ಮಾಸ್ಕೋ, ಜುಲೈ 9: ರಷ್ಯಾಗೆ ಎರಡು ದಿನದ ಭೇಟಿಯಲ್ಲಿರುವ ನರೇಂದ್ರ ಮೋದಿ ನಿನ್ನೆ ಸೋಮವಾರ ರಾತ್ರಿ ನಡೆದ ಡಿನ್ನರ್ ಕಾರ್ಯಕ್ರಮದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಉಕ್ರೇನ್ ವಿಚಾರವನ್ನು ಚರ್ಚಿಸಿದರು. ಇದು ಅನೌಪಚಾರಿಕ ಮಾತುಕತೆಯಾದರೂ ಮೋದಿ ಅವರು ಉಕ್ರೇನ್ ಯುದ್ಧ ನಿಲ್ಲಿಸುವಂತೆ ಪುಟಿನ್ಗೆ ನೇರವಾಗಿ ಮನವಿ ಮಾಡಿದರು. ಯುದ್ಧದಿಂದ ಯಾವ ಪರಿಹಾರವೂ ಸಿಗದು ಎಂಬ ವಿಚಾರವನ್ನು ಪುಟಿನ್ ಅವರಿಗೆ ಮೋದಿ ಈ ಸಂದರ್ಭದಲ್ಲಿ ತಿಳಿಸಿದರೆನ್ನಲಾಗಿದೆ.
‘ರಾಷ್ಟ್ರಗಳ ಸಾರ್ವಭೌಮತೆಯನ್ನೂ ಒಳಗೊಂಡಂತೆ ವಿಶ್ವಸಂಸ್ಥೆಯ ಒಪ್ಪಂದವನ್ನು ಭಾರತ ಸದಾ ಕಾಲ ಗೌರವಿಸುತ್ತದೆ. ರಣರಂಗದಲ್ಲಿ ಯಾವ ಪರಿಹಾರವನ್ನೂ ಕಂಡುಕೊಳ್ಳಲು ಆಗದು. ಸಂವಾದ ಮತ್ತು ರಾಜತಾಂತ್ರಿಕತೆಯೇ ಸರಿಯಾದ ದಾರಿ,’ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: ಪುಟಿನ್ ನಿವಾಸದಲ್ಲಿ ಮೋದಿ ಸುತ್ತಾಟ; ಇಂಟರ್ಪ್ರಿಟರ್ ನೆರವಿಲ್ಲದೆ ಮಾತನಾಡತೊಡಗಿದ ಇಬ್ಬರು ನಾಯಕರು
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇದಕ್ಕೆ ನೀಡಿದು ಉತ್ತರ ಏನು ಎಂಬುದು ಗೊತ್ತಿಲ್ಲ. ಎರಡು ವರ್ಷದ ಹಿಂದೆ ಉಕ್ರೇನ್ ಮೇಲೆ ರಷ್ಯಾ ಸೇನೆ ಆಕ್ರಮಣ ಮಾಡಿತು. ಈಗಲೂ ಆ ಯುದ್ದ ನಿಂತಿಲ್ಲ. ಸಾವಿರಾರು ಜನರು ಈ ಯುದ್ಧದಲ್ಲಿ ಬಲಿಯಾಗಿದ್ದಾರೆ. ಪಾಶ್ಚಿಮಾತ್ಯ ದೇಶಗಳ ನೆರವಿನಿಂದ ಉಕ್ರೇನ್ ಎರಡು ವರ್ಷಗಳಿಂದಲೂ ರಷ್ಯಾ ಆಕ್ರಮಣಕ್ಕೆ ಪ್ರತಿರೋಧ ತೋರುತ್ತಿದೆ. ರಷ್ಯಾದ ಪ್ರಯತ್ನವೂ ಕಡಿಮೆ ಆಗಿಲ್ಲ.
ಬೇರೆ ಬೇರೆ ಕಾರಣಗಳಿಂದಾಗಿ ಅನೇಕ ಭಾರತೀಯರು ರಷ್ಯಾ ಸೇನೆಯಲ್ಲಿ ಸಿಲುಕಿದ್ದಾರೆ. ಒಳ್ಳೆಯ ಸಂಬಳದ ಕೆಲಸ ಕೊಡಿಸುತ್ತೇವೆಂದು ಯುವಕರನ್ನು ನಂಬಿಸಿ ಏಜೆಂಟ್ಗಳು ಅವರನ್ನು ರಷ್ಯಾಗೆ ಕರೆದೊಯ್ದು ಅಲ್ಲಿ ಸೇನೆಯ ಸುಪರ್ದಿಗೆ ನೀಡಿದ್ದಾರೆ. ಸೇನೆಯಲ್ಲಿ ವಿವಿಧ ಸಹಾಯಕ ಕೆಲಸಗಳನ್ನು ಈ ಭಾರತೀಯ ಯುವಕರು ಮಾಡುತ್ತಿದ್ದಾರೆ. ಈ ರೀತಿ 20ಕ್ಕೂ ಹೆಚ್ಚು ಯುವಕರು ರಷ್ಯಾ ಸೇನೆಯಲ್ಲಿ ಸಿಲುಕಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ರಷ್ಯಾದಲ್ಲಿ ಪ್ರಧಾನಿ ಮೋದಿ; ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ನಿನ್ನೆ ಸೋಮವಾರ ರಾತ್ರಿ ನರೇಂದ್ರ ಮೋದಿ ಈ ವಿಚಾರವನ್ನೂ ವ್ಲಾದಿಮಿರ್ ಪುಟಿನ್ ಬಳಿ ಪ್ರಸ್ತಾಪಿಸಿದರು. ರಷ್ಯಾ ಸೇನೆಯಿಂದ ಈ ಯುವಕರನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪುಟಿನ್ ಪೂರಕವಾಗಿ ಸ್ಪಂದಿಸಿದರು. ಮೂಲಗಳ ಪ್ರಕಾರ ಈ ಭಾರತೀಯ ಯುವಕರಿಗೆ ಸದ್ಯದಲ್ಲೇ ಬಿಡುಗಡೆಯ ಭಾಗ್ಯ ಸಿಗಬಹುದು ಎನ್ನಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ