VHT 2025: ಸತತ 4ನೇ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್; ಅಜೇಯ ತಂಡವಾಗಿ ಸೆಮೀಸ್ಗೇರಿದ ವಿದರ್ಭ
Karun Nair's Fourth Century: ವಿದರ್ಭ ತಂಡವು ರಾಜಸ್ಥಾನವನ್ನು ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಸೋಲಿಸಿದೆ. ಕರುಣ್ ನಾಯರ್ ಅವರು 122 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದು, ಇದು ಟೂರ್ನಿಯಲ್ಲಿ ಅವರ 5ನೇ ಹಾಗೂ ಸತತ 4ನೇ ಶತಕವಾಗಿದೆ. ಈ ಮೂಲಕ ಕರುಣ್ ನಾಯರ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕಗಳನ್ನು ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ನಿರ್ಮಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯನಲ್ಲಿ ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ, ರಾಜಸ್ಥಾನ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ವಡೋದರದ ಮೋತಿಬಾಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 8 ವಿಕೆಟ್ ನಷ್ಟಕ್ಕೆ 291 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವಿದರ್ಭ ತಂಡ ಇನ್ನು 39 ಎಸೆತಗಳು ಬಾಕಿ ಇರುವಂತೆಯೇ ಕೇವಲ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ನಾಯಕ ಕರುಣ್ ನಾಯರ್ ಈ ಟೂರ್ನಿಯಲ್ಲಿ ಸತತ 4ನೇ ಶತಕ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಎಂಬ ದಾಖಲೆಯನ್ನು ನಿರ್ಮಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡದ ಪರ ಶುಭಂ ಗರ್ವಾಲ್ 59, ಕಾರ್ತಿಕ್ ಶರ್ಮಾ 62 ಹಾಗೂ ದೀಪಕ್ ಹೂಡಾ 45 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಮೂವರನ್ನು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಆದಾಗ್ಯೂ ತಂಡ 291 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು.
ವಿದರ್ಭ ಪರ ಇಬ್ಬರ ಶತಕ
ಈ ಗುರಿ ಬೆನ್ನಟ್ಟಿದ ವಿದರ್ಭ ತಂಡದ ಪರ ಆರಂಭಿಕ ಧ್ರುವ್ ಶೋರೆ ಅಜೇಯ 118 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಕರುಣ್ ನಾಯರ್ ಕೂಡ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿ ಅಜೇಯ 122 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇದಲ್ಲದೆ ಕರುಣ್ ಹಾಗೂ ಧ್ರುವ್ ಮುರಿಯದ ವಿಕೆಟ್ 200 ರನ್‌ಗಳ ಜೊತೆಯಾಟವನ್ನಾಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 114 ಎಸೆತಗಳನ್ನು ಎದುರಿಸಿದ ಕರುಣ್ 122 ರನ್‌ಗಳ ಇನ್ನಿಂಗ್ಸ್ ಆಡಿದರು. ಕರುಣ್ ಕೇವಲ 77 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಸತತ ನಾಲ್ಕನೇ ಶತಕವನ್ನು ಪೂರ್ಣಗೊಳಿಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಈ ಮೈಲಿಗಲ್ಲು ತಲುಪಿದ ಮೂರನೇ ಭಾರತೀಯ ಮತ್ತು ವಿಶ್ವ ಕ್ರಿಕೆಟ್ನ ಐದನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕರುಣ್ ಪಾತ್ರರಾದರು.
ಒಂದೇ ಓವರ್ನಲ್ಲಿ 24 ರನ್
ಶತಕ ಸಿಡಿಸಿದ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ಕರುಣ್, ಖಲೀಲ್ ಅಹ್ಮದ್ ಅವರ ಒಂದೇ ಓವರ್ನ ಐದು ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 24 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ವಿದರ್ಭ ತಂಡವು ಡಿ ಗುಂಪಿನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ನಾಕೌಟ್‌ಗೆ ಅರ್ಹತೆ ಪಡೆದುಕೊಂಡಿತು
ಈ ಸಾಧನೆ ಮಾಡಿದ 3ನೇ ಭಾರತೀಯ
ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗ ಕರುಣ್ ನಾಯರ್ ಅವರ ಫಾರ್ಮ್ ಅದ್ಭುತವಾಗಿದೆ. ಈ ಪಂದ್ಯಕ್ಕೂ ಮುನ್ನ ಕರುಣ್ ಉತ್ತರ ಪ್ರದೇಶ, ತಮಿಳುನಾಡು, ಚಂಡೀಗಢ ಮತ್ತು ಛತ್ತೀಸ್‌ಗಢ ವಿರುದ್ಧ ಕ್ರಮವಾಗಿ 112*, 111*, 163* ಮತ್ತು 44* ಕಲೆಹಾಕಿದ್ದರು. ಇದಲ್ಲದೆ ನಾಯರ್ ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಶತಕ ಸಿಡಿಸುವ ಮೂಲಕ ಟೂರ್ನಮೆಂಟ್ ಪ್ರಾರಂಭಿಸಿದ್ದರು. ಈ ಮೂಲಕ ಕರುಣ್, ಜಗದೀಶನ್ ನಂತರ ವಿಜಯ್ ಹಜಾರೆ ಟ್ರೋಫಿಯ ಒಂದು ಆವೃತ್ತಿಯಲ್ಲಿ ಐದು ಶತಕಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ದೇವದತ್ ಪಡಿಕ್ಕಲ್ ಮತ್ತು ಜಗದೀಶನ್ ನಂತರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕಗಳನ್ನು ದಾಖಲಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ