ಗೋಮಾಂಸದಿಂದ ಸಿದ್ಧವಾಯ್ತು ಹೈಬ್ರಿಡ್ ಅಕ್ಕಿ! ಇದನ್ನು ತಯಾರಿಸಿದ್ದು ಹೇಗೆ ಗೊತ್ತೇ?

|

Updated on: Feb 24, 2024 | 3:26 PM

Meaty Rice From Beef: ವಿಜ್ಞಾನಿಗಳು ಗೋಮಾಂಸದಿಂದ ಅಕ್ಕಿಯನ್ನು ತಯಾರಿಸಿದ್ದಾರೆ. ಇದನ್ನು ಮಾಂಸದ ಅಕ್ಕಿ ಎಂದೂ ಕರೆಯಲಾಗುತ್ತಿದೆ. ಈ ಹೈಬ್ರಿಡ್ ಅಕ್ಕಿಯು ಪರಿಸರವನ್ನು ಸುರಕ್ಷಿತವಾಗಿರಿಸುವುದರೊಂದಿಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಹೇಳುತ್ತಾರೆ. ಈ ಹೈಬ್ರಿಡ್ ಆಹಾರವನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಇದು ಸಾಮಾನ್ಯ ಅಕ್ಕಿಗಿಂತ ಎಷ್ಟು ಭಿನ್ನವಾಗಿದೆ ಎಂಬ ಮಾಹಿತಿ ಇಲ್ಲಿದೆ.

ಗೋಮಾಂಸದಿಂದ ಸಿದ್ಧವಾಯ್ತು ಹೈಬ್ರಿಡ್ ಅಕ್ಕಿ! ಇದನ್ನು ತಯಾರಿಸಿದ್ದು ಹೇಗೆ ಗೊತ್ತೇ?
ಗೋಮಾಂಸದಿಂದ ಸಿದ್ಧವಾಯ್ತು ಹೈಬ್ರಿಡ್ ಅಕ್ಕಿ!
Follow us on

ಸಿಯೋಲ್‌, ಫೆಬ್ರವರಿ 24: ವೆಜಿಟೇರಿಯನ್ ಮೀಟ್ ಅಥವಾ ಸಸ್ಯಾಹಾರಿ ಮಾಂಸ ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳು (Scientists) ಈಗ ಗೋಮಾಂಸದಿಂದ (Beef) ಅಕ್ಕಿಯನ್ನು ತಯಾರಿಸಿದ್ದಾರೆ! ಇದನ್ನು ಮಾಂಸದ ಅಕ್ಕಿ ಎಂದೂ ಕರೆಯಲಾಗುತ್ತಿದೆ. ದಕ್ಷಿಣ ಕೊರಿಯಾದ (South Korea) ವಿಜ್ಞಾನಿಗಳು ಇದನ್ನು ಸಿದ್ಧಪಡಿಸಿದ್ದು, ಹಲವು ವೈಶಿಷ್ಟ್ಯಗಳನ್ನೂ ಪಟ್ಟಿ ಮಾಡಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸುತ್ತಿರುವ ಸಿಯೋಲ್‌ನ ‘ಯೋನ್ಸೆ ವಿಶ್ವವಿದ್ಯಾಲಯ’ದ ವಿಜ್ಞಾನಿಗಳು, ಮಾಂಸಭರಿತ ಅಕ್ಕಿ ಆಹಾರದ ಕೊರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹೈಬ್ರಿಡ್ ಅಕ್ಕಿಯು ಪರಿಸರವನ್ನು ಸುರಕ್ಷಿತವಾಗಿ ಇರಿಸುವುದರೊಂದಿಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹೈಬ್ರಿಡ್ ಅಕ್ಕಿಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಇದು ಸಾಮಾನ್ಯ ಅಕ್ಕಿಗಿಂತ ಎಷ್ಟು ಭಿನ್ನವಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.

ಗೋಮಾಂಸದಿಂದ ಅಕ್ಕಿ ಮಾಡುವುದು ಹೇಗೆ?

ಈ ವಿಶೇಷ ಅಕ್ಕಿಯನ್ನು ತಯಾರಿಸಲು ದನದ ಮಾಂಸದಲ್ಲಿರುವ ಕೋಶಗಳನ್ನು ಬಳಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಕ್ಕಿ ಆಹಾರದ ಪ್ರಮುಖ ಮೂಲವಾಗಿದೆ. ಇದು ಪೋಷಕಾಂಶಗಳ ಆಗರವೂ ಆಗಿದೆ. ಈಗ ಗೋಮಾಂಸದಿಂದ ಅಕ್ಕಿ ತಯಾರಿಸಿ ಅದರ ಪೋಷಕಾಂಶಗಳನ್ನು ಹೆಚ್ಚಿಸುವ ಕೆಲಸ ನಡೆದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಮ್ಯಾಟರ್ ಜರ್ನಲ್‌’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಗೋಮಾಂಸದ ಅಕ್ಕಿಯನ್ನು ತಯಾರಿಸಲು ಗೋಮಾಂಸದ ಕೋಶಗಳು ಮತ್ತು ಫಿಶ್ ಜೆಲಾಟಿನ್​ಗಳನ್ನು ಬಳಸಲಾಗಿದೆ. ಅಕ್ಕಿ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯು ಪ್ರಯೋಗಾಲಯದಲ್ಲಿ 11 ದಿನಗಳಲ್ಲಿ ಪೂರ್ಣಗೊಂಡಿದೆ.

ಸಾಮಾನ್ಯ ಅಕ್ಕಿಗಿಂತ ಎಷ್ಟು ಭಿನ್ನ ಗೋಮಾಂಸದ ಅಕ್ಕಿ?

ಲ್ಯಾಬ್​​ನಲ್ಲಿ ತಯಾರಾಗುವ ಅಕ್ಕಿ ಎಷ್ಟು ಭಿನ್ನ ಎಂಬುದಕ್ಕೂ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಹೊಸ ಅಕ್ಕಿಯಲ್ಲಿ ಒಟ್ಟಾರೆ ಶೇ 8ರಷ್ಟು ಪ್ರೊಟೀನ್ ಇದೆ. ಸಾಮಾನ್ಯ ಅಕ್ಕಿಗಿಂತ ಶೇ 7ರಷ್ಟು ಹೆಚ್ಚು ಪ್ರೊಟೀನ್ ಇದೆ ಎನ್ನುತ್ತಾರೆ ಅವರು. ಇದು ನೈಸರ್ಗಿಕ ಧಾನ್ಯಗಳಿಗಿಂತ ಉತ್ತಮವಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರಯೋಗಾಲಯದಲ್ಲಿ ಗೋಮಾಂಸ ಕೋಶಗಳಿಂದ ತಯಾರಾದ ಅಕ್ಕಿ. ಫೋಟೋ ಕೃಪೆ: Yonsei University

ಆರ್ಥಿಕ ದೃಷ್ಟಿಕೋನದಿಂದ ಕೂಡ ಈ ಅಕ್ಕಿ ಉತ್ತಮವೆಂದು ಸಂಶೋಧನೆ ಹೇಳಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಾದರೆ, ಸಾಮಾನ್ಯ ಧಾನ್ಯಗಳಿಗಿಂತ ಅಗ್ಗವಾಗಿ ಸಿಗಬಹುದು ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಇದು ಕೊರಿಯನ್ ಜನರಿಗೆ ಉತ್ತಮ ಆಯ್ಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ, ಒಂದು ಕೆಜಿ ಗೋಮಾಂಸದ ಬೆಲೆ 15 ಡಾಲರ್ ಅಂದರೆ ಅಂದಾಜು 1,244 ರೂಪಾಯಿಗಳು. ಆದರೆ ಗೋಮಾಂಸದಿಂದ ಮಾಡಿದ ಅಕ್ಕಿಯನ್ನು 2.23 ಡಾಲರ್‌ಗಳಿಗೆ ಅಂದರೆ ಕೆಜಿಗೆ ಅಂದಾಜು 185 ರೂಪಾಯಿಗಳಿಗೆ ಖರೀದಿಸಬಹುದಾಗಿದೆ ಎಂದು ‘ಮ್ಯಾಟರ್ ಜರ್ನಲ್‌’ ವರದಿ ಉಲ್ಲೇಖಿಸಿದೆ.

ಹೊಸ ಅಕ್ಕಿ ಪರಿಸರ ಸ್ನೇಹಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪರಿಸರದ ದೃಷ್ಟಿಕೋನದಿಂದ ಇದು ಉತ್ತಮ ಆಯ್ಕೆಯಾಗಿದೆ. ಹವಾಮಾನ ಬದಲಾವಣೆ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹವಾಮಾನ ಚಕ್ರವು ಹದಗೆಡುತ್ತಿದೆ. ಹದಗೆಡುತ್ತಿರುವ ಪರಿಸ್ಥಿತಿಗಳು ಕೃಷಿಗೆ ಮಾರಕವಾಗುತ್ತಿರುವಾಗ, ಈ ದೃಷ್ಟಿಯಿಂದ ನೋಡಿದರೆ ಹೈಬ್ರಿಡ್ ಆಹಾರ ವಸ್ತುಗಳು ಭರವಸೆಯ ಕಿರಣವೆಂದು ಹೇಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಲಿಗ್ನೋಸ್ಯಾಟ್; ಲೋಹವಲ್ಲ, ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್; ಇದು ಗೇಮ್ ಚೇಂಜರ್ ಎನ್ನುತ್ತಾರೆ ವಿಜ್ಞಾನಿಗಳು

ಈ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು, ವಿಜ್ಞಾನಿಗಳ ತಂಡವು ಇಡೀ ಪ್ರಕ್ರಿಯೆಯನ್ನು ಇನ್ನಷ್ಟು ಉತ್ತಮ ಮತ್ತು ಸರಳಗೊಳಿಸಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ಅಕ್ಕಿಯಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುವ ಯೋಜನೆಯೂ ಇದೆ ಎಂದು ವರದಿ ಉಲ್ಲೇಖಿಸಿದೆ. ವಿಜ್ಞಾನಿಗಳು ಹೇಳುವಂತೆ, ಈ ಅಕ್ಕಿಯು ಮುಂದೊಂದು ದಿನ ಬರಗಾಲದ ಸಂದರ್ಭಗಳಲ್ಲಿ ಆಹಾರ ಪರಿಹಾರವಾಗಿ, ಮಿಲಿಟರಿ ಪಡಿತರವಾಗಿ ಅಥವಾ ಬಾಹ್ಯಾಕಾಶ ಯಾತ್ರಿಗಳ ಆಹಾರವಾಗಿ ಹೆಚ್ಚು ಉಪಯೋಗಕ್ಕೆ ಬರಲಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Sat, 24 February 24