ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್​ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್​ಸ್ಕಿ

ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್​ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್​ಸ್ಕಿ
ರಷ್ಯಾ ಪಡೆಗಳು ಹಿಮ್ಮೆಟ್ಟಿದ್ದಂತೆ ಹಲವು ನಗರಗಳಲ್ಲಿ ನರಮೇಧದ ಸಾಕ್ಷ್ಯಗಳು ಸಿಗುತ್ತಿವೆ.

ಉಕ್ರೇನ್ ಪಡೆಗಳು ಮೇಲುಗೈ ಸಾಧಿಸಿದಂತೆ ರಷ್ಯಾ ಸೇನೆ ಹಿಮ್ಮೆಟ್ಟಿದ ನಂತರ ಬೆಳಕಿಗೆ ಬರುತ್ತಿರುವ ಹಿಂಸಾಚಾರದ ವಿವರಗಳು ವಿಶ್ವದೆಲ್ಲೆಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದ 10 ಪ್ರಮುಖ ಅಂಶಗಳಿವು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 04, 2022 | 12:22 PM

ಕೀವ್: ಉಕ್ರೇನ್​ನ ಹಲವು ನಗರಗಳಲ್ಲಿ ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ. ಉಕ್ರೇನ್ ಪ್ರಜೆಗಳ ವಿರುದ್ಧ ರಷ್ಯಾ ತೀವ್ರ ಹಿಂಸಾಚಾರ ನರಮೇಧ ನಡೆಸಿದೆ ಎಂದು ದೂರಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ, ಇದಕ್ಕೆ ಕಾರಣರಾದವರನ್ನು ಹುಡುಕಿ ಶಿಕ್ಷಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ನಮ್ಮ ನೆಲೆದ ಮೇಲೆ ದಾಳಿ ಮಾಡಿ ಮಾಡಿ, ನಾಗರಿಕರನ್ನು ಕೊಂದವರನ್ನು ಸುಮ್ಮನೆ ಬಿಡುವುದಿಲ್ಲ. ಅಪರಾಧಿಗಳ ಪತ್ತೆಗೆ ವಿಶೇಷ ವ್ಯವಸ್ಥೆ ರೂಪಿಸಿದ್ದೇವೆ ಎಂದು ಝೆಲೆನ್​ಸ್ಕಿ ಹೇಳಿದ್ದಾರೆ. ಉಕ್ರೇನ್ ಪಡೆಗಳು ಮೇಲುಗೈ ಸಾಧಿಸಿದಂತೆ ರಷ್ಯಾ ಸೇನೆ ಹಿಮ್ಮೆಟ್ಟಿದ ನಂತರ ಬೆಳಕಿಗೆ ಬರುತ್ತಿರುವ ಹಿಂಸಾಚಾರದ ವಿವರಗಳು ವಿಶ್ವದೆಲ್ಲೆಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದ 10 ಪ್ರಮುಖ ಅಂಶಗಳಿವು.

  1. ಉಕ್ರೇನ್​ನ ಬುಕಾ ನಗರದ ಚರ್ಚ್ ಒಂದರ ಆವರಣದಲ್ಲಿ ಸುಮಾರು 45 ಅಡಿ ಉದ್ದದ ಕಂದಕ ತೋಡಿರುವುದು ಉಪಗ್ರಹ ಚಿತ್ರಗಳಲ್ಲಿ ಪತ್ತೆಯಾಗಿತ್ತು. 280 ಶವಗಳಿದ್ದ ಈ ಕಂದಕವು ಸಾಮೂಹಿಕ ಸಮಾಧಿ ಎನ್ನುವುದು ದೃಢಪಟ್ಟಿದೆ. ರಷ್ಯಾ ಪಡೆಗಳು ಬುಕಾ ನಗರದಿಂದ ಭಾನುವಾರವಷ್ಟೇ (ಏಪ್ರಿಲ್ 3) ಹಿಮ್ಮೆಟ್ಟಿದ್ದವು. ಬುಕಾ ನಗರದಲ್ಲಿ ಸುಮಾರು 500 ನಾಗರಿಕರನ್ನು ರಷ್ಯಾ ಪಡೆಗಳು ಕೊಂದಿವೆ ಎಂದು ಉಕ್ರೇನ್ ದೂರಿದೆ.
  2. ಬುಕಾ ನಗರಕ್ಕೆ ಭೇಟಿ ನೀಡಿದ್ದ ರಾಯಿಟರ್ಸ್ ಪತ್ರಕರ್ತರು ಸಹ ಬೀದಿಗಳಲ್ಲಿ ಅನಾಥವಾಗಿ ಶವಗಳನ್ನು ಬಿದ್ದಿರುವುದನ್ನು ಗಮನಿಸಿದ್ದರು. ಉಕ್ರೇನ್ ರಾಜಧಾನಿ ಕೀವ್ ನಗರದ ವಾಯುವ್ಯಕ್ಕೆ 37 ಕಿಮೀ ದೂದಲ್ಲಿದೆ ಬುಕಾ ಪಟ್ಟಣ. ಸಮಾಧಿಯಲ್ಲಿರುವ ಕೆಲ ಶವಗಳ ಕೈ ಮತ್ತು ಕಾಲುಗಳು ಮಣ್ಣಿನಡಿಯಿಂದ ಹೊರಗೆ ಬಂದಿವೆ. ಗೋಡೆಗಳ ಮೇಲೆಲ್ಲಾ ರಕ್ತದ ಕಲೆಗಳು ಕಾಣಿಸುತ್ತಿವೆ.
  3. ರಷ್ಯಾ ಪಡೆಗಳು ಬುಕಾ ನಗರದಲ್ಲಿ ಭಾನುವಾರ ಸಾಮೂಹಿಕ ಹತ್ಯೆ ನಡೆಸಿವೆ ಎಂದು ಉಕ್ರೇನ್ ದೂರಿತ್ತು. ಉಕ್ರೇನ್ ಮೇಲಿನ ದಾಳಿಗಾಗಿ ಹೊಸದಾಗಿ ವ್ಯೂಹ ರಚಿಸಿಕೊಳ್ಳಲು ಮತ್ತು ಹೊಸದಾಗಿ ಇನ್ನಷ್ಟು ತುಕಡಿಗಳನ್ನು ನಿಯೋಜಿಸಲೆಂದು ರಷ್ಯಾ ಸಜ್ಜಾಗುತ್ತಿದೆ. ತಾತ್ಕಾಲಿಕವಾಗಿ ಉಕ್ರೇನ್​ನ ಕೆಲ ನಗರಗಳಿಂದ ಹಿಂದಕ್ಕೆ ಸರಿದಿದೆ.
  4. ಮತ್ತೊಂದು ನಾಟಕೀಯ ಬೆಳವಣಿಗೆಯಲ್ಲಿ ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ತಾಯಂದಿರನ್ನು ಉದ್ದೇಶಿಸಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮಾತನಾಡಿದ್ದಾರೆ. ನಿಮ್ಮ ಮಕ್ಕಳು ಮಾಡುತ್ತಿವುದು ಸರಿಯಿದೆಯೇ? ಬುಕಾ ಜನರು ಏನು ಅನ್ಯಾಯ ಮಾಡಿದ್ದರೆಂದು ನಿಮ್ಮ ಮಕ್ಕಳು ಅವರನ್ನು ಕೊಂದರು ಎಂದು ಝೆಲೆನ್​ಸ್ಕಿ ಪ್ರಶ್ನಿಸಿದ್ದಾರೆ.
  5. ರಷ್ಯಾ ಒಕ್ಕೂಟದ ಎಲ್ಲ ನಾಯಕರೇ ಇಲ್ಲೊಮ್ಮೆ ನೋಡಿ ಎಂದು ರಷ್ಯನ್ ಭಾಷೆಯಲ್ಲಿಯೇ ವಿಡಿಯೊ ಸಂದೇಶ ರವಾನಿಸಿರುವ ಝೆಲೆನ್​ಸ್ಕಿ, ‘ನಿಮ್ಮ ಆಜ್ಞೆಯ ಅನುಸಾರವಾಗಿಯೇ ಅಮಾಯಕ ಜನರನ್ನು ನಿಮ್ಮ ಸೇನೆ ಕೊಂದು ಹಾಕಿದೆ. ಕೈಗಳನ್ನು ದೇಹದಿಂದ ಪ್ರತ್ಯೇಕಿಸಿರುವ, ತಲೆಯ ಹಿಂಭಾಗಕ್ಕೆ ಹತ್ತಿರದಿಂದ ಗುಂಡಿಕ್ಕಿರುವ ಈ ದೃಢ್ಯಗಳನ್ನು ಒಮ್ಮೆ ನೋಡಿ ಎಂದು ಕರೆ ನೀಡಿದ್ದಾರೆ.
  6. ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಮೊದಲ ದಿನವೇ, ಅಂದರೆ ಫೆಬ್ರುವರಿ 24ರಂದೇ ಬುಕಾ ಪಟ್ಟಣವನ್ನು ರಷ್ಯಾ ವಶಪಡಿಸಿಕೊಂಡಿತ್ತು. ಆದರೆ ಬುಕಾದಲ್ಲಿ ನಾಗರಿಕನ್ನು ಕೊಲ್ಲಲಾಗಿದೆ ಎಂಬ ಆರೋಪವನ್ನು ರಷ್ಯಾ ಸಾರಾಸಗಟಾಗಿ ತಳ್ಳಿ ಹಾಕಿದೆ.
  7. ಉಕ್ರೇನ್​ನ ಒಂದು ಸಾಮಾನ್ಯ ನಗರ ಬುಕಾ. ಈ ಸಾಮಾನ್ಯ ನಗರದ ಸಾಮಾನ್ಯ ಜನರಿಂದ ನಿಮಗೆ ಏನು ಅಪಚಾರವಾಗಿತ್ತು? ಬುಕಾ ಪಟ್ಟಣವು ರಷ್ಯಾಕ್ಕೆ ಏನು ತೊಂದರೆ ಕೊಟ್ಟಿತ್ತು ಎಂದು ಝೆಲೆನ್​ಸ್ಕಿ ರಷ್ಯಾ ಸೈನಿಕರ ತಾಯಂದಿರನ್ನು ಪ್ರಶ್ನಿಸಿದ್ದಾರೆ.
  8. ಉಕ್ರೇನ್​ನಲ್ಲಿ ರಷ್ಯಾ ನಡೆಸಿರುವ ದೌರ್ಜನ್ಯಕ್ಕೆ ಕಾರಣರಾದವರನ್ನು ಸೂಕ್ತ ರೀತಿಯಲ್ಲಿ ಶಿಕ್ಷಿಸಲಾಗುವುದು. ಇದಕ್ಕೆ ವ್ಯವಸ್ಥೆಯೊಂದನ್ನು ರೂಪಿಸಿದ್ದೇವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರು, ತನಿಖಾಧಿಕಾರಿಗಳು, ವಕೀಲರು ಮತ್ತು ನ್ಯಾಯಾಧೀಶರು ಈ ತಂಡದಲ್ಲಿದ್ದಾರೆ. ಉಕ್ರೇನ್ ಜನರಿಗೆ ಹಿಂಸೆ ಕೊಟ್ಟವರನ್ನು ನ್ಯಾಯದ ಚೌಕಟ್ಟಿಗೆ ತಂದೇ ತರುತ್ತೇನೆ ಎಂದು ಝೆಲೆನ್​ಸ್ಕಿ ಹೇಳಿದರು.
  9. ರಷ್ಯಾದಿಂದ ಮತ್ತೆ ವಶಕ್ಕೆ ತೆಗೆದುಕೊಂಡಿರುವ ಬುಕಾ ಮತ್ತು ಇತರ ನಗರ-ಪಟ್ಟಣಗಳಲ್ಲಿ ಜನರ ಬದುಕಿಗೆ ಬೇಕಿರುವ ಅತ್ಯಗತ್ಯ ಸೌಲಭ್ಯಗಳ ಮರುಸ್ಥಾಪನೆಗಾಗಿ ಉಕ್ರೇನ್ ಸರ್ಕಾರ ಶ್ರಮಿಸುತ್ತಿದೆ. ವಿದ್ಯುತ್ ಮತ್ತು ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಯುದ್ಧದಲ್ಲಿ ಉಕ್ರೇನ್ ಗೆಲುವು ಸಾಧಿಸುತ್ತಿದೆ ಎಂದು ಝೆಲೆನ್​ಸ್ಕಿ ಹೇಳಿದರು.
  10. ಒಂದು ಇಡೀ ದೇಶವನ್ನು ಅದರ ಜನಗಳ ಸಹಿತ ನಿರ್ಮೂಲನ ಮಾಡಬೇಕೆಂದು ರಷ್ಯಾ ಚಿಂತನೆ ನಡೆಸಿದೆ. ಉಕ್ರೇನ್​ನ ವೈವಿಧ್ಯತೆಯನ್ನು ಸಹಿಸಲು ರಷ್ಯಾಕ್ಕೆ ಆಗುತ್ತಿಲ್ಲ ಎಂದು ಝೆಲೆನ್​ಸ್ಕಿ ದೂರಿದ್ದಾರೆ. ಉಕ್ರೇನ್​ನಲ್ಲಿ ರಷ್ಯಾ ಸೇನೆ ನಡೆಸಿರುವ ದೌರ್ಜನ್ಯಗಳ ಬಗ್ಗೆ ವಿಡಿಯೊ ಸಾಕ್ಟ್ಯಗಳನ್ನು ಝೆಲೆನ್​ಸ್ಕಿ ನಿಯಮಿತವಾಗಿ ಬಿಡುಗಡೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಷ್ಯಾ ವಾಯುಗಡಿ ಪ್ರವೇಶಿಸಿ ಉಕ್ರೇನ್​ನ ಸೇನಾ ಹೆಲಿಕಾಪ್ಟರ್: ಇಂಧನ ಸ್ಥಾವರದ ಮೇಲೆ ಬಾಂಬ್ ದಾಳಿ

ಇದನ್ನೂ ಓದಿ: ಮೋದಿ- ಸೆರ್ಗೆ ಲಾವ್ರೊವ್ ಭೇಟಿ: ಉಕ್ರೇನ್ ಹಿಂಸಾಚಾರವನ್ನು ಕೊನೆಗಾಣಿಸಿ; ಶಾಂತಿ ಪ್ರಯತ್ನಗಳಿಗೆ ಸಹಕರಿಸಲು ಭಾರತ ಸಿದ್ಧ ಎಂದ ಪ್ರಧಾನಿ

Follow us on

Related Stories

Most Read Stories

Click on your DTH Provider to Add TV9 Kannada