GST Collection: ಫೆಬ್ರವರಿ ತಿಂಗಳ ಜಿಎಸ್‌ಟಿ ಸಂಗ್ರಹ 1,33,026 ಕೋಟಿ; ಮೊದಲ ಬಾರಿ 10 ಸಾವಿರ ಕೋಟಿ ದಾಟಿದ ಸೆಸ್
2022ರ ಫೆಬ್ರವರಿ ತಿಂಗಳಲ್ಲಿ ಸರ್ಕಾರಕ್ಕೆ 1.33 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಸಂಗ್ರಹ ಆಗಿದೆ. ಆ ಬಗ್ಗೆ ವಿವರವಾದ ಮಾಹಿತಿ ಈ ವರದಿಯಲ್ಲಿದೆ.
2022ರ ಫೆಬ್ರವರಿ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್‌ಟಿ (GST) ಆದಾಯವು ರೂ. 1,33,026 ಕೋಟಿಗಳಾಗಿದ್ದು, ಇದರಲ್ಲಿ ಸಿಜಿಎಸ್ಟಿ (CGST) ರೂ. 24,435 ಕೋಟಿ, ಎಸ್ಜಿಎಸ್ಟಿ (SGST) ರೂ. 30,779 ಕೋಟಿ, ಐಜಿಎಸ್ಟಿ (IGST) ರೂ. 67,471 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ. 33,837 ಕೋಟಿ ಸೇರಿದಂತೆ) ಮತ್ತು ಸೆಸ್ ರೂ. 10,340 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ. 638 ಕೋಟಿ ಸೇರಿದಂತೆ) ಒಳಗೊಂಡಿದೆ. ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ ರೂ. 26,347 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ರೂ. 21,909 ಕೋಟಿ ಇತ್ಯರ್ಥ ಮಾಡಿದೆ. ನಿಯಮಿತ ಇತ್ಯರ್ಥದ ನಂತರ 2022ರ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿ ಗಾಗಿ ರೂ. 50,782 ಕೋಟಿ ಮತ್ತು ಎಸ್ಜಿಎಸ್ಟಿಗಾಗಿ ರೂ. 52,688 ಕೋಟಿ ಆಗಿದೆ.
2022ರ ಫೆಬ್ರವರಿ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇ 18ರಷ್ಟು ಹೆಚ್ಚಾಗಿದೆ ಮತ್ತು 2020ರ ಫೆಬ್ರವರಿಯಲ್ಲಿನ ಜಿಎಸ್‌ಟಿ ಆದಾಯಕ್ಕಿಂತ ಶೇ 26ರಷ್ಟು ಹೆಚ್ಚಾಗಿದೆ. ತಿಂಗಳ ಅವಧಿಯಲ್ಲಿ ಸರಕುಗಳ ಆಮದುಗಳಿಂದ ಆದಾಯವು ಶೇ 38ರಷ್ಟು ಹೆಚ್ಚಾಗಿದೆ ಮತ್ತು ಆದಾಯಗಳು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ 12ರಷ್ಟು ಹೆಚ್ಚಾಗಿದೆ.
ಫೆಬ್ರವರಿಯಲ್ಲಿ 28-ದಿನಗಳಿದ್ದು, ಸಾಮಾನ್ಯವಾಗಿ ಜನವರಿಗಿಂತ ಕಡಿಮೆ ಆದಾಯವನ್ನು ಹೊಂದಿದೆ. 2022ರ ಫೆಬ್ರವರಿಯಲ್ಲಿನ ಈ ಹೆಚ್ಚಿನ ಬೆಳವಣಿಗೆಯನ್ನು ಭಾಗಶಃ ಲಾಕ್‌ಡೌನ್‌ಗಳು, ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂಗಳು ಹಾಗೂ ಜನವರಿ 20ರ ಸುಮಾರಿಗೆ ಉತ್ತುಂಗಕ್ಕೇರಿದ ಓಮಿಕ್ರಾನ್ ಅಲೆಯಿಂದ ವಿವಿಧ ರಾಜ್ಯಗಳು ಜಾರಿಗೊಳಿಸಿದ ವಿವಿಧ ನಿರ್ಬಂಧಗಳ ಸಂದರ್ಭದಲ್ಲಿಯೂ ನೋಡಬೇಕಾಗುತ್ತದೆ.
ಇದು ಐದನೇ ಬಾರಿಗೆ ಜಿಎಸ್‌ಟಿ ಸಂಗ್ರಹ ರೂ. 1.30 ಲಕ್ಷ ಕೋಟಿ ದಾಟಿದೆ. ಜಿಎಸ್‌ಟಿ ಜಾರಿ ಆದಾಗಿನಿಂದ ಮೊದಲ ಬಾರಿಗೆ ಸೆಸ್ ಸಂಗ್ರಹವು ರೂ. 10,000 ಕೋಟಿ ಗಡಿ ದಾಟಿದ್ದು, ಇದು ಕೆಲವು ಪ್ರಮುಖ ವಲಯಗಳ ಚೇತರಿಕೆಯನ್ನು ಸೂಚಿಸುತ್ತದೆ, ವಿಶೇಷವಾಗಿ ವಾಹನ ಮಾರಾಟವನ್ನು ತೋರಿಸುತ್ತದೆ.
ಇದನ್ನೂ ಓದಿ: GST: ಜನವರಿಯಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ ರೂ. 1,38,394 ಕೋಟಿ; ಕಳೆದ ವರ್ಷಕ್ಕಿಂತ ಶೇ 15ರಷ್ಟು ಹೆಚ್ಚು