ನವದೆಹಲಿ, ಮಾರ್ಚ್ 31: ಬ್ರಿಟನ್ನ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಮಾಜಿ ಮುಖ್ಯಸ್ಥೆ ಲಿಂಡಿ ಕ್ಯಾಮರಾನ್ (Lindy Cameron) ಅವರು ಭಾರತಕ್ಕೆ ರಾಯಭಾರಿಯಾಗಿ ನೇಮಕವಾಗುವ ಸಾಧ್ಯತೆ ಇದೆ ಎಂದು ಮಿಂಟ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಹೇಳುತ್ತಿದೆ. ಭಾರತಕ್ಕೆ ರಾಯಭಾರಿಯಾಗಿದ್ದ ಅಲೆಕ್ಸ್ ಎಲಿಸ್ (Alex Ellis) ಅವರು ಸ್ಪೇನ್ ದೇಶಕ್ಕೆ ರಾಯಭಾರಿಯಾಗಿ ಹೋಗುತ್ತಿದ್ದಾರೆ. ಸದ್ಯ ಕ್ರಿಸ್ಟಿನಾ ಸ್ಕಾಟ್ (Christina Scott) ಭಾರತಕ್ಕೆ ಹಂಗಾಮಿ ರಾಯಭಾರಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈಗ ಪೂರ್ಣಾವಧಿ ರಾಯಭಾರಿ ಸ್ಥಾನಕ್ಕೆ ಲಿಂಡಿ ಕ್ಯಾಮರಾನ್ ಅವರನ್ನು ಕೂರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವರದಿ ನಿಜವೇ ಆದಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಬ್ರಿಟನ್ ರಾಯಭಾರಿ ಆಗುತ್ತಾರೆ. ಕ್ರಿಸ್ಟಿನಾ ಸ್ಕಾಟ್ ಕೂಡ ಮಹಿಳೆಯೇ ಆದರೂ ಅವರು ಹಂಗಾಮಿ ರಾಯಭಾರಿ ಮಾತ್ರವೇ ಆಗಿರುವುದು. ಇತ್ತೀಚೆಗೆ ಅಮೆರಿಕ, ಚೀನಾ, ಫ್ರಾನ್ಸ್, ಜಪಾನ್, ಜರ್ಮನಿ ಮೊದಲಾದ ದೇಶಗಳಿಗೆ ಮಹಿಳೆಯರು ಬ್ರಿಟನ್ ರಾಯಭಾರಿ ಸ್ಥಾನ ಅಲಂಕರಿಸಿದ್ದುಂಟು.
ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಓದಿದ ಲಿಂಡಿ ಕ್ಯಾಮರಾನ್ ಅವರು ಈ ಹಿಂದೆ ಬ್ರಿಟನ್ನ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್ನಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಇರಾಕ್ ಮತ್ತು ಆಫ್ಗಾನಿಸ್ತಾನ ದೇಶಗಳಲ್ಲಿ ಇವರು ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಕಡಲ್ಗಳ್ಳರಿಂದ ರಕ್ಷಣೆ: ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪಾಕಿಸ್ತಾನೀಯರು
ಲಿಂಡಿ ಕ್ಯಾಮರಾನ್ ಅವರು ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ಸಂಬಂಧ ವಿಸ್ತಾರಗೊಳ್ಳುತ್ತಿರುವ ಮಹತ್ತರ ಸಂದರ್ಭದಲ್ಲಿ ರಾಯಭಾರಿಯಾಗುತ್ತಿದ್ದಾರೆ. ಎರಡೂ ದೇಶಗಳ ನಡುವಿನ ಸಂಬಂಧ ಗಾಢವಾಗಲು ರಾಯಭಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗಾಗಿ, ಲಿಂಡಿ ಕ್ಯಾಮರಾನ್ ಹೆಗಲಲ್ಲಿ ಮುಖ್ಯವಾದ ಹೊಣೆಗಾರಿಕೆ ಇದೆ. ಇನ್ನೊಂದೆಡೆ, ಬ್ರಿಟನ್ ದೇಶಕ್ಕೆ ವಿಕ್ರಮ್ ದೊರೈಸ್ವಾಮಿ 2022ರ ಸೆಪ್ಟಂಬರ್ನಿಂದ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬ್ರಿಟನ್ ದೇಶಕ್ಕೆ ಭಾರತ 12ನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಎನಿಸಿದೆ. ಭಾರತದ ಟ್ರೇಡಿಂಗ್ ಪಾರ್ಟ್ನರ್ಗಳ ಪೈಕಿ ಬ್ರಿಟನ್ 15ನೇ ಸ್ಥಾನದಲ್ಲಿದೆ. ಈ ಎರಡು ದೇಶಗಳ ಮಧ್ಯೆ ಒಟ್ಟಾರೆ ವ್ಯಾಪಾರ ವಹಿವಾಟು 2022ರ ಅಕ್ಟೋಬರ್ನಿಂದ 2023ರ ಸೆಪ್ಟಂಬರ್ವರೆಗೂ 12 ತಿಂಗಳಲ್ಲಿ 38.1 ಬಿಲಿಯನ್ ಪೌಂಡ್ (ಸುಮಾರು 4 ಲಕ್ಷ ಕೋಟಿ ರೂ) ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವ್ಯಾಪಾರ ಗಣನೀಯವಾಗಿ ವೃದ್ಧಿಸಿದೆ.
ಇದನ್ನೂ ಓದಿ: ಕಾನೂನು, ಸುವ್ಯವಸ್ಥೆ ಬಗ್ಗೆ ಭಾರತಕ್ಕೆ ಯಾರೂ ಪಾಠ ಹೇಳಬೇಕಿಲ್ಲ: ಅಮೆರಿಕ, ಜರ್ಮನಿ, ವಿಶ್ವಸಂಸ್ಥೆಗೆ ಉಪ ರಾಷ್ಟ್ರಪತಿ ತಿರುಗೇಟು
ಎರಡು ದೇಶಗಳ ಮಧ್ಯೆ ವ್ಯಾಪಾರ ಸಂಬಂಧ ಮಾತ್ರವಲ್ಲ ರಕ್ಷಣಾ ಸಂಬಂಧವೂ ಗಾಢವಾಗುತ್ತಿದೆ. ಜನವರಿ ತಿಂಗಳಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬ್ರಿಟನ್ಗೆ ಭೇಟಿ ನೀಡಿದಾಗ ಭದ್ರತಾ ಕ್ಷೇತ್ರದಲ್ಲಿ ಹೊಸ ಸಹಕಾರ ಸಾಧ್ಯತೆಗಳ ಬಗ್ಗೆ ವಿಚಾರ ವಿನಿಮಯ ನಡೆದಿದೆ. ರಷ್ಯಾದ ಹಿಂದಿನ ಅವತಾರವಾದ ಸೋವಿಯತ್ ಯೂನಿಯನ್ ಜೊತೆ ಭಾರತ ನಿಕಟವಾಗಿತ್ತು. ಆಗ ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧ ದುರ್ಬಲ ನೆಲೆಯಲ್ಲಿದ್ದಿದ್ದು ಹೌದು. ಈಗ ಮತ್ತೆ ಚೇತರಿಸಿಕೊಂಡಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Sun, 31 March 24