ಪ್ರತಿಭಟನೆ ಭಾರತದ ಆಂತರಿಕ ರಾಜಕೀಯ ವಿಷಯ: ವಿಶ್ವಸಂಸ್ಥೆ ತಜ್ಞರ ಟೀಕೆಗಳನ್ನು ತಳ್ಳಿಹಾಕಿದ ಮಾರ್ಕೊ ರುಬಿಯೊ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಭಾರತದಲ್ಲಿನ ವಿದ್ಯಾರ್ಥಿ ಪ್ರತಿಭಟನೆಗಳನ್ನು ದೇಶದ ಆಂತರಿಕ ರಾಜಕೀಯ ವಿಷಯವೆಂದು ಬಣ್ಣಿಸಿದ್ದಾರೆ. ಈ ವಿಚಾರದಲ್ಲಿ ವಿಶ್ವಸಂಸ್ಥೆಯ ತಜ್ಞರ ಟೀಕೆಗಳನ್ನು ಅವರು ವ್ಯಂಗ್ಯವಾಗಿ ತಳ್ಳಿಹಾಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಸಹಜ; ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಎಂದು ರುಬಿಯೊ ಸ್ಪಷ್ಟಪಡಿಸಿದ್ದಾರೆ. ಬಾಹ್ಯ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಪ್ರತಿಭಟನೆ ಭಾರತದ ಆಂತರಿಕ ರಾಜಕೀಯ ವಿಷಯ: ವಿಶ್ವಸಂಸ್ಥೆ ತಜ್ಞರ ಟೀಕೆಗಳನ್ನು ತಳ್ಳಿಹಾಕಿದ ಮಾರ್ಕೊ ರುಬಿಯೊ
ಮಾರ್ಕೊ ರೂಬಿಯೊ
Image Credit source: PTI

Updated on: Oct 22, 2026 | 12:30 PM

ವಾಷಿಂಗ್ಟನ್, ಅಕ್ಟೋಬರ್ 22: ಭಾರತದಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಗೂ ಸರ್ಕಾರದ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ನಿರಾಕರಿಸಿದ್ದಾರೆ. ಇದು ಸಂಪೂರ್ಣವಾಗಿ ಭಾರತದ ದೇಶೀಯ ರಾಜಕೀಯ ವಿಷಯವಾಗಿದ್ದು, ಭಾರತದ ಜನರೇ ಇದನ್ನು ನಿರ್ಧರಿಸಬೇಕು ಮತ್ತು ನಿಭಾಯಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆಗಾಗಿ ಭಾರತ ಪ್ರವಾಸದಲ್ಲಿರುವ ರೂಬಿಯೊ, ಮುಂಬೈನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಈ ವಿಷಯವಾಗಿ ವಿಶ್ವಸಂಸ್ಥೆಯ ತಜ್ಞರು ಮಾಡಿರುವ ಟೀಕೆಗಳನ್ನು ತಳ್ಳಿಹಾಕಿದ್ದಲ್ಲದೆ, ಅವರನ್ನು ವ್ಯಂಗ್ಯವಾಗಿ ವಿರೋಧಾಭಾಸ ಎಂದು ಕರೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರೂಬಿಯೊ ಹೇಳಿದ್ದೇನು?
ಆಂತರಿಕ ವಿಷಯದಲ್ಲಿ ಹಸ್ತಕ್ಷೇಪವಿಲ್ಲ:ಇಲ್ಲ, ನಾನು ಅವರ ರಾಜಕೀಯದಲ್ಲಿ ಮೂಗು ತೂರಿಸುವುದಿಲ್ಲ. ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ನಿಯಮಿತವಾಗಿ ಚುನಾವಣೆಗಳು ನಡೆಯುತ್ತವೆ. ಹೀಗಾಗಿ ಅವರ ಆಂತರಿಕ ರಾಜಕೀಯ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಾನು ಬಯಸುವುದಿಲ್ಲ ಎಂದು ರೂಬಿಯೊ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಹಜ: ಅಮೆರಿಕದಲ್ಲೂ ಪ್ರತಿದಿನ ಪ್ರತಿಭಟನೆಗಳು ನಡೆಯುತ್ತವೆ. ಭಿನ್ನಾಭಿಪ್ರಾಯ ಮತ್ತು ಮುಕ್ತ ಚರ್ಚೆಗಳು ಪ್ರಜಾಪ್ರಭುತ್ವದ ಜೀವಂತಿಕೆಯ ಸಂಕೇತ. ಆದರೆ ಯುರೋಪಿನಲ್ಲಿ ನಡೆಯುತ್ತಿರುವಂತೆ ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡುವುದು ಮತ್ತು ಕಟ್ಟಡಗಳಿಗೆ ಬೆಂಕಿ ಹಚ್ಚುವಂತಹ ಗಲಭೆಗಳ ಬಗ್ಗೆ ನಾನು ಮಾತನಾಡುತ್ತಿಲ್ಲ ಎಂದು ಅವರು ಪ್ರತ್ಯೇಕಿಸಿ ವಿವರಿಸಿದರು.

ಪೋಸ್ಟ್

ವಿಶ್ವಸಂಸ್ಥೆ ತಜ್ಞರಿಗೆ ತಿರುಗೇಟು: ಇತ್ತೀಚೆಗೆ ಭಾರತದ ಪ್ರತಿಭಟನಾಕಾರರ ಮೇಲಿನ ಕ್ರಮಗಳ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿದಾಗ, ವಿಶ್ವಸಂಸ್ಥೆಯ ತಜ್ಞರೇ? ಅದು ಒಂದು ವಿರೋಧಾಭಾಸದ ಪದ ಎಂದು ಅಪಹಾಸ್ಯ ಮಾಡಿದರು. ಪಾಕಿಸ್ತಾನ ಸೇರಿದಂತೆ ಇತರ ದೇಶಗಳಲ್ಲಿ ನಡೆಯುವ ದಮನಗಳ ಬಗ್ಗೆ ಮಾತನಾಡದ ಜಾಗತಿಕ ಸಂಸ್ಥೆಗಳು ಭಾರತದಂತಹ ಮುಕ್ತ ಪ್ರಜಾಪ್ರಭುತ್ವದ ವಿಷಯದಲ್ಲಿ ಮೂಗು ತೂರಿಸುವುದನ್ನು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ: ಮುಂಬೈ, ಜಾಮ್‌ನಗರದಲ್ಲಿ ಮಹತ್ವದ ಚರ್ಚೆ

ಹಿನ್ನೆಲೆ ಮತ್ತು ಮಹತ್ವ
ರೂಬಿಯೊ ಅವರ ಭಾರತ ಭೇಟಿಗೂ ಮುನ್ನ, ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಆರು ಮಂದಿ ಸಂಸದರು ಅವರಿಗೆ ಮುಕ್ತ ಪತ್ರ ಬರೆದಿದ್ದರು. ಭಾರತದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಮೇಲಿನ ಪೊಲೀಸ್ ಕ್ರಮ, ಅಕ್ರಮ ಬಂಧನಗಳು ಮತ್ತು ಅಮೆರಿಕದಲ್ಲಿ ನಡೆದ ಪ್ರತಿಭಟನೆಗಳ ಮೇಲಿನ ಕಣ್ಗಾವಲು ಕುರಿತು ಭಾರತ ಸರ್ಕಾರದೊಂದಿಗೆ ಪ್ರಸ್ತಾಪಿಸುವಂತೆ ಅವರು ಒತ್ತಾಯಿಸಿದ್ದರು. ಆದರೆ, ಈ ಒತ್ತಡಗಳಿಗೆ ಮಣಿಯದ ಟ್ರಂಪ್ ಆಡಳಿತದ ವಿದೇಶಾಂಗ ಕಾರ್ಯದರ್ಶಿ ರೂಬಿಯೊ, ಭಾರತದ ಆಂತರಿಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸಮರ್ಥಿಸುವ ಮೂಲಕ ದ್ವಿಪಕ್ಷೀಯ ಸಂಬಂಧಗಳಿಗೆ ಯಾವುದೇ ಧಕ್ಕೆಯಾಗದಂತೆ ಸ್ಪಷ್ಟ ರಾಜತಾಂತ್ರಿಕ ನಿಲುವು ತಳೆದಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us