AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka: ಮುಳುಗುತ್ತಿರುವ ದೇಶಕ್ಕೆ ಎಲ್ಲಿದೆ ಆಸರೆ: ಶ್ರೀಲಂಕಾ ಆರ್ಥಿಕ ಕುಸಿತದ ನಿಜವಾದ ಕಾರಣವೇನು?

ಶ್ರೀಲಂಕಾ ಬಿಕ್ಕಟ್ಟಿನಲ್ಲಿ ವಿಶ್ವದ ಎಲ್ಲ ದೇಶಗಳಿಗೂ ಎರಡು ಮುಖ್ಯಪಾಠಗಳಿವೆ. ಸರ್ಕಾರಗಳು ತಳೆಯುವ ಕಠಿಣ ನಿಲುವುಗಳಿಂದ ಸದ್ಯದ ಮಟ್ಟಿಗೆ ಕಷ್ಟ ಅನುಭವಿಸಬೇಕಾದರೂ, ದೂರದೃಷ್ಟಿಯ ನಿರ್ಧಾರಗಳು ದೀರ್ಘಾವಧಿಯಲ್ಲಿ ದೇಶದ ಹಿತ ಕಾಪಾಡುತ್ತವೆ.

Sri Lanka: ಮುಳುಗುತ್ತಿರುವ ದೇಶಕ್ಕೆ ಎಲ್ಲಿದೆ ಆಸರೆ: ಶ್ರೀಲಂಕಾ ಆರ್ಥಿಕ ಕುಸಿತದ ನಿಜವಾದ ಕಾರಣವೇನು?
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 04, 2022 | 11:02 AM

Share

ಇತ್ತೀಚಿನ ದಿನಗಳಲ್ಲಿ ವಿಶ್ವ ಕಂಡ ಅತ್ಯಂತ ಕೆಟ್ಟ ಆರ್ಥಿಕ ಕುಸಿತಕ್ಕೆ ಇದೀಗ ಜಗತ್ತು ಸಾಕ್ಷಿಯಾಗಿದೆ. ಭಾರತದ ನೆರೆಯಲ್ಲಿರುವ ಶ್ರೀಲಂಕಾ ದೇಶವು ಅನುಭವಿಸುತ್ತಿರುವ ಪರಿಸ್ಥಿತಿ, ಅಲ್ಲಿನ ಜನರ ಸಂಕಷ್ಟದ ಬಗ್ಗೆ ಹಲವು ದೇಶಗಳು ಮರುಕ ತೋರುತ್ತಿವೆ. ಹಾಗೆಂದು ಸಾಲ ಕೊಟ್ಟು ಸಹಾಯ ಮಾಡಲು ಭಾರತ ಮತ್ತು ಚೀನಾ ಹೊರತುಪಡಿಸಿ ಯಾರೂ ಮುಂದೆ ಬರುತ್ತಿಲ್ಲ. ತೀರಿಸುವ ಸಾಮರ್ಥ್ಯ ಇಲ್ಲದವರು ಕಷ್ಟ ಅನುಭವಿಸುತ್ತಿದ್ದಾಗ ‘ಅಯ್ಯೋ ಪಾಪ’ ಎಂದು ಸುಮ್ಮನಾಗುವುದು ಸುಲಭ. ಇಂದು ಜಗತ್ತು ಮಾಡುತ್ತಿರುವುದು ಅದನ್ನೇ. ವಿಶ್ವ ಹಣಕಾಸು ನಿಧಿ (International Monetary Fund – IMF) ಮೂಲಕ ತುಸು ನೆರವು ಪಡೆದು ಸಾವರಿಸಿಕೊಳ್ಳಲು ಶ್ರೀಲಂಕಾ ಆಡಳಿತ ಮುಂದಾಗಿದೆಯಾದರೂ ಸಹಾಯದ ಬಗ್ಗೆ ಸ್ಪಷ್ಟ ಚಿತ್ರಣ ಈವರೆಗೆ ಸಿಕ್ಕಿಲ್ಲ. ಆರ್ಥಿಕತೆಯನ್ನು ನಿರ್ವಹಿಸಲು ಸರ್ಕಾರಗಳು ಮಾಡುವ ಸತತ ತಪ್ಪಿನಿಂದ ಜನರ ಬದುಕು ಹೇಗೆ ಕಂಗಾಲಾಗುತ್ತದೆ ಎನ್ನುವುದಕ್ಕೆ ಶ್ರೀಲಂಕಾದ ಇಂದಿನ ಪರಿಸ್ಥಿತಿ ಜೀವಂತ ಉದಾಹರಣೆಯಾಗಿದೆ. 

  1. ಶ್ರೀಲಂಕಾದ ಭೌಗೋಳಿಕತೆ, ಜನಸಂಖ್ಯೆ ವಿವರ ಏನು? ಶ್ರೀಲಂಕಾದ ಒಟ್ಟು ವಿಸ್ತೀರ್ಣ 65,610 ಚ ಕಿಮೀ. ಶ್ರೀಲಂಕಾದ ಜನಸಂಖ್ಯೆ 2.15 ಕೋಟಿ (2,15,71,745). ಈ ಪೈಕಿ 1.06 ಕೋಟಿ (1,06,62,786) ಪುರುಷರು ಮತ್ತು 1.09 ಕೋಟಿ ಮಹಿಳೆಯರು (1,09,48,768) ಇದ್ದಾರೆ.
  2. ಹೇಗಿದೆ ಶ್ರೀಲಂಕಾ ಪರಿಸ್ಥಿತಿ? ಅಕ್ಕಿ, ಬೇಳೆ, ಸೀಮೆಎಣ್ಣೆ, ಪೆಟ್ರೋಲ್, ಸಿಲಿಂಡರ್ ಸೇರಿದಂತೆ ಜನರ ನಿತ್ಯದ ಬದುಕಿಗೆ ಅಗತ್ಯವಿರುವ ಯಾವುದೇ ವಸ್ತು ಶ್ರೀಲಂಕಾದಲ್ಲಿ ಸುಲಭವಾಗಿ ಸಿಗುತ್ತಿಲ್ಲ. ಎಲ್ಲದಕ್ಕೂ ಉದ್ದನೆ ಪಾಳಿ, ಮಿತಿಮೀರಿದ ಧಾರಣೆ. ಅಡುಗೆ ಅನಿಲ ಸಿಲಿಂಡರ್ ವಿತರಣೆಗೆ ಏಜೆನ್ಸಿಗಳು ಪಟ್ಟಣಗಳಲ್ಲಿ ದಿನಕ್ಕೆ 300 ಟೋಕನ್ ನೀಡುವ ಪದ್ಧತಿ ಜಾರಿಗೆ ತಂದಿವೆ. ಸಾವಿರಕ್ಕೂ ಹೆಚ್ಚು ಜನರು ನಸುಕಿನ 4 ಗಂಟೆಯಿಂದಲೇ ಪಾಳಿ ಹಚ್ಚಿ ನಿಂತಿರುತ್ತಾರೆ. ಬಹುತೇಕ ಜೀವನಾವಶ್ಯಕ ಔಷಧಿಗಳು ಶ್ರೀಲಂಕಾದಿಂದ ಕಣ್ಮರೆಯಾಗಿವೆ. 12 ಪ್ಯಾರಾಸೆಟಮಾಲ್ ಮಾತ್ರೆಗಳಿರುವ ಒಂದು ಸ್ಟ್ರಿಪ್​ಗೆ 420 ರೂಪಾಯಿ (ಶ್ರೀಲಂಕಾ ಕರೆನ್ಸಿ) ತೆರಬೇಕಾಗಿದೆ. ಒಟ್ಟಾರೆ ಪರಿಸ್ಥಿತಿ ಹದಗೆಟ್ಟಿದ್ದು ದೈನಂದಿನ ಬದುಕು ದುಸ್ತರವಾಗಿದೆ.
  3. ಏಕಿಂಥ ಪರಿಸ್ಥಿತಿ ಉದ್ಭವಿಸಿತು? ಶ್ರೀಲಂಕಾದ ಇಂದಿನ ದುಸ್ಥಿತಿಯ ಹಿಂದೆ ಹಲವು ವರ್ಷಗಳ ದುರಾಡಳಿತದ ಛಾಯೆಯಿದೆ. ದ್ವಿಮುಖ ವಿತ್ತೀಯ ಕೊರತೆ (Twin Deficits) ಅದರಲ್ಲಿ ಅತಿಮುಖ್ಯವಾದ ಕಾರಣ. ದೇಶೀಯ ಬಜೆಟ್​ನಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತಿತ್ತು (Current Account Defecit). ವಿದೇಶಿ ನಿಧಿ ನಿರ್ವಹಣೆಯಲ್ಲಿಯೂ ಸಾಲ ಮರುಪಾವತಿ, ಬಡ್ಡಿ ಪಾವತಿ ಮತ್ತು ಆಮದು ಮಾಡಿಕೊಂಡ ಉತ್ಪನ್ನಗಳಿಗೆ ಪಾವತಿಸಬೇಕಾದ ಮೊತ್ತಕ್ಕೆ ಅಂದರೆ ವೆಚ್ಚ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಈ ಮೊತ್ತಕ್ಕೆ ಹೋಲಿಸಿದರೆ ರಫ್ತು ಮಾಡುವ ಉತ್ಪನ್ನಗಳು ಮತ್ತು ಸೇವೆಗಳಿಂದ ದೇಶ (ದೇಶದ ಜನರು) ಗಳಿಸುವ ಆದಾಯದ ಪ್ರಮಾಣ ಕಡಿಮೆಯಾಗಿ, ಇದರಲ್ಲಿಯೂ ಕೊರತೆ ಕಾಣಿಸಿಕೊಂಡಿತು. ದೇಶದ ರಾಷ್ಟ್ರೀಯ ವೆಚ್ಚವು, ರಾಷ್ಟ್ರೀಯ ಆದಾಯಕ್ಕಿಂತಲೂ ಸತತವಾಗಿ ಹೆಚ್ಚಾಗುತ್ತಲೇ ಹೋಗಿದ್ದು ಇಂದಿನ ಆರ್ಥಿಕ ಬಿಕ್ಕಟ್ಟಿಗೆ ಮುಖ್ಯ ಕಾರಣವಾಗಿದೆ.
  4. ಕುಸಿತದ ಹಿಂದಿನ ಕಾರಣಗಳೇನು? ಬಜೆಟ್​ ರೂಪಿಸುವಲ್ಲಿ ವಿತ್ತೀಯ ಶಿಸ್ತು ನಿರ್ಲಕ್ಷಿಸಿದ್ದು ಸರ್ಕಾರ ಮಾಡಿದ ಮೊದಲ ತಪ್ಪು. ಇದರ ಜೊತೆಗೆ ರಾಜಪಕ್ಸ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಚುನಾವಣಾ ಭರವಸೆಯಂತೆ ತೆರಿಗೆ ಕಡಿತ ಘೋಷಿಸಿತು. ಈ ಘೋಷಣೆ ಹೊರಬಿದ್ದ ಕೆಲ ಸಮಯದಲ್ಲೇ ವಿಶ್ವದೆಲ್ಲೆಡೆ ಕೊವಿಡ್ ಪಿಡುವ ಹರಡಿದ್ದರಿಂದ ಆರ್ಥಿಕ ಹಿಂಜರಿಕೆ ಕಾಣಿಸಿಕೊಂಡಿತು. ಪ್ರವಾಸೋದ್ಯಮವೇ ಶ್ರೀಲಂಕಾದ ಪ್ರಮುಖ ಆದಾಯ ಮೂಲ. ಕೊರೊನಾದ ಎರಡು ಅಲೆಗಳು ಈ ಆದಾಯ ಮೂಲವನ್ನು ಬತ್ತಿಸಿತು. ವಿದೇಶಗಳಲ್ಲಿ ಇರುವ ಶ್ರೀಲಂಕಾದ ಜನರು ದುಡಿದು ಕಳಿಸುವ ಹಣ ಅಲ್ಲಿನ ಆರ್ಥಿಕತೆಯ ಮತ್ತೊಂದು ಆಧಾರ ಸ್ತಂಭ. ಈ ಆಧಾರವನ್ನೂ ಕೊರೊನಾ ಕಸಿದುಕೊಂಡಿತು. ಇತರ ದೇಶಗಳಲ್ಲಿದ್ದ ಹಲವರು ಕೊರೊನಾ ಪಿಡುಗಿನ ವೇಳೆ ಉದ್ಯೋಗ ಕಳೆದುಕೊಂಡರು. ಕ್ರೆಡಿಟ್ ರೇಟಿಂಗ್ ಕಂಪನಿಗಳು ವರ್ಷದಿಂದ ವರ್ಷಕ್ಕೆ ಶ್ರೀಲಂಕಾದ ರೇಟಿಂಗ್ ಕಡಿಮೆ ಮಾಡಿದ್ದರಿಂದ ಸರ್ಕಾರ ಪಾವತಿಸಬೇಕಾದ ಬಡ್ಡಿ ಪ್ರಮಾಣ ಹೆಚ್ಚಾಯಿತು. ಅಷ್ಟೇ ಅಲ್ಲ, ಇತರ ದೇಶಗಳಿಂದ ಸಾಲವೂ ಸುಲಭವಾಗಿ ಹುಟ್ಟುತ್ತಿರಲಿಲ್ಲ. ಗಾಯದ ಮೇಲೆ ಬರೆ ಎಳೆದಂತೆ 2021ರಲ್ಲಿ ಶ್ರೀಲಂಕಾ ಸರ್ಕಾರವು ರಾಸಾಯನಿಕ ಗೊಬ್ಬರ ಬಳಕೆಯನ್ನು ನಿಷೇಧಿಸಿತು. ಅಲ್ಲಿನ ಕೃಷಿ ಉತ್ಪನ್ನಗಳ ಉತ್ಪಾದನೆಯೂ ಏಕಾಏಕಿ ಕಡಿಮೆಯಾಗುವುದರಿಂದ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿತು. ಅದಾಗಲೇ ಹದಗೆಟ್ಟಿದ್ದ ಜನರ ಬದುಕು, ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
  5. ವಿದೇಶಗಳೊಂದಿಗೆ ಶ್ರೀಲಂಕಾದ ವ್ಯವಹಾರ ಹೇಗಿದೆ? ಕಳೆದ ಫೆಬ್ರುವರಿ ತಿಂಗಳಲ್ಲಿ ಶ್ರೀಲಂಕಾ ಬಳಿ 2.31 ಶತಕೋಟಿ ಅಮೆರಿಕ ಡಾಲರ್​ನಷ್ಟು ವಿದೇಶಿ ಮೀಸಲು ನಿಧಿ ಇತ್ತು. ಆದರೆ ದೇಶದ ಮೇಲಿದ್ದ ಸಾಲದ ಹೊರೆಯು 12.55 ಶತಕೋಟಿ ಅಮೆರಿಕ ಡಾಲರ್. ಈ ಪೈಕಿ 4 ಶತಕೋಟಿ ಡಾಲರ್ ಮೊತ್ತದ ಸಾಲವನ್ನು ಇದೇ ವರ್ಷ ತೀರಿಸಬೇಕಿದೆ. ತೀರಿಸಬೇಕಾದ ಸಾಲದ ಪೈಕಿ 1 ಶತಕೋಟಿ ಡಾಲರ್​ ಮೊತ್ತವು ಅಂತರರಾಷ್ಟ್ರೀಯ ಸಾವರಿನ್ ಬಾಂಡ್ (international sovereign bond – ISB) ರೂಪದಲ್ಲಿತ್ತು. ಈ ಬಾಂಡ್ ಜುಲೈ ತಿಂಗಳಲ್ಲಿ ಮೆಚ್ಯೂರ್ ಆಗುವುದರಲ್ಲಿದ್ದ ಕಾರಣ, ತುರ್ತಾಗಿ ಹಣ ಹೊಂದಿಸಲೇಬೇಕಾದ ಅನಿವಾರ್ಯತೆಗೆ ಶ್ರೀಲಂಕಾ ಸಿಲುಕಿತು. ಸಾಲದ ಮೊತ್ತ ವಿಪರೀತ ಎನ್ನುವಷ್ಟು ಹೆಚ್ಚಾಗಿರುವ ಕಾರಣ ಶ್ರೀಲಂಕಾ ಸದ್ಯದ ಪರಿಸ್ಥಿತಿಯಲ್ಲಿ ಸಾಲ ತೀರಿಸಲಾರದು ಎಂದು ವಿಶ್ವ ಹಣಕಾಸು ಸಂಸ್ಥೆ ವಿಶ್ಲೇಷಿಸಿತು. ಇದರಿಂದಾಗಿ ಹೊಸದಾಗಿ ಸಾಲ ಹುಟ್ಟುವುದು, ವಿದೇಶಗಳಿಂದ ಆಮದು ಮಾಡಿಕೊಳ್ಳುವುದು ಶ್ರೀಲಂಕಾಕ್ಕೆ ಕಷ್ಟವಾಯಿತು.
  6. ಇದ್ದಕ್ಕಿದ್ದಂತೆ ಬಿಕ್ಕಟ್ಟು ಹೆಚ್ಚಾಗಿದ್ದು ಏಕೆ? ಶ್ರೀಲಂಕಾದಲ್ಲಿ ಇಂಥದ್ದೊಂದು ಪರಿಸ್ಥಿತಿ ಉದ್ಭವಿಸಬಹುದು ಎಂದು ಈ ಹಿಂದೆಯೇ ಅಂದಾಜಿಸಿದ್ದ ಹಲವು ತಜ್ಞರು, ಸರ್ಕಾರ ಮತ್ತು ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್​ಗೆ ವಿಶ್ವ ಹಣಕಾಸು ಸಂಸ್ಥೆಯಿಂದ ಸಹಾಯ ಯಾಚಿಸುವಂತೆ ಸಲಹೆ ನೀಡಿದ್ದರು. ಈ ಎಚ್ಚರಿಕೆಯನ್ನು ಶ್ರೀಲಂಕಾ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಕಚ್ಚಾ ತೈಲದ ಬೆಲೆ ಒಮ್ಮೆಲೆ ಏರಿಕೆ ಕಂಡಿದ್ದು ಶ್ರೀಲಂಕಾದ ಆರ್ಥಿಕತೆಯಲ್ಲಿ ತಲ್ಲಣಗಳನ್ನೇ ಸೃಷ್ಟಿಸಿತು. ಶ್ರೀಲಂಕಾ ಸರ್ಕಾರವು ತರಾತುರಿಯಲ್ಲಿ ತನ್ನ ಕರೆನ್ಸಿಯ ಅಪಮೌಲ್ಯೀಕರಣ ಮಾಡಿತು, ಹೆಚ್ಚು ನಗದು ಮುದ್ರಿಸಿತು. ಇದರಿಂದ ಬಿಕ್ಕಟ್ಟು ಶಮನವಾಗುವ ಬದಲು ಮತ್ತಷ್ಟು ಹೆಚ್ಚಾಯಿತು. ಹಣದುಬ್ಬರ ಮಿತಿಮೀರಿ ಬೆಲೆಏರಿಕೆಯಿಂದ ಜನರು ಕಂಗಾಲಾದರು. ಬಿಕ್ಕಷ್ಟು ತೀವ್ರಗೊಳ್ಳಲು ಸರ್ಕಾರದ ಈ ನಿರ್ಧಾರ ಮುಖ್ಯ ಕಾರಣವಾಯಿತು.
  7. ಭಾರತದಿಂದ ಏನೆಲ್ಲಾ ಸಹಾಯ ಸಿಗುತ್ತಿದೆ? ಭಾರತ ಸರ್ಕಾರ 5 ಕೋಟಿ ಅಮೆರಿಕನ್ ಡಾಲರ್ ಮೊತ್ತದಷ್ಟು ಡೀಸೆಲ್ ಅನ್ನು ಸಾಲದ ರೂಪದಲ್ಲಿ ಪೂರೈಸುತ್ತಿದೆ. 100 ಕೋಟಿ ಡಾಲರ್ ಮೊತ್ತದಷ್ಟು ಆಹಾರ, ಔಷಧಿ ಮತ್ತು ಇತರ ಜೀವನಾವಶ್ಯಕ ವಸ್ತುಗಳನ್ನು ಸಾಲದ ರೂಪದಲ್ಲಿ ಒದಗಿಸಲು ಭಾರತ ಸರ್ಕಾರ ಒಪ್ಪಿಕೊಂಡಿದೆ. ಇನ್ನೂ 100 ಕೋಟಿ ಡಾಲರ್ ನೆರವು ನೀಡಬೇಕೆಂದು ಶ್ರೀಲಂಕಾ ಸರ್ಕಾರ ಭಾರತ ಸರ್ಕಾರವನ್ನು ಕೋರಿದೆ.
  8. ಚೀನಾ ನೆರವಾಗುತ್ತಿಲ್ಲವೇ? ಚೀನಾದಿಂದ ಈಗಾಗಲೇ ಶ್ರೀಲಂಕಾ ದೊಡ್ಡಮಟ್ಟದ ಸಾಲ ಪಡೆದಿದೆ. ಶ್ರೀಲಂಕಾದ ಇಂದಿನ ಸ್ಥಿತಿಗೆ ಚೀನಾ ಸಹ ಕಾರಣ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಈ ಎಲ್ಲದರ ನಡುವೆಯೂ ಚೀನಾದ ನೆರವನ್ನು ಶ್ರೀಲಂಕಾ ಮತ್ತೆ ಕೋರಿದೆ. ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್​ಗೆ ಚೀನಾ ಸರ್ಕಾರವು 1.5 ಶತಕೋಟಿ ಡಾಲರ್ ಮೊತ್ತದ ಕರೆನ್ಸಿ ಸ್ವಾಪ್ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಿಂದ ಶ್ರೀಲಂಕಾಕ್ಕೆ 10 ಶತಕೋಟಿ ಯುವಾನ್ (ಚೀನಾ ಕರೆನ್ಸಿ) ಸಿಗಲಿದೆ. ಇದನ್ನು ಬಳಸಿಕೊಂಡು ಚೀನಾದಿಂದ ಅಗತ್ಯ ವಸ್ತುಗಳನ್ನು ಶ್ರೀಲಂಕಾ ಖರೀದಿಸಬಹುದಾಗಿದೆ. ಇದರ ಜೊತೆಗೆ ಹೊಸದಾಗಿ 3.8 ಶತಕೋಟಿ ಡಾಲರ್ ಸಾಲ ನೀಡುವ ಪ್ರಸ್ತಾವವನ್ನು ಚೀನಾ ಸರ್ಕಾರ ಪರಿಶೀಲಿಸುತ್ತಿದೆ.
  9. ಭಾರತ, ಕರ್ನಾಟಕಕ್ಕೆ ಏನಿದೆ ಪಾಠ? ಉಕ್ರೇನ್ ಮತ್ತು ಶ್ರೀಲಂಕಾ ಬಿಕ್ಕಟ್ಟಿನಲ್ಲಿ ವಿಶ್ವದ ಎಲ್ಲ ದೇಶಗಳಿಗೂ ಎರಡು ಮುಖ್ಯಪಾಠಗಳಿವೆ. ಪ್ರಬಲ ದೇಶವೊಂದು ದಂಡೆತ್ತಿ ಬಂದರೆ ವಿಶ್ವದ ಎಲ್ಲ ದೇಶಗಳೂ ಸಹಾಯಕ್ಕೆ ಹಿಂಜರಿಯುತ್ತವೆ ಎಂಬುದು ಉಕ್ರೇನ್ ಬಿಕ್ಕಟ್ಟಿನಿಂದ ಭಾರತಕ್ಕೆ ಮನವರಿಕೆಯಾಗಿದೆ. ಅದೇ ರೀತಿ ಸಾಲಮರುಪಾವತಿ ಸಾಮರ್ಥ್ಯ ಕಳೆದುಕೊಂಡರೆ ಎಲ್ಲಿಂದಲೂ ಸಹಾಯ ಹಸ್ತ ಒದಗಿ ಬರುವುದಿಲ್ಲ ಎಂಬುದನ್ನು ಶ್ರೀಲಂಕಾ ಬಿಕ್ಕಟ್ಟು ಸಾರಿ ಹೇಳಿದೆ. ವಿತ್ತೀಯ ಕೊರತೆ ನಿರ್ವಹಿಸುವಲ್ಲಿ ಈಗಾಗಲೇ ಕಠಿಣ ನೀತಿಗಳನ್ನು ಅಳವಡಿಸಿಕೊಂಡಿರುವ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳ ನಿರ್ಧಾರ ಸರಿಯಿದೆ ಎಂದು ಹಲವು ಆರ್ಥಿಕ ತಜ್ಞರು ಮಾತನಾಡಲು ಆರಂಭಿಸಿದ್ದಾರೆ. ಸರ್ಕಾರಗಳು ತಳೆಯುವ ಕಠಿಣ ನಿಲುವುಗಳಿಂದ ಸದ್ಯದ ಮಟ್ಟಿಗೆ ಕಷ್ಟ ಅನುಭವಿಸಬೇಕಾದರೂ, ದೂರದೃಷ್ಟಿಯ ನಿರ್ಧಾರಗಳು ದೀರ್ಘಾವಧಿಯಲ್ಲಿ ದೇಶದ ಹಿತ ಕಾಪಾಡುತ್ತವೆ.

ಇದನ್ನೂ ಓದಿ: ಶ್ರೀಲಂಕಾ ಸಚಿವ ಸಂಪುಟ ಸಾಮೂಹಿಕ ರಾಜೀನಾಮೆ: ಎಲ್ಲೆಡೆ ಅಶಾಂತಿ, ನಿಯಂತ್ರಣಕ್ಕೆ ಸಿಗುತ್ತಿಲ್ಲ ಆರ್ಥಿಕ ಬಿಕ್ಕಟ್ಟು

ಇದನ್ನೂ ಓದಿ: Crisis in Sri Lanka 1ಕೆಜಿ ಅಕ್ಕಿಗೆ ₹220, ಹಾಲಿನ ಪುಡಿಗೆ ₹1900, ಒಂದು ಮೊಟ್ಟೆಗೆ ₹30; ಶ್ರೀಲಂಕಾದಲ್ಲಿ ದಿನಸಿ ಬೆಲೆ ಧುತ್ತನೆ ಏರಿಕೆ

Published On - 10:48 am, Mon, 4 April 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!