PM Modi UAE Visit: ಅರಬ್ ರಾಷ್ಟ್ರಕ್ಕೆ ಮೋದಿ ಆಗಮನ, ಆತ್ಮೀಯವಾಗಿ ಬರಮಾಡಿಕೊಂಡ ಯುಎಇ ಕ್ರೌನ್ ಪ್ರಿನ್ಸ್
ಪ್ರಧಾನಿ ಮೋದಿ ಅವರನ್ನು ಅಬುಧಾಬಿ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ವಿಧ್ಯುಕ್ತವಾಗಿ ಬರಮಾಡಿಕೊಂಡಿದ್ದಾರೆ.
ದೆಹಲಿ, ಜುಲೈ 15: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಪ್ರವಾಸ ಮುಗಿಸಿ, ಯುಎಇಗೆ ಭೇಟಿ ನೀಡಿದ್ದಾರೆ. ಮೋದಿ ಅಬುಧಾಬಿಗೆ ರಾಜತಾಂತ್ರಿಕ ಭೇಟಿ ನೀಡಿದ್ದು, ಅವರನ್ನು ಅಬುಧಾಬಿ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಭಾರತ-ಯುಎಇ ನಡುವಿನ ಸಂಬಂಧವು ಉತ್ತಮವಾಗಿ ಬಲಗೊಳ್ಳುತ್ತಿದೆ, ಇನ್ನೂ ಮುಂದಕ್ಕೂ ಈ ಸ್ನೇಹ ಮುಂದುವರಿಯಬೇಕಿದೆ ಎಂದು ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಭೇಟಿ ನೀಡಿದ್ದಾರೆ. ಜಾಗತಿಕ ಸಮಸ್ಯೆಗಳು, ಇಂಧನ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ರಕ್ಷಣೆ ಮತ್ತು ಸಂಸ್ಕೃತಿಯಂತಹ ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ಉಭಯ ರಾಷ್ಟ್ರಗಳ ನಾಯಕರು ಮಾತುಕತೆ ನಡೆಸಲಿದ್ದು, ಈ ಮೂಲಕ ಭಾರತದ G-20 ಸಭೆಗೆ ಯುಎಇಗೆ ವಿಶೇಷವಾಗಿ ಆಹ್ವಾನ ಕೂಡ ನೀಡಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
#WATCH | PM Modi arrives in Abu Dhabi, UAE on an official visit, to hold meeting with President Sheikh Mohamed bin Zayed Al Nahyan on key bilateral issues pic.twitter.com/DJRAlBUOge
— ANI (@ANI) July 15, 2023
ಭಾರತ – ಯುಎಇ ನಡುವೆ ಬೆಳೆಯುತ್ತಿರುವ ಸ್ನೇಹ
ಪ್ರಧಾನಿ ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಇದು ಐದನೇ ಭೇಟಿಯಾಗಿದೆ. ಕಳೆದ ವರ್ಷವೂ ಪ್ರಧಾನಿ ಮೋದಿ, ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಿಂದ ಹಿಂದಿರುಗುವಾಗ ಯುಎಇಗೆ ಹೋಗಿ ಬಂದಿದ್ದರು. ಯುಎಇಗೆ ಪ್ರಧಾನಿ ಮೋದಿ ನೀಡಿದ ಭೇಟಿ ಉಭಯ ದೇಶಗಳ ಸಮಗ್ರ ಕಾರ್ಯತಂತ್ರಕ್ಕೆ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಭಾರತ ಸರ್ಕಾರ ಹೇಳಿದೆ.
ಭಾರತ-ಯುಎಇ ಎಲ್ಲ ಕ್ಷೇತ್ರದಲ್ಲೂ ಒಟ್ಟಾಗಿ ಕೆಲಸ ಮಾಡುತ್ತಿದೆ. ಇಂಧನ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಫಿನ್‌ಟೆಕ್, ರಕ್ಷಣೆ ಮತ್ತು ಸಂಸ್ಕೃತಿಯಂತಹ ವಿವಿಧ ಕ್ಷೇತ್ರಗಳಲ್ಲಿ ಒಟ್ಟಾಗಿ ಹೋಗಲು ಸಹಾಯವಾಗಲಿದೆ ಈ ಭೇಟಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದ್ದು, ಕಳೆದ ವರ್ಷ ಭಾರತ ಮತ್ತು ಯುಎಇ ನಡುವೆ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಸಹಿ ಹಾಕಿದೆ. ಈ ಒಪ್ಪಂದ ಕೂಡ ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜತೆಗೆ ಯುಎಇಗೆ ಭಾರತದ ರಫ್ತುಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ವಿಶೇಷವಾಗಿ ತೈಲದ ವಿಷಯದಲ್ಲಿ ಹೆಚ್ಚು ಲಾಭವನ್ನು ಪಡೆದುಕೊಂಡಿದೆ.
ಎರಡು ರಾಷ್ಟ್ರಗಳ ನಡುವಿನ ವ್ಯಾಪಾರದ ಪ್ರಮಾಣವು ಗರಿಷ್ಠ ಮಟ್ಟವನ್ನು ತಲುಪಿದೆ, 2021-2022 ರ ಆರ್ಥಿಕ ವರ್ಷದಲ್ಲಿ $ 72.9 ಶತಕೋಟಿಯಿಂದ (5987.55) 2022-2023ರ ಆರ್ಥಿಕ ವರ್ಷದಲ್ಲಿ $ 84.5 ಶತಕೋಟಿಗೆ (6940.3 ) ಏರಿದೆ, ಇದು ವರ್ಷದಿಂದ ವರ್ಷಕ್ಕೆ 16 ಶೇಕಡಾದಷ್ಟು ಹೆಚ್ಚಳವಾಗಿದೆ.
ಯುಎಇಯೊಂದಿಗಿನ ನಮ್ಮ ಸಂಬಂಧವು ವೈಯಕ್ತಿಕ ಅಂಶವನ್ನೂ ಒಳಗೊಂಡಿದ್ದು, ಯುಎಇ 3.5 ಮಿಲಿಯನ್ (3,000,000) ಭಾರತೀಯರಿಗೆ ವಾಸವಾಗಲು ಅವಕಾಶ ನೀಡಿದೆ, ಇದು ಯುಎಇಯಲ್ಲಿರುವ ಅತಿದೊಡ್ಡ ವಲಸಿಗ ಸಮುದಾಯವಾಗಿದೆ. ಯುಎಇ ಭಾರತೀಯರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದು, ಇದು ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಇತ್ತೀಚೆಗೆ ಯುಎಇ ಸರ್ಕಾರವು ಅಬುಧಾಬಿಯಲ್ಲಿ ದೇವಾಲಯದ ನಿರ್ಮಾಣಕ್ಕಾಗಿ 26 ಎಕರೆ ಭೂಮಿಯನ್ನು ಮಂಜೂರು ಮಾಡಿತು. ಇದು ಉಭಯ ದೇಶಗಳ ನಡುವಿನ ಪರಸ್ಪರ ಗೌರವ ಮತ್ತು ಸಹಕಾರದ ಬೆಳವಣಿಗೆಯ ಸಂಕೇತವಾಗಿದೆ. 2019 ರಲ್ಲಿ, ಪಾಕಿಸ್ತಾನದ ಆಕ್ಷೇಪಣೆಗಳ ಹೊರತಾಗಿಯೂ, ಯುಎಇ ಆಯೋಜಿಸಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆಯ ಸಭೆಗೆ ಭಾರತವನ್ನು “ಗೌರವ ಅತಿಥಿ” ಎಂದು ಆಹ್ವಾನಿಸಲಾಯಿತು. ಈ ಕಾರಣಕ್ಕೆ ಪಾಕಿಸ್ತಾನ ಈ ಸಭೆಯನ್ನು ಬಹಿಷ್ಕರಿಸಿತ್ತು.
ಇದನ್ನೂ ಓದಿ: ಫ್ರಾನ್ಸ್ ಪ್ರವಾಸ ಮುಗಿಸಿ ಯುಎಇಗೆ ತೆರಳಿದ ಪ್ರಧಾನಿ ಮೋದಿ
ವ್ಯಾಪಾರ ಮತ್ತು ರಕ್ಷಣಾ ವಲಯದಲ್ಲಿ ಅಭಿವೃದ್ಧಿ
ಯುಎಇ ಮತ್ತು ಭಾರತವು 2022ರಲ್ಲಿ ಸಹಿ ಮಾಡಿದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು (ಸಿಇಪಿಎ) ದೇಶಗಳ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ಗಣೀನಿಯ ಅಭಿವೃದ್ಧಿಯನ್ನು ಕಂಡಿದೆ. ಯುನೈಟೆಡ್ ಸ್ಟೇಟ್ಸ್ (ಯುಎಸ್) ಮತ್ತು ಚೀನಾ ನಂತರ ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಹೇಳಲಾಗಿದೆ.
ಇದರ ಜತೆಗೆ ದ್ವಿಪಕ್ಷೀಯ ವ್ಯಾಪಾರದಲ್ಲಿ 30 ಪ್ರತಿಶತದಷ್ಟು ನಿರೀಕ್ಷಿತ ಹೆಚ್ಚಳ ಮತ್ತು ಭಾರತದಲ್ಲಿ ಸುಮಾರು ಒಂದು ಮಿಲಿಯನ್ ಉದ್ಯೋಗಗಳ ಸೃಷ್ಟಿಸುವ ಗುರಿಯನ್ನು ಹೊಂದಿದೆ. ಭಾರತದ ತೈಲ ವಲಯ ಮತ್ತು ಹೈಡ್ರೋಕಾರ್ಬನ್ ಅಲ್ಲದ ವಲಯಗಳಲ್ಲಿನ ಹೂಡಿಕೆಗಳು ಭಾರತಕ್ಕೆ ಅಗಾಧವಾದ ಶಕ್ತಿ ಮತ್ತು ಆರ್ಥಿಕ ಪ್ರಯೋಜನಗಳನ್ನು ಉಂಟುಮಾಡವ ಸಾಧ್ಯತೆ ಇದೆ.
ಯುಎಇ ಭಾರತಕ್ಕೆ ಪ್ರಮುಖ ರಕ್ಷಣಾ ಪಾಲುದಾರನಾಗಿಯೂ ಕಾರ್ಯನಿರ್ವಹಿಸುತ್ತದೆ. ಉಭಯ ದೇಶಗಳ ನಡುವೆ ಸೇನಾ ಸಹಕಾರದಲ್ಲೂ ದೊಡ್ಡ ಪಾತ್ರವನ್ನು ಹೊಂದಿದೆ. ಮಿಲಿಟರಿ ಶಿಕ್ಷಣ ಜತೆಗೆ ಜಂಟಿ ನೌಕಾ ಅಭ್ಯಾಸಗಳನ್ನು ಮತ್ತು ಬಂದರುಗಳಲ್ಲಿ ಪರಸ್ಪರ ಸೌಹಾರ್ದತೆಯಿಂದ ಕೆಲಸ ಮಾಡುತ್ತಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Sat, 15 July 23