Nobel Peace Prize 2026: ಭಾರತ ಮೂಲದ ನ್ಯಾಯಶಾಸ್ತ್ರಜ್ಞೆ ನವಿ ಪಿಳ್ಳೈಗೆ 2026ರ ನೊಬೆಲ್ ಶಾಂತಿ ಪುರಸ್ಕಾರ: ಡೊನಾಲ್ಡ್ ಟ್ರಂಪ್‌ಗೆ ಮತ್ತೊಮ್ಮೆ ನಿರಾಸೆ
Navanethem Pillay: ಭಾರತ ಮೂಲದ ದಕ್ಷಿಣ ಆಫ್ರಿಕಾದ ಹಿರಿಯ ನ್ಯಾಯಶಾಸ್ತ್ರಜ್ಞೆ ನವಿ ಪಿಳ್ಳೈ ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಅಂತಾರಾಷ್ಟ್ರೀಯ ಕಾನೂನು ಬಲಪಡಿಸಿ, ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಅವರ ಜೀವಮಾನದ ಕೊಡುಗೆಗಾಗಿ ಈ ಗೌರವ ಸಂದಿದೆ. ವರ್ಣಭೇದ ನೀತಿ ಮತ್ತು ರುವಾಂಡಾ ನರಮೇಧದಂತಹ ಮಹತ್ವದ ವಿಷಯಗಳಲ್ಲಿ ಹೋರಾಡಿದ್ದ ಇವರ ಸಾಧನೆ ಜಾಗತಿಕ ಮನ್ನಣೆ ಗಳಿಸಿದೆ. ಡೊನಾಲ್ಡ್ ಟ್ರಂಪ್‌ಗೆ ಪ್ರಶಸ್ತಿ ಕೈತಪ್ಪಿ ಮತ್ತೊಮ್ಮೆ ನಿರಾಸೆಯಾಗಿದೆ.

ನ್ಯೂಯಾರ್ಕ್, ಅಕ್ಟೋಬರ್ 09: 2026ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರವನ್ನು ಭಾರತ ಮೂಲದ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಹಿರಿಯ ನ್ಯಾಯಶಾಸ್ತ್ರಜ್ಞೆ(ಕಾನೂನು ತಜ್ಞೆ) ಹಾಗೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಾಜಿ ಹೈಕಮಿಷನರ್ ನವನೀತಮ್ “ನವಿ” ಪಿಳ್ಳೈ ಅವರಿಗೆ ನೀಡಿ ಗೌರವಿಸಲಾಗಿದೆ. ಅಂತಾರಾಷ್ಟ್ರೀಯ ಕಾನೂನನ್ನು ಬಲಪಡಿಸುವಲ್ಲಿ, ಯುದ್ಧಾಪರಾಧಗಳನ್ನು ತಡೆಯುವಲ್ಲಿ ಹಾಗೂ ವಿಶ್ವಾದ್ಯಂತ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಅವರು ನೀಡಿರುವ ಅಸಾಧಾರಣ ಜೀವಮಾನದ ಕೊಡುಗೆಯನ್ನು ಪರಿಗಣಿಸಿ ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ
ಐತಿಹಾಸಿಕ ಮನ್ನಣೆ:
ಜಾಗತಿಕ ಮಟ್ಟದಲ್ಲಿ ಶೋಷಿತರ, ಮಹಿಳೆಯರ ಮತ್ತು ಸಂಘರ್ಷ ಪೀಡಿತ ನಾಗರಿಕರ ಹಕ್ಕುಗಳಿಗಾಗಿ ಕಾನೂನಾತ್ಮಕ ಹೋರಾಟ ನಡೆಸಿದ ನವಿ ಪಿಳ್ಳೈ ಅವರಿಗೆ ಜಾಗತಿಕ ಮಟ್ಟದ ಅತ್ಯುನ್ನತ ಪುರಸ್ಕಾರ ಲಭಿಸಿದೆ. ಈ ಪ್ರಕಟಣೆಯು ಭಾರತ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವಾದ್ಯಂತ ಮಾನವ ಹಕ್ಕುಗಳ ಕಾರ್ಯಕರ್ತರಲ್ಲಿ ಅಪಾರ ಹರ್ಷವನ್ನುಂಟುಮಾಡಿದೆ.
ಡೊನಾಲ್ಡ್ ಟ್ರಂಪ್‌ಗೆ ಮತ್ತೊಮ್ಮೆ ಕೈತಪ್ಪಿದ ನೊಬೆಲ್
ವಿವಿಧ ಅಂತಾರಾಷ್ಟ್ರೀಯ ಸಂಘರ್ಷಗಳ ಕದನವಿರಾಮ ಹಾಗೂ ಶಾಂತಿ ಒಪ್ಪಂದಗಳ ಕಾರಣ ನೀಡಿ ನೊಬೆಲ್ ಶಾಂತಿ ಪ್ರಶಸ್ತಿಗೆ ತಾವೇ ಅರ್ಹರು ಎಂದು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈ ಬಾರಿಯೂ ಶಾಂತಿ ನೊಬೆಲ್ ಒಲಿಯಲಿಲ್ಲ. ಶಾಂತಿ ಪ್ರಶಸ್ತಿಯ ರೇಸ್‌ನಲ್ಲಿದ್ದ ಟ್ರಂಪ್ ಅವರಿಗೆ ಸಮಿತಿಯ ತೀರ್ಮಾನ ತೀವ್ರ ನಿರಾಸೆ ಮೂಡಿಸಿದೆ.
ನವಿ ಪಿಳ್ಳೈ ಅವರು 1941ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಜನಿಸಿದರು. ಇವರ ಪೂರ್ವಜರು ತಮಿಳುನಾಡಿನಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಹೋದ ಭಾರತೀಯ ಮೂಲದವರು.
ಮತ್ತಷ್ಟು ಓದಿ:
ವಿಜ್ಞಾನಿಗಳಾದ ಹೆನ್ರಿ ಬಿ. ಕಗನ್, ಕೆನ್ಸೊ ಸೊವಾಯಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ
ವರ್ಣಭೇದ ನೀತಿಯ ವಿರುದ್ಧ ಕಾನೂನು ಸಮರ:
ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯು ತಾರಕಕ್ಕೇರಿದ್ದ ಕಾಲದಲ್ಲಿ ಕಪ್ಪು ವರ್ಣೀಯರ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ವಕಾಲತ್ತು ವಹಿಸಿದ್ದರು. ನೆಲ್ಸನ್ ಮಂಡೇಲಾ ಸೇರಿದಂತೆ ರಾಬೆನ್ ದ್ವೀಪದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ರಾಜಕೀಯ ಕೈದಿಗಳ ಪರವಾಗಿ ನ್ಯಾಯಾಲಯದಲ್ಲಿ ಧೈರ್ಯದಿಂದ ವಾದ ಮಂಡಿಸಿದ ಹೆಗ್ಗಳಿಕೆ ಇವರಿಗಿದೆ.
ಪೋಸ್ಟ್
BREAKING NEWS The Norwegian Nobel Committee has decided to award the 2026 #NobelPeacePrize to Navanethem “Navi” Pillay for her efforts to promote peace and international law.
#NobelPrize https://t.co/97vurspw6z
— The Nobel Prize (@NobelPrize) October 9, 2026
ರುವಾಂಡಾ ನರಮೇಧ ನ್ಯಾಯಮಂಡಳಿ :
ರುವಾಂಡಾ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯ ನ್ಯಾಯಾಧೀಶರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು, ಯುದ್ಧದ ಸಮಯದಲ್ಲಿ ಎಸಗುವ ಸಾಮೂಹಿಕ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳನ್ನು “ನರಮೇಧ” ಮತ್ತು ಯುದ್ಧಾಪರಾಧವೆಂದು ಘೋಷಿಸಿದ ಐತಿಹಾಸಿಕ ತೀರ್ಪನ್ನು ನೀಡಿದ್ದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್:
2008 ರಿಂದ 2014 ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿ, ಜಾಗತಿಕ ಸಂಘರ್ಷ ವಲಯಗಳಲ್ಲಿ ಮಾನವೀಯ ಮೌಲ್ಯಗಳ ರಕ್ಷಣೆಗೆ ಶ್ರಮಿಸಿದರು.
ಜಾಗತಿಕ ಮಟ್ಟದಲ್ಲಿ ಪ್ರಶಂಸೆಯ ಮಹಾಪೂರ
ನೊಬೆಲ್ ಸಮಿತಿಯು ನವಿ ಪಿಳ್ಳೈ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಅಂತರರಾಷ್ಟ್ರೀಯ ಕಾನೂನು ತಜ್ಞರು ಮತ್ತು ಜಾಗತಿಕ ನಾಯಕರು ಅವರನ್ನು ಅಭಿನಂದಿಸಿದ್ದಾರೆ. ಕಾನೂನಿನ ಆಡಳಿತ ಮತ್ತು ನ್ಯಾಯದ ಪರವಾಗಿ ದಶಕಗಳ ಕಾಲ ರಾಜಿರಹಿತವಾಗಿ ಹೋರಾಡಿದ ಒಬ್ಬ ಪ್ರಾಮಾಣಿಕ ನ್ಯಾಯಶಾಸ್ತ್ರಜ್ಞೆಗೆ ಸಂದ ಸೂಕ್ತ ಗೌರವ ಇದಾಗಿದೆ ಎಂದು ಜಗತ್ತು ಬಣ್ಣಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Fri, 9 October 26




