ಕಳೆದ ಬುಧವಾರದಂದು ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾ (Fumio Kishida) ಅವರ ಕಚೇರಿ ಎದುರುಗಡೆ ಬೆಂಕಿ ಹೊತ್ತಿಸಿಕೊಂಡು ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ಮೂರ್ಛಾವಸ್ಥೆಯ (unconscious) ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿರುವ ಪ್ರಕರಣ ತಡವಾಗಿ ವರದಿಯಾಗಿದೆ. ಆದರೆ, ಪ್ರಧಾನ ಮಂತ್ರಿಗಳ ಕಚೇರಿಯು (PMO) ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿಲ್ಲ.
ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿ ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ, ಹತ್ಯೆಗೊಳಗಾದ ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರೀ ಗೌರವಗಳೊಂದಿಗೆ ನೆರವೇರಿಸುತ್ತಿರುವುದನ್ನು ವಿರೋಧಿಸಿ ಪ್ರಾಣತ್ಯಾಗ ಮಾಡುತ್ತಿರುವುದಾಗಿ ಹೇಳಿದನೆಂದು ಅಸಾಹಿ ಟಿವಿ ಚ್ಯಾನೆಲ್ ವರದಿ ಮಾಡಿದೆ.
ಹಾಗೆ ನೋಡಿದರೆ, ಜಪಾನಿನಲ್ಲಿ ಸರ್ಕಾರೀ ಗೌರವಗಳೊಂದಿಗೆ ಮೃತ ಗಣ್ಯರ ಅಂತ್ಯ ಸಂಸ್ಕಾರ ನಡೆಸುವುದು ಬಹಳ ಅಪರೂಪ. ಅಬೆಯವರ ಅಂತಿಮ ವಿಧಿ ವಿಧಾನಗಳು ಹಾಗೆ ನಡೆಸಲು ನಿರ್ಧರಿಸಿದ್ದು ವಿವಾದಕ್ಕೀಡಾಗಿದೆ. ಜಪಾನಿನಲ್ಲಿ ನಡೆಸಲಾದ ಜನಮತವೊಂದರ ಪ್ರಕಾರ ಅರ್ಧಕ್ಕಿಂತ ಹೆಚ್ಚು ಜನ ಸಕಲ ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುವುದನ್ನು ವಿರೋಧಿಸಿದ್ದಾರೆ.
ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿ ಬೆಂಕಿಯಿಂದ ಸುತ್ತುವರಿಯಲ್ಪಟ್ಟಿದ್ದನ್ನು ನೋಡಿದ ಜನರು ಪೊಲೀಸರಿಗೆ ಫೋನ್ ಮಾಡಿದ್ದರು ಎಂದು ಕ್ಯುಡೊ ಸುದ್ದಿಸಂಸ್ಥೆ ವರದಿ ಮಾಡಿದೆ.
ಘಟನೆ ನಡೆದ ಸ್ಥಳದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿ ಬರೆದಿರುವ ನೋಟ್ ಒಂದು ಸಿಕ್ಕಿದ್ದು ಅವನು ಅಬೆಯವರ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ.
ಅತಿ ದೀರ್ಘಾವಧಿವರಗೆ ಜಪಾನ್ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅಬೆ ಅವರನ್ನು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಗುಂಡಿಟ್ಟು ಕೊಲ್ಲಲಾಗಿತ್ತು.
ಅವರ ಗೌರವಾರ್ಥ ಸಾರ್ಬಜನಿಕ ದೇಣಿಗೆ ಮೂಲಕ ಏರ್ಪಡಿಸಲಾಗಿರುವ ಸರ್ಕಾರೀ ಮರ್ಯಾದೆಗಳೊಂದಿಗಿನ ಅಂತಿಮ ವಿಧಿವಿಧಾನಗಳು ಸೆಪ್ಟೆಂಬರ್ 27 ರಂದು ನಡೆಯಲಿವೆ.