RCB vs KKR: ಪ್ರಸ್ತುತ ಕೋಲ್ಕತ್ತಾ ಹವಾಮಾನ ಹೇಗಿದೆ? ಇಲ್ಲಿದೆ ಟಿವಿ9 ಗ್ರೌಂಡ್ ರಿಪೋರ್ಟ್
IPL 2025, KKR vs RCB: ಐಪಿಎಲ್‌ನ 18ನೇ ಸೀಸನ್‌ನ ಆರಂಭಿಕ ಪಂದ್ಯವಾದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಪಂದ್ಯ ವಿಳಂಬವಾದರೆ ಅಥವಾ ರದ್ದಾದರೆ ಬಿಸಿಸಿಐನ ಹೆಚ್ಚುವರಿ ಸಮಯ ಮತ್ತು ಡಕ್‌ವರ್ತ್-ಲೂಯಿಸ್ ನಿಯಮಗಳನ್ನು ಅನ್ವಯಿಸಲಾಗುವುದು. 5 ಓವರ್‌ಗಳ ಕನಿಷ್ಠ ಆಟಕ್ಕೆ ಕಟ್-ಆಫ್ ಸಮಯವನ್ನು ನಿಗದಿಪಡಿಸಲಾಗಿದೆ.

ಐಪಿಎಲ್‌ನ 18 ನೇ ಸೀಸನ್ (IPL 2025) ಮಾರ್ಚ್ 22 ರ ಶನಿವಾರದಿಂದ ಅಂದರೆ ಇಂದಿನಿಂದ ಪ್ರಾರಂಭವಾಗಲಿದ್ದು, ಸೀಸನ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯ ಕೋಲ್ಕತ್ತಾದ ತವರು ಮೈದಾನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಶುಕ್ರವಾರ ಕೋಲ್ಕತ್ತಾದಲ್ಲಿ ಮಳೆಯಾಗಿದ್ದು, ಶನಿವಾರವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಅದರಂತೆ ಕೋಲ್ಕತ್ತಾದಲ್ಲಿ ಇಂದು ಕೂಡ ಮಳೆಯಾಗುತ್ತಿದೆ. ಸದ್ಯ ಕೋಲ್ಕತ್ತಾದಲ್ಲಿ ಯಾವ ಪರಿಸ್ಥಿತಿ ಎಂಬುದರ ಬಗ್ಗೆ ಟಿವಿ9 ಗ್ರೌಂಡ್ ರಿಪೋರ್ಟ್ ನೀಡುತ್ತಿದೆ.
ಪ್ರಸ್ತುತ ಕೋಲ್ಕತ್ತಾ ಹವಾಮಾನ ಹೇಗಿದೆ?
ಸದ್ಯದ ಮಾಹಿತಿ ಪ್ರಕಾರ, ಹವಾಮಾನ ಇಲಾಖೆ ಹೇಳಿದಂತೆ ಕೋಲ್ಕತ್ತಾ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಮಳೆಯಾಗಿದೆ. ಸಮಾಧಾನಕರ ಸಂಗತಿಯೆಂದರೆ ಪ್ರಸ್ತುತ ಮಳೆ ಬೀಳುತ್ತಿಲ್ಲ. ಆದರೆ ಮುಂದಿನ ಒಂದು ಅಥವಾ ಎರಡು ಗಂಟೆಗಳಲ್ಲಿ ಮಳೆಯಾಗುತ್ತದೆಯೇ ಎಂಬುದರ ಕುರಿತು ತಕ್ಷಣದ ಮಾಹಿತಿ ಇಲ್ಲ. ಹವಾಮಾನ ಇಲಾಖೆ ಇಂದು ಬೆಳಿಗ್ಗೆ ಮುಂದಿನ 24 ಗಂಟೆಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಅದರ ಪ್ರಕಾರ ಎಲ್ಲೋ ಅರ್ಲಟ್ ಕೂಡ ಘೋಷಿಸಿತ್ತು. ಅಂದರೆ ಇಂದು ಕೂಡ ಕೋಲ್ಕತ್ತಾದಲ್ಲಿ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಸದ್ಯಕ್ಕೆ ಆಕಾಶವು ಸ್ಪಷ್ಟವಾಗಿದ್ದು, ಅಲ್ಲಲ್ಲಿ ಮೋಡ ಕವಿದ ವಾತಾವರಣವಿದೆ. ಆದಾಗ್ಯೂ, ಸಂಜೆಯ ವೇಳೆಗೆ ಮಳೆಬರುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೆಚ್ಚುವರಿ ಸಮಯದ ನಿಯಮವೇನು?
ಐಪಿಎಲ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುತ್ತಿರುವುದು ಇದೇ ಮೊದಲೆನಲ್ಲ, ಈ ಹಿಂದೆಯೂ ಹಲವು ಪಂದ್ಯಗಳು ಮಳೆಯಿಂದ ರದ್ದಾಗಿದ್ದವು. ಹೀಗಾಗಿ ಮುನ್ನೇಚ್ಚರಿಕೆಯ ಕ್ರಮವಾಗಿ ಬಿಸಿಸಿಐ ನಿಯಮವನ್ನು ರೂಪಿಸಿದೆ. ಐಪಿಎಲ್ ನಿಯಮಗಳ ಪ್ರಕಾರ, ಲೀಗ್ ಹಂತದ ಪಂದ್ಯಗಳಲ್ಲಿ ಒಂದು ಗಂಟೆ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ. ಯಾವುದೇ ಅಡಚಣೆ ಅಥವಾ ವಿಳಂಬದ ಸಂದರ್ಭದಲ್ಲಿಯೂ ಪಂದ್ಯವನ್ನು ಪೂರ್ಣಗೊಳಿಸಬಹುದೆಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಕಟ್-ಆಫ್ ಸಮಯ: ಟಿ20 ಕ್ರಿಕೆಟ್ ನಿಯಮಗಳ ಪ್ರಕಾರ, ಯಾವುದೇ ಪಂದ್ಯದಲ್ಲಿ ಫಲಿತಾಂಶ ಹೊರಬಿಳಬೇಕೆಂದರೆ ಉಭಯ ತಂಡಗಳು ಕನಿಷ್ಠ ತಲಾ 5 ಓವರ್‌ಗಳನ್ನಾದರೂ ಆಡಬೇಕು. ಅಲ್ಲದೆ, ಯಾವುದೇ ಕಾರಣದಿಂದಾಗಿ ಐಪಿಎಲ್‌ನಲ್ಲಿ ಲೀಗ್ ಹಂತದ ಪಂದ್ಯ ವಿಳಂಬವಾದರೆ, 5 ಓವರ್‌ಗಳ ಪಂದ್ಯಕ್ಕೆ ಕಟ್-ಆಫ್ ಸಮಯವನ್ನು ರಾತ್ರಿ 10:56 ಕ್ಕೆ ನಿಗದಿಪಡಿಸಲಾಗಿದೆ. ಇದರರ್ಥ ಆಟವು ಈ ಸಮಯದೊಳಗೆ ಪ್ರಾರಂಭವಾಗಬೇಕು.
IPL 2025: ಐಪಿಎಲ್ ಟಿಕೆಟ್‌ಗಳನ್ನು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ? ಇಲ್ಲಿದೆ ಪೂರ್ಣ ವಿವರ
ಹೆಚ್ಚುವರಿ ಸಮಯ: ಐಪಿಎಲ್‌ನಲ್ಲಿ ಸಂಜೆ ಪಂದ್ಯಗಳ ಆರಂಭಿಕ ಸಮಯ ಸಂಜೆ 7.30 ಆಗಿದ್ದು, ವೇಳಾಪಟ್ಟಿಯ ಪ್ರಕಾರ, ಅದು ರಾತ್ರಿ 11 ಗಂಟೆಯೊಳಗೆ ಮುಗಿಯಬೇಕು. ಆದರೆ ಮಳೆ ಬಂದರೆ, ಪಂದ್ಯವನ್ನು ರಾತ್ರಿ 12:06 ರೊಳಗೆ ಮುಗಿಸಬೇಕು. ನಿಗದಿತ ಸಮಯದಲ್ಲಿ ಪಂದ್ಯ ಪೂರ್ಣಗೊಳ್ಳದಿದ್ದರೆ, ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಮಳೆ, ಮಂದ ಬೆಳಕು ಅಥವಾ ಇನ್ನಾವುದೇ ಕಾರಣದಿಂದಾಗಿ ಪಂದ್ಯ ವಿಳಂಬವಾದರೆ, ಓವರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತದೆ. ಆದರೆ ಯಾವುದೇ ಸಂದರ್ಭದಲ್ಲಿ ಈ ಸಂಖ್ಯೆ ಪ್ರತಿ ಇನ್ನಿಂಗ್ಸ್‌ಗೆ 5 ಓವರ್‌ಗಳಿಗಿಂತ ಕಡಿಮೆಯಿರಬಾರದು. ಓವರ್‌ಗಳನ್ನು ಕಡಿತಗೊಳಿಸಿದರೆ, ಡಕ್‌ವರ್ತ್-ಲೂಯಿಸ್ ನಿಯಮ (DLS) ಅನ್ವಯಿಸಲಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Sat, 22 March 25