ವೀಸಾ ವಿಸ್ತರಣೆ ಬೆನ್ನಲ್ಲೇ ಶೇಖ್ ಹಸೀನಾ ಪಾಸ್‌ಪೋರ್ಟ್ ರದ್ದುಗೊಳಿಸಲು ಭಾರತಕ್ಕೆ ಬಾಂಗ್ಲಾದೇಶ ಒತ್ತಾಯ
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸುವಂತೆ ಭಾರತವನ್ನು ಒತ್ತಾಯಿಸಿದೆ. ಅವರಿಗೆ ವೀಸಾ ವಿಸ್ತರಣೆ ದೊರೆತಿದೆ ಎಂಬ ವರದಿಗಳ ನಡುವೆಯೇ ಈ ಒತ್ತಾಯ ಕೇಳಿಬಂದಿದೆ. ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಢಾಕಾದಿಂದ ಪಲಾಯನ ಮಾಡಿ ಕಳೆದ ಆಗಸ್ಟ್‌ನಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ವ್ಯಾಪಕ ಪ್ರತಿಭಟನೆಯಿಂದ ಅವರ ಸರ್ಕಾರ ಪತನವಾಯಿತು.
ನವದೆಹಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಒತ್ತಾಯಿಸಿ, ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತ ಸರ್ಕಾರಕ್ಕೆ ಮನವಿಯನ್ನು ಮಾಡಿದೆ. ಮಾಧ್ಯಮಗಳಲ್ಲಿ ಅವರ ವೀಸಾ ವಿಸ್ತರಣೆಯ ವರದಿಗಳು ಬಂದ ನಂತರ ಬಾಂಗ್ಲಾದೇಶ ಈ ಬಗ್ಗೆ ಭಾರತವನ್ನು ಒತ್ತಾಯಿಸಿದೆ. ಈಗಾಗಲೇ ಬಾಂಗ್ಲಾದೇಶ ಶೇಖ್ ಹಸೀನಾ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿದೆ. ಹೀಗಾಗಿ, ಈ ಬಗ್ಗೆ ಹೇಳಿಕೆ ನೀಡಿರುವ ಬಾಂಗ್ಲಾದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಆಲಂ, ಪಾಸ್‌ಪೋರ್ಟ್ ರದ್ದಾದ ನಂತರ ವೀಸಾ ವಿಸ್ತರಣೆಗೆ ಯಾವುದೇ ಬೆಲೆ ಇರುವುದಿಲ್ಲ ಎಂದಿದ್ದಾರೆ.
ಶೇಖ್ ಹಸೀನಾ ಅವರ ಪಾಸ್‌ಪೋರ್ಟ್ ರದ್ದುಪಡಿಸುವಿಕೆಯನ್ನು ಬಾಂಗ್ಲಾದೇಶವು ಖಚಿತಪಡಿಸಿದೆ. ಜುಲೈನಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 96 ಮಂದಿಯ ಪಾಸ್‌ಪೋರ್ಟ್ ಅನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಶೇಖ್ ಹಸೀನಾ ಮತ್ತು ಇತರ 11 ಜನರ ಮೇಲೆ ಬಂಧನ ವಾರಂಟ್ ಹೊರಡಿಸಿತ್ತು ಎಂಬುದು ಕೂಡ ಗಮನಾರ್ಹ.
ಇದನ್ನೂ ಓದಿ: ಶೇಖ್ ಹಸೀನಾ ಹಸ್ತಾಂತರ ಕೋರಿ ಭಾರತಕ್ಕೆ ಬಾಂಗ್ಲಾದೇಶದಿಂದ ಪತ್ರ ರವಾನೆ
ಅವಾಮಿ ಲೀಗ್‌ನ ನಾಯಕಿ ಹಸೀನಾ ಕಳೆದ ಆಗಸ್ಟ್‌ನಲ್ಲಿ ವ್ಯಾಪಕ ಪ್ರತಿಭಟನೆಗಳ ನಡುವೆ ಢಾಕಾದಿಂದ ಪಲಾಯನ ಮಾಡಿದರು. ಅದಾದ ನಂತರ ಅವರು ಭಾರತದಲ್ಲಿ ವಾಸಿಸುತ್ತಿದ್ದಾರೆ.
“ತಾಂತ್ರಿಕ ಕಾರಣ”ದ ಮೇಲೆ ಭಾರತವು ಶೇಖ್ ಹಸೀನಾ ಅವರ ವೀಸಾವನ್ನು ವಿಸ್ತರಿಸಿದೆ ಎಂದು ವರದಿಯಾಗಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ