ಭಾರತೀಯರು ಪ್ರತಿಭಾವಂತರು, ಪರಿಶ್ರಮಿಗಳು; ಹಾಡಿ ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಭಾರತೀಯರು ಪ್ರತಿಭಾವಂತರು ಹಾಗೂ ಪರಿಶ್ರಮಿಗಳು. ಅಭಿವೃದ್ಧಿಯ ವಿಚಾರದಲ್ಲಿ ಅತ್ಯದ್ಭುತ ಫಲಿತಾಂಶ ಕಂಡುಕೊಳಲು ಬೇಕಾದಷ್ಟು ಸಾಮರ್ಥ್ಯ ಭಾರತೀಯರಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಣ್ಣಿಸಿದ್ದಾರೆ.
ಮಾಸ್ಕೋ: ಸ್ವತಂತ್ರ ವಿದೇಶಾಂಗ ನೀತಿ ಬಗ್ಗೆ ಕಳೆದ ವಾರವಷ್ಟೇ ಭಾರತವನ್ನು (India) ಹೊಗಳಿದ್ದ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಇದೀಗ ಮತ್ತೆ ಭಾರತೀಯರ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತೀಯರು ಪ್ರತಿಭಾವಂತರು ಹಾಗೂ ಪರಿಶ್ರಮಿಗಳು ಎಂದು ಅವರು ಬಣ್ಣಿಸಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ಅತ್ಯದ್ಭುತ ಫಲಿತಾಂಶ ಕಂಡುಕೊಳಲು ಬೇಕಾದಷ್ಟು ಸಾಮರ್ಥ್ಯ ಭಾರತದಲ್ಲಿದೆ ಎಂಬ ಕುರಿತು ಅನುಮಾನವೇ ಬೇಡ ಎಂದು ಅವರು ಹೇಳಿದ್ದಾರೆ.
ರಷ್ಯಾದ ಏಕತಾ ದಿನದಂದು ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಭಾರತವು ಅತ್ಯುತ್ತಮ ಫಲಿತಾಂಶ ಹೊಂದಲಿದೆ ಎಂಬ ವಿಚಾರದಲ್ಲಿ ಅನುಮಾನವೇ ಬೇಡ. ಭಾರತದಲ್ಲಿರುವ ಸುಮಾರು ಒಂದೂವರೆ ಶತಕೋಟಿ ಜನರಲ್ಲಿ ಆ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಪುಟಿನ್ ರಷ್ಯಾ ಭಾಷೆಯಲ್ಲಿ ಮಾಡಿರುವ ಭಾಷಣದ ಇಂಗ್ಲಿಷ್ ಅನುವಾದವನ್ನು ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಟಿಸಿದೆ.
ಆಫ್ರಿಕಾದ ವಸಾಹತುಶಾಹಿ, ಭಾರತದ ಸಾಮರ್ಥ್ಯ ಹಾಗೂ ರಷ್ಯಾದ ನಾಗರಿಕತೆ, ಸಂಸ್ಕೃತಿಯ ಬಗ್ಗೆ ಕೂಡ ಪುಟಿನ್ ಮಾತನಾಡಿದ್ದಾರೆ.
ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದ ಪುಟಿನ್
ಜಾಗತಿಕ ಒತ್ತಡಗಳ ನಡುವೆಯೂ ವಿದೇಶಾಂಗ ನೀತಿಯಲ್ಲಿ ಸ್ವತಂತ್ರ ನಿಲುವು ಕಾಯ್ದುಕೊಂಡ ಬಗ್ಗೆ ಇತ್ತೀಚೆಗೆ ಭಾರತವನ್ನು ಪುಟಿನ್ ಶ್ಲಾಘಿಸಿದ್ದರು. ವಿದೇಶಾಂಗ ನೀತಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಉಲ್ಲೇಖಿಸಿ, ಮೋದಿ ಓರ್ವ ದೇಶಭಕ್ತ ಎಂದು ಬಣ್ಣಿಸಿದ್ದರು. ನರೇಂದ್ರ ಮೋದಿ ಅವರು ಒತ್ತಡಗಳ ನಡುವೆಯೂ ತಮ್ಮ ದೇಶ ಮತ್ತು ಜನರ ಹಿತಾಸಕ್ತಿಗೆ ಪೂರಕವಾಗಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಲು ಸಮರ್ಥರಾಗಿರುವ ವಿಶ್ವದ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಪುಟಿನ್ ಬಣ್ಣಿಸಿದ್ದರು.
ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತಟಸ್ಥ ನಿಲುವು ತಳೆದಿರುವುದು ಪುಟಿನ್ ಅವರ ಭಾರತದ ಕುರಿತ ಒಲವಿಗೆ ಕಾರಣವಾಗಿದೆ ಎನ್ನಲಾಗಿದೆ. ಯುದ್ಧವನ್ನು ಖಂಡಿಸಿ ರಷ್ಯಾದಿಂದ ಯುರೋಪ್ ದೇಶಗಳು ತೈಲ ಆಮದು ನಿಲ್ಲಿಸಿದಾಗ, ಭಾರತ ಹೆಚ್ಚೆಚ್ಚು ಕಚ್ಚಾ ತೈಲ ಆಮದಿಗೆ ಮುಂದಾಗಿತ್ತು. ಆ ಮೂಲಕ ರಷ್ಯಾಕ್ಕೆ ಪರೋಕ್ಷವಾಗಿ ನೆರವಾಗಿತ್ತು.
ಇದನ್ನೂ ಓದಿ: ಒತ್ತಡಗಳ ನಡುವೆಯೂ ವಿದೇಶಾಂಗ ನೀತಿಯಲ್ಲಿ ಸ್ವಾತಂತ್ರ್ಯ ಕಾಯ್ದುಕೊಂಡ ಭಾರತ: ಮೋದಿ ನಿಲುವಿಗೆ ಪುಟಿನ್ ಶ್ಲಾಘನೆ