Air India: ಏರ್​ ಇಂಡಿಯಾ ಸಿಇಒ ಹುದ್ದೆ ನಿರಾಕರಿಸಿದ ಟರ್ಕಿಯ ಇಲ್ಕರ್ ಅಯ್ಸಿ

ಟರ್ಕಿಶ್ ಏರ್​ಲೈನ್ಸ್​ನ ಇಲ್ಕರ್​ ಅಯ್ಸಿಸ್ ಏರ್​ಇಂಡಿಯಾದ ಎಂ.ಡಿ. ಮತ್ತು ಸಿಇಒ ಹುದ್ದೆಯನ್ನು ನಿರಾಕರಿಸಿದ್ದಾರೆ. ಕಳೆದ ತಿಂಗಳು ಏರ್​ಇಂಡಿಯಾವನ್ನು ಟಾಟಾ ಸಮೂಹ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

Air India: ಏರ್​ ಇಂಡಿಯಾ ಸಿಇಒ ಹುದ್ದೆ ನಿರಾಕರಿಸಿದ ಟರ್ಕಿಯ ಇಲ್ಕರ್ ಅಯ್ಸಿ
ಇಲ್ಕರ್ ಅಯ್ಸಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Mar 01, 2022 | 3:05 PM

ಟರ್ಕಿಯ ಇಲ್ಕರ್ ಅಯ್ಸಿ ಅವರು ಟಾಟಾ ಸಮೂಹದ ಒಡೆತನದಲ್ಲಿ ಇರುವ ಏರ್ ಇಂಡಿಯಾದ (Air India) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಲು ನಿರಾಕರಿಸಿದ್ದಾರೆ. ಅವರ ನೇಮಕಾತಿಯ ಘೋಷಣೆಯು ಭಾರತದಲ್ಲಿ ವಿರೋಧಕ್ಕೆ ಕಾರಣವಾಯಿತು. ಕಳೆದ ತಿಂಗಳು, 2.4 ಶತಕೋಟಿ ಡಾಲರ್ ಇಕ್ವಿಟಿ ಮತ್ತು ಸಾಲದ ಒಪ್ಪಂದದಲ್ಲಿ ಸಾಲದ ಹೊರೆ ಹೊಂದಿದ್ದ ಏರ್ ಇಂಡಿಯಾವನ್ನು ತೆಕ್ಕೆಗೆ ತೆಗೆದುಕೊಂಡ ಟಾಟಾ ಸನ್ಸ್​ನಿಂದ ಟರ್ಕಿಯ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಅಯ್ಸಿಯನ್ನು ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಆಗಿ ನೇಮಿಸುವುದಾಗಿ ಘೋಷಿಸಿತ್ತು. ಅಂದಹಾಗೆ ಏರ್​ಇಂಡಿಯಾ ವಿಮಾನ ಯಾನ ಸಂಸ್ಥೆಯನ್ನು ಟಾಟಾ ಸಮೂಹಕ್ಕೆ ಮಾರಾಟ ಮಾಡಿದ ನಂತರ ಪುನಶ್ಚೇತನಕ್ಕಾಗಿ ಪ್ರಯಾಣವನ್ನು ಪ್ರಾರಂಭಿಸಿದೆ.

ಏರ್ ಇಂಡಿಯಾವನ್ನು ಜನವರಿಯಲ್ಲಿ ಅದರ ಸಂಸ್ಥಾಪಕ ಸಂಸ್ಥೆಯಾದ ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಯಿತು. ಅದು ಕೂಡ ಇದು ರಾಷ್ಟ್ರೀಕರಣಗೊಂಡ ಸುಮಾರು ಏಳು ದಶಕಗಳ ನಂತರ. ಸಾಲದ ಹೊರೆಯಲ್ಲಿ ನಲುಗಿದ್ದ ಏರ್​ ಇಂಡಿಯಾವನ್ನು ಮಾರಾಟ ಮಾಡಲು ಸರ್ಕಾರವು ವರ್ಷಗಳ ಹೋರಾಟ ಮಾಡಿ, ಅಂತೂ ಆ ಪ್ರಯತ್ನವನ್ನು ಮುಗಿಸಿತು. ಇದು 1953ರಲ್ಲಿ ರಾಷ್ಟ್ರೀಕರಣಗೊಳ್ಳುವ ಮೊದಲು 1932ರಲ್ಲಿ ಟಾಟಾ ಏರ್ ಸರ್ವೀಸಸ್ ಆಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಇದೀಗ ಏರ್ ಇಂಡಿಯಾವು ಮರಳಿ ಮೂಲ ಮಾಲೀಕರ ತೆಕ್ಕೆಗೆ ಬಂದಂತಾಯಿತು.

ಈ ವರ್ಷ ಏಪ್ರಿಲ್ 1 ಅಥವಾ ಅದಕ್ಕೂ ಮೊದಲು ಅಯ್ಸಿ ತಮ್ಮ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಹೊಸ ಹುದ್ದೆಗೆ ಅವರ ನೇಮಕಾತಿಯು ಅಗತ್ಯ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಸಹ ಹೇಳಿಕೆಯಲ್ಲಿ ಸೇರಿಸಲಾಗಿತ್ತು. 51 ವರ್ಷ ವಯಸ್ಸಿನ ಅಯ್ಸಿ, ಟರ್ಕಿಯ ಬಿಲ್ಕೆಂಟ್ ವಿಶ್ವವಿದ್ಯಾಲಯ ಮತ್ತು ಯು.ಕೆ. ಲೀಡ್ಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. ಅವರು ಟರ್ಕಿಯ ಮರ್ಮರ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ವ್ಯವಹಾರಗಳ ಸ್ನಾತಕೋತ್ತರ ಪದವಿಯನ್ನು ಸಹ ಹೊಂದಿದ್ದಾರೆ.

ಬ್ಲೂಮ್‌ಬರ್ಗ್ ಪ್ರೊಫೈಲ್‌ನ ಪ್ರಕಾರ, ಟರ್ಕಿಶ್-ಜರ್ಮನ್ ಏರ್‌ಲೈನ್ ಸನ್‌ಎಕ್ಸ್‌ಪ್ರೆಸ್ ಅನ್ನು ನಿರ್ವಹಿಸುವ ಗುನ್ಸ್ ಎಕ್ಸ್‌ಪ್ರೆಸ್ ಹವಾಸಿಲಿಕ್ ಎಎಸ್ ಮತ್ತು ಟರ್ಕಿಶ್ ವಿಮಾ ಪೂರೈಕೆದಾರರಾದ ಗುನ್ಸ್ ಸಿಗೊರ್ಟಾ ಇನ್ಷೂರೆನ್ಸ್ ಕೋ ಸೇರಿದಂತೆ ಹಲವಾರು ಕಂಪೆನಿಗಳಲ್ಲಿ ಅಯ್ಸಿ ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ. ಅವರು ಜನವರಿಯಲ್ಲಿ ಟರ್ಕಿಶ್ ಏರ್​ಲೈನ್ಸ್ ಹುದ್ದೆಯಿಂದ ಕೆಳಗಿಳಿದರು.

ಇದನ್ನೂ ಓದಿ: Ilker Ayci: ಏರ್​ ಇಂಡಿಯಾ ಸಿಇಒ ಹಾಗೂ ಎಂ.ಡಿ. ಆಗಿ ಇಲ್ಕರ್​ ಅಯ್ಸಿಯನ್ನು ನೇಮಿಸಿದ ಟಾಟಾ ಸನ್ಸ್