Financial Crisis In Sri Lanka: ಲಂಕಾ ಜನರ ಬಳಿ ಕಾಸಿಲ್ಲ, ಬೇಕಾದದ್ದು ಸಿಗ್ತಿಲ್ಲ, ಸಿಕ್ಕರೂ ಕೊಳ್ಳಲು ಆಗ್ತಿಲ್ಲ
ಶ್ರೀಲಂಕಾದಲ್ಲಿ ಹಣದುಬ್ಬರ ದರ ವಿಪರೀತ ಆಗಿ ಅಲ್ಲಿನ ಜನ ಕಂಗಾಲಾಗಿದ್ದಾರೆ. ಹಣದ ಖರೀದಿ ಮೌಲ್ಯ ಕುಸಿದು ಹೋಗಿದ್ದು, ಆರ್ಥಿಕ ಬಿಕ್ಕಟ್ಟಿನ ಭಾರಕ್ಕೆ ದ್ವೀಪರಾಷ್ಟ್ರದಲ್ಲಿ ಅಲ್ಲೋಲ-ಕಲ್ಲೋಲ ಆಗಿದೆ.
ಹಣದುಬ್ಬರದ ಏರಿಕೆ ಮತ್ತು ದುರ್ಬಲ ಕರೆನ್ಸಿಯ ಕಾರಣಕ್ಕೆ ಶ್ರೀಲಂಕಾದಲ್ಲಿ (Sri Lanka) ಅಗತ್ಯ ವಸ್ತುಗಳ ಬೆಲೆ ಅಕ್ಷರಶಃ ಗಗನಕ್ಕೇರಿದೆ. ದ್ವೀಪ ರಾಷ್ಟ್ರದ ಆರ್ಥಿಕತೆ ದಿನದಿನಕ್ಕೂ ಹದಗೆಡುತ್ತಲೇ ಇದೆ. ಶ್ರೀಲಂಕಾದಲ್ಲಿ ಇಂಧನ, ಆಹಾರ ಮತ್ತು ಔಷಧ ಖರೀದಿಸಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಅಷ್ಟೆಲ್ಲ ಕಾದು ನಿಂತರೂ ಹಲವರು ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ. ಒಂದೋ ಮಳಿಗೆಗಳಲ್ಲಿ ವಸ್ತುಗಳು ದೊರೆಯುತ್ತಿಲ್ಲ ಅಥವಾ ಅವರ ಬಳಿ ಹಣ ಇಲ್ಲ. ಈ ಬಗ್ಗೆ ವರದಿ ಮಾಡುವ ಸಲುವಾಗಿ “ಇಂಡಿಯಾ ಟುಡೇ”ಯಿಂದ ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿನ ಸೂಪರ್ ಮಾರ್ಕೆಟ್ನಲ್ಲಿ ಸನ್ನಿವೇಶದ ಪರಿಶೀಲನೆ ಮಾಡಿದೆ. ದಿನ ಬಳಕೆ ವಸ್ತುಗಳಿಗಾಗಿ ಶ್ರೀಲಂಕನ್ನರು ಎಷ್ಟು ಪಾವತಿಸುತ್ತಿದ್ದಾರೆ ಎಂಬ ರಿಯಾಲಿಟಿ ಚೆಕ್ ಮಾಡಿದೆ.
ಇತ್ತೀಚಿನ ವಾರಗಳಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟಾಗಿದ್ದರೆ, ಅಕ್ಕಿ, ಗೋಧಿಯನ್ನು ಕ್ರಮವಾಗಿ ಕೇಜಿಗೆ 220 ರೂಪಾಯಿ ಮತ್ತು 190 ರೂಪಾಯಿ ಆಗಿದೆ. ಅದು ಶ್ರೀಲಂಕಾದ ರೂಪಾಯಿ ಲೆಕ್ಕದಲ್ಲಿ. ಶ್ರೀಲಂಕಾದ 1 ರೂಪಾಯಿ ಅಂದರೆ ಭಾರತದ 25 ಪೈಸೆಯ ಲೆಕ್ಕ. ಶ್ರೀಲಂಕಾದಲ್ಲಿ ಕೇಜಿ ಅಕ್ಕಿ 220 ರೂಪಾಯಿ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 55. ಅದೇ ರೀತಿ ಗೋಧಿ 190 ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 47.50 ಆಗುತ್ತದೆ.
ಒಂದು ಕೇಜಿ ಸಕ್ಕರೆಗೆ 240 ರೂಪಾಯಿ (ಶ್ರೀಲಂಕಾ ಕರೆನ್ಸಿಯಲ್ಲಿ). ಕೊಬ್ಬರಿ ಎಣ್ಣೆ ಲೀಟರ್ಗೆ 850 ರೂಪಾಯಿ. ಒಂದು ಮೊಟ್ಟೆ 30. ಇನ್ನೂ ಗಾಬರಿ ಆಗುವಂಥ ವಿಚಾರ ಏನೆಂದರೆ, 1 ಕೇಜಿ ಹಾಲಿನ ಪೌಡರ್ 1900 ರೂಪಾಯಿ ಆಗಿದೆ. ಇಷ್ಟು ಸಾಕಲ್ಲವಾ? ಅಲ್ಲಿನ ಸಾಮಾನ್ಯರ ಜನಜೀವನ ಎಷ್ಟು ಭಯಾನಕ ಆಗಿದೆ ಎಂಬುದನ್ನು ತಿಳಿಯುವುದಕ್ಕೆ. ಈಗಾಗಲೇ ಶ್ರೀಲಂಕಾದ ಹಣದುಬ್ಬರ ದರ ಶೇ 17.5 ಆಗಿದೆ ಫೆಬ್ರವರಿಯಲ್ಲಿ. ಇನ್ನು ಆಹಾರ ಹಣದುಬ್ಬರ ಶೇ 25ರಷ್ಟಾಗಿದೆ. ಅದಕ್ಕೆ ಕಾರಣವಾಗಿರುವುದು ವಿಪರೀತ ಜಾಸ್ತಿ ಆಗಿರುವ ಆಹಾರ ಮತ್ತು ಬೇಳೆಕಾಳುಗಳ ಬೆಲೆ. ಅಷ್ಟೇ ಅಲ್ಲ, ಔಷಧಗಳು ಮತ್ತು ಹಾಲಿನ ಪುಡಿ ಬೆಲೆ ಏರಿಕೆ ಸಹ ತನ್ನದೇ ಕೊಡುಗೆ ನೀಡಿದೆ.
ಇಂಥ ಸ್ಥಿತಿ ಏರ್ಪಟ್ಟರೆ ಸಾರ್ವಜನಿಕರಿಗೆ ಸಿಟ್ಟು ಬಾರದೆ ಇದ್ದೀತೆ? ದುಡ್ಡು ದುಡಿಯುವುದೇ ಕಷ್ಟ. ಹಾಗೊಂದು ವೇಳೆ ಇದ್ದು, ಅಂಗಡಿಗೆ ಹೋದರೂ ಬೇಕಾದದ್ದು ಸಿಗುತ್ತದೋ ಇಲ್ಲವೋ ಎಂಬ ಖಾತ್ರಿ ಇಲ್ಲ. ದೇಶದ ಬಹು ಭಾಗಗಳಲ್ಲಿ ಪ್ರತಿಭಟನೆಗಳಾಗುತ್ತಿವೆ. ರಾಜಧಾನಿ ಕೊಲಂಬೋ ಸೇರಿದಂತೆ ಎಲ್ಲಿಯೂ ಪರಿಸ್ಥಿತಿ ಚೆನ್ನಾಗಿಲ್ಲ. ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿ ವಿದ್ಯುತ್ ವ್ಯತ್ಯಯ ಈ ಎಲ್ಲದಕ್ಕೂ ರಾಜಪಕ್ಸ ಅವರ ಅಧಿಕಾರಾವಧಿಯನ್ನು ದೂಷಿಸುತ್ತಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ಸಚಿವ ಸಂಪುಟ ಸಾಮೂಹಿಕ ರಾಜೀನಾಮೆ: ಎಲ್ಲೆಡೆ ಅಶಾಂತಿ, ನಿಯಂತ್ರಣಕ್ಕೆ ಸಿಗುತ್ತಿಲ್ಲ ಆರ್ಥಿಕ ಬಿಕ್ಕಟ್ಟು