ಉದ್ಯೋಗಿ ಕೆಲಸದ ಅವಧಿ ಎಷ್ಟಿರಬೇಕು? ಕಾರ್ಮಿಕ ಕಾನೂನು ಏನು ಹೇಳುತ್ತೆ? ಇಲ್ಲಿದೆ ವಿವರ

ದೊಡ್ಡ ದೊಡ್ಡ ಉದ್ಯಮಿಗಳು ಕೆಲಸದ ಅವಧಿ ಹೆಚ್ಚಳ ಆಗಬೇಕು ಎಂದು ಬಯಸುತ್ತಿದ್ದಾರೆ. ದೇಶವನ್ನು ಮುನ್ನಡೆಸುವ ನಾಯಕರೂ ರಾಷ್ಟ್ರೋದ್ಧಾರಕ್ಕಾಗಿ ದುಡಿಯಬೇಕು ಎನ್ನುತ್ತಿದ್ದಾರೆ. ಕೆಲಸದ ಅವಧಿ ಕುರಿತಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ನೀಡಿದ್ದ ಹೇಳಿಕೆ ಇದೀಗ ವಿವಾದದ ಕೇಂದ್ರವಾಗಿತ್ತು. ಯುವಕರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು, ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅನ್ನೋ ನಾರಾಯಣ ಮೂರ್ತಿ ಅವರ ನಿಲುವಿಗೆ ಬಹುತೇಕ ಉದ್ಯಮಿಗಳು ಬೆಂಬಲ ಸೂಚಿಸಿದ್ದರೆ. ಈ ನಿಲುವನ್ನ ಕೆಲ ಉದ್ಯಮಿಗಳೂ ವಿರೋಧಿಸಿದ್ದರು. ಈಗ ಎಲ್ ಆ್ಯಂಡ್ ಟಿ ಚೇರ್ಮನ್ ಸಹ ಕೆಲಸ ಬಗ್ಗೆ ಮಾತನಾಡಿ ನಾರಾಯಣಮೂರ್ತಿಯವರ ಸಾಲಿಗೆ ಬಂದು ನಿಂತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಆಗುತ್ತಿವೆ. ಹಾಗಾದ್ರೆ, ಕೆಲಸದ ಅವಧಿ ಎಷ್ಟಿರಬೇಕು? ಕಾರ್ಮಿಕ ಕಾನೂನು ಏನು? ಎನ್ನುವುದನ್ನು ತಿಳಿಯಿರಿ.

ಉದ್ಯೋಗಿ ಕೆಲಸದ ಅವಧಿ ಎಷ್ಟಿರಬೇಕು? ಕಾರ್ಮಿಕ ಕಾನೂನು ಏನು ಹೇಳುತ್ತೆ? ಇಲ್ಲಿದೆ ವಿವರ
Working Hours
Follow us
ರಮೇಶ್ ಬಿ. ಜವಳಗೇರಾ
|

Updated on:Jan 10, 2025 | 10:38 PM

ಬೆಂಗಳೂರು, (ಜನವರಿ 10): ಇತ್ತೀಚೆಗಷ್ಟೇ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ದಿನಕ್ಕೆ 12 ಗಂಟೆ ಕೆಲಸ ಮಾಡೋ ಅಗತ್ಯತೆಯನ್ನ ಪ್ರತಿಪಾದಿಸಿದ್ದರು. ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಅನ್ನೋ ನಾರಾಯಣಮೂರ್ತಿ ಹೇಳಿಕೆಗೆ ಭಾರಿ ವಿರೋಧಗಳು ವ್ಯಕ್ತವಾಗಿತ್ತು. ಅಲ್ಲದೇ ಈ ಸಂಬಂಧ ನಾರಾಯಣಮೂರ್ತಿಯವರು ಸಹ ಟ್ರೋಲ್ ಆಗಿದ್ದರು. ಈ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧದ ಚರ್ಚೆಗಳು ಆಗಿದ್ದವು. ಇದರ ನಡುವೆ ಇದೀಗ ಎಲ್ ಆ್ಯಂಡ್ ಟಿ ಚೇರ್ಮನ್ ಎಸ್ ಎನ್ ಸುಬ್ರಮಣಿಯನ್, ಉದ್ಯೋಗಿಗಳು ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ವಾರಕ್ಕೆ 90 ಗಂಟೆ ಅಂದರೆ ಸುಬ್ರಮಣಿಯನ್ ಪ್ರಕಾರ ಉದ್ಯೋಗಿ ದಿನಕ್ಕೆ ಬರೋಬ್ಬರಿ 15 ಗಂಟೆ ಕೆಲಸ ಮಾಡಬೇಕಿದೆ. ಇವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇವೆಲ್ಲದರ ನಡುವೆ ವೈಯಕ್ತಿಕ ಜೀವನಕ್ಕೆ ಸಮಯ ಬೇಡವೇ ಎನ್ನುವ ಪ್ರಶ್ನೆಯೂ ಸಹ ಸಹಜವಾಗಿ ಉದ್ಭವಿಸುತ್ತದೆ.

ಕೆಲಸದ ಅವಧಿ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿ. ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ, ನಿರ್ಮಾಣ ವಲಯದ ಕಾರ್ಮಿಕರಿಗೆ ಸುಲಭವಾಗಿ ಕೆಲಸದ ಅವಧಿ ನಿರ್ಧರಿಸಬಹುದು. ಆದರೆ, ಇದೇ ಮಾತನ್ನ ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ಕೆಲಸದ ಅವಧಿ ಮುಗಿಯಿತು ಎನ್ನುವ ಕಾರಣಕ್ಕೆ ರೈಲು, ಬಸ್‌ಗಳ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುವುದಕ್ಕೆ ಸಾಧ್ಯವೇ? ಹೀಗಾಗಿ ಪ್ರತಿಯೊಂದು ಕೆಲಸದ ಸ್ವರೂಪವೂ ಭಿನ್ನ. ಅಗತ್ಯತೆಗಳೂ ಬೇರೆ ಬೇರೆ. ಮನುಷ್ಯನ ದೈಹಿಕ ಕ್ಷಮತೆ, ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯಾ ವೃತ್ತಿಯನ್ನು ಮಾಡುತ್ತಿರುವ ಜನರಿಗೆ ಕೆಲಸದ ಅವಧಿ ನಿರ್ಧರಿತವಾಗುತ್ತೆ.

ಇದನ್ನೂ ಓದಿ: ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ಕೊಂಡ್ ಇರ್ತೀರಾ? 90 ಗಂಟೆ ಕೆಲಸ ಮಾಡಿ ಎಂದ ಎಲ್ ಅಂಡ್ ಟಿ ಮುಖ್ಯಸ್ಥ

ಸ್ವಂತ ಉದ್ಯೋಗ ನಡೆಸುವ ಜನ, ಸ್ವಂತ ಕೈಗಾರಿಕೆ ನಡೆಸುವ ಉದ್ಯಮಿ ಇಡೀ ದಿನ ಕೆಲಸ ಮಾಡುತ್ತಾನೆ. ಆತನಿಗೆ ಕೆಲಸದ ಅವಧಿ ಮುಖ್ಯ ಆಗುವುದೇ ಇಲ್ಲ. ಏಕೆಂದರೆ ದುಡಿದಷ್ಟೂ ಆತನಿಗೇ ಲಾಭ. ದುಡಿಯದಿದ್ದರೆ ಆತನಿಗೇ ನಷ್ಟ. ಜೊತೆಯಲ್ಲೇ ತನಗೆ ಬೇಕಾದಾಗ ವೈಯಕ್ತಿಕ ಬದುಕಿಗೆ ಸಮಯವನ್ನೂ ಹೊಂದಿಸಿಕೊಳ್ಳಬಲ್ಲ. ಹೀಗಾಗಿ ಆತ ದಿನಕ್ಕೆ, ವಾರಕ್ಕೆ ಎಷ್ಟು ಗಂಟೆ ಬೇಕಾದರೂ ಕೆಲಸ ಮಾಡಬಹುದು. ಆದರೆ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಕೆಲಸದ ಅವಧಿ ಎನ್ನುವುದು ಡೆಡ್​ಲೈನ್ ಇದೆ.

​ಕೆಲಸದ ಅವಧಿ ಬಗ್ಗೆ ಕಾನೂನು ಏನು ಹೇಳುತ್ತೆ?

ಭಾರತ ದೇಶದಲ್ಲಿ 1948ರಲ್ಲೇ ಕಾರ್ಖಾನೆ ಕಾಯ್ದೆ ಜಾರಿಗೆ ಬಂದಿದೆ. ಅದೇ ಕಾನೂನನ್ನ ದೇಶಾದ್ಯಂತ ಎಲ್ಲ ವಲಯಕ್ಕೂ ಜಾರಿಗೆ ತರಲಾಗಿದೆ. ಈ ಕಾಯ್ದೆಯನ್ನ ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದ್ದು, ಇದೇ ಕಾನೂನು ದೇಶಾದ್ಯಂತ ಎಲ್ಲ ಕಾರ್ಖಾನೆ ಹಾಗೂ ಕೆಲಸದ ಸ್ಥಳಗಳಿಗೆ ಅನ್ವಯವಾಗುತ್ತಿದೆ. ಇದಲ್ಲದೆ ಆಯಾ ರಾಜ್ಯಗಳಿಗೆ ಅನ್ವಯ ಆಗುವ ರೀತಿ ಸಾಂಸ್ಥಿಕ ಕಾಯ್ದೆಗಳು ಇವೆ. ಈ ಕಾಯ್ದೆಗಳು ಆಯಾ ರಾಜ್ಯದ ಕಾರ್ಮಿಕರು ಹಾಗೂ ಕೆಲಸಗಾರರ ಕೆಲಸದ ಅವಧಿ ನಿರ್ಧರಿಸುತ್ತವೆ. ಸಾಮಾನ್ಯವಾಗಿ ದೇಶಾದ್ಯಂತ ವಾರಕ್ಕೆ 48 ಗಂಟೆಗಳ ಕೆಲಸದ ಅವಧಿ ಜಾರಿಯಲ್ಲಿದೆ. ಅಂದರೆ ಒಂದು ದಿನಕ್ಕೆ ಗರಿಷ್ಠ 12 ಗಂಟೆ ದುಡಿಸಬಹುದು ಎಂದೂ ಕಾಯ್ದೆ ಹೇಳುತ್ತದೆ. 48 ಗಂಟೆಗೂ ಹೆಚ್ಚು ಅವಧಿ ದುಡಿಸಿದರೆ ಅದನ್ನು ಹೆಚ್ಚುವರಿ ಅವಧಿ ಎಂದು ಪರಿಗಣಿಸಲಾಗುತ್ತದೆ.

ಕರ್ನಾಟಕ ರಾಜ್ಯ ಕಾರ್ಖಾನೆಗಳ ಕಾಯ್ದೇ ಹೇಳುವುದೇನು?

ಕರ್ನಾಟಕ ರಾಜ್ಯದಲ್ಲಿ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ ಅಂಗೀಕಾರ ಆಗಿತ್ತು. ಇದರ ಪ್ರಕಾರ ಕಾರ್ಮಿಕರ ಒಂದು ದಿನದ ಕೆಲಸದ ಅವಧಿಯನ್ನು ಗರಿಷ್ಠ 12 ಗಂಟೆವರೆಗೆ ಹೆಚ್ಚಳ ಮಾಡಬಹುದು. ಆದರೆ ವಾರಕ್ಕೆ ಗರಿಷ್ಠ 48 ಗಂಟೆ ಕಾಲ ಮಾತ್ರ ದುಡಿಸಬೇಕು. ಹೆಚ್ಚುವರಿ ಅವಧಿಗೆ ಕೆಲಸ ಮಾಡಿಸಿದರೆ ಅದನ್ನ ಪಾವತಿ ರಜಾ ದಿನವನ್ನಾಗಿ ಪರಿಗಣಿಸಬೇಕು ಎಂದು ನಿಯಮ ರೂಪಿಸಲಾಗಿತ್ತು. ಜೊತೆಗೆ ಮಹಿಳಾ ಕಾರ್ಮಿಕರು ಒಪ್ಪಿದರೆ ಮಾತ್ರ ಅವರಿಗೆ ನೈಟ್ ಶಿಫ್ಟ್‌ನಲ್ಲಿ ದುಡಿಸಬಹುದಾಗಿದೆ.

ಹೊಸ ಕಾಯ್ದೆ ಪ್ರಕಾರ ವಾರದಲ್ಲಿ ಗರಿಷ್ಠ 48 ಗಂಟೆಗಳ ಕೆಲಸ. ವಿರಾಮ, ಮಧ್ಯಂತರಗಳನ್ನು ಒಳಗೊಂಡಂತೆ ಕೆಲಸದ ಅವಧಿ(ದೈನಂದಿನ ಗರಿಷ್ಠ) 9 ಗಂಟೆಯಿಂದ 12 ಗಂಟೆಗೆ ಹೆಚ್ಚಳವಾಗಿದೆ. ಇದಕ್ಕೆ ಕೆಲಸಗಾರನ ಲಿಖಿತ ಒಪ್ಪಿಗೆಯ ಅಗತ್ಯವಿದ್ದು, ಆಗ ಮಾತ್ರ ಕೆಲಸದ ಅವಧಿ 12 ಗಂಟೆಗಳಿಗೆ ವಿಸ್ತರಿಸಬಹುದು ಹೇಳುತ್ತದೆ.

ಒಬ್ಬ ಕಾರ್ಮಿಕ ದಿನಕ್ಕೆ 12 ಗಂಟೆಗಳಂತೆ ವಾರದಲ್ಲಿ ಒಟ್ಟು 48 ಗಂಟೆ ಕೆಲಸ ಮಾಡಿದರೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಿದಂತೆ ಆಗುತ್ತದೆ. ಉಳಿದ ದಿನಗಳನ್ನು ಪಾವತಿ ರಜಾ ದಿನಗಳನ್ನಾಗಿ ಪರಿಗಣಿಸಬೇಕಾಗುತ್ತದೆ. ಕಾರ್ಮಿಕನಿಗೆ ವಾರದ ಉಳಿದ ದಿನಗಳು ಪಾವತಿ ರಜಾ ದಿನಗಳಾಗಿ ಪರಿಗಣಿಸಬೇಕು ಎನ್ನುವುದು ಕಾಯ್ದೆಯಲ್ಲಿದೆ.

ಎರಡು ಬಗೆಯ ನಿಲುವುಗಳು

ನಾನು ದಿನಕ್ಕೆ 12 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡ್ತೇನೆ ಎಂದು ಹೇಳಿಕೊಳ್ಳುವುದು ಹೆಮ್ಮೆಯ ವಿಚಾರ ಆಗಿದೆ. ಆದರೆ, ಕೆಲಸದ ಅವಧಿ ಮುಖ್ಯವೋ? ಕೆಲಸದ ಗುಣಮಟ್ಟ ಮುಖ್ಯವೋ ಅನ್ನೋದು ಇಲ್ಲಿ ಅತಿ ಮುಖ್ಯ. ಆದರೆ, ಹೆಚ್ಚಿನ ಅವಧಿಗೆ ಕೆಲಸ ಏಕೆ ಮಾಡಬೇಕು ಅನ್ನೋದಕ್ಕೆ ಕೆಲವು ಉದ್ಯಮಿಗಳು ಕಾರಣ ಕೊಟ್ಟಿದ್ದಾರೆ. ತಾವು ಮಾಡುತ್ತಿರುವ ಉದ್ಯೋಗದಲ್ಲಿ ಬೆಳೆಯಲು ಇಚ್ಛಿಸುವ ಯುವಕರು, ಹೆಚ್ಚಿನ ಅವಧಿಗೆ ಕೆಲಸ ಮಾಡಿದರೆ ಆದಷ್ಟು ಬೇಗ ತನ್ನ ವೃತ್ತಿಯಲ್ಲಿ ಮೇಲೆ ಬರಬಹುದು, ಮೇಲುಗೈ ಸಾಧಿಸಬಹುದು ಅನ್ನೋದು ಕೆಲವು ಉದ್ಯಮಿಗಳ ನಿಲುವು.

ಇನ್ನು ಇದನ್ನು ವಿರೋಧಿಸುವ ಜನವೇ ಹೆಚ್ಚಾಗಿದ್ದಾರೆ. ಕೆಲಸ ಮಾಡುತ್ತಲೇ ಇದ್ದರೆ ವೈಯಕ್ತಿಕ ಜೀವನದ ಕಥೆ ಏನು? ಆರೋಗ್ಯದ ಕಥೆ ಏನು ಎನ್ನುವುದು ಅವರ ಪ್ರಮುಖ ಪ್ರಶ್ನೆ. ಜೀವನ ಮಾಡಲು ಉದ್ಯೋಗ ಬೇಕು. ಉದ್ಯೋಗ ಕೇವಲ ಉಪಜೀವನ ಅಷ್ಟೇ. ಉದ್ಯೋಗವೇ ಜೀವನವಲ್ಲ ಎನ್ನುವುದು ಅವರ ವಾದ.

Published On - 10:37 pm, Fri, 10 January 25

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ