ಜಗತ್ತಿನ ಯಾವುದೇ ಮಹಾನ್ ಶಕ್ತಿಶಾಲಿ ದೇಶಗಳೂ ಭಾರತಕ್ಕೆ ಷರತ್ತು ವಿಧಿಸಲು ಸಾಧ್ಯವಿಲ್ಲ; ಮತ್ತೆ ಹೊಗಳಿದ ಇಮ್ರಾನ್ ಖಾನ್
ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದವು. ಇನ್ನೇನು ಅವರ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮತದಾನವಾಗಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾಗ, ಸಂಸತ್ತಿನ ಉಪ ಸಭಾಪತಿ ಖಾಸಿಂ ಸೂರಿ ಒಂದು ವಿಭಿನ್ನ ಹೆಜ್ಜೆ ಇಟ್ಟಿದ್ದರು
ಇತ್ತೀಚೆಗಷ್ಟೇ ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದೀಗ ಮತ್ತೊಮ್ಮೆ ಭಾರತವನ್ನು ಹೊಗಳಿದ್ದಾರೆ. ಯಾವುದೇ ಮಹಾಶಕ್ತಿಯೂ (Super Power) ಭಾರತದ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ಜಗತ್ತಿನ ಯಾವುದೇ ಪ್ರಬಲ ರಾಷ್ಟ್ರ ಭಾರತಕ್ಕೆ ಷರತ್ತುಗಳನ್ನು ವಿಧಿಸಲು, ಅದಕ್ಕೆ ನಿರ್ದೇಶನ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಭಾರತ ಯಾವುದೇ ದೇಶದ ಪರ ನಿಲ್ಲಲು ನಿರಾಕರಿಸಿತು. ದೇಶದ ಜನರ ಹಿತಾಸಕ್ತಿ ದೃಷ್ಟಿಯಿಂದ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿತು. ಅದನ್ನು ಯಾವುದೇ ಶಕ್ತಿಶಾಲಿ ರಾಷ್ಟ್ರಗಳೂ ಪ್ರಶ್ನೆ ಮಾಡಲು ಸಾಧ್ಯವಾಗಲಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನ ರಷ್ಯಾದ ವಿರುದ್ಧ ನಿಲ್ಲಬೇಕು, ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ವಿರುದ್ಧ ಮಾತನಾಡಬೇಕು ಎಂದು ಯುರೋಪಿಯನ್ ಒಕ್ಕೂಟದ ರಾಯಭಾರಿಗಳು ಒತ್ತಡ ಹೇರಿದರು. ಆದರೆ ಅದೇ ರೀತಿಯ ಒತ್ತಡವನ್ನು ಭಾರತದ ಮೇಲೆ ಹೇರುವಷ್ಟು ಧೈರ್ಯವನ್ನು ಅವರು ತೋರದಾದರು. ಯಾಕೆಂದರೆ ಭಾರತವೊಂದು ಸಾರ್ವಭೌಮ ರಾಷ್ಟ್ರ. ನನಗೂ ಅದೇ ಇಷ್ಟ, ಇನ್ಯಾವುದೋ ರಾಷ್ಟ್ರದ ಸಲುವಾಗಿ ನಮ್ಮ ದೇಶದ ಜನರು ಸಾಯುವಂತಾಗಬಾರದು. ಪಾಕಿಸ್ತಾನದ ವಿದೇಶಾಂಗ ನೀತಿಯೂ ಸಾರ್ವಭೌಮವಾಗಿರಬೇಕು ಎಂದೂ ಇಮ್ರಾನ್ ಖಾನ್ ಹೇಳಿದ್ದಾರೆ.
ನಾನು ರಷ್ಯಾಕ್ಕೆ ಭೇಟಿ ನೀಡಿದ್ದಕ್ಕೆ ಯುಎಸ್ ಅಸಮಾಧಾನಗೊಂಡಿದೆ. ಯುಎಸ್ ಪಾಕಿಸ್ತಾನಕ್ಕೆ ಮಿತ್ರರಾಷ್ಟ್ರವಾಗಿದ್ದರೂ ಅದು ಪಾಕ್ ಮೇಲೆ ಸುಮಾರು 400 ಡ್ರೋನ್ ದಾಳಿಯನ್ನು ನಡೆಸಿದೆ. ಪಾಕಿಸ್ತಾನದ ಪ್ರತಿಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿತು ಎಂದು ಇಮ್ರಾನ್ ಖಾನ್ ಯುಎಸ್ ವಿರುದ್ಧ ಹರಿಹಾಯ್ದರು. ಇಂದು ಇಮ್ರಾನ್ ಖಾನ್ ವಿರುದ್ಧ ನ್ಯಾಶನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತದಾನ ನಡೆಯಲಿದೆ. ಅದಕ್ಕೂ ಮೊದಲು ನಿನ್ನೆ (ಏಪ್ರಿಲ್ 8) ಅವರು ದೇಶವನ್ನುದ್ದೇಶಿಸಿ ಈ ವಿಚಾರಗಳನ್ನು ಮಾತನಾಡಿದರು. ಅಮೆರಿಕ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅಸಮಾಧಾನ ವ್ಯಕ್ತಪಡಿಸಿದ ಬಳಕವೂ ಅವರು ತಾವು ಅಮೆರಿಕ ವಿರೋಧಿಯಲ್ಲ ಎಂದೇ ಹೇಳಿದರು.
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಬೇಸರ
ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದವು. ಇನ್ನೇನು ಅವರ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮತದಾನವಾಗಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾಗ, ಸಂಸತ್ತಿನ ಉಪ ಸಭಾಪತಿ ಖಾಸಿಂ ಸೂರಿ ಒಂದು ವಿಭಿನ್ನ ಹೆಜ್ಜೆ ಇಟ್ಟಿದ್ದರು. ಇಮ್ರಾನ್ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದರು. ಆದರೆ ಹೀಗೆ ಮಾಡಿದ್ದು ಉಪಸಭಾಪತಿಯ ತಪ್ಪು ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ತೀರ್ಪಿನ ಬಗ್ಗೆ ಇಮ್ರಾನ್ ಖಾನ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ನಿರಾಶೆಯಾಯಿತು ಎಂದಿದ್ದಾರೆ. ಅದರಂತೆ ಇಂದು ಇಮ್ರಾನ್ ಖಾನ್ ಸಂಸತ್ತಿನಲ್ಲಿ ಬಹುಮತ ಸಾಬೀತು ಮಾಡಬೇಕಾಗಿದೆ. ವಿರೋಧ ಪಕ್ಷಗಳು 199 ಶಾಸಕರ ಬೆಂಬಲ ಹೊಂದಿದ್ದರೆ, ಆಡಳಿತ ಪಕ್ಷ ತೆಹ್ರೀಕ್-ಇ-ಇನ್ಸಾಫ್ 144 ಶಾಸಕರ ಬೆಂಬಲ ಹೊಂದಿದೆ. ಹೀಗಾಗಿ ಇಮ್ರಾನ್ಗೆ ಸಹಜವಾಗಿಯೇ ಇದೊಂದು ಅಗ್ನಿಪರೀಕ್ಷೆಯಾಗಿದೆ.
ಇದನ್ನೂ ಓದಿ: ‘ಉಗ್ರಂ’ ಮತ್ತು ‘ಸಲಾರ್’ ಕಥೆ ನಡುವೆ ಹೋಲಿಕೆ; ಎಲ್ಲ ಅನುಮಾನಗಳಿಗೆ ತೆರೆ ಎಳೆದ ಪ್ರಶಾಂತ್ ನೀಲ್
Published On - 9:53 am, Sat, 9 April 22