ಬಿಸಿಲಿನ ಝಳಕ್ಕೆ ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದ ಬಳಿ ಹೇಮಾವತಿ ನದಿಯಲ್ಲಿ ಇಬ್ಬರು ಯುವಕರು ಮುಳುಗಿ ಮೃತಪಟ್ಟಿದ್ದಾರೆ. ಯುವಕರಿಬ್ಬರು ಬಿಸಿಲಿನ ಝಳದಿಂದಾಗಿ ಈಜಲು ಹೋಗಿ ಅಪಾಯಕ್ಕೀಡಾಗಿದ್ದಾರೆ. ಅಗ್ನಿಶಾಮಕ ದಳದವರು ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಈ ಘಟನೆ ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ, ಮಾರ್ಚ್ 22: ಬಿಸಿಲಿನ ಝಳ ಹಿನ್ನೆಲೆ ಸ್ನೇಹಿತರ ಜೊತೆ ಹೇಮಾವತಿ ನದಿಯಲ್ಲಿ (Hemavati River) ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವಂತಹ (death) ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಕಾಟಳ್ಳಿ ಗ್ರಾಮದ ಪ್ರಕಾಶ್(29) ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದ ಭರತ್(27) ಮೃತರು. ಸದ್ಯ ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಶವಗಳನ್ನು ಹೊರತೆಗೆದಿದ್ದಾರೆ. ಸಕಲೇಶಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾಂಗ್ ಹಿಡಿದು ಓಡಾಡಿದ ಮಹಿಳೆ: ವಿಡಿಯೋ ವೈರಲ್
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ ಉಂಟಾಗಿದ್ದು, ಮಹಿಳೆ ಲಾಂಗ್ ಹಿಡಿದು ಓಡಾಡಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಹಾಸನ ನಗರ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸ್ತಿರುವ ಗಂಡನ ಹಿಂದೆ ಹೆಂಡತಿ ಕೈಯಲ್ಲಿ ಲಾಂಗ್ ಹಿಡಿದು ಓಡಾಡಿದ್ದಾರೆ. ಲಾಂಗ್ ಹಿಡಿದು ಓಡಾಡುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಆಗಿದೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಾರು ಡಿಕ್ಕಿ: ಇಬ್ಬರು ಬೈಕ್ ಸವಾರರು ಸಾವು
ಕಾರು ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವಂತಹ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಸಿಂಧನಕೇರಾ ಬಳಿ ನಡೆದಿದೆ. ಸಿಂಧನಕೇರಾ ಗ್ರಾಮದ ಕಲ್ಲಪ್ಪ ಮೇತ್ರೆ(30) ಮತ್ತು ಹನುಮಂತ(32) ಮೃತರು. ಹುಮ್ನಾಬಾದ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಿಕ್ಷೆ ಬೇಡುತ್ತಿದ್ದವನಿಗೆ ನೆಲೆ ಕಲ್ಪಿಸಿದ ಅಂಗಡಿ ಮಾಲೀಕನ ಮೇಲೆ ಹಲ್ಲೆ: ಪರಾರಿ
ಭಿಕ್ಷೆ ಬೇಡುತ್ತಿದ್ದವನಿಗೆ ನೆಲೆ ಕಲ್ಪಿಸಿದ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಬೆಳಗಾವಿಯ ಚನ್ನಮ್ಮ ವೃತ್ತದ ಬಳಿ ನಡೆದಿದೆ. ವಿಶಾಲ್ ಜೋತಿರ್ಲಿಂಗ್ ಜಾಧವ್(38) ಹಲ್ಲೆಗೊಳಗಾದ ವ್ಯಕ್ತಿ. ಜಾಲಿ ಅಲಿಯಾಸ್ ಶಿವು ಎಂಬಾತನಿಂದ ಹಲ್ಲೆ ಆರೋಪ ಮಾಡಲಾಗಿದೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಯಾದಗಿರಿ: ಮದುವೆಯ ಆಸೆ ತೋರಿಸಿ ವಿಧವೆಯ ಜೊತೆ ಲವ್, ದೈಹಿಕ ಸಂಬಂಧ, ಲಕ್ಷಾಂತರ ರೂ. ವಂಚನೆ
ಭಿಕ್ಷೆ ಬೇಡಿಕೊಂಡಿದ್ದ ಜಾಲಿಗೆ ವಿಶಾಲ್ ಹಾಗೂ ಆತನ ಅಣ್ಣ ಸಾಗರ್ ಕೆಲಸ ಕಲಿಸಿದ್ದರು. ಚನ್ನಮ್ಮ ವೃತ್ತದ ಬಳಿ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡಿದ್ದ ವಿಶಾಲ್ ಜಾಧವ್, ಭಿಕ್ಷೆ ಬೇಡುತ್ತಿದ್ದ ಜಾಲಿಗೆ ಅಂಗಡಿಯಲ್ಲಿ ಕೆಲಸ ಕೊಟ್ಟಿದ್ದ. ಕ್ಷುಲ್ಲಕ ಕಾರಣಕ್ಕೆ ಸದ್ಯ ಆತನ ಮೇಲೆಯೇ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.