ಇಸ್ಲಾಮಾಬಾದ್: ಭಾರತ- ಪಾಕಿಸ್ತಾನಗಳೆರಡೂ ಶತ್ರು ರಾಷ್ಟ್ರಗಳೆಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಪದೇಪದೆ ಭಾರತವನ್ನು ಹೊಗಳುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (PM Imran Khan) ಪಾಕಿಸ್ತಾನಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನದ ಸಂಸತ್ ಇಂದು ಸಂಜೆ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಸಜ್ಜಾಗಿದೆ. ಈ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವ ಮೊದಲ ಪ್ರಧಾನಿಯಾಗಲಿದ್ದಾರೆ. ಈ ನಡುವೆ ಭಾರತವನ್ನು ಪದೇಪದೆ ಹೊಗಳುತ್ತಿರುವ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಷರೀಫ್ (Maryam Nawaj Sharif) ಕಿಡಿಕಾರಿದ್ದು, ಇಮ್ರಾನ್ ಖಾನ್ಗೆ ಭಾರತ ಅಷ್ಟೊಂದು ಇಷ್ಟವಾಗಿದ್ದರೆ ಅವರು ಭಾರತಕ್ಕೇ ಹೋಗಿ ನೆಲೆಸಲಿ ಎಂದು ಹೇಳಿದ್ದಾರೆ.
ಭಾರತ ಗೌರವದ ಪ್ರಜ್ಞೆ ಹೊಂದಿರುವ ರಾಷ್ಟ್ರ. ಯಾವುದೇ ಸೂಪರ್ ಪವರ್ ಕೂಡ ಭಾರತದ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ಜಗತ್ತಿನ ಯಾವುದೇ ಪ್ರಬಲ ರಾಷ್ಟ್ರ ಭಾರತಕ್ಕೆ ಷರತ್ತುಗಳನ್ನು ವಿಧಿಸಲು, ಅದಕ್ಕೆ ನಿರ್ದೇಶನ ನೀಡಲು ಆಗುವುದಿಲ್ಲ. ಭಾರತವು ಸೂಪರ್ ಪವರ್ ರಾಷ್ಟ್ರವಾಗಿದ್ದು, ಆ ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಯಾವ ದೇಶದಿಂದಲೂ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿಯಾಗಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷ ಮರ್ಯಮ್ ನವಾಜ್ ಷರೀಫ್ ಇಮ್ರಾನ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.
One person who is not in his senses anymore cannot be allowed to wreak havoc & bring the entire country down. This is not a joke. He should not be treated as PM or ex PM, he must be treated as a PSYCHOPATH who just to save his own skin is holding the entire country hostage. Shame
— Maryam Nawaz Sharif (@MaryamNSharif) April 9, 2022
ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, “ಭಾರತ ಮತ್ತು ಪಾಕಿಸ್ತಾನ ಒಟ್ಟಿಗೇ ಸ್ವಾತಂತ್ರ್ಯ ಪಡೆದವು. ಆದರೆ ಪಾಕಿಸ್ತಾನವನ್ನು ಟಿಶ್ಯೂ ಪೇಪರ್‌ನಂತೆ ಬಳಸಿ ಬಿಸಾಡಲಾಗಿದೆ. ಇಲ್ಲಿ ರಾಜಕೀಯ ಸ್ಥಿರತೆ ಎಂಬುದೇ ಇಲ್ಲ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಯಾವ ದೇಶವೂ ಮೂಗು ತೂರಿಸಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು. ಹಾಗಂತ ನಾನು ಅಮೆರಿಕದ ವಿರೋಧಿ ಅಲ್ಲ. ಆದರೆ ವಿದೇಶಿ ಶಕ್ತಿಗಳು ನನ್ನ ನೇತೃತ್ವದ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದವು. ಈಗ ಪಾಕಿಸ್ತಾನದಲ್ಲಿ ನಡೆದಿರುವ ಬೆಳವಣಿಗೆಗಳು ನಮ್ಮ ಸೌರ್ವಭೌಮತ್ವದ ಮೇಲಿನ ದಾಳಿಯಾಗಿದೆ ಎಂದಿದ್ದರು.
ಯಾವುದೇ ಮಹಾಶಕ್ತಿ (ಸೂಪರ್ ಪವರ್) ಭಾರತವನ್ನು ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಏನನ್ನೂ ಮಾಡುವಂತೆ ಒತ್ತಾಯಿಸುವುದಿಲ್ಲ. ನಿರ್ಬಂಧಗಳ ಹೊರತಾಗಿಯೂ ಭಾರತ ದೇಶ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಭಾರತವನ್ನು ಯಾರೂ ನಿರ್ದೇಶಿಸಲು ಸಾಧ್ಯವಿಲ್ಲ. ಯುರೋಪಿಯನ್ ಯೂನಿಯನ್ ರಾಯಭಾರಿಗಳು ಇಲ್ಲಿ ಏನು ಹೇಳಿದರೋ ಅದನ್ನು ಭಾರತಕ್ಕೂ ಹೇಳಲು ಸಾಧ್ಯವೇ? ಭಾರತವು ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಅವರಿಗೆ ಸಾಧ್ಯವಾಗಲಿಲ್ಲ ಎಂದು ಇಮ್ರಾನ್ ಖಾನ್ ಟೀಕಿಸಿದ್ದರು.
ಇಮ್ರಾನ್ ಖಾನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮರ್ಯಮ್ ನವಾಜ್ ಷರೀಫ್, ಇಮ್ರಾನ್ ಖಾನ್ಗೆ ಹುಚ್ಚು ಹಿಡಿದಿದೆ. ಅವರೊಬ್ಬ ಸೈಕೋಪಾಥ್. ತನ್ನ ಅಧಿಕಾರ ಹೋದದ್ದನ್ನು ನೋಡಿ ಹುಚ್ಚು ಹಿಡಿದ ಇಮ್ರಾನ್ ಖಾನ್ ಅವರನ್ನು ಅವರದೇ ಪಕ್ಷದಿಂದ ಹೊರಹಾಕಲಾಗಿದೆ. ಅವರು ಭಾರತವನ್ನು ತುಂಬಾ ಇಷ್ಟಪಟ್ಟರೆ ಪಾಕಿಸ್ತಾನವನ್ನು ಬಿಟ್ಟು ಭಾರತಕ್ಕೆ ಹೋಗಿ ಜೀವಿಸಬಹುದು ಎಂದು ಹೇಳಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದು ಇದೇ ಮೊದಲಲ್ಲ. ಕಳೆದ ವಾರ ಅವರು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಗಳಿದ್ದರು. ಸದನದಲ್ಲಿ ಬಹುಮತವನ್ನು ಕಳೆದುಕೊಂಡಿರುವ 69 ವರ್ಷದ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್ ತಮ್ಮ ಸೋಲನ್ನು ಒಪ್ಪಿಕೊಂಡಂತೆ ತೋರುತ್ತಿದೆ. ಅವರು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ಪಾಕಿಸ್ತಾನದ ಯಾವೊಬ್ಬ ಪ್ರಧಾನಿಯೂ ಇದುವರೆಗೆ ಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ಗಮನಾರ್ಹ.
ಇದನ್ನೂ ಓದಿ: Pakistan Political Crisis ಸುಪ್ರೀಂಕೋರ್ಟ್ ಆದೇಶದಿಂದ ನಿರಾಶೆಗೊಂಡಿದ್ದರೂ, ತೀರ್ಪನ್ನು ಗೌರವಿಸುತ್ತೇನೆ: ಇಮ್ರಾನ್ ಖಾನ್
Published On - 5:27 pm, Sat, 9 April 22