Josh Hazlewood: ಸೋಲಿನ ನಡುವೆ ಆರ್‌ಸಿಬಿಗೆ ಸಿಕ್ತು ಬಂಪರ್ ಸುದ್ದಿ: ರಜತ್ ಪಡೆಯಲ್ಲಿ ಸಂಭ್ರಮ
Josh Hazelwood Playoffs: ಐಪಿಎಲ್ 2025 ಪ್ಲೇಆಫ್ ಪಂದ್ಯಗಳಿಗೂ ಮುನ್ನ, ಆರ್‌ಸಿಬಿಗೆ ಒಂದು ಒಳ್ಳೆಯ ಸುದ್ದಿ ಬಂದಿದೆ. ಫಿಟ್ನೆಸ್ ಇಲ್ಲದ ಕಾರಣ ತಂಡದಿಂದ ಹೊರಗುಳಿದಿದ್ದ ತಂಡದ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್ ಪ್ಲೇಆಫ್ ಪಂದ್ಯಗಳಲ್ಲಿ ಮರಳಲಿದ್ದಾರೆ ಎಂದು ಹೇಳಲಾಗಿದೆ. ಪುನರ್ವಸತಿಗೆ ಒಳಗಾಗುತ್ತಿರುವ ಹ್ಯಾಜಲ್‌ವುಡ್ ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ

ಬೆಂಗಳೂರು (ಮೇ. 24): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ, ಟಾಪ್ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶ ಕೊಂಚ ಕಷ್ಟವಿದೆ. ಶುಕ್ರವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ಪರಿಣಾಮ ಬೆಂಗಳೂರು ತಂಡ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಆದರೆ, ರಜತ್ ಪಡೆ ಪ್ಲೇ ಆಫ್ ಆಡುವುದು ಖಚಿತ. ಪ್ಲೇಆಫ್‌ನಲ್ಲಿ ಯಾವ ತಂಡವನ್ನು ಎದುರಿಸುತ್ತಾರೆ ಎಂಬುದನ್ನು ನೋಡಬೇಕಿದೆ. ಏತನ್ಮಧ್ಯೆ, ಪ್ಲೇಆಫ್ ಪಂದ್ಯಗಳಿಗೂ ಮುನ್ನ, ಆರ್‌ಸಿಬಿಗೆ ಒಂದು ಒಳ್ಳೆಯ ಸುದ್ದಿ ಬಂದಿದೆ. ಫಿಟ್ನೆಸ್ ಇಲ್ಲದ ಕಾರಣ ತಂಡದಿಂದ ಹೊರಗುಳಿದಿದ್ದ ತಂಡದ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್ ಪ್ಲೇಆಫ್ ಪಂದ್ಯಗಳಲ್ಲಿ ಮರಳಲಿದ್ದಾರೆ ಎಂದು ಹೇಳಲಾಗಿದೆ.
ಹ್ಯಾಜಲ್‌ವುಡ್ ಬೌಲಿಂಗ್ ಅಭ್ಯಾಸ ಆರಂಭ
ಜೋಶ್ ಹ್ಯಾಜಲ್‌ವುಡ್ ಐಪಿಎಲ್ 2025 ರಲ್ಲಿ ಏಪ್ರಿಲ್ 27 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದರು, ನಂತರ ಮೇ 3 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಅವರನ್ನು ಹೊರಗಿಡಲಾಯಿತು. ಆ ಪಂದ್ಯದಲ್ಲಿ ಅವರಿಗೆ ಭುಜ ಮತ್ತು ಪಕ್ಕೆಲುಬು ಗಾಯ ಇರುವುದು ಗೊತ್ತಾಯಿತು. ಮೇ 9 ರಂದು ಐಪಿಎಲ್ ಸ್ಥಗಿತಗೊಂಡಾಗ ಹ್ಯಾಜಲ್‌ವುಡ್ ತಮ್ಮ ತವರು ಆಸ್ಟ್ರೇಲಿಯಾಕ್ಕೆ ಮರಳಿದರು ಮತ್ತು ಮೇ 17 ರಂದು ಸೀಸನ್ ಪುನರಾರಂಭವಾದ ನಂತರ ಮತ್ತೆ ತಂಡವನ್ನು ಸೇರಿಕೊಂಡಿಲ್ಲ.
ಸದ್ಯ ಇಎಸ್‌ಪಿಎನ್ ಕ್ರಿಕ್‌ಇನ್ಫೊ ಪ್ರಕಾರ, ಪುನರ್ವಸತಿಗೆ ಒಳಗಾಗುತ್ತಿರುವ ಹ್ಯಾಜಲ್‌ವುಡ್ ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ ಮತ್ತು ಪ್ಲೇಆಫ್‌ಗಳಿಗಾಗಿ ಆರ್‌ಸಿಬಿ ತಂಡವನ್ನು ಸೇರುವ ನಿರೀಕ್ಷೆಯಿದೆ, ಆದಾಗ್ಯೂ ಇದರ ಬಗ್ಗೆ ಅಧಿಕೃತ ಪ್ರಕಟಣೆ ನಿರೀಕ್ಷಿಸಲಾಗಿದೆ.
RCB vs SRH Turning Point: ದಿಢೀರ್ ಕುಸಿತ: ಆರ್‌ಸಿಬಿ ಸೋಲಿನ ಕಥೆ ಬರೆದ ಆ 5 ಎಸೆತ
ಐಪಿಎಲ್ 2025 ಸೀಸನ್ ಹ್ಯಾಜಲ್‌ವುಡ್ ಪ್ರದರ್ಶನ
ಐಪಿಎಲ್ 2025 ರ ಋತುವಿನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಜುರಿಗೆ ತುತ್ತಾಗುವ ಮೊದಲು ಇವರು ಒಟ್ಟು 10 ಪಂದ್ಯಗಳನ್ನು ಆಡಿದರು ಮತ್ತು ಇದರಲ್ಲಿ ಅವರು 17.27 ರ ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಹ್ಯಾಜಲ್‌ವುಡ್ ಪ್ರಸ್ತುತ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಅವರು ಪ್ಲೇಆಫ್‌ಗೆ ಮರಳಿದರೆ, ಈ ಋತುವಿನಲ್ಲಿ ಇದುವರೆಗೆ 13 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಪಡೆದಿರುವ ಪ್ರಸಿದ್ಧ್ ಕೃಷ್ಣ ಅವರು ಪ್ರಸ್ತುತ ಹೊಂದಿರುವ ನಂಬರ್ ಒನ್ ಸ್ಥಾನವನ್ನು ತಲುಪುವ ಅವಕಾಶವನ್ನು ಹೊಂದಿದ್ದಾರೆ.
ಇಂಜುರಿಗೆ ತುತ್ತಾದ ಟಿಮ್ ಡೇವಿಡ್:
ಹೈದರಾಬಾದ್ ತಂಡದ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ, ಟಿಮ್ ಡೇವಿಡ್ ಸ್ಕ್ವೇರ್ ಲೆಗ್ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಯಶ್ ದಯಾಳ್ ಎಸೆದ ಅದೇ ಓವರ್‌ನ ಮೊದಲ ಎಸೆತದಲ್ಲಿ, ಇಶಾನ್ ಕಿಶನ್ ಡೀಪ್ ಸ್ಕ್ವೇರ್ ಲೆಗ್ ಬೌಂಡರಿಯತ್ತ ಶಾಟ್ ಅನ್ನು ಹೊಡೆದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಟಿಮ್ ಡೇವಿಡ್ ಚೆಂಡನ್ನು ನಿಲ್ಲಿಸಿದರು ಆದರೆ ಅದೇ ಸಮಯದಲ್ಲಿ, ಅವರ ಮಂಡಿರಜ್ಜು ನೋವು ಕಾಣಿಸಿಕೊಂಡಿತು, ನಂತರ ಆರ್‌ಸಿಬಿ ತಂಡದ ವೈದ್ಯರು ಮೈದಾನಕ್ಕೆ ಬಂದು ಟಿಮ್ ಡೇವಿಡ್ ಅವರನ್ನು ಪರೀಕ್ಷಿಸಿದರು. ಆರ್‌ಸಿಬಿ ಗುರಿಯನ್ನು ಬೆನ್ನಟ್ಟುತ್ತಿದ್ದಾಗ ಕೂಡ ಟಿಮ್ ಡೇವಿಡ್ಗೆ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. 8ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದು 5 ಎಸೆತಗಳನ್ನು ಎದುರಿಸಿ ಕೇವಲ ಒಂದು ರನ್ ಗಳಿಸಲು ಸಾಧ್ಯವಾಯಿತಷ್ಟೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:06 am, Sat, 24 May 25