Russia: ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾಕ್ಕೀಗ ದಂಗೆಯ ಬಿಸಿ; ಸೇನೆ ವಿರುದ್ಧವೇ ಶುರುವಾಯ್ತು ಬಂಡಾಯ
ರಷ್ಯಾದಲ್ಲಿ ಶುರುವಾಯ್ತು ಬಂಡಾಯ, ವ್ಲಾಡಿಮಿರ್ ಪುಟಿನ್ಗೆ ಈಗ ಅಂತರ್ಯುದ್ಧದ ಭೀತಿ. ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಬಂಡಾಯ ರಷ್ಯಾ ಸೇನೆಗೆ ಆಗುತ್ತಾ ನುಂಗಲಾರದ ತುತ್ತು?
ಮಾಸ್ಕೋ: ಉಕ್ರೇನ್ ವಿರುದ್ಧ ದೀರ್ಘ ಕಾಲದಿಂದ ಯುದ್ಧ ನಡೆಸುತ್ತಿರುವ ರಷ್ಯಾಕ್ಕೀಗ (Russia) ದೇಶದ ಒಳಗೇ ದಂಗೆಯ ಬಿಸಿ ತಟ್ಟತೊಡಗಿದೆ. ರಷ್ಯಾದ ವ್ಯಾಗ್ನರ್ ಗುಂಪಿನ (ಅರೆಸೇನಾ ಮಾದರಿಯಲ್ಲಿ ಸೇನೆಯ ಪರವಾಗಿ ಕಾರ್ಯನಿರ್ವಹಿಸುವ ಖಾಸಗಿ ಮಿಲಿಟರಿ ಕಂಪನಿ) ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಕ್ಷಣಾ ಸಚಿವಾಲಯದ ವಿರುದ್ಧ ಬಂಡಾಯವೆದ್ದಿದ್ದಾರೆ. ರಷ್ಯಾದ ರಕ್ಷಣಾ ನಾಯಕತ್ವದ ಸಾಮರ್ಥ್ಯವನ್ನು ಬಹಿರಂಗವಾಗಿ ಪ್ರಶ್ನಿಸಿರುವ ಮತ್ತು ಟೀಕಿಸಿರುವ ಪ್ರಿಗೊಜಿನ್, ರಷ್ಯಾದ ರಕ್ಷಣಾ ಸಚಿವರ ಆದೇಶದ ಮೇರೆಗೆ ತಮ್ಮ ಸೈನಿಕರ ಬೆಂಗಾವಲು ವಾಹನದ ಮೇಲೆ ಯುದ್ಧವಿಮಾನಗಳಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ದೇಶದಲ್ಲಿ ಸೇನಾ ನಾಯಕತ್ವವನ್ನು ಪತನಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ತಮ್ಮ ಪಡೆಗಳು ಎಲ್ಲವನ್ನೂ ನಾಶಗೊಳಿಸಲಿವೆ ಎಂದು ಅವರು ಘೋಷಿಸಿದ್ದಾರೆ.
ಇದರ ಬೆನ್ನಲ್ಲೇ, ರಷ್ಯಾದ ರಕ್ಷಣಾ ಸಚಿವಾಲಯವು ಪ್ರಿಗೋಜಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಸಶಸ್ತ್ರ ದಂಗೆಗಾಗಿ ಪ್ರಿಗೋಜಿನ್ 20 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಕ್ಷಣಾ ಸಚಿವಾಲಯವು ವ್ಯಾಗ್ನರ್ ಗುಂಪಿನ ಮುಖ್ಯಸ್ಥನ ಮೇಲೆ ಸಶಸ್ತ್ರ ದಂಗೆಯ ಆರೋಪ ಹೊರಿಸಿದೆ. ಇಷ್ಟೇ ಅಲ್ಲದೆ, ಪ್ರಿಗೋಜಿನ್ ಆದೇಶಗಳನ್ನು ಪಾಲಿಸದಂತೆ ವ್ಯಾಗ್ನರ್ ಗುಂಪಿನ ಪಡೆಗಳಿಗೆ ಮನವಿ ಮಾಡಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಮಧ್ಯೆ, ರಷ್ಯಾದ ಸೇನಾ ಪ್ರಧಾನ ಕಚೇರಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಡಾನ್‌ನಲ್ಲಿರುವ ರಷ್ಯಾದ ಮಿಲಿಟರಿ ಪ್ರಧಾನ ಕಛೇರಿ ರೊಸ್ಟೊವ್‌ನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಧಾನ ಕಚೇರಿಯ ಸುತ್ತಲೂ ಶಸ್ತ್ರಸಜ್ಜಿತ ವಾಹನಗಳು ಮತ್ತು ಶಸ್ತ್ರಸಜ್ಜಿತ ಸೈನಿಕರನ್ನು ನಿಯೋಜಿಸಲಾಗಿದೆ.
ಪ್ರಿಗೊಜಿನ್ ಬಂಡಾಯವೆದ್ದಿದ್ದೇಕೆ?
ವ್ಯಾಗ್ನರ್ ಗುಂಪು ಮುಂಚೂಣಿಯಲ್ಲಿ ಹೋರಾಡುತ್ತಿದೆ. ಈ ಹಿಂದೆಯೂ ಸಹ, ತಮ್ಮ ಸೈನಿಕರಿಗೆ ಸಾಕಷ್ಟು ಶಸ್ತ್ರಾಸ್ತ್ರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಪ್ರಿಗೊಜಿನ್ ಹಲವಾರು ಬಾರಿ ಆರೋಪಿಸಿದ್ದರು. ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ರಷ್ಯಾದ ಮಿಲಿಟರಿ ಜನರಲ್‌ಗಳೊಂದಿಗೆ ವ್ಯಾಗ್ನರ್ ಗುಂಪನ್ನು ನಾಶಮಾಡಲು ಬಯಸುತ್ತಾರೆ ಎಂದು ಪ್ರಿಗೊಜಿನ್ ಹೇಳಿದ್ದಾರೆ. ನಾವು ಮುಂದೆ ಸಾಗುತ್ತಿದ್ದೇವೆ ಮತ್ತು ಕೊನೆಯವರೆಗೂ ಹೋರಾಡುತ್ತೇವೆ. ನಮ್ಮ ಹಾದಿಗೆ ಅಡ್ಡಬರುವ ಯಾರನ್ನಾದರೂ ನಾಶಪಡಿಸುತ್ತೇವೆ ಎಂದು ಪ್ರಿಗೊಜಿನ್ ಹೇಳಿರುವುದು ರಷ್ಯಾದ ಆಂತರಿಕ ಬಂಡಾಯದ ತೀವ್ರತೆಯನ್ನು ಬಹಿರಂಗಪಡಿಸಿದೆ. ಪ್ರಿಗೊಜಿನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತರೂ ಆಗಿದ್ದರು.
ಈ ನಡೆಯು ರಾಜಕೀಯವಾಗಿ ಪ್ರಿಗೋಜಿನ್‌ನ ಅಂತ್ಯಕ್ಕೆ ಕಾರಣವಾಗಬಹುದು ಎಂದು ರಷ್ಯಾ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಇದು ರಷ್ಯಾದಲ್ಲಿ ಅಂತರ್ಯುದ್ಧಕ್ಕೆ ಕಾರಣವಾಗಬಹುದು ಎಂದು ಕೆಲವರು ಭಾವಿಸಿದ್ದಾರೆ. ಏಕೆಂದರೆ ಪ್ರಿಗೋಜಿನ್ ಅವರ ಬೆಂಬಲಿಗರು ರಷ್ಯಾದಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವ್ಲಾಡಿಮಿರ್ ಪುಟಿನ್ ಅವರು ಹೆಚ್ಚು ತೊಂದರೆಗಳನ್ನು ಎದುರಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Sat, 24 June 23