ನೀರಿಗೆ ತನ್ನದೇ ಆದ ಯಾವ ಬಣ್ಣವೂ ಇರುವುದಿಲ್ಲ. ಸಮುದ್ರದಲ್ಲಿ ನಿಂತ ನೀರು ತಿಳಿನೀಲಿ ಬಣ್ಣದಲ್ಲಿ ಕಾಣುತ್ತದೆ. ಕೊಳಚೆ ತುಂಬಿದ ನೀರು ಕಪ್ಪಾಗಿ ಕಾಣುತ್ತದೆ. ಆದರೆ, ಅರ್ಜೆಂಟಿನಾದ ಪಟಗೋನಿಯಾದ ಕರಾವಳಿಯ ನದಿಗಳೆಲ್ಲವೂ ಗುಲಾಬಿ ಬಣ್ಣಕ್ಕೆ ತಿರುಗಿದೆ. ಎಲ್ಲಿ ನೋಡಿದರೂ ಹರಡಿನಿಂತಿರುವ ಗುಲಾಬಿ ಬಣ್ಣದ ನದಿಗಳ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ಅರ್ಜೆಂಟೀನಾದ ಕರಾವಳಿ ತೀರದ ಲಗೂನ್ ನದಿಯ ನೀರು ಕಡು ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣವೇನು? ರಾಸಾಯನಿಕಗಳು ಬೆರೆತ ಕಾರಣ ಇಲ್ಲಿನ ನದಿ ಗುಲಾಬಿಯಾಗಿದ್ದು, ಈ ನೀರನ್ನು ಬಳಸಿದರೆ ಏನಾದರೂ ರೋಗ ಬರಬಹುದು ಎಂದು ಸುತ್ತಮುತ್ತಲಿನ ಜನರು ಆತಂಕಕ್ಕೀಡಾಗಿದ್ದಾರೆ. ಅರ್ಜೆಂಟಿನಾದ ಹೊರವಲಯದಲ್ಲಿರುವ ಈ ನದಿಗೆ ಸ್ಥಳೀಯ ಕೈಗಾರಿಕೆಗಳು ತಮ್ಮ ರಾಸಾಯನಿಕಗಳು ಅಥವಾ ಸಂಸ್ಕರಿಸಿದ ನೀರನ್ನು ಬಿಡುತ್ತಿವೆ. ಈ ನದಿಗೆ ವಿಷಪೂರಿತ ರಾಸಾಯನಿಕಗಳು ಸೇರ್ಪಡೆಯಾಗುತ್ತಿರುವುದರಿಂದ ನೀರು ಸಂಪೂರ್ಣವಾಗಿ ಕಲುಷಿತಗೊಂಡು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.
ಕೈಗಾರಿಕೆಗಳು ಇಡೀ ನದಿಯ ನೀರು ಕಲುಷಿತವಾಗುವಂತೆ ಮಾಡಿರುವುದಕ್ಕೆ ಪರಿಸರವಾದಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಸುತ್ತಮುತ್ತಲಿನ ಕಾರ್ಖಾನೆಗಳು, ಕೈಗಾರಿಕೆಗಳ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ಕಲುಷಿತವಾಗಿರುವ ನದಿ ನೀರಿನಲ್ಲಿರುವ ಚಿಪ್ಪುಮೀನುಗಳನ್ನು ಸಂರಕ್ಷಿಸಲು ಸೋಡಿಯಂ ಸಲ್ಫೈಟ್ ಹಾಕಿರುವುದರಿಂದ ನದಿ ನೀರೆಲ್ಲ ಗುಲಾಬಿ ಬಣ್ಣವಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ.
ಅಲ್ಲದೆ, ಲಗೂನ್ ನದಿಯ ಸುತ್ತಲಿನ ದುರ್ವಾಸನೆ ಮತ್ತು ಇತರ ಪರಿಸರ ಸಮಸ್ಯೆಗಳ ಬಗ್ಗೆ ನಿವಾಸಿಗಳು ಬಹಳ ವರ್ಷಗಳಿಂದ ದೂರು ನೀಡುತ್ತಿದ್ದಾರೆ. ಆದರೂ ಕಾರ್ಖಾನೆಗಳು, ಕೈಗಾರಿಕೆಗಳು ತ್ಯಾಜ್ಯವನ್ನು ನದಿಗೆ ಬಿಡುವುದನ್ನು ಇನ್ನೂ ನಿಲ್ಲಿಸಿಲ್ಲ. ಇದರಿಂದ ನೀರಿನ ದಡದಲ್ಲಿ ಗಬ್ಬು ವಾಸನೆ ಹೆಚ್ಚಾಗಿದ್ದು, ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ವಾಸ ಮಾಡುವುದು ಕೂಡ ಕಷ್ಟವಾಗಿದೆ.
ಇದನ್ನೂ ಓದಿ: Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್
Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್
(Lakes and Rivers in Argentina turn pink Here is why its a worrying sign)
Published On - 6:37 pm, Mon, 2 August 21