Wood Satellite: ಲಿಗ್ನೋಸ್ಯಾಟ್; ಲೋಹವಲ್ಲ, ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್; ಇದು ಗೇಮ್ ಚೇಂಜರ್ ಎನ್ನುತ್ತಾರೆ ವಿಜ್ಞಾನಿಗಳು
World's first ever wooden satellite: ಜಪಾನ್ನ ಕ್ಯೋಟೋ ಯೂನಿವರ್ಸಿಟಿಯ ವಿಜ್ಞಾನಿಗಳು ಮ್ಯಾಗ್ನೋಲಿಯಾ ಎಂಬ ಮರದ ತುಂಡುಗಳನ್ನು ಬಳಸಿ ಪುಟ್ಟ ಸೆಟಿಲೈಟ್ ನಿರ್ಮಿಸಿದ್ದಾರೆ. ಸಂಪೂರ್ಣ ಮರದಿಂದಲೇ ತಯಾರಾದ ವಿಶ್ವದ ಮೊದಲ ಸೆಟಿಲೈಟ್ ಎನಿಸಿದೆ ಲಿಗ್ನೋಸ್ಯಾಟ್. ಮಾಮೂಲಿಯ ಸೆಟಿಲೈಟ್ಗಳನ್ನು ಅಲೂಮಿನಿಯಂ ಲೋಹದಿಂದ ನಿರ್ಮಿಸಲಾಗುತ್ತದೆ. ಇವು ಭೂಮಿಯ ವಾತಾವರಣದ ಮೇಲೆ ಅಲೂಮಿನಾ ಕಣಗಳಾಗಿ ಉಳಿದು ಪರಿಸರಕ್ಕೆ ಧಕ್ಕೆ ಮಾಡಬಹುದು.
ವಾಷಿಂಗ್ಟನ್, ಫೆಬ್ರುವರಿ 22: ಜಪಾನ್ ಮತ್ತು ಅಮೆರಿಕದ ವಿಜ್ಞಾನಿಗಳು ಸೇರಿ ಲಿಗ್ನೋಸ್ಯಾಟ್ (Lignosat) ಎಂಬ ಉಪಗ್ರಹ ತಯಾರಿಸಿದ್ದು ಉಡಾವಣೆಗೆ ಸಜ್ಜಾಗಿದ್ದಾರೆ. ಒಂದು ಸಣ್ಣ ಕಾಫಿ ಕಪ್ ಗಾತ್ರದ ಈ ಸೆಟಿಲೈಟ್ ತಯಾರಿಕೆಗೆ ಲೋಹ (metal) ಬಳಸಲಾಗಿಲ್ಲ. ಸಂಪೂರ್ಣ ಮರದಿಂದ ತಯಾರಿಸಲಾಗಿದೆ. ಅಂತೆಯೇ, ಮರದಿಂದ ತಯಾರಾದ ವಿಶ್ವದ ಮೊದಲ ಸೆಟಿಲೈಟ್ ಎಂಬ ಹೆಗ್ಗಳಿಗೆ ಇದಕ್ಕೆ ಇದೆ. ಜಪಾನ್ನ ಕ್ಯೋಟೋ ಯೂನಿವರ್ಸಿಟಿಯ ವಿಜ್ಞಾನಿಗಳು ಮ್ಯಾಗ್ನೋಲಿಯಾ (Magnolia wood) ಎಂಬ ಮರದಿಂದ ಈ ಪುಟ್ಟ ಸೆಟಿಲೈಟ್ ಅನ್ನು ಪ್ರಾಯೋಗಿಕವಾಗಿ ನಿರ್ಮಿಸಿದ್ದಾರೆ. ಮರದಿಂದ ಮಾಡಲಾಗಿದ್ದರೂ ಬಾಹ್ಯಾಕಾಶದಲ್ಲಿ ಈ ಮರ ಹಾಳಾಗುವುದಿಲ್ಲ ಎಂಬುದು ಹಲವು ಪ್ರಯೋಗ ಮತ್ತು ಸಂಶೋಧನೆಗಳಿಂದ ದೃಢಪಟ್ಟಿದೆ.
ಮರದಿಂದ ಸೆಟಿಲೈಟ್ ತಯಾರಿಸಬೇಕೆಂದು ವಿಜ್ಞಾನಿಗಳು ಹೊರಟಾಗ ಎಲ್ಲಾ ಜಾತಿಯ ಮರಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿತ್ತು. ಬಾಹ್ಯಾಕಾಶ ವಾತಾವರಣದಲ್ಲಿ ಇವುಗಳನ್ನು ಪರೀಕ್ಷಿಸಲಾಯಿತು. ಭೂಮಿಯ ಕೆಳ ಕಕ್ಷೆಯಲ್ಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ವಿವಿಧ ಮರಗಳ ಸ್ಯಾಂಪಲ್ಗಳನ್ನು ಕಳುಹಿಸಿ ಒಂದು ವರ್ಷ ಪರೀಕ್ಷೆ ಮಾಡಲಾಯಿತು. ಇದರಲ್ಲಿ ಮ್ಯಾಗ್ನೋಲಿಯಾ ಮರ ಹೆಚ್ಚು ಕ್ಷಮತಾ ಗುಣ ಹೊಂದಿದ್ದು ಗೊತ್ತಾದ ಕಾರಣ ಅದರಿಂದಲೇ ಸೆಟಿಲೈಟ್ ತಯಾರಿಸಲಾಗಿದೆ.
ಇದನ್ನೂ ಓದಿ: ಅಮೆರಿಕದ ‘ದರ್ಪ’ ಶಕ್ತಿ; ಬೇಡದ ಸರ್ಕಾರಗಳ ಉರುಳಿಸಲು ಹೊಸ ಮೀಡಿಯಾ ಅಸ್ತ್ರಗಳು; ಮಾಜಿ ಅಧಿಕಾರಿ ಸ್ಫೋಟಕ ಮಾಹಿತಿ
ಮರದ ಸೆಟಿಲೈಟ್ನಿಂದ ಏನು ಪ್ರಯೋಜನ?
ಬಾಹ್ಯಾಕಾಶಕ್ಕೆ ಮನುಷ್ಯ ನಿರ್ಮಿತ ವಸ್ತುಗಳು ದಿನನಿತ್ಯ ಹೋಗುತ್ತಲೇ ಇರುತ್ತವೆ. ಒಂದಲ್ಲ ಒಂದು ದೇಶದಲ್ಲಿ ನಿತ್ಯ ಸೆಟಿಲೈಟ್ ಉಡಾವಣೆ ಇದ್ದೇ ಇರುತ್ತದೆ. ಭೂಮಿಯ ಕಕ್ಷೆಯಲ್ಲಿ ಸುತ್ತುವ ಈ ಉಪಗ್ರಹಗಳು ನಿರ್ದಿಷ್ಟ ಜೀವಿತಾವಧಿ ಅಥವಾ ಕಾರ್ಯಾವಧಿ ಹೊಂದಿರುತ್ತವೆ. ಆ ಬಳಿಕ ಅವು ಬಾಹ್ಯಾಕಾಶದಲ್ಲಿ ಉಳಿದುಹೋಗುತ್ತವೆ. ಅಥವಾ ಚೂರುಚೂರುಗಳಾಗಿ ಭೂಮಿಗೆ ಬಂದು ಬೀಳುತ್ತವೆ.
ಐವತ್ತರ ದಶಕದಲ್ಲಿ ಮನುಷ್ಯರಿಂದ ಬಾಹ್ಯಾಕಾಶ ಪ್ರಯೋಗಗಳು ಶುರುವಾಗಿವೆ. ಅಲ್ಲಿಂದ ಈವರೆಗೆ 50,000 ಟನ್ಗಳಷ್ಟು ವಸ್ತುಗಳು ಆಗಸಕ್ಕೆ ಹೋಗಿವೆ. ಸಾಕಷ್ಟು ಬಾಹ್ಯಾಕಾಶ ಕಸ ನಿರ್ಮಾಣವಾಗಿದೆ. ನಾಸಾ ಪ್ರಕಾರ ಒಂದು ಮಿಲಿಮೀಟರ್ಗಿಂತ ಸಣ್ಣದಿರುವ 10 ಕೋಟಿ ವಸ್ತುಗಳು ವಾತಾವರಣದಲ್ಲಿ ಸೇರಿವೆ. 10 ಸೆಂಟಿಮೀಟರ್ಗೂ ದೊಡ್ಡದಾದ ವಸ್ತುಗಳ ಸಂಖ್ಯೆ 25,000ದಷ್ಟಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಏರ್ ಫೋರ್ಸ್ ಒನ್ ಹತ್ತುವಾಗ ಎರಡು ಬಾರಿ ಮುಗ್ಗರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಹೆಚ್ಚಿನ ಸೆಟಿಲೈಟ್ಗಳು ಅಲೂಮಿನಿಯಮ್ ಲೋಹದಿಂದ ನಿರ್ಮಿತವಾಗಿರುತ್ತವೆ. ಇವು ಭೂಮಿಯ ವಾತಾವರಣಕ್ಕೆ ಮರಳಿದಾಗ ಸುಟ್ಟು, ಸಣ್ಣ ಅಲೂಮಿನಿಯಾ ಕಣಗಳು ನಿರ್ಮಿತವಾಗುತ್ತವೆ. ಈ ಬಾಹ್ಯಾಕಾಶ ಕಸಗಳು ಭೂಮಿಯ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಅಪಾಯಕಾರಿಯಾಗಬಲ್ಲುವು. ಓಝೋನ್ ಪದರವನ್ನು ನಾಶ ಮಾಡಬಲ್ಲುವು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜಪಾನ್ ವಿಜ್ಞಾನಿಗಳು ನಿರ್ಮಿಸಿರುವ ಮರದ ಸೆಟಿಲೈಟ್ ಈ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಎನಿಸಬಹುದು. ಈ ಮರದ ಸೆಟಿಲೈಟ್ ಭೂಮಿಗೆ ಪತನವಾದರೆ, ಹಾದಿಯಲ್ಲೇ ಸಂಪೂರ್ಣ ಸುಟ್ಟುಹೋಗಿ ಬೂದಿಯಾಗಿ ಬೀಳುತ್ತದೆ. ಬಾಹ್ಯಾಕಾಶದಲ್ಲಿ ಕಸವಾಗಿ ಉಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ