LIC IPO: ಅಕಾಲದಲ್ಲಿ ಬರುತ್ತಿದೆಯೇ ಎಲ್​ಐಸಿ ಐಪಿಒ: ಹೂಡಿಕೆ ತಜ್ಞರಿಂದ ಹಲವು ಪ್ರಶ್ನೆಗಳು

LIC IPO: ಅಕಾಲದಲ್ಲಿ ಬರುತ್ತಿದೆಯೇ ಎಲ್​ಐಸಿ ಐಪಿಒ: ಹೂಡಿಕೆ ತಜ್ಞರಿಂದ ಹಲವು ಪ್ರಶ್ನೆಗಳು
ಸಾಂದರ್ಭಿಕ ಚಿತ್ರ

ಎಲ್​ಐಸಿಯ ಒಟ್ಟು ಪಾಲಿಸಿದಾರರ ಸಂಖ್ಯೆಗೆ ಹೋಲಿಸಿದರೆ ತಮ್ಮ ಪಾಲಿಸಿಗೆ ಪಾನ್​ಕಾರ್ಡ್​ ಜೋಡಿಸಿಕೊಂಡವರ ಸಂಖ್ಯೆ ಕಡಿಮೆ. ಅವರ ಪೈಕಿ ಡಿಮ್ಯಾಟ್ ಖಾತೆ ಇರುವವರು ಇನ್ನೂ ಕಡಿಮೆ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 02, 2022 | 6:00 AM

ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (Department of Investment and Public Asset Management – DIPAM) ಎಲ್​ಐಸಿ ಐಪಿಒ (LIC IPO) ಘೋಷಣೆಗೆ ತುದಿಗಾಲಲ್ಲಿ ನಿಂತಿದೆ. ಅಗತ್ಯ ಸಿದ್ಧತೆಗಳನ್ನೆಲ್ಲಾ ಪೂರ್ಣಗೊಳಿಸಿದ್ದು, ಇದೇ ಆರ್ಥಿಕ ವರ್ಷದಲ್ಲಿ ಅಂದರೆ ಮಾರ್ಚ್ 31ರ ಒಳಗೆ ಎಲ್​ಐಸಿಯಿಂದ ಸರ್ಕಾರದ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಆರಂಭವಾಗಬೇಕು ಎಂಬ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಆದರೆ ಇಷ್ಟು ತರಾತುರಿ ಬೇಡ ಎಂಬ ಮಾತುಗಳೂ ಹಣಕಾಸು ಸಚಿವಾಲಯದಲ್ಲಿ ಕೇಳಿ ಬರುತ್ತಿವೆ. ಈ ವಿಚಾರವನ್ನು ಮನಿಕಂಟ್ರೋಲ್ ಡಾಟ್ ಕಾಮ್ ಜಾಲತಾಣ ವರದಿ ಮಾಡಿದೆ. ಎಲ್​ಐಸಿಯ ಒಟ್ಟು ಪಾಲಿಸಿದಾರರ ಸಂಖ್ಯೆಗೆ ಹೋಲಿಸಿದರೆ ತಮ್ಮ ಪಾಲಿಸಿಗೆ ಪಾನ್​ಕಾರ್ಡ್​ ಜೋಡಿಸಿಕೊಂಡವರ ಸಂಖ್ಯೆ ಕಡಿಮೆ. ಅವರ ಪೈಕಿ ಡಿಮ್ಯಾಟ್ ಖಾತೆ ಇರುವವರು ಇನ್ನೂ ಕಡಿಮೆ. ಹೀಗಾಗಿ ಎಲ್​ಐಸಿ ಐಪಿಒ ಘೋಷಣೆಯ ಅವಧಿ ತುಸು ಮುಂದೂಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಷ್ಯಾ-ಉಕ್ರೇನ್​ ನಡುವಣ ಸಂಘರ್ಷದ ಪರಿಣಾಮದಿಂದ ವಿಶ್ವ ಆರ್ಥಿಕತೆ ಹಿಂಜರಿತ ಕಾಣಬಹುದು ಎಂದು ಹೇಳಲಾಗುತ್ತಿದೆ. ಕಳೆದ ಹಲವು ತಿಂಗಳುಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Portfolio Investors – FPI) ಭಾರತವೂ ಸೇರಿದಂತೆ ಹಲವು ಷೇರುಪೇಟೆಗಳಿಂದ ಹೂಡಿಕೆ ಹಿಂದಕ್ಕೆ ಪಡೆಯುತ್ತಿದ್ದಾರೆ. ಷೇರುಪೇಟೆಯಲ್ಲಿ ಏರಿಳಿತಗಳ ಹೊಯ್ದಾಟ ಹೆಚ್ಚಾಗುತ್ತಿದೆ. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಮಾರ್ಚ್ ತಿಂಗಳು ದೊಡ್ಡಮಟ್ಟದ ಐಪಿಒಗೆ ಸೂಕ್ತ ಸಮಯ ಅಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಎಲ್​ಐಸಿಯಂಥ ಕಂಪನಿಯ ಐಪಿಒ ಬಿಡುಗಡೆ ಮಾಡಲು ಇದು ಸೂಕ್ತ ಸಮಯವಲ್ಲ ಎಂದು ಹೇಳಲು ಪ್ರಸ್ತಾಪವಾಗುತ್ತಿರುವ ಮುಖ್ಯ ಅಂಶಗಳಿವು.

ಎಲ್​ಐಸಿಗೆ ಸುಮಾರು 30 ಕೋಟಿ ಪಾಲಿಸಿದಾರರಿದ್ದಾರೆ. ಈ ಪೈಕಿ ಕೇವಲ 4 ಕೋಟಿ ಜನರು ಮಾತ್ರ ತಮ್ಮ ಪಾಲಿಸಿಗಳಿಗೆ ಪ್ಯಾನ್ ಕಾರ್ಡ್​ ಜೋಡಿಸಿದ್ದಾರೆ.ಡಿಮ್ಯಾಟ್ ಖಾತೆ ತೆರೆದವರ ಸಂಖ್ಯೆ ಇನ್ನೂ ಕಡಿಮೆ. ಜಾಹೀರಾತು ಕ್ಯಾಂಪನ್​ಗಳ ಮೂಲಕ ಪ್ಯಾನ್ ಕಾರ್ಡ್​ ಜೋಡಿಸುವಂತೆ ಮತ್ತು ಡಿಮ್ಯಾಟ್ ಖಾತೆ ತೆರೆಯುವಂತೆ ಎಲ್​ಐಸಿ ಪಾಲಿಸಿದಾರರ ಮನವೊಲಿಸಲು ಸತತ ಪ್ರಯತ್ನವನ್ನೇನೋ ಮಾಡುತ್ತಲೇ ಇದೆ. ಈ ಅಂಶವನ್ನು ಪಾಲಿಸಿದಾರರು ಗಂಭೀರವಾಗಿ ತೆಗೆದುಕೊಂಡಿರುವ ಸಾಧ್ಯತೆಯ ಬಗ್ಗೆ ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ. ಒಂದು ದೊಡ್ಡ ಕಂಪನಿಯ ಐಪಿಒ ಷೇರುಪೇಟೆಗೆ ಬರಲು ಇದು ಸೂಕ್ತ ಸಮಯ ಅಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಒಬ್ಬ ಅಧಿಕಾರಿ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರುಕಟ್ಟೆಯಿಂದ ಹಿಂದಕ್ಕೆ ಸರಿಯುತ್ತಿರುವ ಕಾಲದಲ್ಲಿ ಐಪಿಒಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕಳೆದ ಎರಡು ತಿಂಗಳಲ್ಲಿ ಭಾರತೀಯ ಷೇರುಪೇಟೆಯಿಂದ ಸುಮಾರು ₹ 64,461 ಕೋಟಿಯಷ್ಟು ಮೊತ್ತವನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಿಂದಕ್ಕೆ ಪಡೆದಿದ್ದಾರೆ. ಉದ್ಯಮಿಗಳು ಮುಂಗಡ ತೆರಿಗೆ ಘೋಷಿಸಿ, ಪಾವತಿಸುವ ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ನಗದು ಹರಿವು ಕಡಿಮೆ ಇರುತ್ತದೆ. ಹೀಗಾಗಿ ಇದು ಐಪಿಒಗಳನ್ನು ಘೋಷಿಸಲು ಸರಿಯಾದ ಸಮಯ ಆಗುವುದಿಲ್ಲ. ಇದೆಲ್ಲದರ ಜೊತೆಗೆ ರಷ್ಯಾ-ಉಕ್ರೇನ್​ ಸಂಘರ್ಷದ ಪರಿಣಾಮಗಳ ಬಗ್ಗೆ ಇರುವ ಅಸ್ಪಷ್ಟತೆಯ ಕಾರಣವೂ ಸೇರಿದೆ ಎನ್ನುತ್ತಾರೆ ಅವರು.

ಮಾರುಕಟ್ಟೆ ಪರಿಸ್ಥಿತಿ ಹೀಗಿರುವಾಗ ಲಿಸ್ಟ್ ಆಗುವ ಕಂಪನಿಗಳ ಷೇರುಗಳು ಅತ್ಯುತ್ತಮ ಬೆಲೆಗೆ ಲಿಸ್ಟ್ ಆಗುವ ಸಾಧ್ಯತೆಯೂ ಕಡಿಮೆ. ಇಂಥ ಸನ್ನಿವೇಶದಲ್ಲಿ ಬೇಡಿಕೆ ಕಡಿಮೆಯಾಗುವ ಅಪಾಯವೂ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಲಾಭದ ಉದ್ದೇಶದಿಂದ ಕಂಪನಿಯನ್ನು ಷೇರುಪೇಟೆಗೆ ತರಬೇಕೇ ವಿನಃ, ಬಂಡವಾಳ ಹಿಂಪಡೆಯುವ ಗುರಿಯ ಈಡೇರಿಕೆಗಾಗಿ ಅಲ್ಲ. ಈ ಸಂದರ್ಭದಲ್ಲಿ ಐಪಿಒ ಘೋಷಿಸುವುದು ಒಳ್ಳೆಯ ನಿರ್ಧಾರ ಆಗಬಹುದು ಎಂದು ನನಗೆ ಅನ್ನಿಸುವುದಿಲ್ಲ ಎಂಬ ಅವರ ಅಭಿಪ್ರಾಯವನ್ನೂ ಮನಿಕಂಟ್ರೋಲ್ ವರದಿ ಮಾಡಿದೆ.

ಇದನ್ನೂ ಓದಿ: LIC IPO: ಎಲ್​ಐಸಿ ಖಾಸಗೀಕರಣದಿಂದ ಭಾರತದ ಆರ್ಥಿಕತೆಗೆ, ಪಾಲಿಸಿದಾರರಿಗೆ ಹೆಚ್ಚು ನಷ್ಟ: ಸಿಪಿಎಂ ನಾಯಕ ಥಾಮಸ್ ಐಸಾಕ್

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಹೂಡಿಕೆಯಲ್ಲಿ ಲಾಭವೇ ಆಗುತ್ತೆ ಎಂಬ ಖಾತ್ರಿಯಿಲ್ಲ: ವೈಭವ್ ಅಗರ್​ವಾಲ್

Follow us on

Related Stories

Most Read Stories

Click on your DTH Provider to Add TV9 Kannada