Russian Cafe Fire: ರಷ್ಯಾದ ಕೆಫೆಯಲ್ಲಿ ಅಗ್ನಿ ಅವಘಡ; 15 ಮಂದಿ ಸಾವು
ರಷ್ಯಾದ ಕೋಸ್ಟ್ರೋಮಾದ ಬಾರ್ & ಕೆಫೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಸುಮಾರು 250 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ‘ಟಿಎಎಸ್ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಾಸ್ಕೋ: ರಷ್ಯಾದ (Russia) ಕೋಸ್ಟ್ರೋಮಾದ (Kostroma) ಬಾರ್ & ಕೆಫೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident) 15 ಮಂದಿ ಮೃತಪಟ್ಟಿದ್ದಾರೆ. ಸುಮಾರು 250 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ‘ಟಿಎಎಸ್ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಡ್ಯಾನ್ಸ್ ಫ್ಲೋರ್‌ನಲ್ಲಿ ‘ಫ್ಲೇರ್ ಗನ್’ನಿಂದ ಗುಂಡು ಹಾರಿಸಿದ ನಂತರ ಬೆಂಕಿ ಹೊತ್ತಿಕೊಂಡಿತ್ತು ಎಂದು ವರದಿ ಉಲ್ಲೇಖಿಸಿದ್ದು, ಅಗ್ನಿಯ ಜ್ವಾಲೆಗಳು ಕಟ್ಟಡದಲ್ಲಿ ಹರಡಿರುವ ಚಿತ್ರಗಳನ್ನೂ ಪ್ರಕಟಿಸಿದೆ.
ಶುಕ್ರವಾರ ತಡರಾತ್ರಿ 2 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿತ್ತು. ಶನಿವಾರ ಬೆಳಿಗ್ಗೆ 7.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು. ಸುಮಾರು 250 ಮಂದಿಯನ್ನು ರಕ್ಷಿಸಲಾಗಿದೆ. ಘಟನೆ ಸಂಭವಿಸಿದ ಪ್ರದೇಶ ರಾಜಧಾನಿ ಮಾಸ್ಕೋದಿಂದ 300 ಕಿಲೋಮೀಟರ್ ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿ ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಮೊದಲಿಗೆ ಗವರ್ನರ್ ಸೆರ್ಗೆ ಸಿಟ್ನಿಕೋವ್ ತಿಳಿಸಿದ್ದರು. ಆದರೆ, ನಂತರ ಮತ್ತೆರಡು ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ತುರ್ತು ಸೇವೆಗಳ ಇಲಾಖೆ ತಿಳಿಸಿದೆ.
ಮದ್ಯಪಾನಿಯ ಅವಾಂತರ
ಮದ್ಯಪಾನಿ ವ್ಯಕ್ತಿಯೊಬ್ಬ ಕೈಯಲ್ಲಿ ಫ್ಲೇರ್ ಗನ್ ಹಿಡಿದುಕೊಂಡು ಮಹಿಳೆಯೊಂದಿಗೆ ಬಾರ್ನಲ್ಲಿ ಸಮಯ ಕಳೆಯುತ್ತಿದ್ದ. ಬಳಿಕ ಏಕಾಏಕಿ ಡ್ಯಾನ್ಸ್ ಫ್ಲೋರ್ಗೆ ತೆರಳಿದ ಆತ ಗುಂಡು ಹಾರಿಸಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ತಗುಲಿದ್ದ ಕಟ್ಟಡ ಸುಮಾರು 3,500 ಚದರ ಅಡಿಯಷ್ಟು ವಿಸ್ತೀರ್ಣ ಹೊಂದಿತ್ತು ಎಂದು ಇಲಾಖೆ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಭಾರತೀಯರು ಪ್ರತಿಭಾವಂತರು, ಪರಿಶ್ರಮಿಗಳು; ಹಾಡಿ ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್