GST Compensation: ಕೇಂದ್ರದಿಂದ ರಾಜ್ಯಗಳಿಗೆ ಜಿಎಸ್ಟಿ ಪರಿಹಾರ 53,489 ಕೋಟಿ ರೂಪಾಯಿ ಬಾಕಿ
ಜಿಎಸ್ಟಿ ಪರಿಹಾರ ಸೆಸ್ ರೂಪದಲ್ಲಿ ಹಣಕಾಸು ವರ್ಷ 2022ರಲ್ಲಿ ಏಪ್ರಿಲ್ನಿಂದ ಜನವರಿ ಮಧ್ಯೆ 53849 ಕೋಟಿ ರೂಪಾಯಿ ಕೇಂದ್ರದಿಂದ ರಾಜ್ಯಗಳಿಗೆ ಬಾಕಿ ಉಳಿದಿದೆ ಎಂದು ತಿಳಿಸಲಾಗಿದೆ.
ಹಣಕಾಸು ವರ್ಷ 2021-22ಕ್ಕೆ ಕೇಂದ್ರದಿಂದ ರಾಜ್ಯಗಳಿಗೆ ಜಿಎಸ್ಟಿ ಪರಿಹಾರ (GST Compensation) 53,489 ಕೋಟಿ ರೂಪಾಯಿ ಬಾಕಿ ಇದೆ ಎಂದು ಹಣಕಾಸು ಸಚಿವಾಲಯದಿಂದ ಏಪ್ರಿಲ್ 4ನೇ ತಾರೀಕಿನಂದು ಲೋಕಸಭೆಯಲ್ಲಿ ತಿಳಿಸಲಾಗಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UT) ಪೈಕಿ 9ಕ್ಕೆ ಯಾವುದೇ ಬಾಕಿ ಇಲ್ಲ ಎಂದು ಹಣಕಾಸು ಸಚಿವಾಲಯ ಹಂಚಿಕೊಂಡಿರುವ ಡೇಟಾದಿಂದ ತಿಳಿದುಬಂದಿದೆ. ಈ ಪೈಕಿ ಅತಿ ಹೆಚ್ಚು ಬಾಕಿ ಉಳಿದಿರುವುದು ಮಹಾರಾಷ್ಟ್ರಕ್ಕೆ. 11,563 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರ ಪಾವತಿಸಬೇಕಿದೆ. ಆ ನಂತರದ ಸ್ಥಾನದಲ್ಲಿ ಉತ್ತರಪ್ರದೇಶ ಇದ್ದು, 6954 ಕೋಟಿ ರೂಪಾಯಿ ಪಾವತಿ ಮಾಡಬೇಕಿದೆ. 2021ರ ಏಪ್ರಿಲ್ನಿಂದ 2022ರ ಮಧ್ಯದ ಅವಧಿಯಲ್ಲಿ ರಾಜ್ಯ ಸರ್ಕಾರಗಳಿಗೆ ಪಾವತಿಸಬೇಕಾದ ಜಿಎಸ್ಟಿ ಪರಿಹಾರ ಬಾಕಿ ಇದಾಗಿದೆ. ಸಂಪೂರ್ಣ ವರ್ಷದ ಲೆಕ್ಕಕ್ಕೆ ತೆಗೆದುಕೊಂಡರೆ ಮತ್ತೂ ಹೆಚ್ಚಾಗುತ್ತದೆ.
ಜಿಎಸ್ಟಿ ಪರಿಹಾರ ವಿಚಾರವಾಗಿ ಕಳೆದ ಕೆಲವು ಸಮಯದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ತಿಕ್ಕಾಟ ನಡೆದಿದೆ. ಕಾನೂನಿನ ಪ್ರಕಾರ, ಐದು ವರ್ಷಗಳ ಅವಧಿಗೆ ರಾಜ್ಯಗಳಿಗೆ ಶೇ 14ರ ಆದಾಯ ಬೆಳವಣಿಗೆ ಖಾತ್ರಿ ನೀಡುತ್ತದೆ. ಇದು 2022ರ ಜೂನ್ ತನಕ ಅನ್ವಯಿಸುತ್ತದೆ. ಆದರೆ ಕೊವಿಡ್ ಕಾರಣಕ್ಕೆ ತೆರಿಗೆ ಆದಾಯ ಕುಸಿದಿತ್ತು ಮತ್ತು ಜಿಎಸ್ಟಿ ಪರಿಹಾರ ಸೆಸ್ ಪೂರ್ತಿ ನೆಲ ಕಚ್ಚಿತ್ತು. ಇದರಿಂದಾಗಿ ಕೇಂದ್ರ ಸರ್ಕಾರವು ಮಾರುಕಟ್ಟೆಯಿಂದ ಸಾಲ ಪಡೆಯುವಂತೆ ಒತ್ತಡ ಸೃಷ್ಟಿಯಾಗಿ, ರಾಜ್ಯಗಳಿಗೆ ನಿಧಿಯನ್ನು ದಾಟಿಸಬೇಕಾಯಿತು. ಹಣಕಾಸು ವರ್ಷ 2021ರಲ್ಲಿ ಕೇಂದ್ರ ಸರ್ಕಾರವು 1.10 ಲಕ್ಷ ಕೋಟಿ ಸಾಲ ಮತ್ತು ಹಣಕಾಸು ವರ್ಷ 2022ರಲ್ಲಿ 1.59 ಲಕ್ಷ ಕೋಟಿ ರೂಪಾಯಿ ಸಾಲ ಪಡೆದಿತ್ತು. ರಾಜ್ಯ ಸರ್ಕಾರಗಳ ಪರವಾಗಿ ಜಿಎಸ್ಟಿ ಪರಿಹಾರ ಸೆಸ್ ಸಂಗ್ರಹದ ಕೊರತೆಯನ್ನು ಹೊಂದಾಣಿಕೆ ಮಾಡಲು ಈ ಸಾಲ ಮಾಡಲಾಗಿದೆ.
“ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017ರ ಅಡಿಯಲ್ಲಿ ಜಿಎಸ್ಟಿ ಪರಿಹಾರ ಪಾವತಿಸಲು ಬದ್ಧವಾಗಿದೆ. ಇದರ ಬದಲಾವಣೆಯ ಕಾಲಘಟ್ಟದಲ್ಲಿ ಪರಿಹಾರ ಸೆಸ್ ಮೊತ್ತವನ್ನು ಐದು ವರ್ಷಕ್ಕೂ ಮೀರಿ ಜಿಎಸ್ಟಿ ಆದಾಯ ಕೊರತೆಯನ್ನು ಸರಿತೂಗಿಸಲು ಹಾಗೂ ವಿಶೇಷ ಗವಾಕ್ಷಿ ಯೋಜನೆ ಅಡಿಯಲ್ಲಿ ಪಡೆದ ಸಾಲ ಮರುಪಾವತಿಗೆ ಬಳಸಬಹುದು,” ಎಂದು ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: GST Collection: 2022ರ ಮಾರ್ಚ್ನಲ್ಲಿ 1.42 ಲಕ್ಷ ಕೋಟಿ ರೂ. ಸಂಗ್ರಹದ ಮೂಲಕ ಜಿಎಸ್ಟಿ ಆದಾಯ ಹೊಸ ದಾಖಲೆ