Ilker Ayci: ಏರ್ ಇಂಡಿಯಾ ಸಿಇಒ ಹಾಗೂ ಎಂ.ಡಿ. ಆಗಿ ಇಲ್ಕರ್ ಅಯ್ಸಿಯನ್ನು ನೇಮಿಸಿದ ಟಾಟಾ ಸನ್ಸ್
ಟರ್ಕಿಶ್ ಏರ್‌ಲೈನ್ಸ್‌ನ ಇಲ್ಕರ್ ಅಯ್ಸಿ ಅವರನ್ನು ಏರ್ ಇಂಡಿಯಾದ ಎಂ.ಡಿ. ಮತ್ತು ಸಿಇಒ ಆಗಿ ನೇಮಕ ಮಾಡಿರುವುದಾಗಿ ಟಾಟಾ ಸನ್ಸ್ ತಿಳಿಸಿದೆ.
ಟಾಟಾ ಸನ್ಸ್ನಿಂದ ಫೆಬ್ರವರಿ 14ರಂದು ಏರ್ ಇಂಡಿಯಾದ (Air India) ಸಿಇಒ ಮತ್ತು ಎಂ.ಡಿ. ಆಗಿ ಟರ್ಕಿಶ್ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದ ಇಲ್ಕರ್ ಅಯ್ಸಿ ಅವರನ್ನು ನೇಮಿಸಿದೆ. ಏರ್ ಇಂಡಿಯಾ ಮಂಡಳಿಯು ಅಯ್ಸಿ ಅವರ ಉಮೇದುವಾರಿಕೆಯನ್ನು ಪರಿಗಣಿಸಲು ಸಭೆ ನಡೆಸಿತು ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈ ಮಂಡಳಿಯ ಸಭೆಗೆ ವಿಶೇಷ ಆಹ್ವಾನಿತರಾಗಿದ್ದರು ಎಂದು ಟಾಟಾ ಸನ್ಸ್ ಹೇಳಿಕೆ ತಿಳಿಸಿದೆ. ಸೂಕ್ತ ಚರ್ಚೆಯ ನಂತರ ಮಂಡಳಿಯು ಅಯ್ಸಿ ಅವರ ನೇಮಕಾತಿಯನ್ನು ಅನುಮೋದಿಸಿದೆ ಎಂದು ಅದು ಹೇಳಿದೆ. 51 ವರ್ಷದ ಅಯ್ಸಿ ಅವರು ಬಿಲ್ಕೆಂಟ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ 1994ರ ಹಳೆಯ ವಿದ್ಯಾರ್ಥಿ. 1995ರಲ್ಲಿ ಯುನೈಟೆಡ್ ಕಿಂಗ್ಡಮ್ಸ್ನ ಲೀಡ್ಸ್ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ವಿಜ್ಞಾನದ ಸಂಶೋಧನೆಯ ನಂತರ ಅವರು 1997ರಲ್ಲಿ ಇಸ್ತಾನ್‌ಬುಲ್‌ನ ಮರ್ಮರ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.
ಅಯ್ಸಿ ಅವರು ಟರ್ಕಿಶ್ ಫುಟ್ಬಾಲ್ ಫೆಡರೇಷನ್ ಮಂಡಳಿಯಲ್ಲಿ, ಟರ್ಕಿಶ್ ಏರ್‌ಲೈನ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಟಿಎಫ್ಎಫ್ ಸ್ಪೋರ್ಟಿಫ್ ಅನಾನಿಮ್ ಸಿರ್ಕೆಟಿನಲ್ಲಿ ಇದ್ದಾರೆ. ಮತ್ತು ಕೆನಡಿಯನ್ ಟರ್ಕಿಶ್ ಬಿಜಿನೆಸ್ ಕೌನ್ಸಿಲ್ ಸದಸ್ಯರು ಹಾಗೂ ಯುಎಸ್- ಟರ್ಕಿ ಬಿಜಿನೆಸ್ ಕೌನ್ಸಿಲ್ಗೂ ಸದಸ್ಯರು ಎಂದು ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ. ಅಂದ ಹಾಗೆ ಏರ್ ಇಂಡಿಯಾದ ಸಿಇಒ ಹಾಗೂ ಎಂ.ಡಿ. ಆಗಿ ಅಯ್ಸಿ ಏಪ್ರಿಲ್ 1, 2022ರಿಂದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಯ್ಸಿ ನಾಯಕತ್ವದಲ್ಲಿ ಏರ್ ಇಂಡಿಯಾವು ಹೊಸ ಯುಗದತ್ತ ಹೆಜ್ಜೆ ಇಡಲಿದೆ ಎಂದು ಎನ್.ಚಂದ್ರಶೇಖರನ್ ಅಭಿಪ್ರಾಯ ಪಟ್ಟಿದ್ದಾರೆ.
“ಇಲ್ಕರ್ ಅವರು ವಿಮಾನಯಾನ ವಲಯದ ನಾಯಕರಾಗಿದ್ದು, ತಮ್ಮ ಅವಧಿಯಲ್ಲಿ ಟರ್ಕಿಶ್ ಏರ್‌ಲೈನ್ಸ್ ಅನ್ನು ಸದ್ಯದ ಯಶಸ್ಸಿಗೆ ಮುನ್ನಡೆಸಿದರು. ಟಾಟಾ ಸಮೂಹಕ್ಕೆ ಸ್ವಾಗತಿಸಲು ಸಂತೋಷ ಆಗುತ್ತಿದೆ. ಅವರು ಏರ್ ಇಂಡಿಯಾವನ್ನು ಹೊಸ ಯುಗದತ್ತ ಒಯ್ಯಲಿದ್ದಾರೆ,” ಎಂದು ಚಂದ್ರಶೇಖರನ್ ಹೇಳಿದ್ದಾರೆ. ತಮ್ಮನ್ನು ನೇಮಕ ಮಾಡಿರುವ ಕುರಿತು ಮಾತನಾಡಿರುವ ಇಲ್ಕರ್ ಅಯ್ಸಿ, “ಈ ಏರ್‌ಲೈನ್ಸ್ ಅನ್ನು ಮುನ್ನಡೆಸುವ ಮತ್ತು ಟಾಟಾ ಸಮೂಹಕ್ಕೆ ಸೇರುವ ಅವಕಾಶ ಸ್ವೀಕರಿಸಲು ನನಗೆ ಸಂತೋಷವಾಗಿದೆ ಮತ್ತು ಇದೊಂದು ಗೌರವವಾಗಿದೆ. ಏರ್ ಇಂಡಿಯಾದಲ್ಲಿ ನನ್ನ ಸಹೋದ್ಯೋಗಿಗಳು ಮತ್ತು ಟಾಟಾ ಗ್ರೂಪ್‌ನ ನಾಯಕತ್ವದೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದೇವೆ, ನಾವು ಏರ್ ಇಂಡಿಯಾದ ಬಲವಾದ ಪರಂಪರೆಯನ್ನು ಬಳಸುತ್ತೇವೆ ಮತ್ತು ಭಾರತೀಯರ ಬೆಚ್ಚನೆ ಆತಿಥ್ಯವನ್ನು ಪ್ರತಿಬಿಂಬಿಸುವ ವಿಶಿಷ್ಟವಾದ ಉತ್ಕೃಷ್ಟ ಹಾರಾಟದ ಅನುಭವವನ್ನು ಹೊಂದಿರುವ ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆಗಳಲ್ಲಿ ಒಂದನ್ನಾಗಿ ಮಾಡುತ್ತೇವೆ,” ಎಂದಿದ್ದಾರೆ.
ಏಪ್ರಿಲ್ 2015ರಲ್ಲಿ ಟರ್ಕಿಶ್ ಏರ್‌ಲೈನ್ಸ್ ಅಧ್ಯಕ್ಷರಾಗಿ ನೇಮಕಗೊಂಡ ಅಯ್ಸಿ, 2022ರ ಜನವರಿ ಅಂತ್ಯದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಟರ್ಕಿಶ್ ಏರ್‌ಲೈನ್ಸ್ ಒಮ್ಮೆ ಜಾಗತಿಕ ವಾಯುಯಾನದ ಉದಯೋನ್ಮುಖ ತಾರೆಗಳಲ್ಲಿ ಒಂದಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶೀಯ ಮತ್ತು ವಿದೇಶೀ ಸೇರಿ ಹಲವಾರು ಸಮಸ್ಯೆಗಳಿಂದ ಸುತ್ತುವರಿದಿದೆ. ಆದರೆ ಈ ವರ್ಷದ ಜನವರಿಯಲ್ಲಿ ಅಯ್ಸಿ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ಈ ವರ್ಷದ ಗರಿಷ್ಠ ಬೇಸಿಗೆ ಕಾಲದಲ್ಲಿ ಟರ್ಕಿಶ್ ಏರ್‌ಲೈನ್ಸ್ ಪೂರ್ವ-ಸಾಂಕ್ರಾಮಿಕ ಹಂತದ ಪ್ರಯಾಣಿಕರ ಸಂಖ್ಯೆ ಮತ್ತು ಲೋಡ್ ಪಡೆಯಬಹುದು ಎಂದು ಹೇಳಿದ್ದರು. ಆದರೆ ಪೂರ್ಣ ವರ್ಷದ ಅಂಕಿ- ಅಂಶಗಳು ಮುಂದಿನ ವರ್ಷದವರೆಗೆ 2019ರ ಮಟ್ಟವನ್ನು ಮೀರುವುದಿಲ್ಲ. “ಟರ್ಕಿಶ್ ಏರ್‌ಲೈನ್ಸ್ ಕಳೆದ ವರ್ಷ ಹೆಚ್ಚಿನ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಮಾನ ಯಾನ ಸಂಸ್ಥೆಗಳಲ್ಲಿ ಒಂದಾಗಿದೆ. 2019 ಕ್ಕೆ ಹೋಲಿಸಿದರೆ ನಾವು ಈ ವರ್ಷ ಉತ್ತಮ ಪರ್ಫಾರ್ಮೆನ್ಸ್ ಹೊಂದಿರಬಹುದು,” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದನ್ನೂ ಓದಿ: ಏರ್ ಇಂಡಿಯಾಗೆ ಆ ಹೆಸರಿಟ್ಟವರು ಯಾರು?; 75 ವರ್ಷಗಳ ಹಿಂದೆ ಹೆಸರು ಆಯ್ಕೆ ಮಾಡಿದ ಕತೆ ಹೇಳಿದ ಟಾಟಾ ಗ್ರೂಪ್