IND W vs IRE W: ಸರಣಿ ಗೆಲುವಿನೊಂದಿಗೆ ವರ್ಷ ಆರಂಭಿಸಿದ ಟೀಂ ಇಂಡಿಯಾ
IND W vs IRE W: ಐರ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ ವನಿತಾ ಪಡೆ 116 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಸ್ಮೃತಿ ಮಂಧಾನ (73), ಪ್ರತೀಕಾ ರಾವಲ್ (67), ಹರ್ಲೀನ್ ಡಿಯೋಲ್ (89) ಮತ್ತು ಜೆಮಿಮಾ ರಾಡ್ರಿಗಸ್ (102) ಅವರ ಬಲಿಷ್ಠ ಇನ್ನಿಂಗ್ಸ್ ಆಧಾರದ ಮೇಲೆ 370 ರನ್ ಗಳಿಸಿತು. ಉತ್ತರವಾಗಿ ಐರ್ಲೆಂಡ್ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್‌ಗೆ 254 ರನ್ ಗಳಿಸಲಷ್ಟೇ ಶಕ್ತವಾಯಿತು.
ರಾಜ್‌ಕೋಟ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವನ್ನು 115 ರನ್‌ಗಳಿಂದ ಗೆದ್ದುಕೊಳ್ಳುವುದರೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ ವನಿತಾ ಪಡೆ ಏಕದಿನ ಸರಣಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಮೂಲಕ ಈ ವರ್ಷವನ್ನು ಸರಣಿ ಗೆಲುವಿನೊಂದಿಗೆ ಆರಂಭಿಸಿದೆ. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸದ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಟೀಂ ಇಂಡಿಯಾಕ್ಕೆ ಇದು ಸತತ ಮೂರನೇ ಸರಣಿಯ ಜಯವಾಗಿದೆ. ಐರ್ಲೆಂಡ್ ಸರಣಿಗೂ ಮುನ್ನ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಳ್ಳುವಲ್ಲಿ ಮಹಿಳಾ ತಂಡ ಯಶಸ್ವಿಯಾಗಿತ್ತು.
ನಿಯಮಿತ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಸ್ಮೃತಿ ಮಂಧಾನ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಜೆಮಿಮಾ ರಾಡ್ರಿಗಸ್ ಅವರ ಮೊದಲ ಏಕದಿನ ಶತಕ ಮತ್ತು ಸ್ಮೃತಿ, ಪ್ರತಿಕಾ ಹಾಗೂ ಹರ್ಲೀನ್ ಅವರ ಅರ್ಧಶತಕದ ನೆರವಿನಿಂದ 370 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ದೀಪ್ತಿ ಶರ್ಮಾ ನೇತೃತ್ವದ ಸ್ಪಿನ್ನರ್‌ಗಳ ಬಿಗಿಯಾದ ಬೌಲಿಂಗ್ ದಾಳಿಗೆ ತತ್ತರಿಸಿ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಮೂವರ ಅರ್ಧಶತಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತಕ್ಕೆ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಪ್ರತೀಕಾ ಮೊದಲ ವಿಕೆಟ್‌ಗೆ 156 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ನಾಯಕಿ ಸ್ಮೃತಿ ಕೇವಲ 54 ಎಸೆತಗಳಲ್ಲಿ 75 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರೆ, ಪ್ರತೀಕಾ ರಾವಲ್ ಕೂಡ (67) ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಹರ್ಲೀನ್ ಡಿಯೋಲ್ ಕೂಡ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಿ 89 ರನ್‌ಗಳ ಇನ್ನಿಂಗ್ಸ್ ಆಡಿದರು.
ಜೆಮಿಮಾ ಚೊಚ್ಚಲ ಶತಕ
ನಾಲ್ಕನೇ ಕ್ರಮಾಂಕದಲ್ಲಿ ಬಂದ ಜೆಮಿಮಾ ರಾಡ್ರಿಗಸ್ ಕೊನೆಗೂ ತಮ್ಮ ಶತಕದ ಬರವನ್ನು ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಪರ 7 ವರ್ಷಗಳಿಂದ ಆಡುತ್ತಿರುವ ಜೆಮಿಮಾಗೆ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಜೆಮಿಮಾ ಕೇವಲ 91 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 102 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತ ತಂಡ ಏಕದಿನದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆಯನ್ನು ಬರೆಯಿತು. ಇದಕ್ಕೂ ಮುನ್ನ ಭಾರತದ ಗರಿಷ್ಠ ಸ್ಕೋರ್ 358 ರನ್ ಆಗಿದ್ದು, ಕಾಕತಾಳೀಯವಾಗಿ ಅದೂ ಕೂಡ 2017ರಲ್ಲಿ ಐರ್ಲೆಂಡ್ ವಿರುದ್ಧವೇ ಬಂದಿತ್ತು.
ಐರಿಷ್ ಬ್ಯಾಟಿಂಗ್ ವೈಫಲ್ಯ
ಈ ಬೃಹತ್ ಗುರಿ ಬೆನ್ನಟ್ಟಿದ ಐರ್ಲೆಂಡ್ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ನಾಯಕಿ ಗ್ಯಾಬಿ ಲೂಯಿಸ್ 8ನೇ ಓವರ್‌ನಲ್ಲಿ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಕ್ರಿಸ್ಟಿನಾ ಕೌಲ್ಟರ್ ರಿಲೆ (82) ಬಲಿಷ್ಠ ಇನ್ನಿಂಗ್ಸ್ ಆಡಿದರೂ ಉಳಿದವರಿಂದ ಅವರಿಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ. ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ (3 ವಿಕೆಟ್) ಮತ್ತು ಪ್ರಿಯಾ ಮಿಶ್ರಾ (2 ವಿಕೆಟ್) ಐರ್ಲೆಂಡ್ ಮಧ್ಯಮ ಕ್ರಮಾಂಕವನ್ನು ಬೇಗನೇ ಪೆವಿಲಿಯನ್ಗಟ್ಟುವ ಕೆಲಸ ಮಾಡಿದರು. ಅಂತಿಮವಾಗಿ ಐರಿಷ್ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 254 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Sun, 12 January 25