ರಮಾಣ ಶೇ.81ರಷ್ಟಿದೆ. ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣ ಶೇ. 89.8ರಷ್ಟಿದೆ. ಈ ಅಧ್ಯಯನಕ್ಕಾಗಿ 7,252 ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿತ್ತು. ಈ ಆರೋಗ್ಯ ಕಾರ್ಯಕರ್ತರಲ್ಲಿ ಶೇ. 10ರಷ್ಟು ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಅವರಲ್ಲಿ ಸೆರೋಪ್ರಿವಿಲೆನ್ಸ್​ ಪ್ರಮಾಣ ಶೇ. 85.2ರಷ್ಟಿತ್ತು.

ದೇಶದಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸುತ್ತಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಡಾ. ಭಾರ್ಗವ, ವಯಸ್ಕರಿಗಿಂತ ಮಕ್ಕಳಲ್ಲಿ ವೈರಲ್ ಇನ್​ಫೆಕ್ಷನ್ ಬಹಳ ಬೇಗ ಗುಣವಾಗುತ್ತವೆ. ಅವರ ದೇಹ ಎಲ್ಲ ರೀತಿಯ ವೈರಸ್​ಗಳನ್ನೂ ನಿಯಂತ್ರಿಸಬಲ್ಲ ಗುಣವನ್ನು ಹೊಂದಿರುತ್ತದೆ. ಹೀಗಾಗಿಯೇ, ಹಲವು ದೇಶಗಳು ಕೊರೋನಾ ಕೇಸುಗಳು ಅತಿರೇಕಕ್ಕೆ ಹೋದಾಗಲೂ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಿರಲಿಲ್ಲ. ಹೀಗಾಗಿ, ಭಾರತದಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ತೆರೆಯಲು ಯಾವುದೇ ಸಮಸ್ಯೆಯಿಲ್ಲ. ಆದರೆ, ಆ ಶಾಲೆಗಳ ಶಿಕ್ಷಕರು, ವಾಹನಗಳ ಚಾಲಕರು, ಸ್ವಚ್ಛತಾ ಸಿಬ್ಬಂದಿ ಕೊರೋನಾ ಲಸಿಕೆ ಪಡೆದುಕೊಳ್ಳಬೇಕಾದುದು ಕಡ್ಡಾಯವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಕೊರೋನಾವೈರಸ್​ನ ಹೊಸ ಡೆಲ್ಟಾ ಪ್ಲಸ್ ರೂಪಾಂತರಿ ಮೂರನೇ ಅಲೆಗೆ ನಾಂದಿ ಹಾಡಬಹುದು ಎನ್ನುತ್ತಾರೆ ತಜ್ಞರು

(40 crore Indians still vulnerable to Covid-19 Shocking Data Revealed in ICMR 4th Sero Survey)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada