ಎರಡು ಟ್ರೇಡಿಂಗ್ ಸೆಷನ್ನಲ್ಲಿ ಷೇರುಪೇಟೆಯಲ್ಲಿ ಹೂಡಿಕೆದಾರರ 10 ಲಕ್ಷ ಕೋಟಿ ಸಂಪತ್ತು ನಷ್ಟ
ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರು ಕಳೆದ ಎರಡು ಟ್ರೇಡಿಂಗ್ ಸೆಷನ್ನಲ್ಲಿ 10 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.
ಈಕ್ವಿಟಿ ಮಾರುಕಟ್ಟೆಯಲ್ಲಿ ಫೆಬ್ರವರಿ 14ನೇ ತಾರೀಕಿನ ಸೋಮವಾರದಂದು ಸತತ ಎರಡನೇ ಸೆಷನ್ ಭಾರೀ ಮಾರಾಟದ ಒತ್ತಡ ಕಂಡುಬಂದಿದ್ದು, ಹೂಡಿಕೆದಾರರ ಸಂಪತ್ತು 10 ಲಕ್ಷ ಕೋಟಿ ರೂಪಾಯಿ ಕರಗಿದೆ. ರಷ್ಯಾದಿಂದ ಉಕ್ರೇನ್ ಮೇಲೆ ದಾಳಿ (Russia- Ukraine Crisis) ಆಗಬಹುದು ಎಂಬ ಆತಂಕ, ಕಚ್ಚಾ ತೈಲ ದರದಲ್ಲಿನ ಏರಿಕೆ, ಜಾಗತಿಕ ಮಾರುಕಟ್ಟೆಯಲ್ಲಿನ ಇಳಿಕೆ ಇವೆಲ್ಲ ಏರಿ ಸತತ ಎರಡನೇ ದಿನ ಕೂಡ ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ. ಈಕ್ವಿಟಿ ಬೆಂಚ್ಮಾರ್ಕ್ ಸುಚ್ಯಂಕಗಳು ಸೋಮವಾರದಂದು ಶೇ 3ರಷ್ಟು ಕುಸಿಯಿತು. ಇದರ ಜತೆಗೆ ಈ ಹಿಂದಿನ ಸೆಷನ್ನಲ್ಲಿ ಶೇ 1.3ರಷ್ಟು ಇಳಿಕೆ ಕಂಡಿತ್ತು. ಫೆಬ್ರವರಿ 14ರ ಸೋಮವಾರ ದಿನಾಂತ್ಯಕ್ಕೆ ಸೆನ್ಸೆಕ್ಸ್ 1747.08 ಅಥವಾ ಶೇ 3 ಹಾಗೂ ನಿಫ್ಟಿ 531.95 ಪಾಯಿಂಟ್ಸ್ ಅಥವಾ ಶೇ 3.06 ಮತ್ತು ನಿಫ್ಟಿ ಬ್ಯಾಂಕ್ ಸೂಚ್ಯಂಕವು 1608.7 ಪಾಯಿಂಟ್ಸ್ ಅಥವಾ ಶೇ 4.18ರಷ್ಟು ನೆಲ ಕಚ್ಚಿತು.
ಈ ಕುಸಿತದೊಂದಿಗೆ ಬೆಂಚ್ಮಾರ್ಕ್ ಸೂಚ್ಯಂಕಗಳು 2022ನೇ ಇಸವಿಯಲ್ಲಿ ನಕಾರಾತ್ಮಕ ಆಗಿ ಬದಲಾಗಿ, ಶೇ 2ಕ್ಕೂ ಹೆಚ್ಚು ನಷ್ಟ ಅನುಭವಿಸಿದೆ. ಕಳೆದ ವರ್ಷ ಶೇ 22ರಷ್ಟು ಏರಿಕೆ ಕಂಡಿತ್ತು. “ಅನಿಶ್ಚಿತತೆಯ ಅಂಶ ಭಾರೀ ದೊಡ್ಡ ಮಟ್ಟದಲ್ಲಿ ಇದೆ. ಉಕ್ರೇನ್ ಬಿಕ್ಕಟ್ಟು ಸಂಘರ್ಷವಾಗಿ ಮಾರ್ಪಟ್ಟಲ್ಲಿ ಅಲ್ಪಾವಧಿಯಲ್ಲಿ ಮಾರುಕಟ್ಟೆಗೆ ಇದು ಹಾನಿ ಮಾಡಬಹುದು. ಒಂದು ವೇಳೆ ದಂಡೆತ್ತಿ ಹೋದಲ್ಲಿ ರಷ್ಯಾ ಮೇಲೆ ಗಂಭೀರ ದಿಗ್ಬಂಧನವನ್ನು ಹೇರಿ, ರಷ್ಯಾದ ಆರ್ಥಿಕತೆ ಕುಸಿಯಬಹುದು. ಇದರಿಂದಾಗಿ ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಯಾವುದೇ ದುಸ್ಸಾಹಸಕ್ಕೆ ಇಳಿಯದಂತೆ ತಡೆಯಬಹುದು,” ಎಂದು ಜಿಯೋಜಿತ್ನ ಮುಖ್ಯ ಹೂಡಿಕೆ ಸ್ಟ್ರಾಟೆಜಿಸ್ಟ್ ವಿ.ಕೆ. ವಿಜಯಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ನಿಫ್ಟಿ ಮಿಡ್ಕ್ಯಾಪ್ 100 ಸೂಚ್ಯಂಕವು ಶೇ 2.3ರಷ್ಟು ಮತ್ತು ಸ್ಮಾಲ್ಕ್ಯಾಪ್ 100 ಸೂಚ್ಯಂಕವು ಶೇ 2.6ರಷ್ಟು ಕುಸಿದಿದೆ. ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 0.25ರಷ್ಟು ಹಾಗೂ ಫಾರ್ಮಾಸ್ಯುಟಿಕಲ್ಸ್ ಶೇ 0.73ರಷ್ಟು ಕುಸಿತ ಕಂಡಿರುವುದು ಕಡಿಮೆ ಎಂಬುದನ್ನು ಹೊರತುಪಡಿಸಿದರೆ ಉಳಿದ ಎಲ್ಲ ವಲಯಗಳಲ್ಲೂ ಭಾರೀ ಇಳಿಕೆ ಕಂಡುಬಂದಿದೆ. ನಿಫ್ಟಿ ಬ್ಯಾಂಕ್, ವಾಹನ, ಹಣಕಾಸು ಸೇವೆಗಳು ಹಾಗೂ ಲೋಹದ ಸೂಚ್ಯಂಕಗಳು ತಲಾ ಶೇ 3ರಷ್ಟು ಕುಸಿದವು. ಎಫ್ಎಂಸಿಜಿ ಮತ್ತು ರಿಯಾಲ್ಟಿ ತಲಾ ಶೇ 2ಕ್ಕಿಂತ ಹೆಚ್ಚು ಕುಸಿತವಾಗಿದೆ. ಹೂಡಿಕೆದಾರರು ಎರಡು ಸೆಷನ್ನಲ್ಲಿ 9.57 ಲಕ್ಷ ಕೋಟಿ ರೂಪಾಯಿಯನ್ನು ಹೂಡಿಕೆದಾರರು ಸಂಪತ್ತು ಕಳೆದುಕೊಂಡಿದ್ದಾರೆ. ಬಿಎಸ್ಇ ಮಾರುಕಟ್ಟೆ ಬಂಡವಾಳ ಮೌಲ್ಯವು ಫೆಬ್ರವರಿ 10ನೇ ತಾರೀಕಿನಂದು ಇದ್ದ 267.81 ಲಕ್ಷ ಕೋಟಿಯಿಂದ 258.24 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ. ಬಿಎಸ್ಇಯಲ್ಲಿ 570 ಷೇರುಗಳು ಲೋವರ್ ಸರ್ಕ್ಯೂಟ್ ಮುಟ್ಟಿದೆ. 258 ಷೇರುಗಳು ಅಪ್ಪರ್ ಸರ್ಕ್ಯೂಟ್ ಮುಟ್ಟಿದೆ.
ಇದನ್ನೂ ಓದಿ: Opening Bell: 1000ಕ್ಕೂ ಹೆಚ್ಚು ಪಾಯಿಂಟ್ಸ್ ನೆಲ ಕಚ್ಚಿದ ಸೆನ್ಸೆಕ್ಸ್, ನಿಫ್ಟಿ 315 ಪಾಯಿಂಟ್ಸ್ ನಷ್ಟ