AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ಇನ್ಮುಂದೆ ರೋಹಿತ್- ಕೊಹ್ಲಿಯೂ ರಣಜಿ ಆಡಬೇಕು; ಬಿಸಿಸಿಐ ಖಡಕ್ ಸೂಚನೆ

Team India: ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಸತತ ಸೋಲುಗಳಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಆ ಪ್ರಕಾರ ಹಿರಿಯ ಆಟಗಾರರು ದೇಶೀಯ ಕ್ರಿಕೆಟ್, ವಿಶೇಷವಾಗಿ ರಣಜಿ ಟ್ರೋಫಿಯಲ್ಲಿ ಆಡುವುದನ್ನು ಕಡ್ಡಾಯ ಮಾಡಿದೆ. ಇದಲ್ಲದೆ ಸ್ಟಾರ್ ಆಟಗಾರರ ಅನಗತ್ಯ ವಿಶ್ರಾಂತಿಗೆ ಬ್ರೇಕ್ ಹಾಕಲು ಬಿಸಿಸಿಐ ಚಿಂತಿಸಿದೆ.

Team India: ಇನ್ಮುಂದೆ ರೋಹಿತ್- ಕೊಹ್ಲಿಯೂ ರಣಜಿ ಆಡಬೇಕು; ಬಿಸಿಸಿಐ ಖಡಕ್ ಸೂಚನೆ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
|

Updated on: Jan 12, 2025 | 9:12 PM

ಸತತವಾಗಿ ಎರಡು ಪ್ರಮುಖ ಸರಣಿಗಳನ್ನು ಸೋತಿರುವ ಟೀಂ ಇಂಡಿಯಾದಲ್ಲಿ ಸರ್ಜರಿ ಕೆಲಸ ಆರಂಭವಾಗಿದೆ. ಅದರ ಪ್ರಯುಕ್ತ ಇಂದು ಮುಂಬೈನಲ್ಲಿ ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಟೆಸ್ಟ್ ತಂಡದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅದರಲ್ಲಿ ಹಳಿತಪ್ಪಿರುವ ಟೆಸ್ಟ್ ತಂಡವನ್ನು ಮತ್ತೆ ಗೆಲುವಿನ ದಾರಿಗೆ ತರುವುದು ಹೇಗೆ ಎಂಬುದರ ಮೇಲೆ ಹೆಚ್ಚಿನ ಗಮನ ಕೊಡಲಾಗಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಇನ್ನು ಕೆಲವು ವರ್ಷಗಳು ಆಡುವ ಇಂಗಿತವಿರುವ ಆಟಗಾರರು ಕಡ್ಡಾಯವಾಗಿ ದೇಶಿ ಕ್ರಿಕೆಟ್​ನಲ್ಲಿ ಅದರಲ್ಲೂ ರಣಜಿ ಟ್ರೋಫಿಯಲ್ಲಿ ಆಡಲೇಬೇಕೆಂಬ ಷರತ್ತು ವಿಧಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

2 ಟೆಸ್ಟ್ ಸರಣಿ ಸೋಲು

ಬಿಸಿಸಿಐ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಸೋತಿದ್ದು. ಈ ಎರಡೂ ಸರಣಿಗಳಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಹಳಿತಪ್ಪಿತು. ಅದರ ಪರಿಣಾಮವಾಗಿಯೇ ಟೀಂ ಇಂಡಿಯಾ ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್​ಗೆ ಟಿಕೆಟ್ ಪಡೆಯಲು ವಿಫಲವಾಯಿತು. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿಯೇ ತಂಡದಲ್ಲಿ ಸಾಕಷ್ಟು ಸುಧಾರಣೆ ತರಬೇಕೆಂದು ಮಾಜಿ ಹಿರಿಯ ಆಟಗಾರರು ಅಭಿಪ್ರಾಯಪಟ್ಟಿದ್ದರು. ಇದೀಗ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಬಿಸಿಸಿಐ, ದೇಶೀ ಕ್ರಿಕೆಟ್​ ಆಡಲು ಒಲ್ಲೆ ಎನ್ನುವ ಹಿರಿಯ ಆಟಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಮುಂದಾಗಿದೆ.

ಬಿಸಿಸಿಐ ಸಭೆಯಲ್ಲಿ ಏನಾಯ್ತು?

ಇಂದು ಮುಂಬೈನಲ್ಲಿ ಮಂಡಳಿಯ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉಪಸ್ಥಿತರಿದ್ದರು. ನಾಯಕ ರೋಹಿತ್ ಮತ್ತು ಕೋಚ್ ಗಂಭೀರ್ ಹೊರತುಪಡಿಸಿ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಹಾಜರಿದ್ದರು. ಈ ಸಭೆಯಲ್ಲಿ, ಟೆಸ್ಟ್ ಸರಣಿ ಸೋಲಿಗೆ ಕಾರಣಗಳನ್ನು ಚರ್ಚಿಸಲಾಯಿತು ಮತ್ತು ಟೀಂ ಇಂಡಿಯಾದ ಪ್ರದರ್ಶನ ಹಾಗೂ ಭವಿಷ್ಯದ ಬಗ್ಗೆಯೂ ಚರ್ಚಿಸಲಾಯಿತು. ಆದರೆ ಪ್ರಸ್ತುತ ಯಾವುದೇ ಪ್ರಮುಖ ಬದಲಾವಣೆಗಳನ್ನು ತಕ್ಷಣ ಮಾಡುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಲ್ಲೂ ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಈಗಿನ ಪರಿಸ್ಥಿತಿಯನ್ನು ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಸ್ಟಾರ್ ಆಟಗಾರರ ಕಳ್ಳಾಟಕ್ಕೆ ಬ್ರೇಕ್

ಈ ಸಭೆಯಲ್ಲಿ ಚರ್ಚೆಯಾಗಿರುವ ಪ್ರಮುಖ ವಿಷಯವೆಂದರೆ, ಸ್ಟಾರ್ ಆಟಗಾರರ ಕಳ್ಳಾಟಕ್ಕೆ ಬ್ರೇಕ್ ಹಾಕುವುದು ಹೇಗೆ ಎಂಬುದು. ವಾಸ್ತವವಾಗಿ ತಂಡದ ಕೆಲವು ಸ್ಟಾರ್ ಆಟಗಾರರು ಯಾವುದಾದರೊಂದು ಕಾರಣ ನೀಡಿ ದ್ವೀಪಕ್ಷಿಯ ಸರಣಿಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು. ಅಂತಹವರಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರದ್ದೇ ಸಿಂಹಪಾಲು. ಇದರಿಂದ ಬೇಸತ್ತಿರುವ ಬಿಸಿಸಿಐ ಇದಕ್ಕೆ ಸಂಬಂಧಿಸಿದಂತೆ ಕಠಿಣ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಆಟಗಾರರು ಸೂಕ್ತ ಕಾರಣವಿಲ್ಲದೆ ದ್ವಿಪಕ್ಷೀಯ ಸರಣಿಗಳಿಂದ ಹೊರಗುಳಿಯುವಂತಿಲ್ಲ.

ಅಷ್ಟೇ ಅಲ್ಲ, ಈಗ ಹಿರಿಯರಿರಲಿ, ಕಿರಿಯರಿರಲಿ ಎಲ್ಲರೂ ದೇಶೀಯ ಕ್ರಿಕೆಟ್ ಆಡಲೇಬೇಕು. ವರದಿಯ ಪ್ರಕಾರ, ಆಟಗಾರನು ರೆಡ್ ಬಾಲ್ ಕ್ರಿಕೆಟ್ ಆಡಲು ಬದ್ಧನಾಗಿದ್ದರೆ ಅವನು ದೇಶೀಯ ಕ್ರಿಕೆಟ್ ಆಡಬೇಕಾಗುತ್ತದೆ ಎಂದು ಈ ಹಿಂದೆಯೇ ಕೋಚ್ ಗಂಭೀರ್ ಸ್ಪಷ್ಟವಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಸ್ಟಾರ್ ಆಟಗಾರರು ದೇಶಿಯ ಕ್ರಿಕೆಟ್ ಟೂರ್ನಿಗಳಿಗೆ ಲಭ್ಯರಿರಬೇಕು ಎಂದು ಮಂಡಳಿ ಸೂಚನೆ ನೀಡಿದೆ. ಒಂದು ವೇಳೆ ಬಿಸಿಸಿಐ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ, ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಲು ಬಯಸಿದರೆ, ಅವರೂ ಕೂಡ ರಣಜಿಯಲ್ಲಿ ಆಡಬೇಕಾಗುತ್ತದೆ. ಆದಾಗ್ಯೂ ಬಿಸಿಸಿಐನ ಈ ಷರತ್ತು ಈ ಇಬ್ಬರಿಗೆ ಅನ್ವಯವಾಗುತ್ತಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ