Imran Khan: ಲಂಡನ್ ಯೋಜನೆಯ ಭಾಗವಾಗಿ ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ: ಇಮ್ರಾನ್ ಖಾನ್ ವಿಡಿಯೊ ಸಂದೇಶ

|

Updated on: Mar 15, 2023 | 2:44 PM

ಮಾರ್ಚ್ 18 ರಂದು ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಈಗಾಗಲೇ ಭರವಸೆ ನೀಡಿದ್ದರಿಂದ ಜನರ ಮೇಲಿನ ದಾಳಿಯ ಹಿಂದಿನ ಕಾರಣ ಅರ್ಥವಾಗುತ್ತಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Imran Khan: ಲಂಡನ್ ಯೋಜನೆಯ ಭಾಗವಾಗಿ ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ: ಇಮ್ರಾನ್ ಖಾನ್ ವಿಡಿಯೊ ಸಂದೇಶ
ಇಮ್ರಾನ್ ಖಾನ್
Follow us on

ಇಸ್ಲಾಮಾಬಾದ್: ಫೆಡರಲ್ ಸರ್ಕಾರ ತನ್ನನ್ನು ಬಂಧಿಸಲು ಯೋಚಿಸುತ್ತಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಪೂರ್ಣಗೊಳಿಸುವ “ಲಂಡನ್ ಯೋಜನೆಯ” (London Plan)ಭಾಗ ಇದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್  (Tehreek-e-Insaf )ಅಧ್ಯಕ್ಷ ಇಮ್ರಾನ್ ಖಾನ್(Imran Khan)ಆರೋಪಿಸಿದ್ದಾರೆ.ಈ ಬಗ್ಗೆ ವಿಡಿಯೊ ಸಂದೇಶ ನೀಡಿದ ಇಮ್ರಾನ್ ಖಾನ್, “ಇದು ಲಂಡನ್ ಯೋಜನೆಯ ಭಾಗವಾಗಿದ್ದು, ನನ್ನನ್ನು ಜೈಲಿಗೆ ಹಾಕಲು, ಪಿಟಿಐ ಪತನ ಮತ್ತು ನವಾಜ್ ಷರೀಫ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಮುಗಿಸಲು ಅಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ” ಎಂದು ಹೇಳಿದ್ದಾರೆ.

ಮಾರ್ಚ್ 18 ರಂದು ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಈಗಾಗಲೇ ಭರವಸೆ ನೀಡಿದ್ದರಿಂದ ಜನರ ಮೇಲಿನ ದಾಳಿಯ ಹಿಂದಿನ ಕಾರಣ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು. ಬುಧವಾರ ಮುಂಜಾನೆ ಲಾಹೋರ್‌ನಲ್ಲಿ ಉದ್ವಿಗ್ನತೆ ನಂತರ ಖಾನ್ ಈ ಹೇಳಿಕೆ ನೀಡಿದ್ದಾರೆ. ಪಿಟಿಐ ಅಧ್ಯಕ್ಷರ ಜಮಾನ್ ಪಾರ್ಕ್ ನಿವಾಸಕ್ಕೆ ಹೆಚ್ಚಿನ ತುಕಡಿಗಳನ್ನು ಕರೆಸಲಾಗಿದೆ. ಮಾಜಿ ಪ್ರಧಾನಿಯ ಬಂಧನಕ್ಕಾಗಿ ಪಕ್ಷದ ಬೆಂಬಲಿಗರು ಮತ್ತು ಪೊಲೀಸರ ನಡುವೆ 14 ಗಂಟೆಗಳಿಗೂ ಹೆಚ್ಚು ಕಾಲ ಘರ್ಷಣೆ ನಡೆಯುತ್ತಿದೆ.

ಯಾವುದೇ ಅವ್ಯವಸ್ಥೆಯನ್ನು ತಡೆಯಲು ತಾನು ಲಾಹೋರ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಿಗೆ ಭರವಸೆ ನೀಡಿರುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.  ಕ್ರಿಮಿನಲ್ ಪ್ರೊಸೀಜರ್ ಸಂಹಿತೆ ಸೆಕ್ಷನ್ 76 ರ ಪ್ರಕಾರ, ಈ ಜಾಮೀನು ಬಾಂಡ್ ಅನ್ನು ಬಂಧಿಸುವ ಅಧಿಕಾರಿಗೆ ನೀಡಿದರೆ, ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂದಿದ್ದಾರೆ ಖಾನ್.

ಜಮಾನ್ ಪಾರ್ಕ್‌ನ ಹೊರಗೆ ಬೆಂಬಲಿಗರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿ ಪ್ರಯೋಗಿಸಿದ ನಂತರ ಇಮ್ರಾನ್ ತನ್ನ ಬೆಂಬಲಿಗರನ್ನು “ಹೊರಗೆ ಬನ್ನಿ” ಎಂದು ಕರೆ ನೀಡಿದ ನಂತರ ಇಸ್ಲಾಮಾಬಾದ್, ಪೇಶಾವರ್ ಮತ್ತು ಕರಾಚಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು.

ಪಂಜಾಬ್ ಪೊಲೀಸರು ಕೆನಾಲ್ ರಸ್ತೆಯ ಎರಡೂ ಬದಿಗಳಲ್ಲಿ ಪಿಟಿಐ ಕಾರ್ಯಕರ್ತರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಎಂದು ಸಾಮಾ ಇಂಗ್ಲಿಷ್ ವರದಿ ಮಾಡಿದೆ.


ಪೇಶಾವರದಲ್ಲಿ, ಪ್ರೆಸ್ ಕ್ಲಬ್‌ನ ಹೊರಗೆ ಹೆಚ್ಚಿನ ಸಂಖ್ಯೆಯ ಪಿಟಿಐ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ನಂತರ, ಪಿಟಿಐ ಕಾರ್ಯಕರ್ತರು ಶೇರ್ ಶಾ ಸೂರಿ ರಸ್ತೆಯನ್ನು ತಡೆದು ರಾಜ್ಯಪಾಲರ ಭವನದತ್ತ ಮೆರವಣಿಗೆ ಆರಂಭಿಸಿದರು.

ಪಿಟಿಐ ಪ್ರತಿಭಟನಾಕಾರರು ತರ್ನಾಲ್ ರಸ್ತೆಯನ್ನು ತಡೆದಿದ್ದಾರೆ. ಆದರೆ ಸಂಚಾರಕ್ಕೆ ಮತ್ತೆ ತೆರೆಯಲು ಸಮಯೋಚಿತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದಾರೆ. ಇಮ್ರಾನ್ ಖಾನ್ ಆದೇಶದ ಮೇರೆಗೆ ರಸ್ತೆ ತಡೆ ನಡೆಸಿದ ಪಿಟಿಐ ಕಾರ್ಯಕರ್ತರ ವಿರುದ್ಧ ತರ್ನಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Imran Khan: ನಾನು ಜೈಲಿಗೆ ಹೋಗಬಹುದು ಅಥವಾ ಕೊಲೆಯಾಗಬಹುದು ನೀವು ನಿಮ್ಮ ಹೋರಾಟ ಬಿಡಬೇಡಿ: ಇಮ್ರಾನ್ ಖಾನ್

ಚೌರಂಗಿ, ಕರಾಚಿ, ಜಮಾನ್ ಪಾರ್ಕ್ ನಲ್ಲಿ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಜನರು ಟೈರ್ ಗೆ ಬೆಂಕಿ ಹಚ್ಚಿ ಧರಣಿ ನಡೆಸಿದರು.
ತೋಷಖಾನಾ ಉಲ್ಲೇಖಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಮತ್ತು ಮಹಿಳಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ನಂತರ ಸೋಮವಾರ ಪಿಟಿಐ ಅಧ್ಯಕ್ಷರಿಗೆ ಎರಡು ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ಹೊರಡಿಸಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Wed, 15 March 23