ಕಳೆದ ವರ್ಷ ಈ ದೇಶದಲ್ಲಿ ಚಿಕಿತ್ಸೆಗಾಗಿ ಕಾಯುತ್ತಿರುವಾಗಲೇ ಪ್ರಾಣ ಬಿಟ್ಟಿದ್ದಾರೆ 23,746 ರೋಗಿಗಳು!

ಕಳೆದ ವರ್ಷ ಅಂದರೆ 2024ರಲ್ಲಿ ಈ ಒಂದು ದೇಶದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕಾಯುತ್ತಲೇ ಪ್ರಾಣ ಬಿಟ್ಟವರ ಸಂಖ್ಯೆ ಬರೋಬ್ಬರಿ 23,000 ಇದೆಯಂತೆ! ಈ ಅಂಕಿ-ಅಂಶ ನೋಡಿದರೆ ಆತಂಕವಾಗದೇ ಇರದು. ವೈದ್ಯರಿಗಾಗಿ ಕಾಯುತ್ತಾ ಕೂರುವ ಕಷ್ಟ, ಅಸಹನೆ, ಒತ್ತಡ ಅನುಭವಿಸಿದವರಿಗಷ್ಟೇ ಗೊತ್ತಿರಲು ಸಾಧ್ಯ. ಹಾಗಾದರೆ, ಈ ದೇಶ ಯಾವುದು? ಇಲ್ಲಿ ಯಾವ ರೀತಿಯ ಆರೋಗ್ಯ ವ್ಯವಸ್ಥೆಯಿದೆ? ಸರ್ಕಾರ ಯಾಕೆ ಈ ಬಗ್ಗೆ ಗಮನಹರಿಸುತ್ತಿಲ್ಲ? ಎಂಬಿತ್ಯಾದಿ ನಿಮ್ಮ ಅನುಮಾನಗಳಿಗೆ ಉತ್ತರ ಇಲ್ಲಿದೆ.

ಕಳೆದ ವರ್ಷ ಈ ದೇಶದಲ್ಲಿ ಚಿಕಿತ್ಸೆಗಾಗಿ ಕಾಯುತ್ತಿರುವಾಗಲೇ ಪ್ರಾಣ ಬಿಟ್ಟಿದ್ದಾರೆ 23,746 ರೋಗಿಗಳು!
Hospital

Updated on: Dec 22, 2025 | 8:14 PM

ನವದೆಹಲಿ, ಡಿಸೆಂಬರ್ 22: ಹಿಂದೆಲ್ಲ ಆಸ್ಪತ್ರೆಯ (Hospital) ಮೆಟ್ಟಿಲನ್ನೂ ಹತ್ತದೇ ಆರೋಗ್ಯಯುತವಾಗಿಯೇ ಆಯಸ್ಸನ್ನು ಕಳೆದು ಪ್ರಾಣ ಬಿಟ್ಟವರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಇಂದಿನ ಕಾಲದಲ್ಲಿ ಜೀವನಶೈಲಿ, ಕೆಲಸದೊತ್ತಡ, ಆಹಾರದ ಬದಲಾವಣೆ, ರಾಸಾಯನಿಕಗಳ ಪ್ರಭಾವ, ಹವಾಮಾನ ಸಮಸ್ಯೆಗಳು ಹೀಗೆ ನಾನಾ ಕಾರಣಗಳಿಂದ ಮನುಷ್ಯನ ಆಯಸ್ಸೂ ಕಡಿಮೆಯಾಗುತ್ತಿದೆ, ಅನಾರೋಗ್ಯವೂ ಹೆಚ್ಚಾಗುತ್ತಿದೆ. ಆರೋಗ್ಯ ಕೈಕೊಟ್ಟಾಗ ಆಸ್ಪತ್ರೆಗೆ ಹೋಗಲು ಸರಿಯಾದ ಮೂಲಸೌಕರ್ಯಗಳು ಇಲ್ಲದೆ ಭಾರತದಲ್ಲಿ ಅನೇಕ ಹಳ್ಳಿಗಳ ಜನರು ಒದ್ದಾಡುತ್ತಾರೆ. ಇನ್ನು ಕೆಲವು ಕಡೆ ಆಸ್ಪತ್ರೆಯಿದ್ದರೂ ವೈದ್ಯರಿಲ್ಲದ ಗೋಳಾಟ. ಇದೆಲ್ಲದರಿಂದ ಪ್ರಾಣ ಕಳೆದುಕೊಂಡ ರೋಗಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೆ, ಕಳೆದ ವರ್ಷ ವೈದ್ಯಕೀಯ ಚಿಕಿತ್ಸೆಗಾಗಿ ಕಾಯುತ್ತಲೇ ಪ್ರಾಣ ಕಳೆದುಕೊಂಡವರ ಸಂಖ್ಯೆ ಜಗತ್ತಿನ ಈ ಮುಂದುವರೆದ ದೇಶದಲ್ಲಿ 23 ಸಾವಿರವಂತೆ! ಯಾವುದು ಆ ದೇಶ? ಇಲ್ಲಿದೆ ಕುತೂಹಲಕಾರಿ ಮತ್ತು ಆತಂಕಕಾರಿ ಮಾಹಿತಿ.

ಈ ರೀತಿಯ ಘಟನೆ ನಡೆದಿರುವುದು ಕೆನಡಾದಲ್ಲಿ. ಸಾರ್ವಜನಿಕ ನೀತಿ ಚಿಂತಕರ ಚಾವಡಿ SecondStreet.orgನ ವರದಿಯು ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಕೆನಡಾದಲ್ಲಿ ಏಪ್ರಿಲ್ 2024 ಮತ್ತು ಮಾರ್ಚ್ 2025ರ ನಡುವೆ ಶಸ್ತ್ರಚಿಕಿತ್ಸೆಗಳು ಅಥವಾ ರೋಗನಿರ್ಣಯ ಕಾರ್ಯವಿಧಾನಗಳಿಗಾಗಿ ಕಾಯುತ್ತಿರುವಾಗಲೇ ಕೆನಡಾದಲ್ಲಿ ಕನಿಷ್ಠ 23,746 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಈ ಅಂಕಿ ಅಂಶವು ಕೆನಡಾದ ಆರೋಗ್ಯ ವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಅಂಕಿ-ಅಂಶಗಳು ಹಿಂದಿನ ವರ್ಷಕ್ಕಿಂತ ಶೇ.3ರಷ್ಟು ಹೆಚ್ಚಾಗಿದೆ. ಇದರಿಂದ 2018ರಿಂದ ವರದಿಯಾದ ರೋಗಿಗಳ ಒಟ್ಟು ಕಾಯುವಿಕೆ ಪಟ್ಟಿಯ ಸಾವುಗಳ ಸಂಖ್ಯೆ 1,00,000ಕ್ಕಿಂತ ಹೆಚ್ಚಾಗಿದೆ. ಈ ಸಂಶೋಧನೆಗಳು 40ಕ್ಕೂ ಹೆಚ್ಚು ಪ್ರಾಂತೀಯ ಮತ್ತು ಪ್ರಾದೇಶಿಕ ಆರೋಗ್ಯ ಸಂಸ್ಥೆಗಳಿಗೆ ನೀಡಲಾದ ಮಾಹಿತಿ ಸ್ವಾತಂತ್ರ್ಯ (FOI) ವಿನಂತಿಗಳನ್ನು ಆಧರಿಸಿವೆ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: ನೀವು ಕೂಡ ಮುಖದವರೆಗೂ ಬ್ಲಾಂಕೆಟ್ ಹೊದ್ದು ಮಲಗ್ತೀರಾ ಈ ಅಭ್ಯಾಸ ಎಷ್ಟು ಡೇಂಜರ್ ನೋಡಿ!

“ಸರ್ಕಾರಗಳು ನಿಯಮಿತವಾಗಿ ರೆಸ್ಟೋರೆಂಟ್‌ಗಳನ್ನು ಪರಿಶೀಲಿಸುತ್ತವೆ ಮತ್ತು ಪೇಪರ್ ಟವಲ್ ಹೋಲ್ಡರ್ ಹಾಕದಿರುವಂತಹ ಸಣ್ಣ ಸಮಸ್ಯೆ ಇದ್ದರೆ ಅದನ್ನೂ ಸಾರ್ವಜನಿಕವಾಗಿ ವರದಿ ಮಾಡುತ್ತವೆ. ಆದರೆ, ಯಾವುದೇ ಸರ್ಕಾರವು ಕಾಯುವ ಪಟ್ಟಿಯಲ್ಲಿರುವಾಗಲೇ ಸಾಯುತ್ತಿರುವ ರೋಗಿಗಳ ಬಗ್ಗೆ ಸಾರ್ವಜನಿಕವಾಗಿ ವರದಿ ಮಾಡುವುದಿಲ್ಲ. ಇದು ಸರ್ಕಾರ ಬೇಕೆಂದೇ ಮುಚ್ಚಿಡುತ್ತಿರುವ ಸತ್ಯವಾಗಿದೆ” ಎಂದು SecondStreet.org ವರದಿ ಮಾಡಿದೆ.

ಇದಕ್ಕೆ ಹಲವು ಉದಾಹರಣೆಗಳನ್ನೂ ವರದಿ ನೀಡಿದೆ. ಡೆಬ್ಬಿ ಫ್ಯೂಸ್ಟರ್‌ ಎಂಬ ಕೆನಡಿಯನ್ ಮಹಿಳೆ 3 ಮಕ್ಕಳ ತಾಯಿಯಾಗಿದ್ದು, ಜುಲೈ 2024ರಲ್ಲಿ ಅವರಿಗೆ 3 ವಾರಗಳಲ್ಲಿ ಹೃದಯದ ಆಪರೇಷನ್ ಮಾಡಿಸಬೇಕು ಎಂದು ಹೇಳಲಾಗಿತ್ತು. ಅವರು 2 ತಿಂಗಳಿಗಿಂತ ಹೆಚ್ಚು ಕಾಲ ತಮ್ಮ ಆಪರೇಷನ್​​ನ ಸಮಯ ನಿಗದಿಗಾಗಿ ಕಾಯುತ್ತಲೇ ಇದ್ದರು. ಕೊನೆಗೆ ಅವರು ಆಪರೇಷನ್ ಆಗದೆ ನಿಧನರಾದರು. ಈ ರೀತಿ ಕಾಯುತ್ತಿರುವಾಗಲೇ ನಿಧನರಾದವರಲ್ಲಿ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರೇ ಹೆಚ್ಚು.

ಕೆನಡಾದ ಒಂಟಾರಿಯೊದಲ್ಲಿ ಅತಿ ಹೆಚ್ಚು ಕಾಯುವಿಕೆಯಿಂದ ಉಂಟಾದ ಸಾವುಗಳು ದಾಖಲಾಗಿವೆ. ಕ್ವಿಬೆಕ್ 6,290ರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, BC 4,620 ರೊಂದಿಗೆ ನಂತರದ ಸ್ಥಾನದಲ್ಲಿದೆ. ನೋವಾ ಸ್ಕಾಟಿಯಾ (727), ನ್ಯೂಫೌಂಡ್‌ಲ್ಯಾಂಡ್ ಮತ್ತು ಲ್ಯಾಬ್ರಡಾರ್ (542), ಸಾಸ್ಕಾಚೆವಾನ್ (419), ಪ್ರಿನ್ಸ್ ಎಡ್ವರ್ಡ್ ದ್ವೀಪ (178) ಮತ್ತು ನ್ಯೂ ಬ್ರನ್ಸ್‌ವಿಕ್ (121) ಸೇರಿದಂತೆ ಸಣ್ಣ ಪ್ರಾಂತ್ಯಗಳು ಸಹ ಈ ರೀತಿಯ ಹಲವಾರು ಸಾವುಗಳನ್ನು ಕಂಡಿವೆ.

ಇದನ್ನೂ ಓದಿ: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ಹೃದಯ ಸಮಸ್ಯೆ, ಕ್ಯಾನ್ಸರ್, ಸೊಂಟ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಗಳು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ಮತ್ತು MRIಗಳಂತಹ ಅವರ ಜೀವನದ ಗುಣಮಟ್ಟವನ್ನು ಸುಧಾರಿಸಬಹುದಾದ ಕಾರ್ಯವಿಧಾನಗಳಿಗಾಗಿ ಕಾಯುತ್ತಿರುವ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ ಕೆಲವು ಸಾವುಗಳಿಗೆ ಸಂಬಂಧಿಸಿದ ಕಾಯುವ ಸಮಯ ಒಂದು ವಾರದಿಂದ ಸುಮಾರು 9 ವರ್ಷಗಳವರೆಗೂ ಇದೆ!

ಕೆನಡಾವು ಇತರ ಅನೇಕ ದೇಶಗಳಿಗಿಂತ ಕಡಿಮೆ ವೈದ್ಯರು, ಆಸ್ಪತ್ರೆ ಹಾಸಿಗೆಗಳು ಮತ್ತು MRI ಯಂತ್ರಗಳನ್ನು ಹೊಂದಿದೆ. ಇದರಿಂದಲೇ ರೋಗಿಗಳು ದೀರ್ಘವಾದ ಕಾಯುವ ಸಮಯವನ್ನು ಎದುರಿಸಬೇಕಾಗುತ್ತದೆ. ಯಾವುದೇ ತ್ವರಿತ ಆಪರೇಷನ್ ಸಿಗುವುದು ಕೆನಡಾದಲ್ಲಿ ಅತ್ಯಪರೂಪವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ