ಹೊಲದಲ್ಲಿ, ಕಣದಲ್ಲಿ, ಊಟದ ತಟ್ಟೆಯಲ್ಲಿ ಇಲಿಗಳೋ ಇಲಿಗಳು: ಮೂಷಿಕಗಳ ಹಾವಳಿಗೆ ತತ್ತರಿಸಿದ ಆಸ್ಟ್ರೇಲಿಯಾ

|

Updated on: Jun 07, 2021 | 6:19 AM

ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿ ಆಹಾರ ಧಾನ್ಯಗಳ ಬೆಳೆ ಹೆಚ್ಚು. ಆದರೆ ಇಲ್ಲೆಲ್ಲಾ ಇಲಿಗಳೋ ಇಲಿಗಳು. ಸ್ಥಳೀಯರಂತೂ ತಮ್ಮ ಜೀವಿತಾವಧಿಯಲ್ಲಿ ಇಷ್ಟೊಂದು ಇಲಿಗಳನ್ನು ನಾವು ನೋಡಿರಲೇ ಇಲ್ಲ ಎನ್ನುತ್ತಿದ್ದಾರೆ. ಹೊಲ-ತೋಟಗಳಲ್ಲಿರುವ ಬೆಳೆಗಳ ಜೊತೆಗೆ ಮನೆಗಳನ್ನೂ ಇಲಿಗಳು ಲೂಟಿ ಮಾಡುತ್ತಿವೆ.

ಹೊಲದಲ್ಲಿ, ಕಣದಲ್ಲಿ, ಊಟದ ತಟ್ಟೆಯಲ್ಲಿ ಇಲಿಗಳೋ ಇಲಿಗಳು: ಮೂಷಿಕಗಳ ಹಾವಳಿಗೆ ತತ್ತರಿಸಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ ಬೆಳೆ ಮುಕ್ಕುತ್ತಿರುವ ಇಲಿ.
Follow us on

ಆಸ್ಟ್ರೇಲಿಯಾದ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿದ ತಕ್ಷಣ ಕೆಟ್ಟ ವಾಸನೆ ನಿಮ್ಮನ್ನು ಸ್ವಾಗತಿಸುತ್ತೆ. ಏನೋ ಕಮಟು, ಕೊಳೆತು ನಾರುವ ಅಸಹ್ಯದ ವಾಸನೆ. ಅಯ್ಯಪ್ಪಾ ವಾಸನೆ ಅಂತ ನೀವು ಮೂಗು ಮುಚ್ಚಿಕೊಂಡು ಮುಂದಕ್ಕೆ ಹೋದರೆ ಕಿಚಿಪಿಚಿ ಕಿಚಿಪಿಚಿ ಸದ್ದು ನಿಮಗೆ ಕೇಳಿಸುತ್ತೆ. ಒಮ್ಮೊಮ್ಮೆ ಸಾಗರದ ಅಲೆಗಳಂತೆ, ಕೆಲವೊಮ್ಮೆ ಸಾಯುವವರ ಆರ್ತನಾದದಂತೆ, ಕಾಂಕ್ರಿಟ್ ಮೇಲೆ ಬೀಳುವ ದಪ್ಪದಪ್ಪ ಮಳೆಹನಿಗಳಂತೆ. ಹೆಚ್ಚುಹೊತ್ತು ಕೇಳಿಸಿಕೊಂಡರೆ ತಲೆನೋವು, ಮನಸ್ಸಿಗೆ ಕಿರಿಕಿರಿ ಅನ್ನಿಸುವ ಚಿತ್ರವಿಚಿತ್ರ ಸದ್ದು.

ಇದೇನು ವಾಸನೆ, ಇದೆಂಥ ಸದ್ದು ಅಂತ ಇಣುಕಿದರೆ ರಾಶಿರಾಶಿ ಇಲಿಗಳು ಕಣ್ಣಿಗೆ ಬೀಳುತ್ವೆ. ಮನೆ ಮೇಲೆ, ಕೆಳಗೆ, ಒಳಗೆ, ಸುತ್ತಮುತ್ತ ಎಲ್ಲೆಲ್ಲೂ ಇಲಿಗಳೋ ಇಲಿಗಳು. ಆಸ್ಟ್ರೇಲಿಯಾದಲ್ಲಿ ಇಲಿಗಳ ಕಾಟದಿಂದ ಹೈರಾಣಾಗಿರುವ ಲಕ್ಷಾಂತರ ರೈತ ಕುಟುಂಬಗಳ ಪೈಕಿ ಸಿಡ್ನಿ ಸಮೀಪ ಇರುವ ಫ್ರಾಗರ್ ಅವರ ಮನೆಯೂ ಒಂದು. ಹಲವು ವರ್ಷಗಳ ಬರಗಾಲ, ಕಾಳ್ಗಿಚ್ಚಿನ ನಷ್ಟದ ನಂತರ ಅವರ ಹೊಲದಲ್ಲಿ ಈ ವರ್ಷ ತಕ್ಕಮಟ್ಟಿಗೆ ಬೆಳೆ ಬಂದಿದೆ. ಆದರೆ ಇಲಿಗಳು ಎಲ್ಲವನ್ನೂ ತಿಂದುಮುಗಿಸುತ್ತಿವೆ.

ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿ ಆಹಾರ ಧಾನ್ಯಗಳ ಬೆಳೆ ಹೆಚ್ಚು. ಆದರೆ ಇಲ್ಲೆಲ್ಲಾ ಇಲಿಗಳೋ ಇಲಿಗಳು. ಸ್ಥಳೀಯರಂತೂ ತಮ್ಮ ಜೀವಿತಾವಧಿಯಲ್ಲಿ ಇಷ್ಟೊಂದು ಇಲಿಗಳನ್ನು ನಾವು ನೋಡಿರಲೇ ಇಲ್ಲ ಎನ್ನುತ್ತಿದ್ದಾರೆ. ಹೊಲ-ತೋಟಗಳಲ್ಲಿರುವ ಬೆಳೆಗಳ ಜೊತೆಗೆ ಮನೆಗಳನ್ನೂ ಇಲಿಗಳು ಲೂಟಿ ಮಾಡುತ್ತಿವೆ. ಬರಗಾಲದ ಹಿಡಿತದಿಂದ ಇದೀಗ ತಾನೆ ಬಿಡಿಸಿಕೊಂಡಿರುವ ಆಸ್ಟ್ರೇಲಿಯಾದಲ್ಲಿ ಇಲಿಗಳ ದರ್ಬಾರು ಎಗ್ಗಿಲ್ಲದೆ ಸಾಗಿದೆ. ದಕ್ಷಿಣ ಕ್ವೀನ್ಸ್​ಲ್ಯಾಂಡ್​ನ ದೊಡ್ಡ ಭೂಪ್ರದೇಶ ಇದೀಗ ಇಲಿಗಳ ಹಾವಳಿಯಿಂದ ಬೋಳಾಗಿದೆ. ನ್ಯೂ ಸೌತ್​ ವೇಲ್ಸ್​ ಮತ್ತು ಉತ್ತರ ವಿಕ್ಟೋರಿಯಾದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಬೆಳೆದು ನಿಂತಿರುವ ಬೆಳೆಗಳನ್ನು ತಿಂದು ಹಾಕುತ್ತಿರುವುದಷ್ಟೇ ಅಲ್ಲ, ಹಾಸಿಗೆಗಳಲ್ಲಿ ಮಲಗಿರುವ ಜನರನ್ನು ಇಲಿಗಳು ಕಚ್ಚಿವೆ. ಏರ್​ಕಂಡೀಷನಿಂಗ್ ಯೂನಿಟ್​ಗಳನ್ನು ಹಾಳು ಮಾಡುತ್ತಿವೆ, ಫ್ರಿಜ್, ವಾಷಿಂಗ್​ಮಷಿನ್​ನಂಥ ದಿನಬಳಕೆ ವಸ್ತುಗಳಲ್ಲಿ ಬೀಡುಬಿಟ್ಟಿವೆ. ಮೊಬೈಲ್​ ಟವರ್​ನಲ್ಲಿ ವೈರ್​ಗಳನ್ನು ತಿಂದು ಹಾಕಿದ ಕಾರಣ ಒಂದಿಡೀ ಊರಿನಲ್ಲಿ ಒಮ್ಮೆ ಮೊಬೈಲ್ ಕನೆಕ್ಷನ್ ಕಟ್ ಆಗಿತ್ತು. ಮನೆಯೊಂದರ ಎಲೆಕ್ಟ್ರಿಕ್ ವೈರ್​ಗಳನ್ನು ಇಲಿಗಳು ಜಗಿದ ಕಾರಣ, ಶಾರ್ಟ್​ ಸರ್ಕೀಟ್​ನಿಂದ ಬೆಂಕಿ ಹೊತ್ತಿಕೊಂಡು ಮನೆ ಸುಟ್ಟು ಹೋಗಿತ್ತು.

ಆಸ್ಟ್ರೇಲಿಯಾದ ಗೋದಾಮಿನಲ್ಲಿ ಧಾನ್ಯ ಮುಕ್ಕುತ್ತಿರುವ ಇಲಿಗಳು

ಇಲಿ ಹಿಡಿಯಲು ನಾನಾ ಸರ್ಕಸ್
ಹಲವು ಜನರ ನಿತ್ಯದ ಬದುಕು ಸಹ ಇಲಿಗಳ ಕಾಟದಿಂದ ಬದಲಾಗಿದೆ. ಅಂಗಡಿ ಮಾಲೀಕರು ಇಲಿಗಳನ್ನು ಹಿಡಿಯಲು ಬೋನುಗಳನ್ನು ಇರಿಸುತ್ತಿದ್ದಾರೆ. ಅದಕ್ಕೆ ಬೀಳುವ ಇಲಿಗಳನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತಿದ್ದಾರೆ. ಸತ್ತ ಇಲಿಗಳನ್ನು ಕೊಲ್ಲಲೆಂದೇ ಮನೆಗಳ ಹಿತ್ತಲಲ್ಲಿ ಚಿತಾಗಾರಗಳಂತೆ ನಿಗದಿತ ಸ್ಥಳಗಳು ರೂಪುಗೊಂಡಿವೆ. ಮನೆಯ ಸ್ಟೋರ್​ರೂಂಗಳ ಚೀಲಗಳು ತೂತಾಗಿ ಧಾನ್ಯಗಳು ನೆಲಕ್ಕೆ ಚೆಲ್ಲುತ್ತಿವೆ. ಸತ್ತ ಇಲಿಗಳ ವಾಸನೆ ಬರಬಾರದು ಎಂಬ ಕಾರಣಕ್ಕೆ ಆಸ್ಪತ್ರೆಗಳು ಸುವಾಸನೆಗಳನ್ನು ಹರಡುವ ಡಿಫ್ಯೂಸರ್​ಗಳನ್ನು ಬಳಸುತ್ತಿವೆ. ಆದರೆ ಇದರಿಂದ ಅಂಥ ಉತ್ತಮ ಫಲವೇನೂ ಸಿಕ್ಕಿಲ್ಲ ಎನ್ನಿ.

ಇಲಿಗಳ ಕಾಟದಿಂದಾಗಿ ಹಲವು ರೈತರಿಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಮೂಟೆಗಳಲ್ಲಿ ಇಲಿಗಳ ಪಿಚಿಕೆ ಕಂಡ ಇತರ ದೇಶಗಳ ವ್ಯಾಪಾರಿಗಳನ್ನು ಬೆಳೆಗಳನ್ನು ತಿರಸ್ಕರಿಸಿದ್ದಾರೆ. ಹಲವು ರೈತರಿಗೆ ಈ ವರ್ಷ ಗೋಧಿ ಬಿತ್ತನೆ ನಡೆದೀತೆ ಎಂಬ ಬಗ್ಗೆ ಆತಂಕವಿದೆ. ಬಿತ್ತನೆಗೆಂದು ಹೊಲದಲ್ಲಿ ಚೆಲ್ಲಿದ ಕಾಳುಗಳನ್ನೂ ಇಲಿಗಳು ಮುಕ್ಕುತ್ತವೆ. ಬಿತ್ತನೆ ತಡವಾದಷ್ಟೂ ಇಳುವರಿ ಕಡಿಮೆಯಾಗುವ ಅಥವಾ ಕಾಳುಕಟ್ಟದಿರುವ ಆತಂಕ ಹೆಚ್ಚಾಗುತ್ತದೆ.

ಸಾಮಾನ್ಯವಾಗಿ 10 ವರ್ಷಗಳಿಗೊಮ್ಮೆ ಆಸ್ಟ್ರೇಲಿಯಾ ಇಲಿಗಳ ಕಾಟದಿಂದ ತತ್ತರಿಸುತ್ತದೆ. ಕಳೆದ ವರ್ಷ ಮಳೆ ಚೆನ್ನಾಗಿ ಬಂದ ಕಾರಣ ರೈತರ ಕಣಜಗಳು ತುಂಬಿದ್ದವು. ತಮ್ಮ ಸಾಕುಪ್ರಾಣಿಗಳಿಗಾಗಿಯೂ ರೈತರು ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ ಈ ಆಹಾರ ಧಾನ್ಯ ಇಲಿಗಳು ಬೆಳೆಯಲು ಪೂರಕವಾಯಿತು. ಬೆಳೆ ಪದ್ಧತಿಯಲ್ಲಿ ಬದಲಾವಣೆಯಾಗುತ್ತಿರುವುದು ಸಹ ಇಲಿಗಳ ಕಾಟ ಹೆಚ್ಚಾಗಲು ಮುಖ್ಯಕಾರಣವಾಗಿದೆ. ಪ್ರತಿವರ್ಷ ರೈತರು ಕೃಷಿತ್ಯಾಜ್ಯವನ್ನು ಸುಟ್ಟು, ಮತ್ತೊಂದು ಬೆಳೆ ಬಿತ್ತುತ್ತಿದ್ದು. ಆದರೆ ಕಳೆದ 15 ವರ್ಷಗಳ ಈಚೆಗೆ ಅವರು ಹಳೆಯ ಕೃಷಿ ತ್ಯಾಜ್ಯ ಇದ್ದಾಗಲೇ ಹೊಸ ಬೆಳೆಗೆ ಬಿತ್ತನೆ ಮಾಡಲು ಶುರು ಮಾಡಿದ್ದಾರೆ. ಹೀಗೆ ಮಾಡುವುದರಿಂದ ಪರಿಸರ ಮಾಲಿನ್ಯವೂ ತಗ್ಗುತ್ತದೆ ಎನ್ನುವುದು ಅವರು ಬದಲಾಗಲು ಮುಖ್ಯ ಕಾರಣ. ಆದರೆ ಇದು ಇಲಿಗಳಿಗೆ ಆಹಾರ ಮತ್ತು ವಸತಿ ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ವಿಪರ್ಯಾಸ.

ಇಲಿಗಳನ್ನು ಹಿಡಿಯಲು ಒದ್ದಾಡುತ್ತಿರುವ ಆಸ್ಟ್ರೇಲಿಯಾ ರೈತರು

21 ದಿನಗಳ ಸಂತಾನ ಚಕ್ರ
ನೈಸರ್ಗಿಕ ಮತ್ತು ಮನುಷ್ಯ ನಿರ್ಮಿತ ಕಾರಣಗಳ ಜೊತೆಗೆ ಇಲಿಗಳ ಅತ್ಯಂತ ವೇಗದ ಸಂತಾನೋತ್ಪತ್ತಿಯೂ ಇಲಿಗಳ ಸಂಖ್ಯಾಸ್ಫೋಟಕ್ಕೆ ಮುಖ್ಯಕಾರಣವಾಗಿದೆ. ಇಲಿಗಳ ಸಂತಾನ ಚಕ್ರ ಕೇವಲ 21 ದಿನಗಳು. ಅಂದರೆ ಬೆದೆಗೆ ಬಂದ ಇಲಿಗಳು 21 ದಿನಗಳಲ್ಲಿ ಮರಿಗಳಿಗೆ ಜನ್ಮನೀಡುತ್ತವೆ. ಈ ಬಾರಿ ಇಲಿಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಇರುವುದೂ ಸಂಖ್ಯಾಸ್ಫೋಟಕ್ಕೆ ಕಾರಣವಾಗಿದೆ. ಇಲಿಗಳ ಸಂಖ್ಯಾಸ್ಫೋಟ ಯಾವಾಗ ಆಗುತ್ತೆ ಎಂಬುದನ್ನು ಗುರುತಿಸುವುದು ಸುಲಭ. ಆದರೆ ಎಂದು ಮುಗಿಯುತ್ತದೆ ಎಂದು ಹೇಳುವುದು ಕಷ್ಟ ಎನ್ನುತ್ತಾರೆ ಆಸ್ಟ್ರೇಲಿಯಾ ಸರ್ಕಾರದ ಇಲಿ ತಜ್ಞ ಸ್ಟೀವ್ ಹೆನ್ರಿ.

‘ದೇಶದಲ್ಲಿ ಇಲಿಗಳ ಸಂಖ್ಯೆ ವಿಪರೀತ ಎನ್ನುವಷ್ಟು ಹೆಚ್ಚಾಗಿದೆ. ಒಂದು ಇಲಿ ಹಲವು ಇಲಿಗಳ ಗುಂಪುಗಳೊಂದಿಗೆ ಓಡಾಡುತ್ತಿದೆ. ಹೀಗಾಗಿ ರೋಗ ತಗುಲುವ ಅಪಾಯ ಹೆಚ್ಚಾಗಿದೆ. ಇಲಿಗಳಿಗೆ ಆಹಾರವೂ ಸಿಗುತ್ತಿಲ್ಲ. ಹೀಗಾಗಿ ತಮ್ಮ ಮರಿಗಳನ್ನೇ ತಿನ್ನುತ್ತಿವೆ. ನಾವು ಏನು ಮಾಡಿದರೂ ಇಲಿಗಳ ಸಂಖ್ಯೆ ನಿಯಂತ್ರಿಸುವುದು ಕಷ್ಟ. ಆದರೆ ಅವು ತಮ್ಮ ಮರಿಗಳನ್ನೇ ಹೆಚ್ಚುಹೆಚ್ಚಾಗಿ ತಿನ್ನುವ ಕಾಲ ಬಂದಾಗ ಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ’ ಎನ್ನುತ್ತಾರೆ ಅವರು.

ಒಂದು ವೇಳೆ ಈ ಚಳಿಗಾಲ ಮುಗಿಯುವುದರ ಒಳಗೆ ಇಲಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಮುಂದಿನ ಬೇಸಿಗೆಯಲ್ಲಿ ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಇನ್ನೂ ಹೆಚ್ಚಿನ ನಷ್ಟವನ್ನು ಅವು ತಂದೊಡ್ಡಬಹುದು. ಈ ಸಮಸ್ಯೆ ಮುಗಿಯುವವರೆಗೆ ಇಲಿಗಳು ಆಸ್ಟ್ರೇಲಿಯಾದ ಗ್ರಾಮೀಣ ಪ್ರದೇಶಗಳಲ್ಲಿ ಮಾನಸಿಕ ಸಮಸ್ಯೆ ತಂದೊಡ್ಡುವುದು ಖಚಿತ. ಈ ಪ್ರದೇಶಗಳಲ್ಲಿ ಬಹುತೇಕ ಜನರು ಸ್ವಾವಲಂಬಿಗಳು. ಇತರರಿಂದ ಸಹಾಯ ಯಾಚಿಸುವುದನ್ನು ಅವಮಾನ ಎಂದುಕೊಳ್ಳುತ್ತಾರೆ. ಇಂಥವರು ಈಗ ಇಲಿಗಳ ಎದುರು ಸೋಲುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ದೇಶಕ್ಕೆ ಅನ್ನ ಕೊಡುತ್ತಿದ್ದ, ಅಲ್ಲಿನ ಆರ್ಥಿಕತೆಯ ಬೆನ್ನೆಲುಬಾಗಿದ್ದ ರೈತರು ಇದೀಗ ಅಸಹಾಯಕರಾಗಿ ಸರ್ಕಾರದ ನೆರವು ಬೇಡುವ ಸ್ಥಿತಿಗೆ ಬಂದು ನಿಂತಿದ್ದಾರೆ.

(Explainer in Kannada on Mice Population Increased in Australia many problems in rural areas mouse plague mice rain)

ಇದನ್ನೂ ಓದಿ: ಭೂಮಿಯಲ್ಲಿ ಅವಿತಿಟ್ಟ ಸ್ಫೋಟಕಗಳನ್ನು ಪತ್ತೆ ಮಾಡಿ ಅನೇಕ ಪ್ರಾಣಗಳನ್ನು ಉಳಿಸಿದ ದೈತ್ಯ ಇಲಿ ವೃತ್ತಿಗೆ ವಿದಾಯ ಹೇಳಿದೆ!

ಇದನ್ನೂ ಓದಿ: ಒತ್ತಡ ಹೆಚ್ಚಾದಷ್ಟೂ ಕೂದಲು ಉದುರುವುದೇಕೆ? ಇಲಿಗಳ ಮೇಲೆ ನಡೆಸಿದ ಅಧ್ಯಯನ ಬಿಟ್ಟುಕೊಟ್ಟ ಗುಟ್ಟು